ನಾವು ಸನಾತನ ಧರ್ಮದ ಮೇಲೆ ನಂಬಿಕೆಯಿಟ್ಟು ಬಾಳುವವರು. ಈ ಸನಾತನ ತತ್ವಗಳನ್ನು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆ ಹೀಗೆ ಕೆಲವು ರೀತಿಯಲ್ಲಿ ಋಷಿಗಳು ತಿಳಿಸಿದರು. ಕಾಲ ಸಾಗುತ್ತಾ ಅದರ ಅಧ್ಯಯನ ಕಡಿಮೆಯಾಗಿ ಸನಾತನ ತತ್ವವನ್ನು ಹೇಗೇಗೋ ತಿಳಿಯಲು ಹೇಳಲು ಆರಂಭ ಮಾಡಿದರು. ಆಗ ಅದನ್ನು ಸರಿಪಡಿಸಲು ತಾತ್ವಿಕ ಚಿಂತಕರು ಹಾಡಿನ ಮೂಲಕ ಪ್ರಯತ್ನ ಮಾಡಿದರು. ಅದೇ ಇಂದು ನಮ್ಮ ಮುಂದಿರುವ ದಾಸರಪದಗಳು. ಕನಕ,ಪುರಂದರರಂತಹ ಮಹಾತ್ಮರು ಹಲವಾರು ಪದಗಳಿಂದ ಭಕ್ತಿಯ ಮೂಲಕ ತತ್ವಪ್ರಸಾರ ಮಾಡಿದರು. ಅದರಲ್ಲೊಂದು ಮಧುಕರವೃತ್ತಿಯೆನ್ನದು ಬಲು ಚೆನ್ನದು ಎಂಬ ದಾಸಪದ. ಏನೀ ಮಧುಕರವೆಂದರೆ ಅಂತ ಕೇಳಿದ್ರೆ… ಉತ್ತರ ಮಧುಕರವೆಂದರೆ ಜೇನುನೊಣ ಎಂದು ಅರ್ಥ. ಮಧುಕರವೆಂಬುದು ಸಂಸ್ಕೃತ ಪದ. ಮಧು ಎಂದರೆ ಜೇನು, ಕರಃ ಅಂದರೆ ಸಂಚಿನೋತಿ ಅರ್ಥಾತ್ ಚೆನ್ನಾಗಿ ಸಂಗ್ರಹಿಸುವುದು ಅಥವಾ ಸಂಗ್ರಹಿಸುತ್ತದೆ ಎಂದರ್ಥ. ಜೇನನ್ನು ಚೆನ್ನಾಗಿ ಸಂಗ್ರಹಿಸುವುದು ಜೇನುನೊಣವಾದ್ದರಿಂದ ಮಧುಕರವೆಂದರೆ ಜೇನುನೊಣ ಎಂದು ತಿಳಿಯಬೇಕು.
ಏನಿದರ ವೃತ್ತಿ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಜೇನುನೊಣವು ಯಾವುದೇ ರೀತಿಯ ಗದ್ದಲ ಮಾಡದೇ ಹೂವಿನಲ್ಲಿರುವ ಮಕರಂದವನ್ನು ಹೀರಿ ಅದರ ಶೇಖರಣೆ ಮಾಡುತ್ತದೆ. ಕ್ರಮೇಣ ಅದು ಮಧು (ಜೇನು)ವಾಗಿ ಬದಲಾಗುತ್ತದೆ. ಆದರೆ ಆ ನೊಣ ಮಕರಂದವನ್ನು ಸಂಗ್ರಹಿಸುವಾಗ ಆಗಲಿ ಅಥವಾ ಅದನ್ನು ಶೇಖರಿಸುವಾಗ ಆಗಲಿ ಯಾವುದೇ ಹೂವಿಗೆ ಅಥವಾ ಗಿಡಗಳಿಗೆ, ಪ್ರಕೃತಿಗೆ ಹಾನಿಯಾಗುವುದಿಲ್ಲ ಅಥವಾ ಮಾಡುವುದಿಲ್ಲ. ಬದಲಾಗಿ ತನ್ನ ಮಕರಂದ ಹೀರುವಿಕೆಯಿಂದ ಪರಾಗಸ್ಪರ್ಶವಾಗಿ ಹಲವಾರು ಹೂಗಳು, ಹಣ್ಣುಗಳು, ಸಸ್ಯಗಳು ಸಮೃದ್ಧವಾಗಿ ಬೆಳೆಯಲು ಕಾರಣವಾಗುತ್ತದೆ. ಇಷ್ಟೆಲ್ಲಾ ಪರೋಪಕಾರಯುತವಾಗಿ ಸಂಗ್ರಹಿಸಿದ ಜೇನನ್ನು ತನ್ನ ಉಪಯೋಗಕ್ಕೆ ಬಳಸದೇ ಪರರಿಗಾಗಿ ನೀಡುತ್ತದೆ ಅಥವಾ ನಾವು ಬಳಸುತ್ತೇವೆ ಅಲ್ಲವೇ ?
ಇದನ್ನೇ ದಾಸರು ನಮಗೆ ತಿಳಿಸಹೊರಟಿದ್ದು ನಾವುಗಳು ಮಾಡುವ ಸಣ್ಣಕಾರ್ಯವನ್ನೂ ಗೌಜು ಗದ್ದಲಗಳಿಂದ ಮಾಡುತ್ತೇವೆ. ಅದರಿಂದ ಪರಿಸರ ಅದೆಷ್ಟು ಹಾಳಾಗುತ್ತದೆ. ಆದರೂ ತಾನು ಮಾಡಿದೇ ಎಂಬ ಅಹಂ ಭಾವದಿಂದ ಬೀಗುತ್ತೇವೆ. ಈ ಅಹಂ ಭಾವ ಬಿಡು. ಮಾಡುವ ಕಾಯಕದಲ್ಲಿ ಪರರ ಹಿತವನ್ನು ಬಯಸು, ಅದರಿಂದ ಮಹದಾನಂದ ಲಭ್ಯವಾಗುತ್ತದೆ. ಅಂತಹ ವೃತ್ತಿ ನಿನ್ನದಾಗಲಿ ಎಂಬ ಪಾಠವನ್ನು ದಾಸರು ಒಂದು ಹಾಡಿನ ಸಾಲಿನಲ್ಲಿ ಎಷ್ಟು ಸೊಗಸಾಗಿ ಹೇಳಿದ್ದಾರೆ ಅಲ್ಲವೇ ? ಮಾನವನು ಅಹಂಕಾರವನ್ನು ಬಿಟ್ಟು ಮಾಡುವ ಸೇವೆಯೇ ನಿಜವಾದ ಪೂಜೆ ಎಂಬುದು ದಾಸರ ಅಂಬೋಣ. ಯಾರನ್ನೂ ನೋಯಿಸದೇ ನಾನು ಎಂಬುದರ ಬಿಟ್ಟು ನಾವು ಎಂದು ಬದುಕುವುದೇ ನಿಜವಾದ ಮಧುಕರವೃತ್ತಿ.
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