ಕರುಣೆ ತುಂಬಿದ ಕಡೆ ಭಗವಂತ ನೆಲಸುತ್ತಾನೆ, ಮೂವರು ಗುರುಗಳಿಂದ ತಿಳಿದ ಸತ್ಯವೇನು ಗೊತ್ತಾ?

ಒಮ್ಮೆ ತಮ್ಮ ಕೊನೆಗಾಲವನ್ನು ತಲುಪುತ್ತಲಿದ್ದ ಈ ಮೂವರೂ ಮುದುಕರನ್ನು ಸನ್ಮಾನಿಸಲಾಯಿತು. ಶಾಲು, ಭಿನ್ನವತ್ತಳೆ, ಫಲಪುಷ್ಪಗಳನ್ನು ಸ್ವೀಕರಿಸಿದ ಮೂವರೂ ಬೇರೆ ಬೇರೆ ದಾರಿ ಹಿಡಿದು ಹಿಂದೆ ಹೊರಟರು. ರಾತ್ರಿ ಸಮಯ. ಗಾಡಾಂಧಕಾರ, ಧಾರಾಕಾರ ಮಳೆ. ಮೊದಲನೆಯವರು ಮಳೆಯ ಹೊಡೆತ ತಪ್ಪಿಸಿಕೊಳ್ಳಲು ದಾರಿಯಲ್ಲಿ ಕಂಡ ಒಂದು ಪಾಳು ಮಂಟಪದಲ್ಲಿ ಕುಳಿತರು.

ಕರುಣೆ ತುಂಬಿದ ಕಡೆ ಭಗವಂತ ನೆಲಸುತ್ತಾನೆ, ಮೂವರು ಗುರುಗಳಿಂದ ತಿಳಿದ ಸತ್ಯವೇನು ಗೊತ್ತಾ?
ಭಗವಾನ್ ಶಿವ

ಒಂದು ಪುರಾತನವಾದ ಊರಿತ್ತಂತೆ. ಅದು ಎಷ್ಟು ಪುರಾತನವೆಂದರೆ ಆ ಊರನ್ನು ಯಾರು ಯಾವಾಗ ಸ್ಥಾಪಿಸಿದವರು ಎಂಬುದರ ತೀರ್ಮಾನವೇ ಇನ್ನೂ ಆಗಿಲ್ಲ. ಅಂತಹ ಊರಿನಲ್ಲಿ ಮೂವರು ಗುರುಗಳಿದ್ದರಂತೆ. ಮೂವರೂ ಮಹಾ ಜ್ಞಾನಿಗಳು, ಆಳವಾದ ಪಾಂಡಿತ್ಯವುಳ್ಳವರು. ಮೂವರ ಆಶ್ರಮಗಳೂ ಪಕ್ಕಪಕ್ಕದಲ್ಲೇ ಇದ್ದವು. ಅಲ್ಲಿ ಒಂದೊಂದು ಆಶ್ರಮದಲ್ಲಿ ಒಂದೊಂದು ದೇವರ ವಿಗ್ರಹವನ್ನಿಟ್ಟು ಪೂಜೆ ಮಾಡಿ, ಬೇರೆ ಬೇರೆ ಮಾರ್ಗಗಳಲ್ಲಿ ದೇವರನ್ನು ಸಾಕ್ಷಾತ್ಕಾರಿಸಿಕೊಳ್ಳಬಹುದು ಎಂದು ನಂಬಿದ್ದರು.

