ಶಾರದಾ ಸ್ಥಾಪನೆ ಎಂದು ಮಾಡಬೇಕು? ಅದಕ್ಕಿರುವ ನಕ್ಷತ್ರ ಮಹತ್ವವೇನು ? ವಿಸರ್ಜನೆ ಯಾವಾಗ ?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 02, 2022 | 7:24 AM

ದುರ್ಗಾದೇವಿಯ ಪ್ರಧಾನ ಮೂರು ಸ್ವರೂಪಗಳಲ್ಲಿ ಒಂದಾದ ಮಹಾಸರಸ್ವತೀ ದೇವಿಯನ್ನು ನವರಾತ್ರೆಯಲ್ಲಿ ಯಾವ ದಿವಸ ಪ್ರತಿಷ್ಠಾಪನೆ ಮಾಡಬೇಕು.

ಶಾರದಾ ಸ್ಥಾಪನೆ ಎಂದು ಮಾಡಬೇಕು? ಅದಕ್ಕಿರುವ ನಕ್ಷತ್ರ ಮಹತ್ವವೇನು ? ವಿಸರ್ಜನೆ ಯಾವಾಗ ?
Follow us on

ಮಹಾಶಕ್ತ್ಯಾತ್ಮಿಕಳಾದ ತಾಯಿ ದುರ್ಗಾದೇವಿಯ ಪ್ರಧಾನ ಮೂರು ಸ್ವರೂಪಗಳಲ್ಲಿ ಒಂದಾದ ಮಹಾಸರಸ್ವತೀ ದೇವಿಯನ್ನು ನವರಾತ್ರೆಯಲ್ಲಿ ಯಾವ ದಿವಸ ಪ್ರತಿಷ್ಠಾಪನೆ ಮಾಡಬೇಕು. ಎಂಬುದರ ಬಗ್ಗೆ ನೋಡೋಣ. ಶರದೃತುವಿನ ಆಶ್ವಯುಜ/ ಆಶ್ವಿನ ಮಾಸದ ಶುಕ್ಲಪಕ್ಷದ ಮೂಲ ನಕ್ಷತ್ರದಲ್ಲಿ ಪುಸ್ತಕದಲ್ಲಿ ಸರಸ್ವತಿ/ ಶಾರದೆಯನ್ನು ಆಹ್ವಾನಿಸಿ ಪ್ರತಿಷ್ಠಾಪನೆ ಮಾಡಬೇಕು. ಅದನ್ನು ಧರ್ಮಶಾಸ್ತ್ರದಲ್ಲಿ ಹೀಗೆ ಉಲ್ಲೇಖಿಸಲಾಗಿದೆ –
ಮೂಲೇಷು ಸ್ಥಾಪನಂ ದೇವ್ಯಾಃ ಪೂರ್ವಾಷಾಢಾಸು ಪೂಜನಮ್ |

ಉತ್ತರಾಸು ಬಲಿಂ ದದ್ಯಾತ್ ಶ್ರವಣೇನ ವಿಸರ್ಜಯೇತ್ || ಎಂಬುದಾಗಿ. ಅಂದರೆ ಸರಸ್ವತೀ ದೇವಿಯನ್ನು ಮೂಲಾ ನಕ್ಷತ್ರದಲ್ಲಿ ಸ್ಥಾಪನೆ ಮಾಡಬೇಕು. ಈ ದಿನದಂದು ಲಘು / ಸಣ್ಣ ಪ್ರಮಾಣದಲ್ಲಿ ಪೂಜಿಸುವುದು. ಪೂರ್ವಾಷಾಢ ನಕ್ಷತ್ರದಲ್ಲಿ ಪೂಜನಂ ಎಂದು ಹೇಳಿರುವುದರಿಂದ ಈ ದಿನದಂದು ವಿಶೇಷ ರೀತಿಯಲ್ಲಿ ಆರಾಧಿಸುವುದು. ಉತ್ತರಾಸು ಬಲಿಂ ದದ್ಯಾತ್ ಎಂದಿದ್ದಾರೆ. ಇಲ್ಲಿ ಉತ್ತರಾ ಎಂದರೆ ಉತ್ತರಾಷಾಢ ನಕ್ಷತ್ರವೆಂದರ್ಥ.

