ಇಡೀ ದೇಶದಲ್ಲಿ ಸದ್ದು ಮಾಡಿದ ಕನ್ನಡದ ಸೂಪರ್ ಹಿಟ್ ‘ಕಾಂತಾರ’ (Kantara) ಸಿನಿಮಾದಲ್ಲಿ ಕಾಡಿನಲ್ಲಿ ದೈವ ಮಾಯವಾಗುವುದನ್ನು ನೋಡಬಹುದು. ಇದನ್ನು ನೋಡಿದ ನಂತರ ಅನೇಕರ ಮನಸ್ಸಿನಲ್ಲಿ ಹುಟ್ಟಿಕೊಂಡ ಪ್ರಶ್ನೆ ಎಂದರೆ ದೈವ ಕಟ್ಟುವವರು ಮಾಯವಾಗುತ್ತಾರಾ? ಇಲ್ಲಿ ಮಾಯವಾಗುವುದು (Invisible) ಎಂದರೆ ಸಾಯುವುದು ಅಲ್ಲ, ಅದೃಶ್ಯವಾಗುವುದಲ್ಲ. ಬದಲಾಗಿ ದೈವದ ಸಾನ್ನಿಧ್ಯಕ್ಕೆ ಸೇರುವುದು ಎಂದಾಗಿದೆ. ಹರಕೆ ಸಲ್ಲಿಸದಿದ್ದರೆ, ಅನನ್ಯ ಭಕ್ತರಾಗಿದ್ದರೆ, ದೈವದ ಕೋಪಕ್ಕೆ ಕಾರಣರಾಗಿದ್ದರೆ, ದೈವದ ನಿಯಮ ಉಲ್ಲಂಘಿಸಿದ್ದರೆ, ದೈವದ ಅನುಗ್ರಹಕ್ಕೆ ಪಾತ್ರರಾಗಿದ್ದರೆ ಅಂತಹವರು ಮಾಯವಾಗುತ್ತಾರೆ. ಆದರೆ ಕೋಲ ಕಟ್ಟುವವರು ಕೂಡ ಮಾಯವಾಗುತ್ತಾರಾ ಎಂಬ ಪ್ರಶ್ನೆಗೆ ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ್ (Dr.Lakshmi G Prasad) ನೀಡಿದ ಉತ್ತರ ಇಲ್ಲಿದೆ.
ದೈವದ ಕಳದಲ್ಲಿ ಗಾಯಗೊಳ್ಳುವ ಕೋರಚ್ಚನ್ ಎಂಬ ದೈವ ಪಾತ್ರಿ ದೈವತ್ವ ಪಡೆದು ದೈವವಾಗಿ ಆರಾಧಿಸಲ್ಪಡುತ್ತಾನೆ. ದೈವ ಕಟ್ಟಿದಾಗ ಮಾಯ ಹೊಂದಿದ ಫಣಿಯನ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಸುಳ್ಯ ಉತ್ತರ ಕೊಡಗು ಪರಿಸರಲ್ಲಿ ಅಜ್ಜಿ ಭೂತದೊಡನೆ ಕೂಜಿಲು ಹೆಸರಿನ ಎರಡು ದೈವಗಳಿಗೆ ಆರಾಧನೆ ಇದೆ. ಈ ದೈವಗಳ ಕೋಲದ ಕೊನೆಯಲ್ಲಿ ಸೇರಿದ ಜನರೆಲ್ಲ ಸೇರಿ ಕೈ ಕೈ ಹಿಡಿದು ದೈವಗಳ ಸುತ್ತ ಭದ್ರವಾಗಿ ಕೋಟೆ ಕಟ್ಟಿ ನಿಲ್ಲುತ್ತಾರೆ. ಆಗ ದೈವಗಳು ಇವರ ಕೈಯಿಂದ ತಪ್ಪಿಸಿಕೊಂಡು ಹೊರ ಹೋಗಲು ಪ್ರಯತ್ನ ಪಡುತ್ತವೆ. ಜನರು ಬಿಡುವುದಿಲ್ಲ. ಒಂದೊಮ್ಮೆ ಈ ಕೂಜಿಲು ದೈವಗಳು ಜನರು ಕಟ್ಟಿದ ಕೋಟೆಯಿಂದ ತಪ್ಪಿಸಿಕೊಂಡು ಹೊರ ಹೋದರೆ ಮತ್ತೆ ಹಿಂದೆ ಬರುವುದಿಲ್ಲ. ಕಾಡಿನೊಳಗೆ ಹೋಗಿ ಮಾಯವಾಗುತ್ತಾರೆ ಎಂಬ ಐತಿಹ್ಯವಿದೆ.