ಆದರೆ ಮೊದಲನೆಯವರು ‘ಕ’ ಮಾರ್ಗದ ಮೂಲಕವೇ ದೇವರ ಸಾಕ್ಷಾತ್ಕಾರ ಸಾಧ್ಯವೆಂದು ನಂಬಿದವರು. ಎರಡನೆಯವರದ್ದು ‘ಭ’ ಮಾರ್ಗವಾದರೆ, ಮೂರನೆಯವರದ್ದು ‘ಜ’ ಮಾರ್ಗ. ಆದರೆ ಮೂವರೂ ಪೂಜಿಸುವ ದೇವರು ಒಬ್ಬನೇ ಎಂಬುದೆಕೊ ಅವರ ಅರಿವಿಗೆ ಬಂದಿರಲಿಲ್ಲ. ಆ ಮೂರು ಗುರುಗಳು ತಮ್ಮ ತಮ್ಮ ಮಾರ್ಗಗಳನ್ನು ಎಷ್ಟು ದೃಢವಾಗಿ ಹಿಡಿದಿದ್ದರೆಂದರೆ ತಮ್ಮ ಮಾರ್ಗ ಶ್ರೇಷ್ಠ, ಉಳಿದವರ ಮಾರ್ಗ ಕನಿಷ್ಟವೆಂಬ ನಂಬಿಕೆಯಲ್ಲಿ ಹೊಡೆದಾಟಕ್ಕೂ ಸಿದ್ಧರಾಗಿದ್ದರು ಹಾಗಾಗಿ ಮೂವರೂ ಒಂದು ಕಡೆ ಸೇರುತ್ತಲೇ ಇರಲಿಲ್ಲ. ದೇವರ ಪೂಜೆ ಮಾಡುವಷ್ಟೇ ಪರಸ್ಪರ ದ್ವೇಷವನ್ನೂ ಮಾಡುತ್ತಿದ್ದರು. ಬದುಕೆಲ್ಲ ಹೀಗೆಯೇ ಕಳೆದು ಮುದುಕರಾದರು.

ಒಮ್ಮೆ ತಮ್ಮ ಕೊನೆಗಾಲವನ್ನು ತಲುಪುತ್ತಲಿದ್ದ ಈ ಮೂವರೂ ಮುದುಕರನ್ನು ಸನ್ಮಾನಿಸಲಾಯಿತು. ಶಾಲು, ಭಿನ್ನವತ್ತಳೆ, ಫಲಪುಷ್ಪಗಳನ್ನು ಸ್ವೀಕರಿಸಿದ ಮೂವರೂ ಬೇರೆ ಬೇರೆ ದಾರಿ ಹಿಡಿದು ಹಿಂದೆ ಹೊರಟರು. ರಾತ್ರಿ ಸಮಯ. ಗಾಡಾಂಧಕಾರ, ಧಾರಾಕಾರ ಮಳೆ. ಮೊದಲನೆಯವರು ಮಳೆಯ ಹೊಡೆತ ತಪ್ಪಿಸಿಕೊಳ್ಳಲು ದಾರಿಯಲ್ಲಿ ಕಂಡ ಒಂದು ಪಾಳು ಮಂಟಪದಲ್ಲಿ ಕುಳಿತರು.

ಗೋಡೆಗಳಿಲ್ಲ. ವಾಸನೆ ಹೊಡೆಯುತ್ತಿತ್ತು. ಸ್ವಲ್ಪ ಹೊತ್ತಿಗೆ ಮತ್ತೊಬ್ಬರು ಅಲ್ಲಿಗೆ ಬಂದರು. ಇವರಿಗೆ ಅವರು ಯಾರೆಂದು ಗೊತ್ತಾಗಲಿಲ್ಲ. ಆದರೆ ಅಯ್ಯೋ ಪಾಪ! ಮಳೆಯಲ್ಲಿ ತೊಯ್ಯುತ್ತಿದ್ದಾರೆಂದುಕೊಂಡು ಅವರಿಗೂ ಸ್ಥಳ ಮಾಡಿಕೊಟ್ಟು ಕುಳಿತರು. ಇನ್ನು ಸ್ವಲ್ಪ ಹೊತ್ತಿನ ನಂತರ ಮತ್ತೂ ಒಬ್ಬರು ಬಂದರು. ಇವರಿಬ್ಬರೂ ಇನ್ನೂ ಸ್ವಲ್ಪ ಸರಿದು ಅವರಿಗೂ ಸ್ಥಳ ಮಾಡಿಕೊಟ್ಟರು. ಅದು ಮೂವರು ಕೂರುವಷ್ಟು ದೊಡ್ಡ ಸ್ಥಳವೇನಲ್ಲ.

