ನಂಬಿದ ಭಕ್ತರ ಕೈ ಬಿಡುವುದಿಲ್ಲ ಶ್ರೀ ಕೃಷ್ಣ; ದಿನ ನಿತ್ಯ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಗಾಗಿ ಪವಾಡ ಸೃಷ್ಟಿಸಿದ ಮುರಳೀಧರ

ರಾಜನು ಬಂದವನೇ ಕೃಷ್ಣನ ವಿಗ್ರಹದ ಮೇಲಿರುವ ಕಿರೀಟವನ್ನು ತೆಗೆದನು. ಏನಾಶ್ಚರ್ಯ ಕೃಷ್ಣನ ತಲೆಯ ತುಂಬಾ ಬಿಳಿಕೂದಲು ಕಾಣಿಸಿತು. ರಾಜನಿಗೆ ನಂಬಿಕೆ ಬರಲಿಲ್ಲ. ಈ ಪೂಜಾರಿ ಏನಾದರೂ ಕಿತಾಪತಿ ಮಾಡಿದ್ದಾನೆ ಎಂದುಕೊಂಡು ಕೃಷ್ಣನ ತಲೆಯಲ್ಲಿದ್ದ ಒಂದೆರಡು ಕೂದಲುಗಳನ್ನು ಹಿಡಿದು ಎಳೆದು ಕಿತ್ತನು.

ನಂಬಿದ ಭಕ್ತರ ಕೈ ಬಿಡುವುದಿಲ್ಲ ಶ್ರೀ ಕೃಷ್ಣ; ದಿನ ನಿತ್ಯ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದ ಪೂಜಾರಿಗಾಗಿ ಪವಾಡ ಸೃಷ್ಟಿಸಿದ ಮುರಳೀಧರ
ಶ್ರೀ ಕೃಷ್ಣ
Follow us
TV9 Web
| Updated By: ಆಯೇಷಾ ಬಾನು

Updated on: Jan 29, 2022 | 6:35 AM

ಭಕ್ತರಿಗೆ ದೇವರ ಮೇಲೆ ಇದ್ದ ನಂಬಿಕೆ ಪ್ರಾಮಾಣಿಕವಾಗಿದ್ದರೆ, ಭಕ್ತರ ಬೇಡಿಕೆ ನೆರವೇರಿಸಲು ಹೇಗೆ ಬೇಕೋ ಹಾಗೆ ಭಗವಂತ ಒಲಿಯುತ್ತಾನೆ. ಎಲ್ಲರಿಗೂ ತಿಳಿದಿರುವ ಹಾಗೆ ಕೃಷ್ಣನಂತೂ(Lord Krishna), ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ ಭಕ್ತರಿಗೆ ನಾನಾ ಪರೀಕ್ಷೆಗಳನ್ನು ಒಡ್ಡುತ್ತಾನೆ ಮತ್ತು ನಾನಾ ರೂಪಗಳಲ್ಲಿ ಬಂದು ಸಲಹುತ್ತಾನೆ. ಕೃಷ್ಣನ ಮಹಿಮೆಯನ್ನು ಎಷ್ಟು ಹೇಳಿದರೂ ಸಾಲದು. ನಾವಿಂದು ನಿಮಗೆ ಇಂತಹದ್ದೇ ಒಂದು ಸನ್ನಿವೇಶದ ಮೂಲಕ ಕೃಷ್ಣ ಯಾವ ರೀತಿ ತನ್ನ ನಂಬಿದ ಭಕ್ತರನ್ನು ಕಾಪಾಡುತ್ತಾನೆಂದು ತಿಳಿಸಿದ್ದೇವೆ. ಹಿಂದೆ ಒಬ್ಬ ರಾಜನಿದ್ದ. ಕೃಷ್ಣನ ಪರಮ ಭಕ್ತ. ರಾಜ್ಯದಲ್ಲಿ ದೊಡ್ಡದಾದ ಕೃಷ್ಣನ ದೇವಾಲಯವನ್ನು ನಿರ್ಮಿಸುತ್ತಾನೆ. ಸುಂದರವಾದ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಪೂಜೆಗಾಗಿ ಅರ್ಚಕರನ್ನು ನೇಮಿಸುತ್ತಾನೆ. ರಾಜನು ನಿತ್ಯವೂ ಸುಂದರವಾದ ಹೂಮಾಲೆ ತಂದು ಕೃಷ್ಣನಿಗೆ ಅರ್ಪಿಸುತ್ತಿದ್ದ. ಅರ್ಚಕರು ಹೂ ಮಾಲೆಯನ್ನು ಕೃಷ್ಣನಿಗೆ ಹಾಕಿ ಪೂಜಿಸಿ ಮಂಗಳಾರತಿ ಮಾಡಿ ರಾಜನಿಗೆ ಮಂಗಳಾರತಿ ಕೊಟ್ಟು, ಪ್ರಸಾದ ಕೊಡುವಾಗ ಭಗವಂತನ ಅನುಗ್ರಹ ಎಂದು ಆಶೀರ್ವದಿಸಿ ಅದೇ ಹೂ ಮಾಲೆಯನ್ನು ಪ್ರತಿದಿನವೂ ರಾಜನಿಗೆ ಹಾಕುತ್ತಿದ್ದರು.