ಮೊದಲು ಹದಿನಾರು ಕೂಜಿಲು ದೈವಗಳಿಗೆ ಕೋಲ ಇತ್ತು. ಕೋಟೆ ತಪ್ಪಿಸಿಕೊಂಡು ಒಬ್ಬೊಬ್ಬರೇ ಹೊರ ಹೋಗಿ ಮಾಯವಾಗಿ ಇಬ್ಬರು ಮಾತ್ರ ಉಳಿದಿದ್ದಾರೆ. ಹಾಗಾಗಿ ಈಗ ಎರಡು ಕೂಜಿಲು ದೈವಗಳಿಗೆ ಕೋಲ ಕಟ್ಟಿ ಆರಾಧಿಸುತ್ತಾರೆ. ತಮ್ಮ ಮನೆಯ ಹಿರಿಯರಲ್ಲೊಬ್ಬರು ಹೀಗೆ ಮಾಯಕ ಹೊಂದಿದ್ದಾರೆ ಎಂದು ಭೂತ ಕಟ್ಟುವ ಹಿರಿಯ ಕಲಾವಿದರಾದ ಪೂವಪ್ಪರು ನನ್ನಲ್ಲಿ ಮಾತನಾಡುವಾಗ ಹೇಳಿದ್ದರು.
ಇದೇ ರೀತಿಯ ಅಚರಣೆ ಹಾಗೂ ನಂಬಿಕೆಗಳು ವರ್ಣಾರ ಪಂಜುರ್ಲಿ, ದುಗಲಾಯ, ಸುತ್ತು ಕೋಟೆ ಚಾಮುಂಡಿ ದೈವಗಳ ಬಗ್ಗೆಯೂ ಇದೆ.
ತಮ್ಮ ಊರು ಹೊಸಬೆಟ್ಟಿನಲ್ಲಿ ರಾವು ಗುಳಿಗ ಆವೇಶ ಬಂದು ಗೋಳಿಮರವನ್ನು ಏರಿ ಮಾಯವಾದ ಬಗ್ಗೆ ಹೊಸಬೆಟ್ಟಿನ ಗಣೇಶ್ ರಾಮ್ ಅವರು ತಿಳಿಸಿದ್ದಾರೆ. ಮಾಯವಾದದ್ದಕ್ಕೆ ಸಾಕ್ಷಿಯಾಗಿ ಮರದ ಕೆಳಗೆ ದೈವದ ಗಗ್ಗರ ಸಿಕ್ಕಿತಂತೆ. ನಂತರ ಇಲ್ಲಿ ರಾವು ಗುಳಿಗನ ಕೋಲವನ್ನು ನಿಲ್ಲಿಸಿದರಂತೆ. ಆದರೆ ಪದೇ ಪದೇ ಆ ಊರಿನಲ್ಲಿ ಅಪಘಾತಗಳಾಗಲು ಶುರುವಾಗಿ ನಂತರ ಪುನಃ ಈ ದೈವವನ್ನು ಕಟ್ಟಿ ಕೋಲ ಕೊಟ್ಟು ಆರಾಧಿಸಲು ಶುರು ಮಾಡಿದ್ದಾರೆ.
ಇದನ್ನೂ ಓದಿ: ತುಳು ಸಂಸ್ಕೃತಿಯಲ್ಲಿ ಮಾಯವಾಗುವುದು ಎಂದರೆ ಸಾಯುವುದಲ್ಲ, ಹಾಗಿದ್ದರೆ ಮಾಯವಾದವರು ಏನಾಗುತ್ತಾರೆ? ಇಲ್ಲಿದೆ ನೋಡಿ ಮಾಹಿತಿ
ಅದೇ ರೀತಿ ಸುಳ್ಯದ ದೇಂಗೋಡಿಯ ಜಾಲಾಟದಲ್ಲಿ ಬಹಳ ಉಗ್ರ ಸ್ವರೂಪದ ದೈವ ಜಂಗ ಬಂಟ ಆವೇಶದಿಂದ ಓಡಿ ಮಾಯವಾಗುತ್ತದೆ. ಬಿದಿರು ಮೆಳೆಯ ತುದಿಯಲ್ಲಿ ಗಗ್ಗರ ಸಿಲುಕಿಕೊಂಡು ಸಿಕ್ಕಿತೆಂಬ ಮಾಹಿತಿಯನ್ನು ಈ ಮನೆಯ ನಿತಿನ್ ಅವರು ತಿಳಿಸಿದ್ದಾರೆ. ಕೂಜಿಲು ದೈವ ಕಟ್ಟಿರುವವರಲ್ಲಿ ಒಬ್ಬಾತ ತಮ್ಮ ಮನೆಯಲ್ಲಿ ಮಾಯವಾದದ್ದೆಂಬ ಐತಿಹ್ಯ ಇರುವುದನ್ನು ದೀಪಕ ಮುರುಡಿತ್ತಾಯರು ತಿಳಿಸಿದ್ದಾರೆ. ಈ ಕಾರಣದಿಂದ ಅಲ್ಲಿ ಸುಮಾರು ಸಮಯ ಕೂಜಿಲು ದೈವಗಳ ಕೋಲವನ್ನು ನಿಲ್ಲಿಸಿದ್ದರಂತೆ.
ಇತ್ತೀಚೆಗೆ ಸುಳ್ಯದಲ್ಲಿ ಹನ್ನೊಂದು ಕೊರಗ ತನಿಯ ದೈವಗಳ ಕೋಲ ಆಗುವಾಗ ಹನ್ನೆರಡನೆಯ ಕೊರಗ ತನಿಯ ದೈವ ಕಾಣಿಸಿಕೊಂಡು ಅದೃಶ್ಯವಾಗಿದೆ. ಸಾಕ್ಷಿಯಾಗಿ ಆ ದೈವ ಧರಿಸಿದ್ದ ಮುಟ್ಟಾಳೆ ಇತ್ತು ಎಂಬ ಬಗ್ಗೆ ಕೇಳಿದ್ದೆ. ಇಲ್ಲೆಲ್ಲಾ ಮಾಯವಾದವರು ಏನಾದರು ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ. ಆದರೆ ದೈವದ ಅನುಗ್ರಹಕ್ಕೆ ಪಾತ್ರರಾದ ಇವರುಗಳು ಅಯಾಯ ದೈವವದ ಸಾನ್ನಿಧ್ಯಕ್ಕೆ ಸೇರಿ ದೈವಗಳೇ ಆಗಿರುತ್ತಾರೆ.
ಯಾಕೆಂದರೆ, ಅನೇಕ ವ್ಯಕ್ತಿಗಳನ್ನು ದೈವಗಳು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸಿಕೊಂಡ ವಿಚಾರ ಅನೇಕ ದೈವಗಳ ಕಥೆಯಲ್ಲಿದೆ. ನನಗೆ ಸಿಕ್ಕವನ್ನೆಲ್ಲ 1238 ದೈವಗಳ ಮಾಹಿತಿ ಇರುವ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ದಾಖಲಿಸಿದ್ದೇನೆ. ಕಾಂತಾರದಂತಹ ಸಾವಿರ ಸಿನೇಮಗಳಿಗೆ ಸಾಕಾಗುವಷ್ಟು ಕಥಾನಕಗಳು ಇದರಲ್ಲಿದೆ.
ಮಾಯ ಆಗುವುದರೆ ಇಲ್ಲವಾಗುವುದಲ್ಲ. ಹಾಗಾಗಿ ಮಾಯವಾದವರ ಪತ್ನಿ ವಿಧವೆ ಎಂದು ಪರಿಗಣಿಸಲ್ಪಡುವುದಿಲ್ಲ. ಆಕೆಗೆ ಅಪಾರ ಗೌರವ ಇರುತ್ತದೆ ಎಂಬ ಮಾಹಿತಿ ಹಿರಿಯರಾದ ದೈವ ಕಟ್ಟುವ ಕಲಾವಿದರಾದ ಪೂವಪ್ಪ ಅವರು ನೀಡಿದ್ದಾರೆ. ಹಾಗಾಗಿ ಮಾಯವಾಗಿ ದೈವತ್ವವ ಪಡೆದವರಿಗೆ ಇತರರಿಗೆ ಮಾಡುವಂತೆ ಅಂತ್ಯ ಸಂಸ್ಕಾರ ಮಾಡುವುದಲ್ಲ. ಅವರಿಗೆ ದೈವದ ರೀತಿಯಲ್ಲಿ ತಂಬಿಲ ಕೋಲ ಕೊಟ್ಟು ಆರಾಧಿಸುತ್ತಾರೆ. ಮಾಯವಾದವರ ಮನೆ ಮಂದಿಗೆ ಅಶೌಚದ ಆಚರಣೆಯೂ ಇರುವುದಿಲ್ಲ.
ಮಾಯಕ ಹೊಂದಿದವರ ಮನೆ ಮಂದಿ ಸಂಸಾರದ ಗತಿ ಏನು ಎಂಬುದೊಂದು ಪ್ರಶ್ನೆ ಅನೇಕರಿಗೆ ಕಾಡಿದೆ. ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ. ಎಲ್ಲರನ್ನೂ ಹೆತ್ತ ತಾಯಿಯಂತೆ ಪೊರೆಯುವ ದೈವ ದೇವರುಗಳು ಈ ಮನೆಮಂದಿಯನ್ನೂ ಸಲಹುವರು ಎಂದಷ್ಟೇ ಹೇಳಬಲ್ಲೆ. ಮಾಯಕ ಹೊಂದಿದವರು ಜನನ ಮರಣ ಚಕ್ರದಿಂದ ಅಥವಾ ಭವ ಬಂಧನದಿಂದ ಪಾರಾಗಿ ಶಿಷ್ಟ ಜನರ ರಕ್ಷಣೆ ಮಾಡುವ ಶಕ್ತಿಗಳಾಗಿ ನೆಲೆನಿಲ್ಲುತ್ತಾರೆ.
ಇದನ್ನೂ ಓದಿ: ತುಳುನಾಡ 1253 ದೈವಗಳ ಮಾಹಿತಿಯುಳ್ಳ ‘ಕರಾವಳಿಯ ಸಾವಿರದೊಂದು ದೈವಗಳು’ ಪುಸ್ತಕ ಜನವರಿ 15ರಂದು ಬಿಡುಗಡೆ
ಇನ್ನು ಕಾಂತಾರ ಸಿನಿಮಾದ ಕಥೆ ದಂತ ಕಥೆ ಎಂದಿದ್ದಾರೆ. ನಾನಿಲ್ಲಿ ಹೇಳಿದ ಕಥಾನಕಗಳೂ ಕೂಡ ದಂತ ಕಥೆಗಳೇ ಆಗಿವೆ. ಇವು ಯಾವುದೋ ಕಾಲದಲ್ಲಿ ನಡೆದಿರಬಹುದಾದ ಘಟನೆಗಳು ಮೌಖಿಕವಾಗಿ ಹರಡಿದ ಕಥಾನಕಗಳಾಗಿವೆ. ಕಾಂತಾರದ ದಂತ ಕಥೆ ಯಾವುದೋ ಕಾಲ ಘಟ್ಟದಲ್ಲಿ ನಡೆದದ್ದೇ ಆಗಿದ್ದರೆ ಅಲ್ಲಿ ದೈವ ಕಟ್ಟಿದಾಗ ಮಾಯವಾಗುವ ತಂದೆ ಮಗ ಇಬ್ಬರೂ ಕೂಡ ಪಂಜುರ್ಲಿ ದೈವದ ಸಾನ್ನಿಧ್ಯಕ್ಕೆ ಸೇರಿದ ಸೇರಿಗೆ ದೈವಗಳೇ ಆಗಿರುತ್ತಾರೆ.
