Naraka Chaturdashi 2023: ನರಕ ಚತುರ್ದಶಿಯನ್ನು ಏಕೆ ಆಚರಿಸಬೇಕು? ಅದರ ಪ್ರಾಮುಖ್ಯತೆ ಏನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 09, 2023 | 6:44 PM

ಹಿಂದೂ ಪುರಾಣಗಳಲ್ಲಿ ಬಲಿಚಕ್ರವರ್ತಿ ಎಂದು ಕರೆಯಲ್ಪಡುವ ರಾಜನಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ. ಈ ದಿನ ಎಣ್ಣೆ ಸ್ನಾನ ಅಂದರೆ ಅಭ್ಯಂಗ ಸ್ನಾನ ಬಲು ಮುಖ್ಯವಾಗಿದೆ. ಈ ದಿನವನ್ನು ನರಕ ಚತುರ್ದಶಿ, ರೂಪ್ ಚೌದಾಸ್, ಭೂತ್ ಚತುರ್ದಶಿ, ನರಕ್ ನಿವರನ್ ಚತುರ್ದಶಿ, ಚೋಟಿ ದೀಪಾವಳಿ ಮುಂತಾದ ಕೆಲವು ಹೆಸರುಗಳಿಂದ ಕರೆಯಲಾಗುತ್ತದೆ. ನರಕ ಚತುರ್ದಶಿಯ ಮಹತ್ವ, ಆಚರಣೆಯ ಸಮಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Naraka Chaturdashi 2023: ನರಕ ಚತುರ್ದಶಿಯನ್ನು ಏಕೆ ಆಚರಿಸಬೇಕು? ಅದರ ಪ್ರಾಮುಖ್ಯತೆ ಏನು?
ಸಾಂದರ್ಭಿಕ ಚಿತ್ರ
Follow us on

ದೀಪಾವಳಿಯ ಮೊದಲ ದಿನ ನರಕ ಚತುರ್ದಶಿಯನ್ನು (Naraka Chaturdashi) ಆಚರಣೆ ಮಾಡಲಾಗುತ್ತದೆ. ಇದನ್ನು ಕೆಲವರು ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಹಿಂದೂ ಪುರಾಣಗಳಲ್ಲಿ ಬಲಿ ಚಕ್ರವರ್ತಿ ಎಂದು ಕರೆಯಲ್ಪಡುವ ರಾಜನಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ. ಈ ದಿನ ಎಣ್ಣೆ ಸ್ನಾನ ಅಂದರೆ ಅಭ್ಯಂಗ ಸ್ನಾನ ಬಲು ಮುಖ್ಯವಾಗಿದೆ. ಈ ದಿನವನ್ನು ನರಕ ಚತುರ್ದಶಿ, ರೂಪ್ ಚೌದಾಸ್, ಭೂತ್ ಚತುರ್ದಶಿ, ನರಕ್ ನಿವರನ್ ಚತುರ್ದಶಿ, ಚೋಟಿ ದೀಪಾವಳಿ ಮುಂತಾದ ಕೆಲವು ಹೆಸರುಗಳಿಂದ ಕರೆಯಲಾಗುತ್ತದೆ. ನರಕ ಚತುರ್ದಶಿಯ ಮಹತ್ವ, ಆಚರಣೆಯ ಸಮಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನರಕಚತುರ್ದಶಿ 2023 ದಿನಾಂಕ ಮತ್ತು ಸಮಯ;

ಹಿಂದೂ ಕ್ಯಾಲೆಂಡರ್ ಪ್ರಕಾರ, ಇದನ್ನು ಕಾರ್ತಿಕ ಮಾಸದ ಚತುರ್ದಶಿ ತಿಥಿ ಅಥವಾ ಕೃಷ್ಣ ಪಕ್ಷದ ಹದಿನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಸಾಮಾನ್ಯವಾಗಿ ಇದು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.

ನರಕ ಚತುರ್ದಶಿ 2023 ದಿನಾಂಕ: ನವೆಂಬರ್ 12, 2023

ಅಭ್ಯಂಗ ಸ್ನಾನ ಮಾಡುವ ಮುಹೂರ್ತ: ಬೆಳಿಗ್ಗೆ 05:28 ರಿಂದ 06:41ರ ವರೆಗೆ

ತಿಥಿಯ ಸಮಯ:

ಚತುರ್ದಶಿ ತಿಥಿ ಪ್ರಾರಂಭ: ನವೆಂಬರ್ 11, 2023 ರಂದು ಮಧ್ಯಾಹ್ನ 01:57 ಕ್ಕೆ

ಚತುರ್ದಶಿ ತಿಥಿ ಕೊನೆಗೊಳ್ಳುವುದು: ನವೆಂಬರ್ 12, 2023 ರಂದು ಮಧ್ಯಾಹ್ನ 02:44 ಕ್ಕೆ

ನರಕ ಚತುರ್ದಶಿಯ ಮಹತ್ವ :

