ವಿಚ್ಛೇದಿತ ಮಹಿಳೆಯನ್ನ ಬಲೆಗೆ ಬೀಳಿಸಿಕೊಂಡು ದೋಖಾ: ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್
ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಕೆಲ ಕಾರಣಾಂತರಗಳಿಂದ ವಿಚ್ಛೇದನ ಸಹ ಪಡೆದುಕೊಂಡು ಗಂಡನಿಂದ ದೂರವಾಗಿದ್ದಳು. ಆದ್ರೆ, ವಿಚ್ಛೇದಿತ ಮಹಿಳೆಯೊಂದಿಗೆ ವ್ಯಕ್ತಿಯೋರ್ವ ಪ್ರೀತಿಯ ನಾಟಕವಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಬಳಿಕ ತನ್ನ ಆಸೆಗಳನ್ನೆಲ್ಲಾ ಈಡೇರಿಸಿಕೊಂಡು ಆಕೆಗೆ ಕೈಕೊಟ್ಟಿದ್ದಾನೆ. ಸಾಲದಕ್ಕೆ ಮಹಿಳೆಯ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬೆದರಿಸಿ ಚಿನ್ನಾಭರಣ, ಹಣ ವಸೂಲಿ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು, (ಜೂನ್ 17): ವ್ಯಕ್ತಿಯೋರ್ವ ಪ್ರೀತಿಯ (Love) ಹೆಸರಿನಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ, ವಿಚ್ಛೇದಿತ ಮಹಿಳೆಗೆ (Divorce Woman) ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹಣ, ಚಿನ್ನಾಭರಣ ಕೊಟ್ಟರು ಶ್ರೀನಿವಾಸ್ ಎನ್ನುವಾತನ ಬ್ಲ್ಯಾಕ್‌ಮೇಲ್ ಗೆ ರೋಸಿ ಹೋದ ಮಹಿಳೆ, ಕೊನೆಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಶ್ರೀನಿವಾಸ್ ಬಾಳು ಕೊಡುವುದಾಗಿ ವಿಚ್ಛೇದಿತ ಮಹಿಳೆಗೆ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ. ಅಲ್ಲದೇ ಮಹಿಳೆಯ ಖಾಸಗಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದಾನೆ. ಹಣ ಕೊಟ್ಟರೂ ಸಹ ತನ್ನ ಚಾಳಿ ಮುಂದುವರಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಹಿಳೆಯ ದೂರಿನಂತೆ, ಶ್ರೀನಿವಾಸ್ ಎಂಬಾತ ಅವರೊಂದಿಗೆ ಪ್ರೀತಿಯ ಸಂಬಂಧ ಬೆಳೆಸಿದ್ದ. ನಂತರ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ, ಆತನ ವಿಶ್ವಾಸಕ್ಕೆ ಒಳಪಟ್ಟಿದ್ದ ಮಹಿಳೆಯು ಖಾಸಗಿ ಕ್ಷಣಗಳನ್ನು ಆತನೊಂದಿಗೆ ಹಂಚಿಕೊಂಡಿದ್ದಾಳೆ. ಈ ವೇಳೆ ಆ ಕ್ಷಣಗಳನ್ನು ಆರೋಪಿ ಶ್ರೀನಿವಾಸ್ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡಿದ್ದಾನೆ. ಮಹಿಳೆಯ ಹೇಳಿಕೆಯಂತೆ, ಆರೋಪಿಯು ಈ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಅವಳಿಗೆ ಮಾನಸಿಕವಾಗಿ ಒತ್ತಡ ಹಾಕಿ, ನಿರಂತರ ಹಣ ಹಾಗೂ ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬ್ಲ್ಯಾಕ್‌ಮೇಲ್ ಹಾಗೂ ದೋಖಾ ಇಷ್ಟಕ್ಕೆ ನಿಲ್ಲದೇ, ಮಹಿಳೆಯ ಅಣ್ಣನಿಗೂ ಕರೆಮಾಡಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಬಾಗಲಕೋಟೆ: ದೆವ್ವ ಬಿಡಿಸುವುದಾಗಿ ಮಹಿಳೆಗೆ ಜ್ಯೋತಿಷಿ ಮಾಡುವುದು ಹೀಗಾ..?
ಅಷ್ಟೇ ಅಲ್ಲದೆ, ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಅದರಲ್ಲಿ ಖಾಸಗಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಯತ್ನ ಕೂಡ ಮಾಡಿದ್ದಾನೆ. ಈ ಎಲ್ಲ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ಮಹಿಳೆ, ಕೊನೆಗೆ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೋಲಿಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.



