
ನವರಾತ್ರಿಯ ನವ ಪರ್ವಗಳಲ್ಲಿ ಇಂದಿನ ವಿಶೇಷ ತಿಥಿ ಆಶ್ವೀಜ ಮಾಸದ ಶುಕ್ಲ ಪಕ್ಷದ ಅಷ್ಟಮಿ. ಈ ಪವಿತ್ರ ದಿನದಂದು ದುರ್ಗಾದೇವಿಯ ಎಂಟನೆಯ ಶಕ್ತಿ ಸ್ವರೂಪವಾದ ಮಹಾಗೌರಿಯನ್ನು ಆರಾಧಿಸಲಾಗುತ್ತದೆ ಎಂದು ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮುಂದಿನ ವರ್ಷದ ಆಶ್ವೀಜ ಮಾಸ ಬರುವ ತನಕ ನಮ್ಮಲ್ಲಿ ಸವಾಲುಗಳನ್ನು ಎದುರಿಸಲು ಬೇಕಾದ ಶಕ್ತಿ, ಧೈರ್ಯ, ಸ್ಥೈರ್ಯ ಮತ್ತು ನಂಬಿಕೆ ಇರಲು ಈ ತಾಯಿಯ ಕೃಪೆ ಅಗತ್ಯ. ದುಷ್ಟ ಶಕ್ತಿಗಳನ್ನು ನಾಶಪಡಿಸುವುದು ಮಾತ್ರವಲ್ಲದೆ, ನಮ್ಮೊಳಗೆ ಇರುವ ನಕಾರಾತ್ಮಕ ಅಂಶಗಳನ್ನು, ದುಷ್ಟ ಗುಣಗಳನ್ನು ಸಂಹಾರ ಮಾಡುವ ಶಕ್ತಿಯನ್ನು ಈ ಆರಾಧನೆಯಿಂದ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಮಹಾಗೌರಿಯು ದುರ್ಗಾದೇವಿಯ ವಿಭಿನ್ನ ಸ್ವರೂಪಗಳಲ್ಲಿ ಒಂದಾಗಿದ್ದು, ಜಗದಂಬೆಯ ಎಂಟನೆಯ ಅವತಾರವೆಂದು ಪರಿಗಣಿಸಲಾಗಿದೆ. ಗೌರಿ ಎಂಬುದು ಶುಭ್ರತೆ, ಸೌಂದರ್ಯ ಮತ್ತು ಪವಿತ್ರತೆಯ ಸಂಕೇತವಾಗಿದೆ. ಪುಟ್ಟ ಮಕ್ಕಳ ಮುಖದಲ್ಲಿ ಕಾಣುವ ದೈವಿಕ ಕಾಂತಿ, ತಾಳ್ಮೆ ಮತ್ತು ಶಕ್ತಿಯನ್ನು ಗೌರಿಗೆ ಹೋಲಿಸಲಾಗುತ್ತದೆ. ಮಹಾಗೌರಿಯು ಋಷಭ ವಾಹನವನ್ನು ಹೊಂದಿದ್ದು, ಚತುರ್ಭುಜೆ ಹಾಗೂ ಶುದ್ಧ ಶ್ವೇತ ವರ್ಣದಿಂದ ಕಂಗೊಳಿಸುತ್ತಾಳೆ. ಆಕೆಯ ಬಿಳಿಯ ಬಣ್ಣವು ಶುದ್ಧತೆ, ಶಾಂತಿ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತದೆ.
ಮಹಾಗೌರಿ ಪೂಜೆಯ ಸಂದರ್ಭದಲ್ಲಿ ವಿಶೇಷ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಕೋಸಂಬರಿ, ಬೆಲ್ಲ ಮತ್ತು ತುಪ್ಪದಿಂದ ತಯಾರಿಸಿದ ಬೆಲ್ಲದ ಪಾಯಸ, ಹಾಗೂ ತೊಗರಿಬೇಳೆಯಿಂದ ತಯಾರಿಸಿದ ಹೋಳಿಗೆ ಅಥವಾ ಒಬ್ಬಟ್ಟು ಈ ತಾಯಿಗೆ ಅತ್ಯಂತ ಪ್ರಿಯವಾದ ನೈವೇದ್ಯಗಳು. ಈ ನೈವೇದ್ಯಗಳನ್ನು ಸಮರ್ಪಿಸಿದ ನಂತರ, “ಓಂ ಐಂ ಹ್ರೀಂ ಶ್ರೀಂ ಮಹಾ ಗೌರೈ ನಮಃ” ಎಂಬ ಮಂತ್ರವನ್ನು ಶ್ರದ್ಧಾಭಕ್ತಿಯಿಂದ ಜಪಿಸಬೇಕು. ಈ ಮಂತ್ರ ಜಪವು ತಾಯಿಯ ಕೃಪೆಗೆ ಪಾತ್ರರಾಗಲು ಸಹಾಯಕವಾಗಿದೆ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಮಹಾಗೌರಿ ಪೂಜೆಗೆ ಶುಭ ಮುಹೂರ್ತಗಳು ನಿರ್ದಿಷ್ಟವಾಗಿವೆ. ಬೆಳಗಿನ ಬ್ರಾಹ್ಮಿ ಮುಹೂರ್ತ, ಮಧ್ಯಾಹ್ನದ ಅಭಿಜಿತ್ ಮುಹೂರ್ತ, ಮತ್ತು ಸಂಧ್ಯಾಕಾಲದ ಗೋಧೂಳಿ ಮುಹೂರ್ತಗಳಲ್ಲಿ ಈ ತಾಯಿಯ ಪೂಜೆಯನ್ನು ಆಚರಿಸುವುದು ಹೆಚ್ಚು ಫಲಪ್ರದವಾಗಿದೆ. ಈ ಪವಿತ್ರ ದಿನದಂದು ಮಹಾಗೌರಿಯನ್ನು ಆರಾಧಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಅವಿವಾಹಿತರಿಗೆ ಉತ್ತಮ ಮತ್ತು ಸದ್ಗುಣ ಸಂಪನ್ನ ಸಂಗಾತಿ ಲಭಿಸುವ ಸಾಧ್ಯತೆ ಹೆಚ್ಚಾಗುತ್ತದೆ. ವಿವಾಹಿತ ದಂಪತಿಗಳಲ್ಲಿ ಅನ್ಯೋನ್ಯತೆ, ಸಾಮರಸ್ಯ ಮತ್ತು ಬಾಂಧವ್ಯ ವೃದ್ಧಿಯಾಗುತ್ತದೆ. ಆಕೆಯ ಆಶೀರ್ವಾದದಿಂದ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಅಷ್ಟಮಿ ತಿಥಿಯು ಶಕ್ತಿ ಮತ್ತು ಮಂಗಳಕರ ದಿನವೆಂದು ಪರಿಗಣಿಸಲ್ಪಟ್ಟಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