Ram Navami
ಪ್ರಭು ಶ್ರೀರಾಮಚಂದ್ರ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ರಾಮ ನವಮಿ ಹಬ್ಬದ ಜೊತೆಗೆ ಚೈತ್ರ ನವರಾತ್ರಿ ಕೊನೆಯ ದಿನ. ವಿಷ್ಣುವು ರಾಮನವಮಿಯಂದು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಹಾಗಾಗಿಯೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಜ ದಶರಥನಿಗೆ ಮೂವರು ಹೆಂಡತಿಯರಿದ್ದರು ಆದರೆ ಅವನಿಗೆ ಮಕ್ಕಳಿರಲಿಲ್ಲ, ಆದ್ದರಿಂದ ರಾಜ ದಶರಥನು ಮಹಾ ಋಷಿ ವಸಿಷ್ಠರ ಸಲಹೆಯ ಮೇರೆಗೆ ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಾಗವನ್ನು ಮಾಡಿದನು. ಬಳಿಕ ಅವರು ಆಶೀರ್ವದಿಸಿದ ಪಾಯಸವನ್ನು ಅವನ ಹೆಂಡತಿಯರಿಗೆ ಕೊಡಲು ಹೇಳಿದರು. ಬಳಿಕ ದಶರಥನ ಹೆಂಡತಿಯರು 4 ಗಂಡು ಮಕ್ಕಳ ತಾಯಿಯಾದರು. ಅದರಲ್ಲಿ ಮೊದಲನೇಯವನು ರಾಮ. ಕೌಸಲ್ಯಳು ಚೈತ್ರ ಮಾಸದ ಒಂಬತ್ತನೇ ದಿನದಂದು ಭಗವಾನ್ ರಾಮನಿಗೆ ಜನ್ಮ ನೀಡಿದಳು. ಸುಮಿತ್ರಾ ಶತ್ರುಘ್ನ ