ಭಗವಾನ್ ವಿಷ್ಣುವಿನ ಅವತಾರವಾದ ಶ್ರೀರಾಮನು ಜನಿಸಿದ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಶ್ರೀ ರಾಮಚಂದ್ರನ ಹುಟ್ಟುಹಬ್ಬ ಮಾತ್ರವಲ್ಲದೇ, ಸೀತಾ ಮಾತೆಯೊಂದಿಗಿನ ವಿವಾಹ ಮತ್ತು ಶ್ರೀ ರಾಮಪಟ್ಟಾಭಿಷೇಕದ ದಿನವಾಗಿಯೂ ಆಚರಿಸಲಾಗುತ್ತದೆ. ಈ ವಿಶೇಷ ದಿನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯಂದು ನಡೆಯುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಈ ದಿನ ಶ್ರೀರಾಮನ ಭಕ್ತರು ಉಪವಾಸ ಕೈಗೊಂಡು ರಾಮಾಯಣವನ್ನು ಪಠಿಸುತ್ತಾರೆ, ಭಜನೆಗಳನ್ನು ಮಾಡುತ್ತಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಶುಕ್ಲಪಕ್ಷ ನವಮಿ ತಿಥಿ ಏಪ್ರಿಲ್ 5 ರ ಸಂಜೆ 7:26 ಗಂಟೆಗೆ ಪ್ರಾರಂಭವಾಗುತ್ತದೆ. ಈ ತಿಥಿ ಏಪ್ರಿಲ್ 6 ರಂದು ಸಂಜೆ 7:22 ಗಂಟೆಗೆ ಮುಕ್ತಾಯವಾಗುತ್ತದೆ. ಹಿಂದೂ ಧರ್ಮದಲ್ಲಿ ಉದಯತಿಥಿಯನ್ನು ಪ್ರಾಥಮಿಕವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ, ಈ ವರ್ಷ 2025 ರಲ್ಲಿ ಶ್ರೀ ರಾಮ ನವಮಿ ಏಪ್ರಿಲ್ 6 ರಂದು ನಡೆಯಲಿದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಕೋಸಲ ರಾಜ ದಶರಥನಿಗೆ ಮೂವರು ಹೆಂಡತಿಯರಿದ್ದರು. ಆದರೆ ಅವನಿಗೆ ಗಂಡು ಮಕ್ಕಳಿರಲಿಲ್ಲ. ಆದ್ದರಿಂದ ರಾಜ ದಶರಥನು ಮಹಾ ಋಷಿ ವಸಿಷ್ಠರ ಸಲಹೆಯ ಮೇರೆಗೆ ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಾಗವನ್ನು ಮಾಡಿದನು.ಬಳಿಕ ಅವರು ಆಶೀರ್ವದಿಸಿದ ಪಾಯಸವನ್ನು ಅವನ ಹೆಂಡತಿಯರಿಗೆ ಕೊಡಲು ಹೇಳಿದರು. ಬಳಿಕ ಪ್ರಸಾದವನ್ನು ಸೇವಿಸಿದ ನಂತರ, ಪ್ರತಿಯೊಬ್ಬ ರಾಣಿಯೂ ಗರ್ಭಧರಿಸುತ್ತಾರೆ. ಕೌಸಲ್ಯೆಯು ರಾಮನಿಗೆ ಜನ್ಮವನ್ನು ನೀಡಿದರೆ, ಕೈಕೇಯಿಯು ಭರತನಿಗೆ ಜನ್ಮ ನೀಡುತ್ತಾಳೆ ಮತ್ತು ಸುಮಿತ್ರೆಯು ಲಕ್ಷ್ಮಣ ಹಾಗೂ ಶತ್ರುಘ್ನನಿಗೆ ಜನ್ಮವನ್ನು ನೀಡಿದಳು. ಅಂದಿನಿಂದ ಭಗವಾನ್ ಶ್ರೀ ರಾಮನ ಜನ್ಮ ದಿನವನ್ನು ವಿಶ್ವದಾದ್ಯಂತ ಹಿಂದೂ ಭಕ್ತರು ಬಹಳ ವೈಭವದಿಂದ ಆಚರಿಸುತ್ತಾರೆ.
ಇದನ್ನೂ ಓದಿ: ರಾಮ ನವಮಿಯಂದು ಈ ವಸ್ತುಗಳನ್ನು ಮನೆಗೆ ತರುವುದು ತುಂಬಾ ಒಳ್ಳೆಯದು!
ಶ್ರೀ ರಾಮ ನವಮಿ ಹಬ್ಬವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಧರ್ಮವನ್ನು ಸ್ಥಾಪಿಸಲು ಮತ್ತು ಅಧರ್ಮವನ್ನು ನಾಶಮಾಡಲು ಮಾನವನಾಗಿ ಶ್ರೀ ಮಹಾವಿಷ್ಣು ಅವತಾರಗೊಂಡ ಆರನೇ ಅವತಾರವು ಶ್ರೀ ರಾಮನು. ಈ ದಿನ ಭಕ್ತರು ರಾಮಾಯಣ, ರಾಮಚರಿತಮಾನಸ್ ಅನ್ನು ಪಠಿಸುತ್ತಾರೆ. ಭಗವಾನ್ ರಾಮನನ್ನು ಆದರ್ಶ ಮಾನವ, ನೀತಿ, ಶೌರ್ಯ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ. ವಿಶ್ವದಾದ್ಯಂತ ಎಲ್ಲಾ ಶ್ರೀ ರಾಮ ಭಕ್ತರು ಈ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಮುಖ್ಯವಾಗಿ ರಾಮ ಲಲ್ಲಾ ಜನಿಸಿದ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ಆ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಶ್ರೀ ರಾಮನ ದರ್ಶನ ಪಡೆಯುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