
ಮಾಘ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ‘ಮಧ್ವನವಮಿ’ಯನ್ನು ಆಚರಿಸಲಾಗುತ್ತದೆ. ‘ತತ್ವ ವಾದ’ವನ್ನು ಜಗತ್ತಿಗೆ ನೀಡಿದಂಥ ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ತೆರಳಿದ ದಿನವನ್ನು ಸ್ಮರಿಸುವುದಕ್ಕೆ ನಿಗದಿ ಆದಂಥ ದಿನವಾಗಿ ಇದನ್ನು ಆಚರಿಸಲಾಗುತ್ತದೆ. ಮಧ್ವಾಚಾರ್ಯರು ಜನಿಸಿದ್ದು 1238ನೇ ಇಸವಿಯಲ್ಲಿ, ಉಡುಪಿ ಜಿಲ್ಲೆಯ ಪಾಜಕ ಎಂಬ ಸ್ಥಳದಲ್ಲಿ, ತುಳು ಬ್ರಾಹ್ಮಣರ ಕುಟುಂಬದಲ್ಲಿ. ಅವರು ಜನಿಸಿದ್ದು ವಿಜಯ ದಶಮಿಯ ದಿನ. ಆದ್ದರಿಂದ ಆ ದಿನವನ್ನು “ಮಧ್ವ ಜಯಂತಿ” ಎಂದು ಆಚರಿಸಲಾಗುತ್ತದೆ. ಅವರ ತಂದೆಯ ಹೆಸರು ಮಧ್ಯಗೇಹ ಭಟ್ಟರು ಹಾಗೂ ತಾಯಿ ವೇದಾವತಿ (ಪೂರ್ವಾಶ್ರಮದ ತಂದೆ- ತಾಯಿ ಹೆಸರಿದು). ಇನ್ನು ಮಧ್ವಾಚಾರ್ಯರ ಬಾಲ್ಯದ ಹೆಸರು ವಾಸುದೇವ. ಐದನೇ ವಯಸ್ಸಿಗೆ ಬಾಲಕ ವಾಸುದೇವನ ಉಪನಯನ ಆಯಿತು. ಆ ನಂತರ ವಿದ್ಯಾಭ್ಯಾಸವನ್ನು ಮಾಡಿದ್ದು ಅಚ್ಯುತಪ್ರಜ್ಞರ ಹತ್ತಿರ. ಅದಾದ ಮೇಲೆ ಹನ್ನೊಂದನೇ ವಯಸ್ಸಿನಲ್ಲಿ ಸನ್ಯಾಸವನ್ನು ಪಡೆದುಕೊಂಡಿದ್ದು ಅವರ ಬಳಿಯೇ.
ಆ ಗುರುಗಳು ನೀಡಿದ ಹೆಸರು ಪೂರ್ಣಪ್ರಜ್ಞ ಎಂಬುದಾಗಿತ್ತು. ಅಂದರೆ ಆಶ್ರಮ ಪಡೆದುಕೊಳ್ಳುವ ಸಮಯದಲ್ಲಿ ನೀಡಿದ ಹೆಸರಾಗಿತ್ತು. ಅವರಿಗೆ ಪಟ್ಟಾಭಿಷೇಕ ಮಾಡುವಾಗ ಅಚ್ಯುತಪ್ರಜ್ಞರು ನೀಡಿದ ಹೆಸರು ಆನಂದ ತೀರ್ಥ ಎಂಬುದಾಗಿತ್ತು. ಆ ನಂತರ ತಮ್ಮ ಹೆಸರನ್ನು ಮಧ್ವ ಎಂದು ಕರೆದುಕೊಂಡ ಆಚಾರ್ಯರು, ಮುಂದೆ ಮಧ್ವಾಚಾರ್ಯರು ಎಂದಾದರು. ಹಾಗೆ ಮಧ್ವಾಚಾರ್ಯರು ಪ್ರತಿಪಾದನೆ ಮಾಡಿದ್ದು “ದ್ವೈತ ಮತ” ಎಂದು ಜನಪ್ರಿಯವಾಗಿದೆ. ಆದರೆ ಅಧ್ಯಾತ್ಮ ಚಿಂತಕರು ಹಾಗೂ ಧಾರ್ಮಿಕ ಪ್ರವಚನಕಾರರು ಆಗಿದ್ದಂಥ ಬನ್ನಂಜೆ ಗೋವಿಂದಾಚಾರ್ಯರು ಮಧ್ವಾಚಾರ್ಯರ ಬಗ್ಗೆ ಮಾಡಿರುವ ಪ್ರವಚನಗಳಲ್ಲಿ, ಆಚಾರ್ಯರ ಸಿದ್ಧಾಂತದ ಹೆಸರು “ತತ್ವವಾದ” ಹಾಗೂ ಅದೇ ಹೆಸರಿಂದ ಕರೆಯಬೇಕು. ದ್ವೈತ ಮತ ಎಂಬುದು ತಪ್ಪಾದ ವ್ಯಾಖ್ಯಾನ ಎಂದು ಸಹ ಹೇಳಿದ್ದಾರೆ.