ರಾಜನು ನೇಮಕ ಮಾಡಿದ ಅರ್ಚಕರು ಶ್ರದ್ಧಾ, ಭಕ್ತಿಯಿಂದ ಕೃಷ್ಣನಿಗೆ ಪೂಜೆ ಮಾಡುತ್ತಿದ್ದರು. ಭಗವಂತನ ಪೂಜೆ ಮಾಡುವ ಕೈಂಕರ್ಯ ಸಿಕ್ಕಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ, ಇದು ಶ್ರೀ ಕೃಷ್ಣನ ದಯೆ ಎಂದುಕೊಂಡು, ಪ್ರತಿದಿನ ಮುಂಜಾನೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಕೃಷ್ಣನ ಪೂಜೆಗೆ ಬೇಕಾದ ಪೂಜಾಸಾಮಗ್ರಿಗಳನ್ನು ಅಣಿಮಾಡಿಕೊಂಡು ಪೂಜೆ ಮಾಡುತ್ತಿದ್ದರು. ರಾಜನು ಸಹ ತಪ್ಪದೇ ಪ್ರತಿದಿನ ಕೃಷ್ಣನ ದರ್ಶನ ಮಾಡಲು ಹೂ ಮಾಲೆಯೊಂದಿಗೆ ಬರುತ್ತಿದ್ದ. ಇದು ನಡೆಯುತ್ತಾ ಹಲವಾರು ವರ್ಷಗಳೇ ಕಳೆಯಿತು. ಅರ್ಚಕರಿಗೆ ಸಾಕಷ್ಟು ವಯಸ್ಸಾಯಿತು. ರಾಜನಿಗೂ ಅನುಭವ, ವಯಸ್ಸು ಆಯಿತು.

ಒಂದು ದಿನ ರಾಜನು ತಾನು ಬರಲು ಆಗುವುದಿಲ್ಲವೆಂದು ಹೂಮಾಲೆಯನ್ನು ಕೊಟ್ಟು ಸೇವಕನ ಮೂಲಕ ಸಂದೇಶವನ್ನು ಅರ್ಚಕರಿಗೆ ಕಳಿಸಿದ. ಅರ್ಚಕರು ಹಾರ ಹಾಕಿ ಪೂಜೆ ಮಾಡಿದರು. ಸಂಜೆಯಾದ ಮೇಲೆ ಕೃಷ್ಣನಿಗೆ ನೈವೇದ್ಯ, ಮಂಗಳಾರತಿ ಮಾಡಿ ಮುಗಿಸಿದರು. ನಿರ್ಮಾಲ್ಯವನ್ನು ತೆಗೆಯುವಾಗ ಹೂವಿನ ಹಾರವನ್ನು ತೆಗೆಯಬೇಕು. ಪ್ರತಿದಿನ ಹೂವಿನ ಹಾರವನ್ನು ರಾಜನಿಗೆ ಹಾಕುತ್ತಿದ್ದರು‌. ಈ ದಿನ ಹೇಗೂ ರಾಜ ಬರುವುದಿಲ್ಲ. ಯಾರಾದರೂ ಹಾರವನ್ನು ಧರಿಸಿದರೆ ಒಳ್ಳೆಯದು.

