Vaikuntha Ekadashi: ಈ ದಿನ ಸುಖ-ಶಾಂತಿಯ ನೆಲೆ ವೈಕುಂಠದ ಬಾಗಿಲು ತೆರೆದಿರುತ್ತೆ

| Updated By: ಆಯೇಷಾ ಬಾನು

Updated on: Jan 12, 2022 | 7:15 AM

ವೈಕುಂಠ ಏಕಾದಶಿಯನ್ನು ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತೆ. ಭಗವಾನ್ ವಿಷ್ಣು ಮತ್ತು ಅವನ ವಿವಿಧ ಅವತಾರಗಳಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಈ ದಿನದಂದು ವಿಶೇಷ ಪೂಜೆ ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತದೆ.

Vaikuntha Ekadashi: ಈ ದಿನ ಸುಖ-ಶಾಂತಿಯ ನೆಲೆ ವೈಕುಂಠದ ಬಾಗಿಲು ತೆರೆದಿರುತ್ತೆ
ವಿಷ್ಣು
Follow us on

ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದು ಮತ್ತು ಉಪವಾಸದ ಕಥೆಯನ್ನು ಕೇಳುವುದರಿಂದ ಭಗವಾನ್ ವಿಷ್ಣು ಪ್ರಸನ್ನನಾಗುತ್ತಾನೆ. ಹಾಗೂ ತನ್ನ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ಪ್ರತಿ ತಿಂಗಳೂ ಎರಡರಂತೆ ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಅವು ಈ ಕೆಳಗಿನಂತಿವೆ. ಶುಕ್ಲಪಕ್ಷ (ಚೈತ್ರದಿಂದ) – ಕಾಮದಾ, ಮೋಹಿನಿ, ನಿರ್ಜಲಾ, ಶಯನೀ, ಪುತ್ರದಾ, ಪರಿವರ್ತಿನೀ, ಪಾಶಾಂಕುಶಾ, ಪ್ರಬೋಧಿನೀ, ಮೋಕ್ಷದಾ, ಪ್ರಜಾವರ್ಧಿನೀ, ಜಯದಾ ಮತ್ತು ಆಮಲಕೀ. ಕೃಷ್ಣಪಕ್ಷ (ಚೈತ್ರದಿಂದ) – ಪಾಪಮೋಚನೀ, ವರೂಥಿನೀ, ಅಪರಾ, ಯೋಗಿನೀ, ಕಾಮಿಕಾ, ಅಜಾ, ಇಂದಿರಾ, ರಮಾ, ಫಲದಾ, ಸಫಲಾ, ಷಟ್‌ತಿಲಾ ಮತ್ತು ವಿಜಯಾ. ಪ್ರತಿ ತಿಂಗಳಿನಲ್ಲಿನ ಎರಡೂ ಏಕಾದಶಿಗಳನ್ನು ಮಾಡುವುದು ಉತ್ತಮ. ಅದು ಸಾಧ್ಯವಿಲ್ಲದಿದ್ದರೆ ಕನಿಷ್ಠ ಪಕ್ಷ, ಶುಕ್ಲ ಏಕಾದಶಿಯನ್ನಾದರೂ ಮಾಡಬೇಕು.

ಏಕಾದಶಿಯನ್ನು ಉಪವಾಸಗಳ ಚಕ್ರವರ್ತಿ ಎಂದೂ ಕರೆಯುತ್ತಾರೆ ಇದರ ಅಧಿಪತಿ ಶ್ರೀಮಹಾವಿಷ್ಣು ಹಾಗಾಗಿ ಏಕಾದಶಿ ಉಪವಾಸ ಮಾಡುವವರು ಉಳಿದ ಉಪವಾಸಗಳನ್ನು ಮಾಡಬೇಕಾಗಿಲ್ಲಾ ಎಂದು ಕೂಡಾ ಕೆಲವರಲ್ಲಿ ನಂಬಿಕೆ ಇದೆ. ಉಪ ಎಂದರೆ ಹತ್ತಿರ. ವಾಸ ಎಂದರೆ ಇರುವುದು ಎಂದು. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಕೆಟ್ಟ ಯೋಚನೆಗಳನ್ನು ಮಾಡದೆ ಭಗವಂತನ ಸಮೀಪ ಇರುವುದು. ಆ ಸಮಯದಲ್ಲಿ ಧ್ಯಾನ, ಭಜನೆ, ವಿಷ್ಣು ಸಹಸ್ರನಾಮ ಪಠಣ ಮಾಡಬೇಕು. ಉಪವಾಸ ಮಾಡುವುದರಿಂದ ಶಾಂತಿ, ತಾಳ್ಮೆ ಸಿಗುವುದು. ರಕ್ತದೊತ್ತಡ, ರಕ್ತಹೀನತೆ ಇನ್ನೂ ಅನೇಕ ರೋಗ ರುಜಿನ ಇದ್ದರೆ ಗುಣವಾಗುವುದು.