ಮಧ್ವರು ದೈಹಿಕವಾಗಿ ಸದೃಢರಾಗಿದ್ದರು, ಮೈದಾನದಲ್ಲಿ ಆಡುವಂಥ ಆಟಗಳಲ್ಲಿ, ಕುಸ್ತಿ, ಓಟ, ಜಿಗಿತದಲ್ಲಿ ಗಟ್ಟಿಗರಾಗಿದ್ದರು ಹಾಗೂ ಅದ್ಭುತವಾದ ಮೈಕಟ್ಟು ಹೊಂದಿದ್ದರು ಮತ್ತು ತುಂಬ ಚೆನ್ನಾಗಿ ಈಜಬಲ್ಲವಂಥರಾಗಿದ್ದರು. ಆದ್ದರಿಂದ ಜನರು ಅವರಿಗೆ ಭೀಮ ಎಂಬ ಹೆಸರಿಂದ ಸಹ ಕರೆಯುತ್ತಿದ್ದರು ಎಂಬ ಉಲ್ಲೇಖ ಇದೆ. ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಐತರೇಯ ಉಪನಿಷತ್ ಪ್ರವಚನ ಮಾಡುವಾಗ ಮಧ್ವಾಚಾರ್ಯರ ಮೇಲೆ ತುಳಸಿ ಹಾಗೂ ಹೂವುಗಳು ಬಿದ್ದವು. ಹಾಗೆ ಅವರ ಮೇಲೆ ವೃಷ್ಟಿ ಆದದ್ದು ದೇವಾನುದೇವತೆಗಳಿಂದ ಎಂದು ನಾರಾಯಣ ಪಂಡಿತಾಚಾರ್ಯರು ಬರೆದಂಥ ಮಧ್ವಾಚಾರ್ಯರ ಜೀವನಚರಿತ್ರೆಯಾದ ‘ಸುಮಧ್ವ ವಿಜಯ’ದಲ್ಲಿ ಇದೆ. ಈ ಘಟನೆ ಆದ ಕೆಲವು ದಿನಗಳ ನಂತರ ಬದರಿಗೆ ಮಧ್ವಾಚಾರ್ಯರು ತೆರಳಿದರು ಎಂಬ ಅಭಿಪ್ರಾಯವಿದೆ.
ಆ ರೀತಿ ಮಧ್ವಾಚಾರ್ಯರು ಎಪ್ಪತ್ತೊಂಬತ್ತು ವರ್ಷಗಳ ಕಾಲ ಜನರಿಗೆ ಕಣ್ಣಿಗೆ ಕಾಣಿಸಿಕೊಳ್ಳುತ್ತಾ ಇದ್ದರು, ಆ ನಂತರ ಅವರು ಬದರಿಗೆ ತೆರಳಿದರು. ಅಂದರೆ, 1317ನೇ ಇಸವಿ ತನಕ ದೈಹಿಕ ಶರೀರದೊಂದಿಗೆ ಮಧ್ವಾಚಾರ್ಯರು ಜನರಿಗೆ ಕಾಣಿಸಿಕೊಂಡಿದ್ದರು. ವಾಯುವಿನ ಅವತಾರಗಳು ಹನುಮ, ಭೀಮಸೇನ ಹಾಗೂ ಮಧ್ವಾಚಾರ್ಯರದು ಮತ್ತು ಅವರಿಗೆ ಸಾವಿಲ್ಲ, ಇಂದಿಗೂ ಇದ್ದಾರೆ, ಇಂದಿಗೂ ಮಧ್ವರು ಬದ್ರಿನಾಥದಲ್ಲಿ ವಾಸಿಸುತ್ತಿದ್ದಾರೆ ಮತ್ತು ವೇದವ್ಯಾಸರಿಂದ ಕಲಿಕೆಯನ್ನು ಮಾಡುತ್ತಿದ್ದಾರೆ ಎಂದು ನಂಬಲಾಗಿದೆ.