ರಾಜನಿಗೆ ಸಲ್ಲುತ್ತಿದ್ದ ಹಾರ ಪೂಜಾರಿಗೆ -ಪರೀಕ್ಷಿಸಲು ನಿಂತ ಕೃಷ್ಣ ಅದು ಈ ದಿನ ನಾನೇ ಏಕಾಗಬಾರದು. ನಾನು ಕೃಷ್ಣನ ಪೂಜೆ ಮಾಡುತ್ತಾ ಇಷ್ಟು ವರ್ಷಗಳು ಆಯ್ತು. ಕೃಷ್ಣನಿಗೆ ಹಾಕಿದ ಹಾರವನ್ನು ಒಂದು ದಿನವಾದರೂ ಹಾಕಿಕೊಳ್ಳುವ ಅದೃಷ್ಟ ಬಂದಿಲ್ಲ. ಈ ದಿನ ಅನಾಯಾಸವಾಗಿ ಸಿಕ್ಕಿದೆ. ಇದನ್ನು ಭಗವಂತನೇ ಮಾಡಿದ ಅನುಗ್ರಹ ಎಂದುಕೊಂಡು ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದರು. ಅದೇ ಸಮಯಕ್ಕೆ ರಾಜನ ಸೇವಕ ಬಂದು, ಸ್ವಾಮಿ ರಾಜರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ರಾಜರಿಗೆ ಹಾಕುವ ಹಾರವನ್ನು ತೆಗೆದಿಡಿ ಎಂದು ಹೇಳಿ ಹೋದನು.

ಅರ್ಚಕರಿಗೆ ಇದನ್ನು ಕೇಳಿ ಕೈಕಾಲು ಅದುರಲು ಶುರುವಾಯಿತು. ಅಯ್ಯೋ ಭಗವಂತ ನಿನಗೆ ಹಾಕಿದ ಹೂವಿನ ಹಾರವನ್ನು ಈ ಒಂದು ದಿನವಾದರೂ ಧರಿಸಿಕೊಂಡು ಸಂತೋಷಪಡೋಣ ಎಂದುಕೊಂಡಿದ್ದೆ. ಈಗ ನಾನು ಹಾಕಿಕೊಂಡೆ, ಇದನ್ನೆ ರಾಜನಿಗೆ ಹೇಗೆ ಹಾಕಲಿ, ಎಲ್ಲವೂ ನಿನಗೆ ಬಿಟ್ಟಿದ್ದು ನೀನೇ ಗತಿ ತಂದೆ, ನನ್ನ ಅಪರಾದವನ್ನು ಕ್ಷಮಿಸು ಎಂದು ತಮ್ಮ ಕುತ್ತಿಗೆಯಲ್ಲಿದ್ದ ಹೂಮಾಲೆಯನ್ನು ತೆಗೆದು ಮತ್ತೆ ಕೃಷ್ಣನ ವಿಗ್ರಹಕ್ಕೆ ಹಾಕಿದರು.

ರಾಜಾ ಬಂದ ಕೂಡಲೇ ಮಂಗಳಾರತಿ ಮಾಡಿ ಕೃಷ್ಣನ ಪ್ರಸಾದವೆಂದು ಹಾರವನ್ನು ರಾಜನಿಗೆ ಹಾಕಿದರು. ರಾಜನು ಎಂದಿನಂತೆ ಹಾರವನ್ನು ಕೈಯಲ್ಲಿ ಮುಟ್ಟಿ ನೋಡುತ್ತಿರುವಾಗ ಒಂದು ಬಿಳಿ ಕೂದಲು ಕೈಗೆ ಸಿಕ್ಕಿತು. ತಕ್ಷಣ ಆ ಕೂದಲೆಳೆಯನ್ನು ತೆಗೆದು ಏನು ಅರ್ಚಕರೇ ಹಾರದಲ್ಲಿ ಮನುಷ್ಯರ ಕೂದಲು ಏನಿದರ ಅರ್ಥ. ಇದು ಯಾವ ಕೂದಲು ನಿಜ ಹೇಳಿ ಎಂದು ಗದರಿಸಿದನು. ಏನಾದರಾಗಲಿ ಎಂದು ಧೈರ್ಯದಿಂದ ಅರ್ಚಕರು ಆ ಹಾರದಲ್ಲಿರುವ ಕೂದಲು ಕೃಷ್ಣನದೇ ಎಂದು ಹೇಳಿದರು. ಮತ್ತೆ ಸುಳ್ಳು ಹೇಳುವಿರಾ? ನೀವು ಈ ರೀತಿ ಮಾಡುತ್ತೀರಿ ಎಂದು ನನಗೆ ತಿಳಿದಿರಲಿಲ್ಲ. ಕೂದಲು ಕೃಷ್ಣನದು ಹೇಗೆ ಆಗುತ್ತದೆ. ಕೃಷ್ಣ ದೇವರು ಮನುಷ್ಯರಿಗೆ ಕಾಣಿಸುವುದಿಲ್ಲ.