ಹಾಗಾಗಿಯೇ ಅವರಿಬ್ಬರು ಮಾಯಕವಾದ ಸ್ಥಳದಲ್ಲಿ ತಂದೆ ಮಗನ ಸಮಾಗಮವನ್ನು ತೋರಿಸಿರಬಹುದು. ಗುರುವ ಸತ್ತಾಗ ಅಳುವ ಧ್ವನಿ ಪಂಜುರ್ಲಿ ದೈವದ ಸಾನ್ನಿಧ್ಯ ಸೇರಿ ಸೇರಿಗೆ ದೈವವಾದ ಗುರುವನ ಚಿಕ್ಕಪ್ಪನದು ಎಂದು ಅರ್ಥೈಸಬಹುದು ಅಥವಾ ತನ್ನ ಅನನ್ಯ ಭಕ್ತ ಗುರುವನ ಸಾವಿಗೆ ದುಃಖಿಸಿದ ಪಂಜುರ್ಲಿಯದೆಂದೂ ಅರ್ಥೈಸಬಹುದು. ಇದು ಸಿನಿಮಾವಾಗಿರುವುದರಿಂದ ಈ ಭಾಗ ಕಲ್ಪನೆಯಾಗಿರಲೂ ಸಾಧ್ಯವಿದೆ.
ಹೀಗೆ ಮಾಯ ಎಂದರೆ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅದೃಶ್ಯವಾಗಲು ಸಾಧ್ಯವೇ? ಎಂಬುದೊಂದು ಪ್ರಶ್ನೆ ಇದೆ. falling to 5th dimention ಎಂದರೆ ಜನರು ನೋಡುತ್ತಿದ್ದಂತೆಯೇ ವ್ಯಕ್ತಿಗಳು ಅದೃಶ್ಯವಾದ ಸುಮಾರು 163 ಪ್ರಕರಣಗಳು ದಾಖಲಾಗಿವೆ. ಇವು ಮೆಟ ಫಿಸಿಕ್ಸ್ನಲ್ಲಿ ಬರುತ್ತವೆ. ಉದ್ದ ಅಗಲ ಎತ್ತರ ಕಾಲ ಎಂಬ ನಾಲ್ಕು dimension ನಲ್ಲಿ ನಾವು ಬದುಕುತ್ತಿದ್ದೇವೆ. ಇದನ್ನು ಮೀರಿದ ಐದನೇ dimension ಗೆ ಹೋದ ವ್ಯಕ್ತಿ ವಸ್ತು ಅದೃಶ್ಯವಾಗುತ್ತದೆ ಎಂಬ ವಿಚಾರವನ್ನು ಉಜಿರೆಯ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಫಿಸಿಕ್ಸ್ ಪ್ರೊಫೆಸರ್ ಕೇಶವರು ನಾವು ವಿದ್ಯಾರ್ಥಿಗಳಾಗಿದ್ದಾಗ ಹೇಳಿದ್ದರು.
ಅಂತೆಯೇ ಕಪ್ಪು ರಂಧ್ರಗಳು ಇವೆಯಂತೆ. ಇವುಗಳನ್ನು ಪ್ರವೇಶ ಮಾಡಿದ ಬೆಳಕು ಕೂಡ ಹೊರಬರುವುದಿಲ್ಲ. ಅಷ್ಟು ಹೆಚ್ಚಿನ ಗುರುತ್ವಾಕರ್ಷಣ ಬಲ ಇರುತ್ತದೆಯಂತೆ. ಇದಲ್ಲದೆ ಬರ್ಮುಡಾ ಟ್ರ್ತಾಂಗಲ್ನ ಕುರಿತಾಗಿ ಅನೇಕ ಐತಿಹ್ಯಗಳಿವೆ. ಈ ಪ್ರದೇಶವನ್ನು ಸಮೀಪಿಸಿದ ಹಡಗು ವಿಮಾನ ಎಲ್ಲವೂ ಅದೃಶ್ಯವಾಗಿವೆ. ಇವನ್ನು ಪತ್ತೆ ಮಾಡಲು ಹೋದವರೂ ನಾಪತ್ತೆಯಾಗಿದ್ದಾರಂತೆ.
