ಹೃದಯಾಘಾತಕ್ಕೆ WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ
Hulk Hogan Dead at 71: ವೃತ್ತಿಪರ ಕುಸ್ತಿಯ ದಂತಕಥೆ ಹಲ್ಕ್ ಹೋಗನ್ ಅವರು 71 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. WWEಯಲ್ಲಿ ಅವರ ಅಪಾರ ಕೊಡುಗೆ ಮತ್ತು ಜನಪ್ರಿಯತೆ ಅನುಕರಣೀಯ. ಅವರ ನಿಧನವು ಕುಸ್ತಿ ಜಗತ್ತಿಗೆ ಮತ್ತು ಅಭಿಮಾನಿಗಳಿಗೆ ಬಹುದೊಡ್ಡ ನಷ್ಟ. ಹೋಗನ್ ಅವರ ಅನೇಕ ಚಾಂಪಿಯನ್‌ಶಿಪ್ ಗೆಲುವುಗಳು ಮತ್ತು WWEಯಲ್ಲಿ ಅವರ ಪ್ರಭಾವ ಅವರನ್ನು ಅಜರಾಮರವಾಗಿಸಿವೆ.

ವೃತ್ತಿಪರ ಕುಸ್ತಿ ಸೂಪರ್‌ಸ್ಟಾರ್ ಹಲ್ಕ್ ಹೋಗನ್ (Hulk Hogan) ಹೃದಯಾಘಾತದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ನ ಅತಿದೊಡ್ಡ ಸ್ಟಾರ್ಗಳಲ್ಲಿ ಒಬ್ಬರಾಗಿದ್ದ ಹೋಗನ್ ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಮೇರಿಕನ್ ಮಾಧ್ಯಮ ವರದಿಗಳ ಪ್ರಕಾರ, ಹಲ್ಕ್ ಹೋಗನ್ ಜುಲೈ 24 ರ ಗುರುವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. WWE ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮುಖಗಳಲ್ಲಿ ಒಬ್ಬರಾಗಿದ್ದ ಹೋಗನ್ ಅವರ ನಿಧನಕ್ಕೆ ಪ್ರಪಂಚದಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದ್ದಾರೆ.
ಹೋಗನ್ಗೆ ಹೃದಯ ಸಂಬಂಧಿ ಕಾಯಿಲೆ
ಅಮೇರಿಕನ್ ವೆಬ್‌ಸೈಟ್ TMZ ವರದಿಯ ಪ್ರಕಾರ, ಹಲ್ಕ್ ಹೋಗನ್ ತಮ್ಮ ಫ್ಲೋರಿಡಾದ ಮನೆಯಲ್ಲಿ ನಿಧನರಾಗಿರುವುದಾಗಿ ವರದಿಯಾಗಿದೆ. ಬಹಳ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹೋಗನ್ ಚಿಕಿತ್ಸೆಯಲ್ಲಿದ್ದರು. ಆದರೆ ಗುರುವಾರ ಬೆಳಿಗ್ಗೆ 9.51 ರ ಸುಮಾರಿಗೆ, ಹಲ್ಕ್ ಹೋಗನ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ವೈದ್ಯಕೀಯ ತಂಡವನ್ನು ಮನೆಗೆ ಕರೆಸಲಾಗಿದೆ. ಅಲ್ಲಿಂದ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆರು ಬಾರಿ WWE ಚಾಂಪಿಯನ್
ಆಗಸ್ಟ್ 11, 1953 ರಂದು ಜಾರ್ಜಿಯಾದ ಆಗಸ್ಟಾದಲ್ಲಿ ಜನಿಸಿದ ಹೋಗನ್ ಅವರ ನಿಜವಾದ ಹೆಸರು ಟೆರ್ರಿ ಜೀನ್ ಬೊಲಿಯಾ. 1977 ರಲ್ಲಿ ತಮ್ಮ ವೃತ್ತಿಪರ ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸಿದ ಹೋಗನ್ 1983 ರಲ್ಲಿ WWE ಗೆ ಪ್ರವೇಶಿಸಿದರು. ಇಲ್ಲಿಂದ ಹೋಗನ್ ಪ್ರತಿ ಮನೆಗೆ ವೃತ್ತಿಪರ ಕುಸ್ತಿಯನ್ನು ತರುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಸುಮಾರು 6.5 ಅಡಿ ಎತ್ತರ ಮತ್ತು 130 ಕೆಜಿ ತೂಕವಿದ್ದ ಹೋಗನ್, ತಮ್ಮ WWE ವೃತ್ತಿಜೀವನದಲ್ಲಿ ಆರು ಬಾರಿ WWE ಚಾಂಪಿಯನ್‌ಶಿಪ್ ಮತ್ತು ಆರು ಬಾರಿ WCW ವರ್ಲ್ಡ್ ಹೆವಿವೇಟ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಅನೇಕ ಪ್ರಸಿದ್ಧ ಕುಸ್ತಿಪಟುಗಳನ್ನು ಸೋಲಿಸುವ ಮೂಲಕ 1980 ರ ದಶಕವನ್ನು ಹೋಗನ್ ಸಂಪೂರ್ಣವಾಗಿ ಆಳಿದರು. ಆ ಅವಧಿಯಲ್ಲಿ ಆಂಡ್ರೆ ದಿ ಜೈಂಟ್, ಸ್ಟಿಂಗ್, ದಿ ಅಲ್ಟಿಮೇಟ್ ವಾರಿಯರ್ ಮತ್ತು ರಾಂಡಿ ಸ್ಯಾವೇಜ್‌ನಂತಹ ಕುಸ್ತಿಪಟುಗಳೊಂದಿಗೆ ಹೋಗನ್ ಅವರ ಪೈಪೋಟಿ WWE ನ ಅತ್ಯಂತ ಜನಪ್ರಿಯ ಕಥಾಹಂದರವಾಗಿತ್ತು.
WWE ಹಾಲ್ ಆಫ್ ಫೇಮ್ ಗೌರವ
ಮೊದಲ 9 ರೆಸಲ್‌ಮೇನಿಯಾ ಈವೆಂಟ್‌ಗಳಲ್ಲಿ 8 ರಲ್ಲಿ ಹೋಗನ್ ಭಾಗವಹಿಸಿದ್ದರು. ಆದಾಗ್ಯೂ, ಹೊಸ ಕುಸ್ತಿಪಟುಗಳ ಆಗಮನದೊಂದಿಗೆ, ಹಲ್ಕ್ ಹೋಗನ್ ಅವರು ಕಾಲ ಕ್ರಮೇಣ ತೆರೆ ಮರೆಗೆ ಸರಿದರು. 2012 ರ ಜನವರಿಯಲ್ಲಿ ಕುಸ್ತಿಯಿಂದ ನಿವೃತ್ತರಾದ ಹೋಗನ್ ಅನೇಕ ಹಾಲಿವುಡ್ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ಅಲ್ಲದೆ 2005 ರಲ್ಲಿಯೇ ಹೋಗನ್ ಅವರನ್ನು WWE ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
