ಇನ್ಮುಂದೆ SSLC, PUCಯಲ್ಲಿ ಶೇ.33 ಅಂಕ ಬಂದ್ರೂ ಪಾಸ್: ಆಕ್ಷೇಪಣೆ ಸಲ್ಲಿಸಲು ಅವಕಾಶ
ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಇನ್ನುಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದು, ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ ಪ್ರತಿ ವಿಷಯದಲ್ಲಿ 100ಕ್ಕೆ ಕನಿಷ್ಠ 30 ಅಂಕ ಪಡೆದರೆ ಸಾಕು ಪಾಸ್. ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಇಂದು (ಜುಲೈ 24) ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು, (ಜುಲೈ 24): ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮದಲ್ಲಿ ಕೆಲ ಬದಲಾವಣೆ ತರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಸಿಬಿಎಸ್‌ಇ ಮಾದರಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, SSLC ಪರೀಕ್ಷೆಯ ಉತ್ತೀರ್ಣ ಅಂಕ ಕಡಿತಗೊಳಿಸಲಾಗಿದೆ. ಇನ್ಮುಂದೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ ಶೇ. 33 ಅಂಕ ಪಡೆದರೂ ಉತ್ತೀರ್ಣರಾಗಲಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಇಂದು (ಜುಲೈ 24) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಓವರ್ ಅಲ್ ಪಾಸಿಂಗ್ 35% ಇತ್ತು. ಪ್ರತಿ ವಿಷಯದಲ್ಲಿ 35 ಅಂಕ ಪಡೆಯಬೇಕಿತ್ತು. ಈಗ ಪ್ರತಿ ವಿಷಯದಲ್ಲಿ 30 ಅಂಕ ಪಡೆದ್ರೆ ಉತೀರ್ಣ.ಅಂದರೆ ಪಾಸಿಂಗ್ ಅಗ್ರಿಗೇಟ್ 33% ಬರಬೇಕು. ಸಿಬಿಎಸ್ಇ ಮಾಡಲ್ ನಲ್ಲಿ ಇದೇ ಮಾದರಿ ಇದೆ. ಓವರ್‌ಆಲ್ ಅಗ್ರಿಗೇಟ್ ಪಾಸಿಂಗ್ ಮಾರ್ಕ್ಸ್ ಶೇಕಡಾ 33ಕ್ಕೆ ಕಡಿತ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 206 ಅಂಕ ಪಡೆದರೆ ಪಾಸ್ ಇನ್ನು ಈ ಬಗ್ಗೆ ಸರ್ಕಾರ, ಸಾರ್ವಜನಿಕರ ಅಕ್ಷಪಣೆ ಪಡೆಯಲು ಮುಂದಾಗಿದ್ದು, ಜನರ ಅಭಿಪ್ರಾಯ ತಿಳಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ
SSLC ಪರೀಕ್ಷೆ ಪಾಸಿಂಗ್ ಮಾರ್ಕ್ಸ್
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಾಯ್ದೆ, 1966 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 16) ಸೆಕ್ಷನ್ 26 ಮತ್ತು ಸೆಕ್ಷನ್ 27 ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು, ಕರ್ನಾಟಕ ಸರ್ಕಾರದ ಅನುಮೋದನೆ ಮೇರೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೊದಲ ನಿಯಮಾವಳಿಗಳು, 1966ಗೆ ತಿದ್ದುಪಡಿ ಮಾಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡೂ ಸೇರಿ ಒಟ್ಟಾರೆ ಸರಾಸರಿ 33% ಅಂಕಗಳನ್ನು ಪಡೆದು, ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದಲ್ಲಿ ಮತ್ತು ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: SSLCಯಲ್ಲಿ ಕನ್ನಡ ಭಾಷಾ ಪರೀಕ್ಷೆಯ ಅಂಕ ಕಡಿತಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ವಿರೋಧ: ಸಚಿವ ಮಧು ಬಂಗಾರಪ್ಪಗೆ ಪತ್ರ
ದ್ವಿತೀಯ ಪಿಯುಸಿ ಪರೀಕ್ಷೆ ನಿಯಮಗಳು
ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿ ಕರ್ನಾಟಕ ಸರ್ಕಾರವು 1983 ರ ಕರ್ನಾಟಕ ಶಿಕ್ಷಣ ಕಾಯ್ದೆಯ (1995ರ ಕರ್ನಾಟಕ ಕಾಯ್ದೆ- 1) ಸೆಕ್ಷನ್ 7ರ ಉಪವಿಭಾಗ (1) ರ ಷರತ್ತು (i) ಮತ್ತು ಸೆಕ್ಷನ್ 145 ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರಡು ತಿದ್ದುಪಡಿ ನಿಯಮಗಳನ್ನು ಪ್ರಕಟಿಸಲಾಗಿದೆ. ಈ ನಿಯಮಗಳು 2025-26ನೇ ಶೈಕ್ಷಣಿಕ ವರ್ಷದಿಂದ ಮತ್ತು ನಂತರದ ಶೈಕ್ಷಣಿಕ ವರ್ಷದಿಂದ ಮಂಡಳಿಯ ಪರೀಕ್ಷೆಗೆ ಹಾಜರಾಗುವ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತವೆ.
ಇದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿ ಮುಗಿದ ನಂತರ ಕರಡು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಎರಡು ಕರಡಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ಮಂಡಳಿಗೆ ಸ್ವೀಕೃತವಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ಮಂಡಳಿಯು ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಭ್ಯರ್ಥಿಯು ಪ್ರತಿ ವಿಷಯದಲ್ಲಿ ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಒಳಗೊಂಡಂತೆ ಪ್ರತಿ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ 33% ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲಾಗುತ್ತದೆ.
ಯಾವುದೇ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನವಿಲ್ಲದ ವಿಷಯಗಳಲ್ಲಿ, 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯಬೇಕಾಗುತ್ತದೆ. ಆದರೆ, ಈ ಕನಿಷ್ಠ ಅಂಕಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು ಸಡಿಲಿಸಬಹುದು ಅಥವಾ ಮಾರ್ಪಡಿಸಬಹುದು.
ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನ ಇರುವ ವಿಷಯಗಳಲ್ಲಿ 70 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 21 ಅಂಕಗಳನ್ನು ಪಡೆಯಬೇಕು ಆದರೆ, ಈ ಕನಿಷ್ಠ ಅಂಕಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಷರತ್ತುಗಳಿಗೆ ಒಳಪಟ್ಟು ಸಡಿಲಿಸಬಹುದು ಅಥವಾ ಮಾರ್ಪಡಿಸಬಹುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Thu, 24 July 25




