
ಪುಷ್ಯ ಮಾಸವೆಂದರೆ ಚಂದ್ರನ ಕ್ಯಾಲೆಂಡರ್ ಪ್ರಕಾರ, ಮಾಸಗಳಲ್ಲಿ 10ನೇ ಮಾಸ. ಈ ಮಾಸವು ಮಕರ ಸಂಕ್ರಾಂತಿ ಹಬ್ಬದೊಂದಿಗೆ ಆರಂಭವಾಗಿ, ನಂತರ ಮಾಘ ಮಾಸಕ್ಕೆ ದಾರಿ ಮಾಡಿಕೊಡುತ್ತದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಪುಷ್ಯ ಮಾಸಕ್ಕೆ ಅತ್ಯಂತ ಆಧ್ಯಾತ್ಮಿಕ ಮಹತ್ವವಿದೆ. ಪುಷ್ಯ ಮಾಸದಲ್ಲಿ ಸೂರ್ಯನು ಉತ್ತರ ದಿಕ್ಕಿನತ್ತ ಸಂಚರಿಸುವ ಉತ್ತರಾಯಣ ಆರಂಭವಾಗುತ್ತದೆ. ಈ ಉತ್ತರಾಯಣವು ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗಿ, ದೇವರಿಗೆ ಅತ್ಯಂತ ಪ್ರಿಯವಾದ ಕಾಲವೆಂದು ಪರಿಗಣಿಸಲಾಗಿದೆ. ಸಂಕ್ರಾಂತಿ ಮರುದಿನ ದೀಪ ದಾನ ಮಾಡಿದರೆ ಸಂತಾನ ಪ್ರಾಪ್ತಿ , ಹಾಗೆಯೇ ಪುಷ್ಯ ಮಾಸದ ಅಮಾವಾಸ್ಯೆಯಂದು ಶನಿಗೆ ತೈಲಾಭಿಷೇಕ ಮಾಡಿದರೆ ಶನಿ ದೋಷ, ಸಾಡೇಸಾತಿ ಪರಿಣಾಮ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
ಬಹಳಷ್ಟು ಆಧ್ಯಾತ್ಮಿಕ ಮಹತ್ವವು ಪುಷ್ಯ ಮಾಸದೊಂದಿಗೆ ವೀಶೇಷ ಸಂಬಂಧವನ್ನು ಹೊಂದಿದೆ. ಪುಷ್ಯ ಮಾಸವನ್ನು ಶೂನ್ಯ ಮಾಸವೆಂದು ಪರಿಗಣಿಸಲಾಗುವುದರಿಂದ ಈ ಮಾಸದಲ್ಲಿ,ಮದುವೆಗಳನ್ನು, ಗೃಹ ಪ್ರವೇಶವನ್ನು ಅಥವಾ ಇನ್ನಿತರ ಮಂಗಳ ಕಾರ್ಯಕ್ರಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಯಾಕೆಂದರೆ ಈ ಪುಷ್ಯ ಮಾಸದಲ್ಲಿ ಯಾವುದೇ ರೀತಿಯ ಶುಭ ಮುಹೂರ್ತವನ್ನು ನಾವು ಕಾಣಲು ಸಾಧ್ಯವಿಲ್ಲ.
ಪುಷ್ಯ ಮಾಸದಲ್ಲಿ ಪೂಜೆಗಳನ್ನು ಮತ್ತು ಇನ್ನಿತರ ಸಾಮಾನ್ಯ ಆಚರಣೆಗಳನ್ನು ಮಾಡಲು ಪುಷ್ಯ ತಿಂಗಳು ಒಳ್ಳೆಯದು. ಪಿತೃಗಳಿಗೆ ಸಂತೋಷವನ್ನು ನೀಡಲು, ಪಿತೃ ದೋಷದಿಂದ ಮುಕ್ತಿಯನ್ನು ಹೊಂದಲು ಈ ಪುಷ್ಯ ಮಾಸವು ಉಪಯುಕ್ತಕಾರಿ. ಇನ್ನು ಪುಷ್ಯ ಮಾಸದಲ್ಲಿ ಬರುವ ಪೌರ್ಣಮಿ ವೇದಗಳನ್ನು ಅಧ್ಯಯನ ಮಾಡಲು ಬಯಸುವವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪುಷ್ಯ ಪೌರ್ಣಮಿ ದಿನದಂದು ವೇದ ಅಧ್ಯಯನ ಅಥವಾ ವೇದಗಳ ಅಧ್ಯಯನವನ್ನು ಪ್ರಾರಂಭಿಸಲು ಉತ್ತಮ ದಿನವೆಂದು ಪರಿಗಣಿಸಲಾಗಿದೆ.