ನಾವಿರುವ ಭೂಮಿ, ನಮ್ಮಲ್ಲಿರುವ ಸಂಪತ್ತು ಎಲ್ಲವೂ ಬಲಿ ಚಕ್ರವರ್ತಿಯದ್ದು ಎಂಬ ನಂಬಿಕೆ ಇದೆ. ಒಮ್ಮೆ ವಾಮನ ಅವತಾರದಲ್ಲಿ ಬಂದ ಕೃಷ್ಣ ಬಲಿ ಚಕ್ರವರ್ತಿಯ ಬಳಿ ಮೂರು ಹೆಜ್ಜೆಯ ಜಾಗ ಕೇಳುತ್ತಾನೆ. ಅದಕ್ಕೆ ಅವನು ಚಿಕ್ಕ ಹುಡುಗ ಎಂದು, ಕೊಡುತ್ತೇನೆ ಎನ್ನುತ್ತಾನೆ. ಆಗ ತನ್ನ ದೈತ್ಯ ಅವತಾರ ತೋರಿದ ಕೃಷ್ಣ ಭೂಮಿಯ ಮೇಲೆ ಒಂದು ಕಾಲು, ಆಕಾಶದ ಮೇಲೆ ಇನ್ನೊಂದು ಕಾಲು ಇಡುತ್ತಾನೆ. ಬಳಿಕ ಮೂರನೇ ಹೆಜ್ಜೆ ಎಲ್ಲಿ ಇಡಲಿ ಎಂದಾಗ ಬಳಿ ಚಕ್ರವರ್ತಿ ತನ್ನ ತಲೆಯ ಮೇಲೆ ಕಾಲಿಡು ಎನ್ನುತ್ತಾನೆ. ಅದೇ ರೀತಿ ಮಾಡಿದಾಗ ಬಲಿಚಕ್ರವರ್ತಿ ಪಾತಾಳಕ್ಕೆ ಹೋಗಿ ಬೀಳುತ್ತಾನೆ. ಆಮೇಲೆ ಕೃಷ್ಣ, ಭೂಮಿಯನ್ನುಇಷ್ಟು ಸುಭಿಕ್ಷವಾಗಿ ಇಟ್ಟುಕೊಂಡಿದ್ದಕ್ಕಾಗಿ ಬಲಿ ಚಕ್ರವರ್ತಿಗೆ, ದೀಪಾವಳಿಯ ಮೂರು ದಿನ ನೀನು ನಿನ್ನ ರಾಜ್ಯಕ್ಕೆ ಬಂದು ಹೋಗು ಎಂದು ವರ ನೀಡುತ್ತಾನೆ. ಹಾಗಾಗಿ ಈ ದೀಪಾವಳಿ ಸಮಯದಲ್ಲಿ ಭೂಮಿ ಸುಭಿಕ್ಷವಾಗಿರುತ್ತದೆ. ತೋಟ, ಗದ್ದೆಗಳಲ್ಲಿ ಫಲ ಬಂದಿರುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಜನರು ತಮ್ಮ ಜೀವನದಿಂದ ನಕಾರಾತ್ಮಕ ಶಕ್ತಿಗಳನ್ನು ಅಥವಾ ದುಷ್ಟ ಶಕ್ತಿಯ ಪ್ರಭಾವಗಳಿಂದ ಮುಕ್ತಿ ಹೊಂದಲು ಈ ಶುಭ ದಿನದಂದು ಕಾಳಿ ದೇವಿಯನ್ನು ಪೂಜಿಸುತ್ತಾರೆ. ನರಕ ಚತುರ್ದಶಿಯಂದು ಕಾಳಿ ಮಾತೆಯನ್ನು ಪೂಜಿಸುವುದರಿಂದ ನಿಮ್ಮ ಮನೆಯಿಂದ ದುಷ್ಟ ಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಇನ್ನು ತಮ್ಮ ಪಾಪಗಳನ್ನು ತೊಳೆದು ಕೊಳ್ಳಲು ಈ ದಿನ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ಈ ದಿನ ಅಭ್ಯಂಗ ಸ್ನಾನ ಮಾಡುವ ಜನರು ನರಕಕ್ಕೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ನರಕ ಚತುರ್ದಶಿ ರಾಕ್ಷಸ ನರಕಾಸುರನ ವಿರುದ್ಧ ಭಗವಾನ್ ಕೃಷ್ಣ ಮತ್ತು ಸತ್ಯಭಾಮನ ವಿಜಯವನ್ನು ಕೂಡ ಗೌರವಿಸಲಾಗುತ್ತದೆ.

ಇದನ್ನೂ ಓದಿ: ನರಕ ಚತುರ್ದಶಿ ದಿನ ಹನುಮ ಜಯಂತಿ: ಭಕ್ತರು ವಿಶೇಷವಾಗಿ ವಾಯುಪುತ್ರನನ್ನು ಆರಾಧಿಸಿದರೆ ಸಂಕಷ್ಟಗಳೆಲ್ಲ ದೂರ

ನರಕ ಚತುರ್ದಶಿ ಕಥೆ;

ಇನ್ನು ಕೆಲವೊಂದು ಪುರಾಣಗಳ ಪ್ರಕಾರ, ನರಕ ಚತುರ್ದಶಿ ಹಬ್ಬವು ನರಕಾಸುರ ಎಂಬ ರಾಕ್ಷಸನಿಂದ ಈ ಹೆಸರನ್ನು ಪಡೆದು ಕೊಂಡಿದೆ ಎಂದು ಹೇಳಲಾಗುತ್ತದೆ. ನರಕಾಸುರನು ವಿಷ್ಣುವಿನ ಅವತಾರವಾದ ಭೂದೇವಿ ಮತ್ತು ವರಾಹ ದೇವರ ಮಗ. ಈತ ಬ್ರಹ್ಮ ದೇವರ ಬಳಿ ತನ್ನ ತಾಯಿ ಭೂದೇವಿಯನ್ನು ಹೊರತುಪಡಿಸಿ ಯಾರೂ ನನ್ನನ್ನು ಕೊಲ್ಲಬಾರದು ಎಂದು ವರ ಪಡೆದುಕೊಂಡಿರುತ್ತಾನೆ. ಆದರೆ ಅವನ ದುರಾಸೆ ಮತ್ತು ಅವನು ಮಾಡಿದ ಅನ್ಯಾಯದಿಂದಾಗಿ ಕೃಷ್ಣನ ಪತ್ನಿ ಸತ್ಯಭಾಮಾ ನರಕಾಸುರನನ್ನು ಕೊಂದಳು. ಹಾಗಾಗಿ ಸತ್ಯಭಾಮಾಳನ್ನು ಭೂದೇವಿಯ ಅವತಾರವೆಂದು ಭಾವಿಸಲಾಗಿತ್ತು. ನರಕಾಸುರನು ಸಾಯುವ ಮೊದಲು ಸತ್ಯಭಾಮಾದಿಂದ ಒಂದು ವರವನ್ನು ಬೇಡುತ್ತಾನೆ, ತನ್ನನ್ನು ಜನರ ಮನಸ್ಸಿನಲ್ಲಿ ಅಮರನನ್ನಾಗಿ ಮಾಡುವಂತೆ ಕೇಳಿಕೊಳ್ಳುತ್ತಾನೆ, ಹಾಗಾಗಿ ನರಕ ಚತುರ್ದಶಿ ಹಬ್ಬವನ್ನು ನರಕಾಸುರನ ಮರಣದ ನೆನಪಿಗಾಗಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ.

ನರಕ ಚತುರ್ದಶಿ ಆಚರಣೆ;

ನರಕ ಚತುರ್ದಶಿ ದೀಪಗಳ ಭವ್ಯ ಹಬ್ಬದ ಒಂದು ಭಾಗವಾಗಿದೆ ಮತ್ತು ಇದನ್ನು ದೇಶಾದ್ಯಂತ ಉತ್ಸಾಹ ಮತ್ತು ಸಮರ್ಪಣೆಯಿಂದ ಆಚರಿಸಲಾಗುತ್ತದೆ. ಉತ್ತರ ಭಾರತದ ಜನರು ನರಕ ಚತುರ್ದಶಿಯನ್ನು ಅಚ್ಚುಕಟ್ಟಾಗಿ ಹೊಸ ಉಡುಪು ಧರಿಸುವ ಮೂಲಕ, ಕಾಳಿ ದೇವಿಯ ಪೂಜೆಯನ್ನು ಮಾಡುವ ಮೂಲಕ ಮತ್ತು ರಾತ್ರಿಯಲ್ಲಿ ಪಟಾಕಿ ಹಚ್ಚುವ ಮೂಲಕ ಆಚರಿಸುತ್ತಾರೆ. ದೇಶದ ಪೂರ್ವ ಭಾಗದಲ್ಲಿ, ಈ ದಿನವನ್ನು ‘ಭೂತ್ ಚತುರ್ದಶಿ’ ಎಂದು ಕರೆಯಲಾಗುತ್ತದೆ. ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಜನರು ನರಕ ಚತುರ್ದಶಿಯನ್ನು ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಈ ದಿನದಂದು, ಜನರು ಸಾಮಾನ್ಯವಾಗಿ ಕೆಂಪು ಬಟ್ಟೆಯಿಂದ ಮುಚ್ಚಿದ ಮಡಕೆಯನ್ನು ಅಡ್ಡರಸ್ತೆಯಲ್ಲಿ ಇಡುತ್ತಾರೆ.

