ಕರ್ನಾಟಕ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವರ್ಗಾವಣೆ ಅವಧಿ ವಿಸ್ತರಣೆ
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು ಷರತ್ತುಗಳಿಗೊಳಪಟ್ಟು ಮೇ 12 ರಿಂದ ಜೂನ್ 14ರವರೆಗೆ ವರ್ಗಾವಣೆ ಕೈಗೊಳ್ಳಲು ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ ಆದೇಶಿಸಲಾಗಿತ್ತು. ಆದ್ರೆ, ಇದೀಗ ಎಲ್ಲಿಯವರೆಗೆ ವಿಸ್ತರಣೆ ಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರು, (ಜೂನ್ 17): ಕರ್ನಾಟಕ ರಾಜ್ಯ ಸರ್ಕಾರಿ ಅಧಿಕಾರಿಗಳ(government employees) ವರ್ಗಾವಣೆ ಅವಧಿಯನ್ನು ವಿಸ್ತರಿಸಲಾಗಿದೆ. ಸರ್ಕಾರಿ ನೌಕರರ ವರ್ಗಾವಣೆ (Transfer guidelines) ಕೈಗೊಳ್ಳಲು ನಿಗದಿಪಡಿಸಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದ್ದು, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರತಿಭಾ. ಕೆ ಅವರು ಇಂದು (ಜೂನ್ 17) ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.
2025-26ನೇ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳನ್ನು ನಿಯಂತ್ರಿಸಲು ವರ್ಗಾವಣಾ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿ ಷರತ್ತುಗಳಿಗೊಳಪಟ್ಟು ಮೇ 12 ರಿಂದ ಜೂನ್ 14ರವರೆಗೆ ವರ್ಗಾವಣೆ ಕೈಗೊಳ್ಳಲು ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ ಈ ಹಿಂದೆ ಆದೇಶಿಸಲಾಗಿತ್ತು. ಈ ವರ್ಗಾವಣೆ ಅವಧಿಯನ್ನು ವಿಸ್ತರಿಸುವುದು ಅವಶ್ಯಕವೆಂದು ಪರಿಗಣಿಸಿ, ಸರ್ಕಾರವು ಇದೀಗ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಯೋಗ ದಿನ: ಒಂದು ಭೂಮಿ ಒಂದು ಅರೋಗ್ಯಕ್ಕಾಗಿ ವಿಧಾನಸೌಧ ಮೆಟ್ಟಿಲು ಮೇಲೆ ಯೋಗ
12.05.2025ರ ಸರ್ಕಾರಿ ಆದೇಶದಲ್ಲಿ ವಿವರಿಸಿರುವ ಷರತ್ತಿಗೊಳಪಟ್ಟು 2025-26ನೇ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರೂಪ್ ಎ, ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆ ಸಚಿವರಿಗೆ ಹಾಗೂ ಗ್ರೂಪ್ ಸಿ ಮತ್ತ ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ. ಎ ಮತ್ತು ಬಿ ವೃಂದದ ಹುದ್ದೆಗಳಲ್ಲಿ 2 ವರ್ಷ, ಸಿ ವೃಂದದ ಹುದ್ದೆಯಲ್ಲಿ ವರ್ಷ ಹಾಗೂ ಡಿ ಗ್ರೂಪ್ ಹುದ್ದೆಗಳಲ್ಲಿ 7 ವರ್ಷ ಪೂರ್ಣಗೊಳಿಸಿದವರನ್ನ ವರ್ಗಾವಣೆ ಮಾಡಬಹುದಾಗಿದೆ. ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ ಸಂಬಂಧಿಸಿದ ವರ್ಗಾವಣೆ ಪ್ರಸ್ತಾವನೆಯನ್ನು ಸಚಿವಾಲಯದ ಆಡಳಿತ ಇಲಾಖೆಗಳ ಮೂಲಕವೇ ಸಚಿವರಿಗೆ ಸಲ್ಲಿಸಬೇಕು.
ಇನ್ನು ಹೈದರಾಬಾದ್ ಕರ್ನಾಟಕ ಪ್ರದೇಶದ ಕಚೇರಿಗಳಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಗೊಂಡ ನೌಕರರನ್ನು ಅವರ ನೇಮಕಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳವರೆಗೆ ಬೇರೆಡೆ ವರ್ಗಾವಣೆ ಮಾಡುವಂತಿಲ್ಲ ಎಂಬುವುದನ್ನು ಗೈಡ್ ಲೈನ್ಸ್ ನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




