ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಪುಷ್ಯ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷದ ಮೌನಿ ಅಮಾವಾಸ್ಯೆ ಜನವರಿ 21 ಶನಿವಾರ ಬಂದಿದೆ. ವಿಶೇಷವೆಂದರೆ ಶನಿವಾರದಂದು ಅಮವಾಸ್ಯೆಯ ತಿಥಿ ಬಂದಿರುವುದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದೂ ಸಹ ಕರೆಯುತ್ತಾರೆ. ಹೀಗಾಗಿ ಇದು ಪಿತೃ ದೋಷ ನಿವಾರಣೆಗೂ ಶ್ರೇಷ್ಟದಿನವಾಗಿದೆ. ಅಲ್ಲದೆ ಈ ಅಮಾವಾಸ್ಯೆಯಂದು ಮೌನವಾಗಿ ದೇವರ ಜಪ ಮಾಡುವುದರಿಂದ ದುಪ್ಪಟ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ದೇವರ ಜಪ ಮಾಡುವುದು, ದಾನ-ಧರ್ಮ ಮಾಡುವುದಕ್ಕೆ ವಿಶೇಷ ಮಹತ್ವವಿದೆ.
ಪದ್ಮ ಪುರಾಣದ ಪ್ರಕಾರ, ಮೌನಿ ಅಮಾವಾಸ್ಯೆಯಂದು ಮೌನವಾಗಿ ಮಾಡುವ ಜಪ, ತಪಸ್ಸು ಮತ್ತು ದಾನದಿಂದ ಭಗವಾನ್ ವಿಷ್ಣುವು ತುಂಬಾ ಪ್ರಸನ್ನನಾಗುತ್ತಾನೆ ಮತ್ತು ವಿಶೇಷ ಧಾರ್ಮಿಕ ಪ್ರಯೋಜನಗಳನ್ನು ನೀಡುತ್ತಾನೆ ಎನ್ನಲಾಗಿದೆ. ಈ ದಿನದಂದು ಉಪವಾಸವನ್ನು ಮಾಡಿ ಇಡೀ ದಿನ ಮೌನವಾಗಿದ್ದು ದೇವರ ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳನ್ನು ನಿರ್ವಹಿಸಲು ಮೌನಿ ಅಮಾವಾಸ್ಯೆಯ ದಿನಾಂಕವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಅಮಾವಾಸ್ಯೆ ತಿಥಿ – 2023 ರ ಜನವರಿ 21 ರಂದು ಬೆಳಿಗ್ಗೆ 06:17 ರಿಂದ ಆರಂಭವಾಗಿ 2023 ರ ಜನವರಿ 22 ರಂದು ಬೆಳಿಗ್ಗೆ 02:22 ಕ್ಕೆ ಅಮವಾಸ್ಯೆ ತಿಥಿ ಮುಕ್ತಾಯವಾಗುತ್ತದೆ.
ಸೂರ್ಯೋದಯ – 2023 ರ ಜನವರಿ 21 ರಂದು ಬೆಳಿಗ್ಗೆ 07:13 ಕ್ಕೆ
ಉದಯ ತಿಥಿಯ ಪ್ರಕಾರ, ಮೌನಿ ಅಥವಾ ಪುಷ್ಯ ಅಮಾವಾಸ್ಯೆಯನ್ನು ಜನವರಿ 21 ರಂದು ಶನಿವಾರ ಆಚರಿಸಲಾಗುತ್ತದೆ.