ವೈಕುಂಠ ಏಕಾದಶಿಯನ್ನು ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತೆ. ಭಗವಾನ್ ವಿಷ್ಣು ಮತ್ತು ಅವನ ವಿವಿಧ ಅವತಾರಗಳಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಈ ದಿನದಂದು ವಿಶೇಷ ಪೂಜೆ ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತದೆ. ವೈಕುಂಠ ಏಕಾದಶಿ ಅಥವಾ ಮೋಕ್ಷದ ಏಕಾದಶಿ ದಿನದಂದು ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಇಬ್ಬರ ಆಶೀರ್ವಾದವು ಸಿಗುತ್ತದೆ.

ಈ ದಿನ ಮಾಡುವ ಉಪವಾಸವು ವ್ಯಕ್ತಿಯ ಎಲ್ಲಾ ರೀತಿಯ ಪಾಪಗಳನ್ನು ನಿವಾರಿಸುತ್ತದೆ, ಆಶಯಗಳನ್ನು ಪೂರೈಸುತ್ತದೆ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ. ಮಹಾಭಾರತದ ಕಾಲದಲ್ಲಿ, ಶ್ರೀಕೃಷ್ಣನು ಯುಧಿಷ್ಠಿರ ಮತ್ತು ಅರ್ಜುನನಿಗೆ ಏಕಾದಶಿ ಉಪವಾಸದ ಬಗ್ಗೆ ವಿವರಿಸಿದ್ದನು. ಶ್ರೀಕೃಷ್ಣನ ಒತ್ತಾಯದ ಮೇರೆಗೆ ಯುಧಿಷ್ಠಿರನು ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ ವಿಷ್ಣುವನ್ನು ವಿಧಿ – ವಿಧಾನಗಳಿಂದ ಪೂಜಿಸಿದನು. ಅದರ ನಂತರ ಅವರು ಮಹಾಭಾರತದ ಯುದ್ಧದಲ್ಲಿ ಯಶಸ್ಸನ್ನು ಪಡೆದರು.

ವೈಕುಂಠ ಏಕಾದಶಿಯ ಮಹತ್ವ
ಬ್ರಹ್ಮ, ವಿಷ್ಣು, ಮಹೇಶ್ವರನನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತೆ. ಸೃಷ್ಟಿಕರ್ತ ಬ್ರಹ್ಮನಿರುವ ತಾಣ ಬ್ರಹ್ಮಲೋಕ. ರಕ್ಷಕ ವಿಷ್ಣು ಇರುವ ನೆಲೆ ವೈಕುಂಠ ಮತ್ತು ಮಹಾದೇವ ಮಹೇಶ್ವರನಿರುವುದು ಕೈಲಾಸದಲ್ಲಿ. ಆದ್ರೆ ವಿಶೇಷ ಅಂದ್ರೆ ವೈಕುಂಠದಲ್ಲಿ ಯಾವುದೇ ಕಷ್ಟ – ಕಾರ್ಪಣ್ಯಗಳು ಇರುವುದಿಲ್ಲವಂತೆ. ಬರೀ ಸಂತೋಷವೇ ತುಂಬಿರುತ್ತದೆ. ಹೀಗಾಗಿ ವೈಕುಂಠದಲ್ಲಿ ಸ್ಥಾನ ಪಡೆಯಲು ಜನ ಹಂಬಲಿಸುತ್ತಾರೆ. ವೈಕುಂಠ ಅಥವಾ ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, (ಸಂತರು ಮತ್ತು ವಿದ್ವಾಂಸರು) ಮೋಕ್ಷ ಅಥವಾ ಜನ್ಮ, ಜೀವನ ಮತ್ತು ಮರಣದ ವಿಷವರ್ತುಲದಿಂದ ವಿಮೋಚನೆಯನ್ನು ಬಯಸುವವರು, ವೈಕುಂಠ ಏಕಾದಶಿ ತಿಥಿಯಂದು ವ್ರತವನ್ನು ಆಚರಿಸುವ ಮೂಲಕ ತಮ್ಮ ಅತ್ಯುನ್ನತ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವ ಭಕ್ತರಿಗೆ ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ:ವೈಕುಂಠ ಏಕಾದಶಿಯಂದು ದೇವಾಲಯಕ್ಕೆ 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ; ಕೊರೊನಾ ತಡೆಗೆ ಕಠಿಣ ಕ್ರಮ