ಬೆಂಗಳೂರು ಕಾಲ್ತುಳಿತ ಪ್ರಕರಣ: ಎಲ್ಲ ದಾಖಲೆಗಳನ್ನು ಸಿಎಸ್ ವಶದಲ್ಲಿಡಲು ಹೈಕೋರ್ಟ್ ಸೂಚನೆ
ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ (ಜೂ.03) ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣದ ಬಳಿ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಈ ಸಂಬಂಧ ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಈ ಬಂಧನದಿಂದ ಬಿಡುಗಡೆ ಕೋರಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಕೋರ್ಟ್, ಮಧ್ಯಂತರ ಜಾಮೀನು ನೀಡಿದೆ.

ಬೆಂಗಳೂರು, ಜೂನ್ 12: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ (Chinnaswamy stadium Stampede) ಪ್ರಕರಣ ಕುರಿತ ನಡೆಸಿರುವ ಎಲ್ಲ ರೀತಿಯ ಸಂವಹನ ದಾಖಲೆಗಳನ್ನು ಯಾವುದೇ ತಿದ್ದುಪಡಿ ಮಾಡದೆ ಮುಖ್ಯ ಕಾರ್ಯದರ್ಶಿಗಳ ವಶದಲ್ಲಿಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದ (High Court) ದ್ವಿಸದಸ್ಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ. ವಿ. ಕಾಮೇಶ್ವರ ರಾವ್ ಮತ್ತು ನ್ಯಾ.ಸಿಎಂ.ಜೋಶಿ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.
ಹೈಕೋರ್ಟ್ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ ಸರ್ಕಾರ
ಹೈಕೋರ್ಟ್: ಮ್ಯಾಜಿಸ್ಟೀರಿಯಲ್ ತನಿಖೆ, ನ್ಯಾಯಾಂಗ ತನಿಖೆ ಮುಂದಿರುವ ಪ್ರಶ್ನೆಗಳೇನು? ಎರಡೂ ತನಿಖೆಯಲ್ಲಿ ಬೇರೆ ಬೇರೆ ಅಭಿಪ್ರಾಯ ನೀಡಿದರೆ ಏನು ಮಾಡುತ್ತೀರಿ? ಅಂತಹ ಸಂದರ್ಭ ಎದುರಾದರೆ ಸರ್ಕಾರ ಉತ್ತರಿಸಬೇಕಾಗಲಿದೆ. ರಾಜ್ಯ ಸರ್ಕಾರವಲ್ಲದೇ ಬೇರೆ ಯಾರನ್ನು ಪ್ರತಿವಾದಿ ಮಾಡಬೇಕು?\
ಎಜಿ ಶಶಿಕಿರಣ್ ಶೆಟ್ಟಿ: ನ್ಯಾಯಾಂಗ ತನಿಖೆ ವರದಿ ಬಂದ ಬಳಿಕ ಈ ಬಗ್ಗೆ ತೀರ್ಮಾನಿಸಬಹುದು. ನ್ಯಾಯಾಂಗ ತನಿಖೆ ವರದಿಗೆ ನಾವು ಬದ್ದವಾಗಿರಬೇಕಿಲ್ಲ
ಹೈಕೋರ್ಟ್: ಮೇ4 ರ ಕಾರ್ಯಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಭದ್ರತೆಯಲ್ಲಿರಿಸಲಾಗಿದೆಯೇ ?ದಾಖಲೆಗಳಲ್ಲಿ ತಿದ್ದುಪಡಿ ಮಾಡುವುದನ್ನು ತಪ್ಪಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ದಾಖಲೆಗಳನ್ನೂ ಮುಖ್ಯ ಕಾರ್ಯದರ್ಶಿ ಕಸ್ಟಡಿಯಲ್ಲಿರಿಸಲು ಹೈಕೋರ್ಟ್ ಸೂಚನೆ ನೀಡಿತು.
ಎಜಿ ಶಶಿಕಿರಣ್ ಶೆಟ್ಟಿ: ಪಾರದರ್ಶಕವಾಗಿ ಹೈಕೋರ್ಟ್ ಸೂಚನೆಗಳನ್ನು ಪಾಲಿಸಲಾಗುವುದು. ಎಸ್‌ಒಪಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ.
ಹೈಕೋರ್ಟ್: ಪರಿಹಾರ ಹೆಚ್ಚಿಸುವಂತೆ ಮೃತಪಟ್ಟವರ ಪರ ವಕೀಲರಿಂದ ಅರ್ಜಿ ಸಲ್ಲಿಸಿದ್ದಾರೆ.
ಎಜಿ ಶಶಿಕಿರಣ್ ಶೆಟ್ಟಿ: ಪರಿಹಾರವನ್ನು 25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಸಸ್ಪೆಂಡ್ ಪ್ರಶ್ನಿಸಿ ನಂದೀಶ್ ಅರ್ಜಿ ಸಲ್ಲಿಸಿದ್ದಾರೆ. ತನಿಖೆ ನಡೆಸದೇ ಸಸ್ಪೆಂಡ್ ಸರಿಯಲ್ಲವೆಂದು ವಾದ ಮಂಡಿದ್ದಾರೆ.
ಇದನ್ನೂ ಓದಿ: RCB ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲ್ಗೆ ಮಧ್ಯಂತರ ಜಾಮೀನು
ಹೈಕೋರ್ಟ್: ನೊಂದ ಅಧಿಕಾರಿಗಳು ಈ ಬಗ್ಗೆ ಕಾನೂನು ಹೋರಾಟ ನಡೆಸಬಹುದು. ಅರ್ಜಿದಾರರ ಹಿತಾಸಕ್ತಿ ಏನು ಎಂದು ಕೋರ್ಟ್ ಪ್ರಶ್ನಿಸಿತು. ವಿಚಾರಣೆಯನ್ನು ಜೂನ್. 17ಕ್ಕೆ ನಿಗದಿಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