ಆದರೆ ಮಳೆಯಲ್ಲಿ ನೆನೆಯುತ್ತಾರಲ್ಲ ಎನ್ನುವ ಕರುಣೆಯಿಂದ ಇರುವಷ್ಟು ಸ್ಥಳವನ್ನು ಮೂವರು ಹಂಚಿಕೊಂಡು ಕುಳಿತರು. ಮಾತಿಲ್ಲ. ಕತೆಯಿಲ್ಲ. ಆದರೆ ಹೃದಯದಲ್ಲಿ ಕರುಣಾ ಭಾವ. ಅಷ್ಟರಲ್ಲಿ ಅವರಿಗೆ ತಾವು ಮೂವರಲ್ಲದೇ ಮತ್ತೊಬ್ಬರು ಅಲ್ಲಿದ್ದಾರೆ ಎನ್ನಿಸಿತು. ಯಾರವರು ಎಂದುಕೊಳ್ಳುವಷ್ಟರಲ್ಲಿ ಬಲವಾದ ಮಿಂಚು ಹೊಳೆಯಿತು. ಮಿಂಚಿನ ಬೆಳಕಿನಲ್ಲಿ ಎಲ್ಲರೂ ಸ್ಪಷ್ಟವಾಗಿ ಕಂಡರು. ಅಲ್ಲಿದ್ದವರು ಮೂವರು ಗುರುಗಳು ಮತ್ತು ಅವರು ಪೂಜಿಸುತ್ತಿದ್ದ ದೇವರ ರೂಪಗಳು.

ಮೂವರೂ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ‘ಹೇ ದೇವ! ಇಷ್ಟು ವರ್ಷ ಪೂಜೆ ಮಾಡಿದರೂ ಕಾಣಿಸಿಕೊಳ್ಳದ ನೀನು ಇಂದು ಇಲ್ಲಿ ಹೇಗೆ ಪ್ರತ್ಯಕ್ಷನಾದೆ?’ ಎಂದು ಕೇಳಿದರು. ಆಗ ನಾಲ್ಕನೆಯವರು, ಅಂದರೆ ಭಗವಂತ ಹೇಳುತ್ತಾನೆ ‘ಇಷ್ಟು ದಿನ ನಿಮ್ಮ ನಿಮ್ಮಲ್ಲಿ ದ್ವೇಷ ಭಾವನೆಯಿತ್ತು. ನಾನು ಅಖಂಡ. ನೀವು ನನ್ನನ್ನು ಮೂರು ಖಂಡ ಮಾಡಿದ್ದಿರಿ. ಇಂದು ನೀವು ಮೂವರು ಒಂದೆಡೆಯಲ್ಲಿ ಪರಸ್ಪರ ಕರುಣೆ ತುಂಬಿದ ಮನೋಭಾವದಲ್ಲಿ ಕುಳಿತಿದ್ದೀರಿ. ಪರಸ್ಪರ ಕರುಣೆ ತುಂಬಿದ ಎಡೆಯಲ್ಲಿ ಪರಮಾತ್ಮನಾದ ನಾನು ಬರದೇ ಇರಲು ಹೇಗೆ ಸಾಧ್ಯ? ಅದಕ್ಕೇ ಬಂದೆ!’ ಎಂದಾಗ ಮೂವರೂ ಮತ್ತೆ ಮತ್ತೆ ನಮಸ್ಕರಿಸಿದರು.

ಈ ಕತೆ ಯಾವ ಧರ್ಮದ್ದು? ಬಹುಶಃ ಎಲ್ಲ ಧರ್ಮಗಳ ದೇವರು ಒಬ್ಬರೇ ಆಗಿದ್ದರೂ ಪಂಗಡಗಳು, ಒಳ ಪಂಗಡಗಳು ಹಲವಾರು ಇರಬಹುದು! ಈ ಕತೆಯಲ್ಲಿ ಬೇರೆ ಬೇರೆ ಧರ್ಮಗಳವರು ಇರುವುದರಿಂದ ಮತ್ತು ದೇವರು ಒಬ್ಬರೇ ಇರುವುದರಿಂದ ಇದು ಸರ್ವಧರ್ಮೀಯ ಹಾಗೂ ದೇವನೊಬ್ಬ ನಾಮ ಹಲವು ಎಂದು ಹೇಳಲು ದೇವರೆ ಎದುರಿಗೆ ಬರಬೇಕೆ? ನಿರಾಕಾರ ಮೂರ್ತಿಗೆ ಆಕಾರಗಳಿಸುವುದು ಕಷ್ಟವೇ? ಜಾತಿ ಧರ್ಮದ ಹೆಸರಿನಲ್ಲಿ ನೀತಿ ಮರೆಯಬಾರದು ಇದು ಸಾರ್ವಕಾಲಿಕ ಸತ್ಯ.

ಇದನ್ನೂ ಓದಿ: Shravan Month: ಶ್ರಾವಣ ತಿಂಗಳು ಶಿವನಿಗೇಕೆ ಅರ್ಪಿತ? ಶ್ರಾವಣದಲ್ಲಿ ಆಚರಿಸುವ ವ್ರತಗಳಾವುವು?

Click on your DTH Provider to Add TV9 Kannada