ಇದನ್ನೂ ಓದಿ: Roopesh Shetty: ‘ನಾನು ಕೊರಗಜ್ಜನ ಆರಾಧನೆ ಮಾಡ್ತೀನಿ, ಬಿಗ್ ಬಾಸ್ನಲ್ಲಿ ಅವರೇ ನನ್ನ ಗೆಲ್ಲಿಸಿದ್ದಾರೆ’: ರೂಪೇಶ್ ಶೆಟ್ಟಿ
ಅಂತೆಯೇ ದೈವ ಕಟ್ಟಿದ ಕಲಾವಿದರಲ್ಲೂ ವಿಶೇಷ ಶಕ್ತಿಯ ಅವೇಶವಾಗಿ ಅಥವಾ ಶಕ್ತಿ ಉತ್ತೇಜನಗೊಂಡು ಇಂತಹ ಪವಾಡಗಳು ನಡೆಯಬಾರದೆಂದೇನೂ ಇಲ್ಲ. ನಮಗೆ ಗೊತ್ತಿಲ್ಲದೇ ಇರುವ ಅನೇಕ ವಿಚಾರಗಳಿವೆ. ಗೊತ್ತಿಲ್ಲದೇ ಇರುವುದನ್ನು ಗೊತ್ತಿಲ್ಲ ಎನ್ನಬಹುದೇ ಹೊರತು ಇಲ್ಲವೇ ಇಲ್ಲ ಎನ್ನಲಾಗದು. ಕಳೆದ ಇಪ್ಪತ್ತೊಂದು ವರ್ಷಗಳ ಕ್ಷೇತ್ರ ಕಾರ್ಯ ಅಧ್ಯಯನದಲ್ಲಿ ಇಂತಹ ಅನೇಕ ಕೌತುಕದ ಅಧ್ಯಯನ ಯೋಗ್ಯ ವಿಚಾರಗಳಿವೆ. ವಿಶಿಷ್ಟ ಕಥಾನಕಗಳು ಸಿಕ್ಕಿವೆ.
ಇನ್ನು ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬುದೊಂದು ಪ್ರಶ್ನೆ. ಇದಕ್ಕೆ ಇದಮಿತ್ಥಂ ಎಂದು ಉತ್ತರಿಸುವುದು ಕಷ್ಟ. ತುಳು ಸಂಸ್ಕೃತಿ ಕುರಿತು ಅಧ್ಯಯನಮಾಡಿದ ಡಾ. ಬಿ.ಎ.ವಿವೇಕ ರೈ ಅವರು 260 ದೈವಗಳ ಹೆಸರನ್ನು ಸಂಗ್ರಹಿಸಿ ಅವರ ಪಿಎಚ್ಡಿ ನಿಬಂಧ ತುಳು ಜನಪದ ಸಾಹಿತ್ಯದಲ್ಲಿ ನೀಡಿದ್ದಾರೆ. ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ಅವರ ಪಿಎಚ್ಡಿ ನಿಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ದೈವಗಳ ಹೆಸರಿನ ಪಟ್ಟಿ ನೀಡಿದ್ದಾರೆ. ರಘುನಾಥ ವರ್ಕಾಡಿಯವರು 404 ದೈವಗಳ ಹೆಸರನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಡಾ.ಚಿನ್ನಪ್ಪ ಗೌಡರು ಸಂಗ್ರಹಿಸಿದ ಹೆಸರುಗಳು ಸೇರಿವೆ.