ಇನ್ನು ದಕ್ಷಿಣ ಭಾರತದಲ್ಲಿ ಅಂದರೆ ನಮ್ಮಲ್ಲಿ, ನರಕ ಚತುರ್ದಶಿಯ ಹಿಂದಿನ ದಿನ ರಾತ್ರಿ ಮನೆಯಲ್ಲಿರುವ ಬಾವಿಗೆ ಮತ್ತು ನೀರಿನ ಹಂಡೆಗಳಿಗೆ ಪೂಜೆ ಮಾಡಿ, ಬಳಿಕ ಹಂಡೆಗೆ ನೀರು ತುಂಬಿಸಿ ಪೂಜೆ ಮಾಡುತ್ತಾರೆ. ನರಕ ಚತುರ್ದಶಿಯಂದು ಮುಂಜಾನೆಯ ಸ್ನಾನವು ಪ್ರಮುಖ ಆಚರಣೆಯಾಗಿದ್ದು, ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ಸ್ನಾನ ಮಾಡುವ ಮೊದಲು ಎಣ್ಣೆ ಹಚ್ಚಿಕೊಂಡು ಬಳಿಕ ಸ್ನಾನ ಮಾಡುತ್ತಾರೆ. ಈ ಆಚರಣೆಯನ್ನು ಅಭ್ಯಂಗ ಸ್ನಾನ ಎಂದು ಕರೆಯಲಾಗುತ್ತದೆ. ಸ್ನಾನ ಮಾಡಿದ ನಂತರ ಹೊಸ ಬಟ್ಟೆಗಳನ್ನು ಧರಿಸಬೇಕು. ಬಳಿಕ ಬಲಿ ಚಕ್ರವರ್ತಿಯನ್ನು ಸ್ವಾಗತಿಸಲು ದೇವರ ಮುಂದೆ ಒಂದು ಕಲಶವಿಟ್ಟು ಅದರಲ್ಲಿ ಹಣ ಹಾಕಿ, ನೀರು ತುಂಬಿಸಿ ಅದಕ್ಕೆ ಮಾವಿನ ಎಲೆಯಿಟ್ಟು ಪೂಜೆ ಮಾಡಲಾಗುತ್ತದೆ. ಬಳಿಕ ಇದನ್ನು ಬಲಿ ಪಾಡ್ಯದಂದು ವಿಸರ್ಜನೆ ಮಾಡಿ ರಾಜನನ್ನು ಕಳುಹಿಸಿಕೊಡುವ ಸಂಪ್ರದಾಯವಿದೆ. ಇನ್ನು ಕೆಲವು ಮನೆಗಳಲ್ಲಿ ಲಕ್ಷ್ಮೀ ದೇವಿಯನ್ನು ಗೌರವಿಸಲು ಇಡೀ ಕುಟುಂಬ ಒಟ್ಟುಗೂಡುತ್ತದೆ. ದೇವಿಯ ದೈವಿಕ ಆಶೀರ್ವಾದವನ್ನು ಪಡೆಯುವ ಸಲುವಾಗಿ ದೇವಿಗೆ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಕುಟುಂಬ ಸದಸ್ಯರು, ಮಕ್ಕಳು ಮತ್ತು ಇತರ ಸಂಬಂಧಿಕರು ಪೂಜೆ ಮಾಡಿದ ನಂತರ ಪಟಾಕಿಗಳನ್ನು ಸಿಡಿಸುತ್ತಾರೆ. ಹಲವಾರು ದೇವಿ ಆರಾಧಕರು ಈ ದಿನದಂದು ಉಪವಾಸ ಮಾಡುತ್ತಾರೆ.

ನಿಮ್ಮ ಸಮಸ್ಯೆಗಳನ್ನು ಗೆಲ್ಲಲು ಸರ್ವಶಕ್ತನು ನಿಮಗೆ ಎಲ್ಲಾ ಧೈರ್ಯವನ್ನು ನೀಡಲಿ ಎಂದು ಹಾರೈಸುತ್ತೇವೆ, ಎಲ್ಲರಿಗೂ ನರಕ ಚತುರ್ದಶಿ ಶುಭಾಶಯಗಳು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