ಒಂದು ವೇಳೆ ನಿಮ್ಮ ಭಕ್ತಿಗೆ ಮೆಚ್ಚಿ ಕಾಣಿಸಿದರೂ, ದೇವರುಗಳು ಅಮೃತ ಕುಡಿದಿರುತ್ತಾರೆ. ಹಾಗಾಗಿ ಅವರೆಲ್ಲ ಯಾವತ್ತಿಗೂ ಚಿರಯೌವನಿಗರಾಗೆ ಇರುತ್ತಾರೆ. ಹೀಗಿರುವಾಗ ಕೃಷ್ಣನ ತಲೆಯಲ್ಲಿ ಬಿಳಿ ಕೂದಲು ಹೇಗೆ ಬರಲು ಸಾಧ್ಯ. ಈ ಕೂದಲು ನಿಮ್ಮದು. ಇಷ್ಟು ವರ್ಷಗಳು ನಮ್ಮ ಬಳಿ ಇದ್ದು ಪೂಜೆ ಮಾಡಿರುವುದರಿಂದ ನಾಳೆ ನಿಮಗೆ ಒಂದು ಅವಕಾಶ ಕೊಡುತ್ತೇನೆ. ಬೆಳಿಗ್ಗೆ ನಾವೇ ಬಂದು ಪರೀಕ್ಷಿಸುತ್ತೇವೆ. ನೀವು ಹೇಳಿದ್ದು ಸುಳ್ಳಾದರೆ ನಿಮಗೆ ಗಲ್ಲಿನ ಶಿಕ್ಷೆ ಕಾದಿದೆ, ನಾವು ಬಂದ ನಂತರವೇ ನೀವು ಪೂಜೆ ಮಾಡಿ ಎಂದು ಹೇಳಿ ಸಿಟ್ಟಿನಿಂದ ದಾಪುಗಾಲು ಹಾಕುತ್ತಾ ಹೊರಟನು.

