ಬೆಂಗಳೂರು ಕಾಲ್ತುಳಿತ ಪ್ರಕರಣ: ಆರ್ಸಿಬಿಗೆ ಹೈಕೋರ್ಟ್ ನೋಟಿಸ್
ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ (ಜೂ.03) ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣದ ಬಳಿ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಘಟನೆ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಕೋರ್ಟ್, ಇಂದು ಅರ್ಜಿ ವಿಚಾರಣೆ ನಡೆಸಿತು.

ಬೆಂಗಳೂರು, ಜೂನ್ 17: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ (Chinnaswamy stadium Stampede) 11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ (High Court) ವಿಭಾಗೀಯ ಪೀಠ ಆರ್‌ಸಿಬಿ (RCB), ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ಇಂದು (ಜೂ.17) ನಡೆಸಿತು. ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಕೆ ಮಾಡಿತು.
ಹೈಕೋರ್ಟ್: ಮುಚ್ಚಿದ ಲಕೋಟೆಯಲ್ಲಿ ಏಕೆ ವರದಿ ಸಲ್ಲಿಸುತ್ತಿದ್ದೀರಿ?
ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ: ತನಿಖೆ ಇನ್ನೂ ಬಾಕಿಯಿರುವುದರಿಂದ ಪೂರ್ವಾಗ್ರಹವಿರಬಾರದು, ಮೂರನೇ ವ್ಯಕ್ತಿಗಳ ವಿರುದ್ಧ ಅಭಿಪ್ರಾಯವೆಂದು ಭಾವಿಸಬಾರದು. ಹೀಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ದಾಖಲೆಗಳನ್ನು ಹಂಚಿಕೊಳ್ಳುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ. ಆದರೆ. ನ್ಯಾಯಾಂಗ ತನಿಖೆ ಬಾಕಿಯಿರುವುದರಿಂದ ವರದಿ ಬಹಿರಂಗ ಬೇಡ ಎಂದು ಹೇಳಿದರು.
ಹೈಕೋರ್ಟ್: ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿ ಅಗತ್ಯವಿದೆ
ಮುಚ್ಚಿದ ಲಗೋಟೆಯಲ್ಲಿ ಸರ್ಕಾರ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸಲು ಕೆಲ ಅರ್ಜಿದಾರರು ಮನವಿ ಮಾಡಿದರು. ಸರ್ಕಾರ ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅನುಸರಿಸಬೇಕು. ಮಾಹಿತಿಯ ಹಕ್ಕನ್ನು ಸರ್ಕಾರ ಗೌರವಿಸಬೇಕು. ಸರ್ಕಾರ ಯಾವುದೇ ಮಾಹಿತಿಯನ್ನೂ ಮುಚ್ಚಿಡಬಾರದು. ಸರ್ಕಾರ ಸಂಪೂರ್ಣ ತಪ್ಪು ವರದಿ ನೀಡಿದರೂ ತಿಳಿಯುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ವರದಿಯಲ್ಲಿನ ಅಂಶ ಬಹಿರಂಗವಾಗಬೇಕು. ಇಲಿ, ಬೆಕ್ಕಿನ ಆಟ ಸರಿಯಲ್ಲವೆಂದು ಅರ್ಜಿದಾರರು ವಾದ ಮಾಡಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ: ಎಲ್ಲ ದಾಖಲೆಗಳನ್ನು ಸಿಎಸ್ ವಶದಲ್ಲಿಡಲು ಹೈಕೋರ್ಟ್ ಸೂಚನೆ
ಬಳಿಕ ಹೈಕೋರ್ಟ್ ಸರ್ಕಾರದ ವಾದ ಕೇಳಿದ ಬಳಿಕ ಮುಚ್ಚಿದ ಲಕೋಟೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Tue, 17 June 25