ಪುಷ್ಯ ಮಾಸದಲ್ಲಿ ದೇವರ ಆರಾಧನೆಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಲಕ್ಷ್ಮಿ ನಾರಾಯಣ ಅಂದರೆ ಲಕ್ಷ್ಮಿ ಮತ್ತು ವಿಷ್ಣು ಈ ಮಾಸದ ಪ್ರಧಾನ ದೇವ ಮತ್ತು ದೇವತೆಯಾಗಿದ್ದಾರೆ. ಅವರನ್ನು ಲಕ್ಷ್ಮಿ ನಾರಾಯಣ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಶನಿ ಗ್ರಹವು ಪುಷ್ಯ ಮಾಸದ ಪ್ರಧಾನ ಗ್ರಹವಾಗಿದೆ. ಮತ್ತು ಬೃಹಸ್ಪತಿ ಅಥವಾ ಗುರುವನ್ನು ಈ ಮಾಸದ ನಕ್ಷತ್ರ ದೇವತೆಯೆಂದು ಪರಿಗಣಿಸಲಾಗುತ್ತದೆ.
ಪುಷ್ಯ ಮಾಸದಲ್ಲಿ ಸಾಮಾನ್ಯವಾಗಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪದ್ಧತಿಯಿದೆ. ಮಕರ ಸಂಕ್ರಾಂತಿಯಿಂದ ಪುಷ್ಯ ಮಾಸವು ಆರಂಭವಾಗಿ, ಈ ಮಾಸದಲ್ಲಿ ಅನೇಕ ಆಚರಣೆಗಳು ಕಂಡು ಬರುತ್ತದೆ. ಪುಷ್ಯ ಮಾಸದಲ್ಲಿ ಏಕಾದಶಿ, ಹುಣ್ಣಿಮೆ, ಕೃಷ್ಣ ಪಂಚಮಿ, ಮಕರ ಸಂಕ್ರಾಂತಿ, ಉತ್ತರಾಯಣ ಪರ್ವಕಾಲ ಸೇರಿದಂತೆ ಇನ್ನು ಅನೇಕ ಆಚರಣೆಗಳು ಪುಷ್ಯ ಮಾಸದಲ್ಲಿ ಇರುತ್ತದೆ.
ಪುಷ್ಯ ಮಾಸದಲ್ಲಿ ಬರುವ ಅಮಾವಾಸ್ಯೆಯ ದಿನದಂದು ಭಗವಾನ್ ಶನಿಗೆ ತೈಲಾಭಿಷೇಕವನ್ನು ಮಾಡಬೇಕು. ಇದು ನಿಮ್ಮ ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಪರಿಗಣಿಸಲಾಗಿದೆ. ಭಕ್ತರು ಲಕ್ಷ್ಮಿ ದೇವಿಯನ್ನು ಧನ್ಯ ಲಕ್ಷ್ಮಿ ಮತ್ತು ಧನ ಲಕ್ಷ್ಮಿ ರೂಪದಲ್ಲಿ ಪುಷ್ಯ ಮಾಸದಲ್ಲಿ ಪೂಜಿಸಬೇಕು. ಇದರಿಂದ ಧನ – ಧಾನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
ಪುಷ್ಯ ಮಾಸದಲ್ಲಿ ಬಹುಮುಖ್ಯವಾಗಿ ವಸ್ತ್ರ ದಾನ ಅಂದರೆ ಬಟ್ಟೆ ದಾನವನ್ನು ಮತ್ತು ಎಳ್ಳು ದಾನವನ್ನು ಮಾಡಬೇಕು. ಪುಷ್ಯ ಮಾಸದ ಅಮಾವಾಸ್ಯೆಯ ದಿನದಂದು ವಸ್ತ್ರದಾನ ಮತ್ತು ಎಳ್ಳು ದಾನ ಮಾಡುವುದರಿಂದ ಸಾಡೇಸಾತಿ ಶನಿ ದೋಷ ಸೇರಿದಂತೆ ಶನಿಗೆ ಸಂಬಂಧಿಸಿದ ಎಲ್ಲಾ ದೋಷಗಳು ದೂರಾಗುತ್ತದೆ. ಶಿಂಶುಮಾರನ ರಂಗೋಲಿ. ಒಂದು ತಿಂಗಳು ಪುಷ್ಯ ಮಾಸ ಪೂರ್ತಿ ಹಾಕಬೇಕು.
ಲೇಖನ: ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Sat, 20 December 25