ತಪ್ಪಿನ ಅರಿವಾಗಿ ಕೃಷ್ಣನ ಪಾದಕ್ಕೆ ಬಿದ್ದ ಪೂಜಾರಿಗಾಗಿ ಪವಾಡ ಸಂಭವಿಸಿತು ರಾಜನು ಹೋಗುತ್ತಿದ್ದಂತೆ ಅರ್ಚಕರು ಕೃಷ್ಣನ ಪಾದ ಹಿಡಿದುಕೊಂಡು, ಕೃಷ್ಣ ನನ್ನ ಕಥೆ ಮುಗಿಯಿತು. ಭಗವಂತ, ಕೃಷ್ಣಾ ಇದುವರೆಗೂ ಒಂದೇ ಒಂದು ಲೋಪ- ದೋಷಗಳನ್ನು ಮಾಡದೆ ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿಕೊಂಡು ಬಂದಿದ್ದೆ. ಈ ದಿನ ಯಾವುದೋ ಮೋಹಪಾಶಕ್ಕೆ ಸಿಲುಕಿ ಮಣ್ಣು ತಿನ್ನುವ ಕೆಲಸ ಮಾಡಿದ್ದೇನೆ. ಈ ಕೊನೆಗಾಲದಲ್ಲಿ ಇಂತಹ ದುರ್ಬುದ್ಧಿ ನನಗೇಕೆ ಬಂತೊ ನಾನರಿಯೇ. ವಾಸುದೇವ ಗೊತ್ತಿಲ್ಲದೇ ಮಾಡಿದ ಅಪರಾಧವನ್ನು ನೀನೇ ಸರಿಪಡಿಸಬೇಕು. ಇಷ್ಟು ವರ್ಷ ನಿನ್ನ ಸೇವೆ ಪ್ರೀತಿಯಿಂದ ಮಾಡಿ ಕೊನೆಗಾಲದಲ್ಲಿ ಸುಳ್ಳು ಹೇಳಿದೆ. ನನ್ನ ಅಪರಾದಕ್ಕೆ ಗಲ್ಲು ಶಿಕ್ಷೆಗೆ ಗುರಿಯಾಗಬೇಕಾಯಿತೇ, ಅನಾಥರಕ್ಷಕ, ಆಪದ್ಬಾಂಧವ, ನೀನು ಕಾಪಾಡದಿದ್ದರೆ ನನಗಿನ್ನಾರು ಇಲ್ಲ. ಕೃಷ್ಣಾ ಇದೊಂದು ಸಲ ಅಪರಾಧದಿಂದ ಪಾರುಮಾಡು. ನನ್ನ ಕೊನೆ ಉಸಿರು ಇರುವ ತನಕ ತಪ್ಪು ಮಾಡುವುದಿಲ್ಲ. ಹೀಗೆ ಇನ್ನಿಲ್ಲದಂತೆ ಪ್ರಾರ್ಥಿಸುತ್ತಾ ಭಗವಂತನ ಪಾದದಡಿಯಲ್ಲಿ ಕುಳಿತೇ ರಾತ್ರಿ ಕಳೆದು ಬೆಳಗಾಯಿತು.

ಆಡಿದ ಮಾತಿನಂತೆ ಮುಂಜಾನೆಯೇ ಪರಿವಾರದೊಂದಿಗೆ ರಾಜನು ಬಂದನು. ಅರ್ಚಕರು ಹೆದರಿ ನಡುಗುವ ಗುಬ್ಬಿಯಂತೆ ಮೂಲೆಯಲ್ಲಿ ನಿಂತಿದ್ದರು. ರಾಜನು ಬಂದವನೇ ಕೃಷ್ಣನ ವಿಗ್ರಹದ ಮೇಲಿರುವ ಕಿರೀಟವನ್ನು ತೆಗೆದನು. ಏನಾಶ್ಚರ್ಯ ಕೃಷ್ಣನ ತಲೆಯ ತುಂಬಾ ಬಿಳಿಕೂದಲು ಕಾಣಿಸಿತು. ರಾಜನಿಗೆ ನಂಬಿಕೆ ಬರಲಿಲ್ಲ. ಈ ಪೂಜಾರಿ ಏನಾದರೂ ಕಿತಾಪತಿ ಮಾಡಿದ್ದಾನೆ ಎಂದುಕೊಂಡು ಕೃಷ್ಣನ ತಲೆಯಲ್ಲಿದ್ದ ಒಂದೆರಡು ಕೂದಲುಗಳನ್ನು ಹಿಡಿದು ಎಳೆದು ಕಿತ್ತನು. ರಾಜನು ಹಿಡಿದಷ್ಟು ಕೂದಲು ಕೈಗೆ ಬಂದಿತು. ನೋಡನೋಡುತ್ತಿದ್ದಂತೆ ಕೃಷ್ಣನ ಕೂದಲು ಕಿತ್ತಿರುವ ಜಾಗದಲ್ಲಿ ರಕ್ತ ಬರಲು ಶುರುವಾಯಿತು.