ಈ 404 ಸೇರಿದಂತೆ ನನಗೆ 2364 ದೈವಗಳ ಹೆಸರುಗಳು ಸಿಕ್ಕಿವೆ. 1251 ದೈವಗಳ ಮಾಹಿತಿಯೂ ಸಿಕ್ಕಿದ್ದು, ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ನನ್ನ ಅರಿವಿಗೆ ನಿಲುಕಿದಂತೆ ನೀಡಿದ್ದೇನೆ. ಇದು ಅಂತಿಮವಲ್ಲ. ಸಂಜೀವ ನೆರಿಯ ಅವರು ಕಲ್ಲ ಮುದರ ಎಂಬ ಎರಡು ದೈವಗಳ ಐತಿಹ್ಯಗಳನ್ನು ತಿಳಿಸಿದ್ದು, ಈ ಎರಡು ದೈವಗಳ ಹೆಸರು ಕೂಡ ಸಿಕ್ಕಿದೆ. ಕರಾವಳಿಯ ಸಾವಿರದೊಂದು ದೈವಗಳು (ಜನವರಿ 15ರಂದು ಬಿಡುಗಡೆ) ಪುಸ್ತಕ ಪ್ರಕಟಣೆಯ ನಂತರ ಕುಂಜಾರತಜ್ಜಿ ಭಟ್ಯೆದಿ ಕರ್ತಜ್ಜ, ಸಂಪಿಗೆತ್ತಾಯ ಸೇರಿದಂತೆ ಹದಿನೈದು ದೈವಗಳ ಮಾಹಿತಿ ಸಿಕ್ಕಿದೆ. ಏಕಲವ್ಯ ಜುಮಾದಿ, ಹನುಮಾನ್ ಪಂಜುರ್ಲಿ, ಕೆಮ್ಮಟೆ ಪಂಜುರ್ಲಿ ಮೊದಲಾದ ಹೆಸರುಗಳನ್ನು ಇತ್ತೀಚೆಗೆ ಕದ್ರಿ ನವನೀತ ಶೆಟ್ಟಿಯವರು ನೀಡಿದ್ದಾರೆ.
ಹಾಗಾಗಿ ಇಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂದು ಇದಮಿತ್ಥಂ ಹೇಳಲು ಸಾಧ್ಯವಿಲ್ಲ. ನನಗೆ ಸಿಕ್ಕ ಮಾಹಿತಿಯನ್ನು ನನ್ನ ಜ್ಞಾನದ ಪರಿಧಿಯೊಳಗೆ ಸಂಶೋಧನಾ ಅಧ್ಯಯನದ ವಿಧಾನಗಳ ತಳಹದಿಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡಿದ್ದೇನೆ. ಇದರಲ್ಲಿನ ದೈವಗಳ ಕಥೆಗಳು ನನ್ನ ಕಲ್ಪನೆಯ ಸೃಷ್ಟಿಯಲ್ಲ. ಪ್ರಚಲಿತ ಪಾಡ್ದನ ಐತಿಹ್ಯಗಳ ಮೂಲಕ ವಕ್ತೃಗಳ ಮೂಲಕ ಸಿಕ್ಕ ಮಾಹಿತಿಗಳು ಇವು. ಸಂಗ್ರಹ ಮತ್ತು ವಿಶ್ಲೇಷಣೆ ಮಾತ್ರ ನನ್ನದು. ಇದರಲ್ಲಿರುವ ಮಾಹಿತಿಯೇ ಅಂತಿಮವಲ್ಲ. ಒಂದು ದೈವಕ್ಕೆ ಸಂಬಂಧಿಸಿದಂತೆ ಅನೇಕ ಪಾಡ್ದನ ಐತಿಹ್ಯಗಳಿರುತ್ತವೆ. ಇವುಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ನನಗೆ ಸಿಕ್ಕಿದ್ದನ್ನು ಒಟ್ಟು ಮಾಡಿ ಅಧ್ಯಯನದ ತಳಹದಿಯಲ್ಲಿ ವಿಶ್ಲೇಷಿಸಿ ಬರೆದಿರುವೆ. ಇದು ಅನೇಕ ವಿದ್ವಾಂಸರ ಮೆಚ್ಚುಗೆಯನ್ನು ಕೂಡಾ ಪಡೆದಿದೆ.
ಲೇಖನ: ಡಾ.ಲಕ್ಷ್ಮೀ ಜಿ ಪ್ರಸಾದ್, ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು ಬ್ಯಾಟರಾಯನಪುರ, ಬೆಂಗಳೂರು. ಹೆಚ್ಚಿನ ಮಾಹಿತಿಗೆ ಮತ್ತು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪ್ರತಿಗಳಿಗೆ 9480516684 ನಂಬರ್ಗೆ ಸಂಪರ್ಕಿಸಿ.