ಬೆಂಗಳೂರು ಕಾಲ್ತುಳಿತ ಘಟನೆಗೆ ಆರ್ಸಿಬಿ ಕಾರಣ! ಇದ್ಯಾವ ಸೀಮೆ ನ್ಯಾಯ ಸ್ವಾಮೀ? ಅರವಿಂದ್ ಬೆಲ್ಲದ್
ಈ ಪ್ರಕರಣ ಮುಂದೆ ನ್ಯಾಯಾಲಯಕ್ಕೆ ಹೋಗಲಿದೆ, ಅಲ್ಲಿ ವಿಚಾರಣೆ ನಡೆಯುತ್ತದೆ. ಸರ್ಕಾರದ ಕ್ರಮ ಬಾಲಿಶ, ವಿವೇಚನೆಹೀನ, ಮೂರ್ಖತನದಿಂದ ಕೂಡಿದ್ದು ಅಂತ ಕೋರ್ಟ್ ಛೀಮಾರಿ ಹಾಕುವುದಿಲ್ಲವೇ? ಅಂಥದೊಂದು ಸನ್ನಿವೇಶಕ್ಕೆ ಸರ್ಕಾರ ಸಿದ್ಧವಾಗಿರುವಂತಿದೆ. ಆಗಿರುವ ದುರಂತಕ್ಕೆ ಬೇರೆಯವರ ಮೇಲೆ ಗೂಬೆ ಕೂರಿಸುದವ ಬದಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ರಾಜೀನಾಮೆ ಸಲ್ಲಿಸಬೇಕು ಎಂದು ಬೆಲ್ಲದ್ ಹೇಳಿದರು.
ಬೆಂಗಳೂರು, ಜುಲೈ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾಲೀಕರಿಗೆ, ಆಟಗಾರರಿಗೆ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲರಿಗೆ ಯಾಕಾದರೂ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಶಿಪ್ (Indian Premier League Championship) ಗೆದ್ದೆವೋ ಅಂತ ಅನಿಸುತ್ತಿರಬಹುದು. ಜೂನ್ 4 ರಂದು ನಡೆದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11 ಜನ ಸತ್ತಿದ್ದಕ್ಕೆ ರಾಜ್ಯ ಸಚಿವ ಸಂಪುಟ ಆರ್ಸಿಬಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿದೆ. ಸರ್ಕಾರದ ನಿಲುವನ್ನು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಕಟುವಾಗಿ ಟೀಕಿಸಿದ್ದಾರೆ. ಯಾವ ಆ್ಯಂಗಲ್ ನಿಂದ ಆರ್ಸಿಬಿ ಆ ಘೋರ ಘಟನೆಗೆ ಕಾರಣೀಭೂತವಾಗುತ್ತದೆ? ಕಪ್ ಗೆದ್ದಿದ್ದು ಅವರ ತಪ್ಪೇ? ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಕಮೀಷನರ್, ಇತರ ಹಿರಿಯ ಅಧಿಕಾರಿಗಳು ಸಸ್ಪೆಂಡ್ ಮಾಡಿ, ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೊವಿಂದರಾಜುರನ್ನು ಜವಾಬ್ದಾರಿಯಿಂದ ವಿಮುಖಗೊಳಿಸಿದ ಸಿಎಂ ಮತ್ತು ಡಿಸಿಎಂ, ಸದನದಲ್ಲಿ ವಿರೋಧ ಪಕ್ಷಗಳಿಂದ ಬಚಾವಾಗಲು ಆರ್ಸಿಬಿ, ಕೆಎಸ್ಸಿಎ ಮತ್ತಿ ಡಿಎನ್ಎ ಸಂಸ್ಥೆಗಳನ್ನು ಬಲಿಪಶು ಮಾಡುತ್ತಿದೆ, ಇದು ಹೇಡಿತನದ ಪರಮಾವಧಿ ಎಂದು ಬೆಲ್ಲದ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ: ಆರ್ಸಿಬಿಗೆ ಹೈಕೋರ್ಟ್ ನೋಟಿಸ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