ಈ ದಿನ ಬಲಿಯನ್ನು ನೀಡಬೇಕು. ಬಲಿ ಎಂದಾಕ್ಷಾಣ ಭಯಪಡುವ ಅವಶ್ಯಕತೆಯಿಲ್ಲ. ಇಲ್ಲಿ ಬಲಿಯೆನ್ನುವುದು ಸಾತ್ವಿಕ ಬಲಿಯಾಗಿದೆ. ಅರಳು ಅಥವಾ ಅನ್ನಕ್ಕೆ ಲಭ್ಯವಿದ್ದಲ್ಲಿ ಕುಂಬಳಕಾಯಿಯನ್ನು ಸೇರಿಸಿ, ಸತ್ವಗುಣಕ್ಕೆ ಹೇಳಿರುವ ಅರಸಿನವನ್ನು ಅರಳಿಗೆ ಅಥವಾ ಅನ್ನಕ್ಕೆ ಕಲಸಿ ಸರಸ್ವತಿಯನ್ನು ಮನದಲ್ಲಿ ಧ್ಯಾನಿಸಿ ಸರಸ್ವತ್ಯೈ ನಮಃ ಇದಂ ಬಲಿಂ ಸಮರ್ಪಯಾಮಿ ಎಂಬ ಸೂಕ್ತಿಯನ್ನು ಹೇಳುತ್ತಾ ಪೂಜೆ ಮುಗಿದ ನಂತರ ಎಂಟು ಸಲ ಬಲಿ ಸಮರ್ಪಣೆಯನ್ನು ಬಾಳೇ ಎಲೆಯ ಮೇಲೆ ಹಾಕುವುದು. ಆ ಬಲಿಯನ್ನು ರಾತ್ರೆಯೇ ವಿಸರ್ಜನೆ ಮಾಡುವುದು ಉತ್ತಮ. ಶ್ರವಣೇನ ವಿಸರ್ಜಯೇತ್ ಅಂದರೆ ಶ್ರವಣಾ ನಕ್ಷತ್ರದಂದು ಪ್ರಾತಃಕಾಲದಲ್ಲಿ ಸರಸ್ವತಿಯನ್ನು ಪೂಜಿಸಿ ವಿಸರ್ಜನೆ ಮಾಡಬೇಕು.

ನವರಾತ್ರೆಯ ಪರ್ವ ಸಮಯದಲ್ಲಿ ಮೂಲಾನಕ್ಷತ್ರವು ಸಪ್ತಮಿಯಂದು (ಏಳನೇ ದಿನದ ಪೂಜೆಯಂದು) ಹೆಚ್ಚಾಗಿ ಬರುತ್ತದೆ. ಅಂದಿನಿಂದ ನವದುರ್ಗೆಯರ ಪೂಜೆಯೊಂದಿಗೆ ಸರಸ್ವತೀ ಪೂಜೆಯೂ ಮಾಡಬೇಕು. ಹಿಂದಿನ ಕಾಲದಲ್ಲಿ ಈ ದಿನದಿಂದ ನಾಲ್ಕು ದಿನಗಳ ಕಾಲ ಅಧ್ಯಯನದ ನಿಷೇಧವಿರುತ್ತಿತ್ತು. ಏಕೆಂದರೆ ನಾವು ಓದುವ ಪುಸ್ತಕಕಗಳನ್ನು ಇರಿಸಿ ಅದಕ್ಕೆ ಪೂಜೆ ಮಾಡುತ್ತಿದ್ದರು.

