ಮುಕ್ಕೋಟಿ ದೇವತೆಗಳನ್ನು ಹೊಂದಿರುವ ಹಿಂದೂ ಭಕ್ತರು ವರ್ಷವಿಡೀ ವಿವಿಧ ದೇವತೆಗಳಿಗೆ ಸಮರ್ಪಿತವಾದ ವ್ರತಗಳನ್ನು ಆಚರಿಸುತ್ತಾರೆ. ಉದಾಹರಣೆಗೆ, ಪ್ರದೋಷ ಉಪವಾಸ. ಇದನ್ನು ತ್ರಯೋದಶಿ ತಿಥಿಯಂದು ಮಾಡಲಾಗುತ್ತೆ. ಇದನ್ನು ಶಿವನಿಗೆ ಸಮರ್ಪಿಸಲಾಗುತ್ತದೆ. ಅದರಂತೆಯೇ ಭಗವಾನ್ ವಿಷ್ಣುವಿಗೆ ಮೀಸಲಾದ ಏಕಾದಶಿ ತಿಥಿಯನ್ನೂ ಸಹ ಆಚರಿಸಲಾಗುತ್ತೆ. ಸದ್ಯ ನಾವಿಂದು ಪುಷ್ಯ ಮಾಸದ ಪುತ್ರದ ಏಕಾದಶಿಯನ್ನು ಆಚರಿಸುವ ಬಗ್ಗೆ ಇಲ್ಲಿ ತಿಳಿಸಲಿದ್ದೇವೆ. ವಿಷ್ಣು ಭಕ್ತರು ವರ್ಷದಲ್ಲಿ 24 ಬಾರಿ ಏಕಾದಶಿ ವ್ರತವನ್ನು ಆಚರಿಸುತ್ತಾರೆ ಮತ್ತು ಪ್ರತಿ ತಿಥಿಗಳಿಗೆ ಒಂದು ನಿರ್ದಿಷ್ಟ ಹೆಸರು ಇದೆ. ಉದಾಹರಣೆಗೆ, ಪುಷ್ಯ ಮಾಸದಲ್ಲಿ ಬರುವ ಏಕಾದಶಿಯನ್ನು ಪುಷ್ಯ ಪುತ್ರದ ಏಕಾದಶಿ ಎಂದು ಕರೆಯಲಾಗುತ್ತದೆ.
ಪುಷ್ಯ ಪುತ್ರದ ಏಕಾದಶಿ 2022 ದಿನಾಂಕ
ಈ ವರ್ಷ ಪುಷ್ಯ ಪುತ್ರದ ಏಕಾದಶಿ ವ್ರತವನ್ನು ಜನವರಿ 13 ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಪ್ರತಿ ವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದಲ್ಲಿ ಈ ಏಕಾದಶಿಯನ್ನು ಆಚರಿಸಲಾಗುತ್ತೆ.
ಪುಷ್ಯ ಪುತ್ರದ ಏಕಾದಶಿ 2022 ತಿಥಿ ಸಮಯಗಳು
ಏಕಾದಶಿ ತಿಥಿ ಜನವರಿ 12 ರಂದು ಸಂಜೆ 4:49 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜನವರಿ 13 ರಂದು ಸಂಜೆ 7:32 ಕ್ಕೆ ಕೊನೆಗೊಳ್ಳುತ್ತದೆ.
ಪುಷ್ಯ ಪುತ್ರದಾ ಏಕಾದಶಿ ವ್ರತದ ಮಹತ್ವ
ಪುಷ್ಯ ಪುತ್ರದ ಏಕಾದಶಿಯು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ದಂಪತಿ ಸಂತಾನ ಭಾಗ್ಯವನ್ನು ಪಡೆಯಲು ಈ ದಿನ ಉಪವಾಸವಿರುತ್ತಾರೆ. ಈ ಏಕಾದಶಿಯು ಮಕ್ಕಳಿಲ್ಲದವರಿಗೆ ವಿಶೇಷವಾಗಿದೆ. ಸಂತಾನ ಪಡೆಯಲು ಅಡೆ-ತಡೆ ಎದುರಿಸುತ್ತಿರುವವರು ಅಥವಾ ಪುತ್ರ ಸಂತಾನವನ್ನು ಬಯಸುವವರು ಪುತ್ರದ ಏಕಾದಶಿಯ ಉಪವಾಸವನ್ನು ಮಾಡುತ್ತಾರೆ. ಆದ್ದರಿಂದ ಮಕ್ಕಳಿಲ್ಲದ ದಂಪತಿಗಳು ಈ ವ್ರತವನ್ನು ಆಚರಿಸುತ್ತಾರೆ ಮತ್ತು ಇದನ್ನು ಪುತ್ರದಾ ಏಕಾದಶಿ ವ್ರತ ಎಂದು ಕರೆಯುತ್ತಾರೆ.
ಏಕಾದಶಿ ವ್ರತವು ಸಾಂಪ್ರದಾಯಿಕವಾಗಿ ಮೂರು ದಿನಗಳವರೆಗೆ ವ್ಯಾಪಿಸುತ್ತದೆ. ಇದು ದಶಮಿ ತಿಥಿಯ ರಾತ್ರಿ ಪ್ರಾರಂಭವಾಗುತ್ತದೆ, ಏಕಾದಶಿ ತಿಥಿಯಂದು ಮುಂದುವರಿಯುತ್ತದೆ ಮತ್ತು ದ್ವಾದಶಿ ತಿಥಿಯ ಬೆಳಿಗ್ಗೆ ಕೊನೆಗೊಳ್ಳುತ್ತದೆ. ಏಕಾದಶಿ ತಿಥಿಯಂದು ಭಕ್ತರು ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ ಮತ್ತು ಬೇಗನೆ ಏಳುತ್ತಾರೆ. ಕೆಲವು ಭಕ್ತರು ದ್ವಾದಶಿ ತಿಥಿಯಂದು ಉಪವಾಸವನ್ನು ಮುರಿಯುವವರೆಗೆ ಏಕಾದಶಿ ತಿಥಿಯಂದು ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ.