ಗೀತ ಭಾಷ್ಯಂ, ಸೂತ್ರ ಭಾಷ್ಯಂ, ಅಣುಭಾಷ್ಯಂ ಸೇರಿದಂತೆ ಮೂವತ್ತೇಳು ಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ಮಧ್ವಾಚಾರ್ಯರು ರಚನೆ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಸನಾತನ ಧರ್ಮದ ಪವಿತ್ರ ಗ್ರಂಥಗಳ ಮೇಲಿನ ವ್ಯಾಖ್ಯಾನಗಳು ಮತ್ತು ತಮ್ಮದೇ ಆದ ದೇವತಾಶಾಸ್ತ್ರದ ವ್ಯವಸ್ಥೆ ಮತ್ತು ತತ್ತ್ವಶಾಸ್ತ್ರದ ಕುರಿತಾದ ಗ್ರಂಥಗಳಾಗಿವೆ. ಮಹಾಭಾರತ ತಾತ್ಪರ್ಯ ನಿರ್ಣಯವನ್ನು ಬರೆದಿರುವ ಮಧ್ವಾಚಾರ್ಯರು, ಅಧ್ಯಾತ್ಮ, ಧರ್ಮಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ತಮ್ಮ ಗ್ರಂಥಗಳಲ್ಲಿ ತಿಳಿಸಿದ್ದಾರೆ. ಸನ್ಯಾಸಿಗಳು ಹೇಗಿರುಬೇಕು, ಅವರು ಅನುಸರಿಸಬೇಕಾದ ಧರ್ಮವೇನು ಇತ್ಯಾದಿಗಳ ಬಗ್ಗೆ ‘ಯತಿಪ್ರಣವಕಲ್ಪ’ದಲ್ಲಿ, ಅದೇ ರೀತಿ ತಂತ್ರಸಾರ ಸಂಗ್ರಹ ಎಂಬುದರಲ್ಲಿ ಗೃಹಸ್ಥರು ತಮ್ಮ ಬಳಿ ಇರಿಸಿಕೊಳ್ಳಬಹುದಾದ ದೇವರ ವಿಗ್ರಹಗಳ ಪ್ರಮಾಣ, ದೇವಾಲಯ ವಾಸ್ತು ಸೇರಿದಂತೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಭಾರತದಾದ್ಯಂತ ಮಧ್ವಾಚಾರ್ಯರ ಸಂಚಾರ ಮಾಡಿ, ಆಧ್ಯಾತ್ಮಿಕ ವಿಚಾರಗಳನ್ನು ಪ್ರಸಾರ ಮಾಡಿದ ಬಗ್ಗೆ ಹಾಗೂ ತಮ್ಮ ತತ್ವ ವಿಚಾರಗಳನ್ನು ಬೋಧನೆ ಮಾಡಿದ ಬಗ್ಗೆ ಉಲ್ಲೇಖವಿದೆ.