ಅಮವಾಸ್ಯೆಯ ತಿಥಿಯಂದು ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಮಂಗಳಕರ. ಹೊದಿಕೆಗಳು, ಹಣ್ಣುಗಳು, ಬೆಚ್ಚಗಿನ ಬಟ್ಟೆಗಳು, ಧಾನ್ಯಗಳು ಇತ್ಯಾದಿಗಳನ್ನು ದಾನ ಮಾಡುವುದು ಈ ದಿನದಂದು ವಿಶೇಷ ಮಹತ್ವವನ್ನು ಪಡೆದಿದೆ. ಪುಷ್ಯ ಮಾಸವು ಭಗವಾನ್ ವಿಷ್ಣುವಿಗೆ ಬಹಳ ಪ್ರಿಯವಾದ ಮಾಸವಾಗಿದೆ. ಈ ಮಾಸದಲ್ಲಿ ಮಾಡಿದ ಜಪ, ದಾನ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಮತ್ತೊಂದೆಡೆ, ಕುಂಭ ನದಿಗೆ ಹೋಗಿ ಸ್ನಾನ ಮಾಡಲು ಸಾಧ್ಯವಾಗದವರು ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡುವುದರಿಂದ ಎಲ್ಲಾ ತೀರ್ಥಯಾತ್ರೆಗಳಲ್ಲಿ ಸ್ನಾನ ಮಾಡಿದ ಫಲವನ್ನು ಪಡೆದುಕೊಳ್ಳಬಹುದು ಎನ್ನಲಾಗುತ್ತದೆ. ಇನ್ನು ವಿಶೇಷವೆಂದರೆ ಈ ದಿನ ಸರ್ವಾರ್ಥ ಸಿದ್ಧಿ ಯೋಗದೊಂದಿಗೆ 30 ವರ್ಷಗಳ ನಂತರ ಖಪ್ಪರ ಯೋಗವು ರೂಪುಗೊಳ್ಳುತ್ತಿದೆ. ಮೌನಿ ಅಮವಾಸ್ಯೆಯ ಕೆಲವು ದಿನಗಳ ಮೊದಲು ಅಂದರೆ ಜನವರಿ 17 ರಂದು ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಬದಲಾಗಿದ್ದಾನೆ. ಈ ಸಮಯದಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗ ಮತ್ತು ಮಕರ ರಾಶಿಯಲ್ಲಿ ತ್ರಿಕೋನ ಸ್ಥಾನದಿಂದ ಖಪ್ಪರ ಯೋಗವು ಸೃಷ್ಟಿಯಾಗುತ್ತಿದೆ.
ಮೌನಿ ಅಮಾವಾಸ್ಯೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಿ. ಗಂಗಾಜಲ ಹಾಕಿದ ನೀರಿನಲ್ಲಿ ಸ್ನಾನ ಮಾಡಬೇಕು. ಸ್ನಾನ ಮಾಡುವಾಗ, ‘ಗಂಗಾ ಚ ಯಮುನೇ ಚೈವ್ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂಬ ಈ ಮಂತ್ರವನ್ನು ಜಪಿಸಬೇಕು. ಸ್ನಾನದ ನಂತರ, ತಾಮ್ರದ ಪಾತ್ರೆಯಲ್ಲಿ ಕಪ್ಪು ಎಳ್ಳು ಮತ್ತು ಕೆಂಪು ಹೂವುಗಳನ್ನು ಬೆರೆಸಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ ಮತ್ತು ಭಗವಾನ್ ಹರಿಯನ್ನು ಧ್ಯಾನಿಸುತ್ತಾ ಉಪವಾಸ, ಮೌನವಾಗಿರಲು ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಈ ದಿನದಂದು ಪೂರ್ವಜರನ್ನು ಪೂಜಿಸುವ ಪದ್ಧತಿಯಿದೆ. ಇದರಿಂದಾಗಿ ಪೂರ್ವಜರು ಸಂತುಷ್ಟರಾಗಿ ವರ ಮತ್ತು ಆಶೀರ್ವಾದಗಳನ್ನು ನೀಡುತ್ತಾರೆ. ನದಿ ಅಥವಾ ಸರೋವರದ ದಡದಲ್ಲಿ ಸ್ನಾನ ಮಾಡುತ್ತಿದ್ದರೆ, ಎಳ್ಳು ಮಿಶ್ರಿತ ನೀರನ್ನು ನದಿಯಲ್ಲಿ ಹರಿಯಲು ಬಿಡಬೇಕು. ಹಣ್ಣು, ಹೂವು, ಧೂಪ, ದೀಪ ಇತ್ಯಾದಿಗಳಿಂದ ವಿಷ್ಣುವನ್ನು ಪೂಜಿಸಬೇಕು. ಪೂಜೆಯ ನಂತರ, ಬಡವರಿಗೆ ಅಥವಾ ಬ್ರಾಹ್ಮಣರಿಗೆ ಆಹಾರವನ್ನು ನೀಡಬೇಕು. ಈ ದಿನ ಪಿತೃ ದೋಷದಿಂದ ಮುಕ್ತಿ ಮತ್ತು ಜೀವನದಲ್ಲಿ ಶಾಂತಿ, ನೆಮ್ಮದಿ, ಸಂತೋಷಕ್ಕಾಗಿ ಶಿವನನ್ನು ಪೂಜಿಸಬೇಕು. ಶಿವನ ಕೃಪೆಯಿಂದ ಪಿತೃ ದೋಷದಿಂದ ಮುಕ್ತರಾಗಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