ರಾಜನು ಇದ್ದಕ್ಕಿದ್ದಂತೆ ಭೂಕಂಪವಾಗಿ ಭೂಮಿ ಬಿರಿದಂತೆ ನಡುಗಿ ಬೆವರತೊಡಗಿದ. ಗಾಬರಿಯಿಂದ ಒಂದೇ ಸಲಕ್ಕೆ ಮುಂದೆ ಬಂದು, ಕೃಷ್ಣನ ಪಾದಗಳನ್ನು ಹಿಡಿದು ಕೃಷ್ಣಾ ನನ್ನ ಅಪರಾಧವನ್ನು ಮನ್ನಿಸು. ಯಾವುದೋ ಆವೇಶದಲ್ಲಿ ಕ್ಷಣ ಮೈಮರೆತು ದುಡುಕಿ ಮಾತನಾಡಿದೆ. ಕೃಷ್ಣಾ ನೀನೇ ಮನ್ನಿಸು ದೇವಾ ಎಂದು ಕೃಷ್ಣನ ಪಾದಗಳಲ್ಲಿ ಹಣೆ ಚಚ್ಚಿಕೊಂಡು ಅಳತೊಡಗಿದ. ಇಷ್ಟಾಗುವ ವೇಳೆಗೆ ಇಡೀ ದೇವಸ್ಥಾನವೇ ಮೂಕವಿಸ್ಮಿತರಾಗಿ ನೋಡುತ್ತಿದ್ದರು. ಆಗ ಅಶರೀರವಾಣಿ ಮೊಳಗಿತು. ರಾಜನೇ ನೀನು ಇದುವರೆಗೂ ನನ್ನನ್ನು ದೇವಸ್ಥಾನದಲ್ಲಿರುವ ಒಂದು ದೇವರ ವಿಗ್ರಹವೆಂದೇ ತಿಳಿದಿದ್ದಿ. ಆದರೆ ಪೂಜೆ ಮಾಡುವ ಅರ್ಚಕ ನನ್ನನ್ನು ಸಾಕ್ಷಾತ್ ಕೃಷ್ಣನೇ ಇದರೊಳಗಿರುವನು ಎಂದು ಭಾವಿಸಿ ವಿಗ್ರಹವನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದ.

ಮನುಷ್ಯರು ಸ್ನಾನ ಮಾಡುವಂತೆ ಅಭಿಷೇಕ ಮಾಡುತ್ತಿದ್ದ. ತಾನು ಆಹಾರ ಸೇವಿಸುವ ಕ್ರಮದಂತೆ ನನಗೂ ನೈವೇದ್ಯ ಮಾಡುತ್ತಿದ್ದ, ಈ ದಿನವೂ ನನಗೆ ಹಾಕಿದ ಹೂವಿನ ಹಾರವನ್ನು ತಾನು ಧರಿಸಿ ಸಂತೋಷಪಟ್ಟನು. ನೀನು ಹೂವಿನ ಹಾರವನ್ನು ಪ್ರಸಾದವೆಂದು ಸ್ವೀಕರಿಸುತ್ತಿದ್ದೆ. ಆದರೆ ಅರ್ಚಕನು ನಾನು ಹಾಕಿಕೊಂಡ ಪವಿತ್ರ ಮಾಲೆ ಎಂದು ತಿಳಿದಿದ್ದ. ವಿಗ್ರಹದೊಳಗೆ ನನ್ನ ಇರುವಿಕೆಯನ್ನು ಗ್ರಹಿಸಿಕೊಂಡು ಪೂಜಿಸುತ್ತಿದ್ದ ಅವನ ಭಕ್ತಿಗೆ ನಾನು ಮನಸೋತೆ ಎಂದು ಅಶರೀರವಾಣಿ ನಿಂತಿತು. ಇದನ್ನು ಕೇಳಿದ ರಾಜನು ತನ್ನ ಭ್ರಮೆಯಿಂದ ಹೊರಗೆ ಬಂದು ಅರ್ಚಕನಿಗೆ ಕೈಮುಗಿದು ತಪ್ಪನ್ನು ಕ್ಷಮಿಸುವಂತೆ ಬೇಡಿಕೊಂಡನು. ಉಳಿದಂತೆ ಎಲ್ಲವೂ ಸುಖಾಂತ್ಯ ಕಂಡಿತು.

ಇದನ್ನೂ ಓದಿ: ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುವುದೇಕೆ? ಇಲ್ಲಿದೆ ಒಲಿಸಿಕೊಳ್ಳುವ ಸೂತ್ರ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