ಅದೊಮ್ಮೆ ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಹಡಗೊಂದು ಬಿರುಗಾಳಿ ಸಿಲುಕಿತ್ತು. ಆ ಸಂದರ್ಭದಲ್ಲಿ ಮಧ್ವಾಚಾರ್ಯರು ಆ ಕಡಲ ತೀರದಲ್ಲಿ ಸ್ತುತಿಗೀತೆಯನ್ನು ರಚಿಸುತ್ತಿದ್ದರಂತೆ. ಸಂಕಷ್ಟದಲ್ಲಿ ಸಿಲುಕಿದ ಜನರು ಹಾಗೂ ಹಡಗನ್ನು ತಮ್ಮ ತಪೋ ಸಾಮರ್ಥ್ಯದಿಂದ ರಕ್ಷಣೆ ನೀಡಿದರು. ಆ ಹಡಗಿನ ನಾಯಕನು ತಮ್ಮ ಜೀವ ಉಳಿಸಿದ್ದರ ಉಪಕಾರಾರ್ಥ ಏನು ನೀಡಬೇಕೆಂದು ಕೇಳಿದಾಗ, ಆ ಹಡಗಿನಲ್ಲಿ ಇದ್ದಂಥ ಗೋಪಿಚಂದನದ ದೊಡ್ಡ ತುಂಡನ್ನು ಪಡೆದುಕೊಳ್ಳುತ್ತಾರೆ ಆಚಾರ್ಯರು. ಅದನ್ನು ತುಂಡರಿಸಿದಾಗ ಅದರಲ್ಲಿ ರುಕ್ಮಿಣಿ ದೇವಿಯಿಂದ ಪೂಜಿಸಿದ ಶ್ರೀಕೃಷ್ಣನ ವಿಗ್ರಹ ಇರುತ್ತದೆ. ಮಧ್ವಾಚಾರ್ಯರು. ಆ ವಿಗ್ರಹವನ್ನೇ ಮುಂದೆ ಉಡುಪಿಯಲ್ಲಿ ಸ್ಥಾಪನೆ ಮಾಡುತ್ತಾರೆ. ಆ ಕೃಷ್ಣನ ಆರಾಧನೆಯನ್ನು ಮಾಡುವುದಕ್ಕಾಗಿ ಎಂಟು ಮಠಗಳ ಸ್ಥಾಪನೆಯನ್ನು ಮಾಡುತ್ತಾರೆ. ಅದನ್ನೇ ‘ಅಷ್ಟಮಠ’ ಎಂದು ಕರೆಯಲಾಗುತ್ತಿದೆ. ಮೊದಲಿಗೆ ಒಂದು ಮಠದ ಯತಿಗಳಿಗೆ ಎರಡು ತಿಂಗಳಿಗೆ ಒಮ್ಮೆ ಪೂಜೆ ಮಾಡುವ ಕರ್ತವ್ಯವನ್ನು ಒಪ್ಪಿಸಿದರು ಮಧ್ವಾಚಾರ್ಯರು. ಆ ನಂತರ ಈ ಪದ್ಧತಿಯನ್ನು ಬದಲಿಸಿ, ಎರಡು ವರ್ಷಗಳಿಗೆ ಒಮ್ಮೆ ಎಂದು ಬದಲಾವಣೆ ಮಾಡಿದವರು ವಾದಿರಾಜರು.
ಇದನ್ನೂ ಓದಿ: ಮಹಾಕುಂಭ ಮೇಳದ ಶಾಹಿ ಸ್ನಾನಕ್ಕಿದೆ ಮೇ 15ರ ತನಕ ಅವಕಾಶ; ಇರಲಿ ತಾಳ್ಮೆ- ಸಂಯಮ
ಮಧ್ವಾಚಾರ್ಯರನ್ನು ಮಾಘ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ವಿಶೇಷವಾಗಿ ಸ್ಮರಿಸಲಾಗುತ್ತದೆ. ಆ ದಿನದಂದು ಬ್ರಾಹ್ಮಣರಲ್ಲಿ ಉಪ ಪಂಗಡವಾದ ಮಾಧ್ವರು ಮಧ್ವರ ತತ್ವ- ಸಿದ್ಧಾಂತಗಳ ಬಗ್ಗೆ ಪ್ರವಚನಗಳು- ಉಪನ್ಯಾಸಗಳನ್ನು ಏರ್ಪಡಿಸುತ್ತಾರೆ. ಹನುಮ- ಭೀಮ- ಮಧ್ವ ಹೀಗೆ ಮೂರು ಅವತಾರಗಳ ಬಗ್ಗೆ ಚಿಂತನೆಗಳನ್ನು ಸಹ ಮಾಡುತ್ತಾರೆ. ಜಾತಿ- ಪಂಗಡಗಳ ಹೊರತಾಗಿಯೂ ಈ ದಿನ ಮಧ್ವಾಚಾರ್ಯರು ಅಧ್ಯಾತ್ಮ ಜಗತ್ತಿಗೆ ನೀಡಿದ ಕೊಡುಗೆಯನ್ನು ವಿಶೇಷವಾಗಿ ನೆನಪಿಸಿಕೊಳ್ಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