ಪುಷ್ಯ ಪುತ್ರದಾ ಏಕಾದಶಿ ಕಥೆ
ಹಿಂದೆ ಭದ್ರಾವತಿ ಎಂಬ ಪಟ್ಟಣದಲ್ಲಿ ಸುಕೇತಮಾನ್ ಎಂಬ ರಾಜನಿದ್ದ. ಅವನ ಹೆಂಡತಿ ಶೈಭ್ಯಾ. ಅವರಿಗೆ ಸಂತಾನ ಯೋಗ ಇಲ್ಲದಿದ್ದರಿಂದ ದುಃಖದಲ್ಲಿ ಮುಳುಗಿದ್ದರು. ಅವರು ಎಲ್ಲ ವಿಧವಾದ ವ್ರತ ನಿಯಮಗಳನ್ನು ಮಾಡಿದ್ದರು. ಆದರೂ ಪುತ್ರಸಂತಾನ ಆಗಿರಲಿಲ್ಲ. ಆದ್ದರಿಂದ ಅವನು ತುಂಬ ದುಃಖವನ್ನು ಮನದಲ್ಲಿಟ್ಟುಕೊಂಡು ರಾಜ ಮತ್ತು ಆತನ ಹೆಂಡತಿ ಸರ್ವರಾಜ್ಯವನ್ನು ತ್ಯಜಿಸಿ ಕಾಡಿಗೆ ಹೊರಟರು. ಆ ಕಾಡಿನಲ್ಲಿ, ರಾಜನಿಗೆ ಒಂದು ಆಶ್ರಮ ಕಂಡಿತು. ಆ ಆಶ್ರಮವನ್ನು ನೋಡಿದ ಕೂಡಲೆ ರಾಜನು ಆಶ್ರಮದತ್ತ ಹೊರಟನು.
ಅಲ್ಲಿ 11 ಜನ ಋಷಿಗಳನ್ನು ಕಂಡರು. ಆಗ ಆರಾಜನು ಆ ಋಷಿಗಳಿಗೆಲ್ಲ ನಮಸ್ಕರಿಸಿ ನೀವೆಲ್ಲ ಯಾರು ಈ ಕಾಡಿಗೆ ಯಾತಕ್ಕಾಗಿ ಬಂದಿರಿ ಎಂದು ವಿಚಾರಿಸಿದಾಗ ಆ ಋಷಿಗಳು ನಾವೆಲ್ಲ ವಿಶ್ವೇ ದೇವತೆಗಳು. ಪುಷ್ಯಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಭೂಲೋಕದಲ್ಲಿ ಆಚರಿಸುವುದರಿಂದ ಒಳ್ಳೆಯ ಸಂತಾನವನ್ನು ಆ ಭಗವಂತ ದಯಪಾಲಿಸುತ್ತಾನೆ ಅಂತ ಆಚರಿಸುವ ಉದ್ದೇಶವನ್ನು ರಾಜನಿಗೆ ತಿಳಿಸಿದರು.
ಆಗ ಆ ರಾಜನು ನಾನು ಸಹ ಪುತ್ರದಾ ಏಕಾದಶಿಯ ಆಚರಣೆ ನಿಮ್ಮ ಸನ್ನಿಧಾನದಲ್ಲಿ ಮಾಡುತ್ತೇನೆ ಎಂದು ಆ ಋಷಿ, ಮುನಿಗಳನ್ನು ಪ್ರಾರ್ಥಿಸುತ್ತಾನೆ. ವಿಶ್ವೇ ದೇವತೆಗಳು ಆಗಲಿ ಎಂದು ಹೇಳಿದಾಗ. ರಾಜನು ಅವರ ಸನ್ನಿಧಾನದಲ್ಲಿ ಏಕಾದಶಿಯನ್ನು ಆಚರಣೆ ಮಾಡಿ ಋಷಿಮುನಿಗಳ ಅನುಗ್ರಹ ಪಡೆದುಕೊಂಡು ರಾಜ್ಯಕ್ಕೆ ಹೊರಡುತ್ತಾನೆ. ಪುತ್ರದಾ ಏಕಾದಶಿಯ ಫಲದಿಂದ ರಾಜನು ಅತಿ ಶೀಘ್ರದಲ್ಲಿ ಮಗನನ್ನು ಪಡೆದನು. ಆ ಮಗನು ಮುಂದೆ ತಾಯಿ, ತಂದೆಯಲ್ಲಿ ಭಗವಂತನಲ್ಲಿ ಗೌರವ, ಭಕ್ತಿಯಿಂದ ಕೂಡಿಕೊಂಡು ರಾಜ್ಯವನ್ನು, ಸಮರ್ಥವಾಗಿ ನಿರ್ವಹಿಸಿದನು ಎಂದು ಹೇಳಲಾಗುತ್ತೆ.
ಇದನ್ನೂ ಓದಿ: Vaikuntha Ekadashi 2022: ವೈಕುಂಠ ಏಕಾದಶಿ ಹಿನ್ನೆಲೆ, ಮಹತ್ವ ಮತ್ತು ಉಪವಾಸದ ವೈಜ್ಞಾನಿಕ ಸತ್ಯ ಏನು ಗೊತ್ತಾ?