ಎಂಟನೇಯ ನವರಾತ್ರಿಯಂದು ಅರ್ಥಾತ್ ಪೂರ್ವಾಷಾಢ ನಕ್ಷತ್ರದಂದು ವಿಶೇಷ ಪೂಜೆ. ಉತ್ತರಾಷಾಢ (ಒಂಭತ್ತನೇಯ ದಿನ) ಬಲಿ. ಶ್ರವಣ ನಕ್ಷತ್ರದಂದು ವಿಸರ್ಜನೆಯಿರುತ್ತದೆ. ಈ ಕಾರಣದಿಂದ ಶ್ರವಣ ನಕ್ಷತ್ರವೆನ್ನುವುದು ಅಕ್ಷರಾಭ್ಯಾಸಕ್ಕೆ ಉಚಿತ ನಕ್ಷತ್ರವಾಗಿದೆ. ಇದಕ್ಕೆ (ಈ ದಿನಕ್ಕೆ) ಶಾಸ್ತ್ರದಲ್ಲಿ ವಿದ್ಯಾದಶಮಿ ಎಂದೂ ಕರೆಯುತ್ತಾರೆ. ಮೂಲ ನಕ್ಷತ್ರದಲ್ಲಿ ಆಹ್ವಾನಿಸಿದ ಸರಸ್ವತಿಯ ಅನುಗ್ರಹವನ್ನು ಶ್ರವಣ ನಕ್ಷತ್ರದಂದು / ವಿದ್ಯಾದಶಮಿಯಂದು ಆ ಪುಸ್ತಕವನ್ನು ಓದುವುದರ ಮೂಲಕ ಪಡೆಯುವುದು.

ಶಾರದಾ ಪೂಜೆಯ ಸಂಕಲ್ಪವಿಧಾನಗಳು ಕ್ರಮವಾಗಿ ಹೀಗೆದೆ –

ಮೊದಲದಿನ ಮೂಲಾ ನಕ್ಷತ್ರೇ ಆವಾಹನಂ ತದಂಗಭೂತಂ ಪೂಜನಂ ಚ ಕರಿಷ್ಯೇ.

ಎರ‍ಡನೇಯದಿನ ಪೂರ್ವಾಷಾಢಾ ನಕ್ಷತ್ರೇ ವಿಶೇಷ ಪೂಜನಂ ಕರಿಷ್ಯೇ.

ಮೂರನೇಯದಿನ ಉತ್ತರಾಷಾಢಾ ನಕ್ಷತ್ರೇ ಬಲಿದಾನಂ ತದಂಗಭೂತಾಂ ಪೂಜಾಂ ಚ ಕರಿಷ್ಯೇ .

ನಾಲ್ಕನೇಯದಿನ – ಶ್ರವಣ ನಕ್ಷತ್ರೇ ವಿಸರ್ಜನಂ ಕರ್ತುಂ ತದಂಗಪೂಜಾಂ ಕರಿಷ್ಯೇ . ಎಂಬುದಾಗಿ. ಈ ಸಲ ದಿನಾಂಕ- 2/10/22 ರಿಂದ ಆರಂಭವಾಗಿ 5/10/22 ರ ವರೆಗೆ ಶಾರದಾಪೂಜೆಯ ಕಾಲವಾಗಿದೆ.

ಸರಸ್ವತಿಯ ಧ್ಯಾನ ಮಂತ್ರ ಹೀಗಿದೆ –

ಅರುಣಕಿರಣ ಜಾಲೈರಂಜಿತಾಶಾವಕಾಶಾ ವಿಧೃತ ಜಪ ವಟೀಕಾ ಪುಸ್ತಕಾಭೀತಿಹಸ್ತಾ |

ಇತರ ಕರವರಾಢ್ಯಾ ಫುಲ್ಲಕಲ್ಹಾರ ಸಂಸ್ಥಾ ನಿವಸತು ಹೃದಿ ಬಾಲಾ ನಿತ್ಯ ಕಲ್ಯಾಣ ಶೀಲಾ ||

ಆವಾಹನಾ ಮಂತ್ರ –

ವಾಕ್ ಶ್ರೀ ದುರ್ಗಾದಿ ರೂಪೇಣ ವಿಶ್ವಂ ಆವೃತ್ಯ ಸಂಸ್ಥಿತಾಂ |

ಆವಾಹಯಾಹಿ ತ್ವಾಂ ದೇವಿ ಸಮ್ಯಕ್ ಸನ್ನಿಹಿತಾ ಭವ ||

ಈ ರೀತಿಯಾಗಿ ಸರಸ್ವತಿಯ ಆರಾಧನೆಯನ್ನು ಮಾಡುತ್ತಾ ಸದ್ವಿದ್ಯಾವಂತರಾಗೋಣ.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

kkmanasvi@gamail.com