ದೊಡ್ಡ, ದೊಡ್ಡ ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರತಿಯೊಬ್ಬ ಭಕ್ತರು ದೇವರ ದರ್ಶನ ಮಾಡಲು ಸರತಿ ಸಾಲಿನಲ್ಲೇ ಹೋಗಬೇಕು. ಅದೆಷ್ಟೂ ಬಾರಿ ಸರತಿ ಸಾಲನ್ನು ನೋಡಿಯೇ ತಲೆ ಸುತ್ತಿದಂತಾಗುತ್ತದೆ. ಆದ್ರೆ ದೇವರನ್ನು ನೋಡಲು ಭಕ್ತರು ಯಾವುದನ್ನೂ ಲೆಕ್ಕಿಸದೆ ಉಪವಾಸ, ವ್ರತಗಳನ್ನು ಮಾಡುತ್ತ ದೇವರ ದರ್ಶನ ಮಾಡುತ್ತಾರೆ. ಬನ್ನಿ ಇಲ್ಲೊಂದು ಅರ್ಥ ಪೂರ್ಣ ಸಂದೇಶವಿದೆ. ದೇವರು ಹಾಗೂ ಭಕ್ತನ ನಡುವೆ ನಡೆಯುವ ಪ್ರಶ್ನೆ ಹಾಗೂ ಉತ್ತರದಲ್ಲಿ ಅಡಗಿದೆ ಅರ್ಥ ಪೂರ್ಣ ಸಂದೇಶ.
ಗಂಟೆಗಟ್ಟಲೆ ಕ್ಯೂನಲ್ಲಿ ದೇವರ ದರ್ಶನಕ್ಕಾಗಿ ನಿಂತು ಬೇಸತ್ತು ಬೇಜಾರಾಗಿ ಭಕ್ತನೊಬ್ಬ ದೇವರಿಗೆ ಪ್ರಶ್ನೆ ಮಾಡುತ್ತಾನೆ. ದೇವರೇ! ಹಣ ಕೊಟ್ಟ ಭಕ್ತರಿಗೆ ಹತ್ತಿರದಿಂದ ನಿನ್ನ ದರ್ಶನ ಮಾಡಲು ಒಂದು ಪ್ರತ್ಯೇಕ ಸಾಲು. ಹಣ ಕೊಡದ ಭಕ್ತರಿಗೆ ದೂರದ ದರ್ಶನಕ್ಕೆ ಒಂದು ಬೇರೆ ದೊಡ್ಡ ಸಾಲು! ಇದ್ಯಾವ ನ್ಯಾಯ?
ಆಗ ದೇವರು ನಕ್ಕು ಉತ್ತರಿಸುತ್ತಾನೆ
ನಾನು, ತಂದೆ ತಾಯಿಗಳು ದೇವರ ಸಮಾನ ಎಂದೆ ನೀವು ಕೇಳಲಿಲ್ಲ. ಗುರು ಹಿರಿಯರಲ್ಲಿ ದೇವರ ಕಾಣಿ ಅಂತ ಹೇಳಿದೆ ನೀವು ಆಗಲು ತಿಳಿದುಕೊಳ್ಳಲಿಲ್ಲ. “ಜನ ಸೇವೆಯೇ ಜನಾರ್ಧನ ಸೇವೆ” ಎಂದು ಹೇಳಿದೆ ನೀವು ಕಷ್ಟದಲ್ಲಿದ್ದವರಿಗೆ ನೆರವಾಗಲಿಲ್ಲ. ಅಲ್ಲಿ ಇಲ್ಲಿ ಎನ್ನದೇ ನಾನು ಎಲ್ಲ ಕಡೆಗೆ ವ್ಯಾಪಿಸಿರುವೆ, ಎಲ್ಲೆಲ್ಲೂ ನಾನೇ ಇರುವೆ. ನೀನು ನಂಬಲಿಲ್ಲ. ನನ್ನ ಮೂರ್ತಿಯನ್ನು ಗುಡಿಯೊಳಗಿರಿಸಿ, ದೈವ ಸ್ಥಾನವನ್ನು ಕೊಟ್ಟು ದರ್ಶನದ ವೇಳೆಯನ್ನು, ದರ್ಶನ ದರವನ್ನು ಫಲಕಗಳಲ್ಲಿ ಹಾಕಿ, ದರ್ಶನ ಮಾಡಲು ಪ್ರತ್ಯೇಕ ಸಾಲುಗಳನ್ನು ವಿವಿಧ ಪೂಜಾ ವಿಧಿವಿಧಾನಗಳನ್ನು ಅವುಗಳ ದರವನ್ನು ನೀನೇ ಪ್ರಕಟಿಸಿ ವ್ಯವಸ್ಥೆ ಮಾಡಿದೆ. ಇದೆಲ್ಲವನ್ನು ಮಾಡಿ ನನ್ನನ್ನು ಕೇಳುವದು ಯಾವ ನ್ಯಾಯ?
ಹುಚ್ಚಪ್ಪ ನನ್ನನ್ನು ಕಾಣುವುದಿದ್ದರೆ ನಿಸರ್ಗದಲ್ಲಿ, ಪಶು ಪಕ್ಷಿಗಳಲ್ಲಿ, ವೃಕ್ಷಗಳಲ್ಲಿ ಕಾಣು. ಪ್ರತಿಯೊಬ್ಬರ( ಆತ್ಮ)ನಲ್ಲಿ, ನಿನ್ನ ಅಂತರಂಗದಲ್ಲಿ ಕಾಣು. ಪ್ರೀತಿಯ ಸೇವೆಯ ಮೂಲಕ ತಂದೆ ತಾಯಿಂದಿರಲ್ಲಿ, ಗುರು ಹಿರಿಯರಲ್ಲಿ, ಬದುಕಿನಲ್ಲಿ ನೊಂದವರಲ್ಲಿ ಕಾಣು. ಈ ಸುಂದರವಾದ ಪ್ರಕೃತಿಯಲ್ಲಿ ನನ್ನನ್ನು ಕಾಣು. ನನ್ನನ್ನು (ದೇವರನ್ನು) ದೇವಸ್ಥಾನಗಳಿಗೆ ಮಾತ್ರ ನನ್ನನ್ನು ಸೀಮಿತಗೊಳಿಸಬೇಡ ಎಂದು ದೇವರು ಭಕ್ತನಿಗೆ ಹೇಳಿದನಂತೆ.
“ಸರ್ವೇಃ ಜನಃ ಸುಖಿನೋಃ ಭವತುಃ”.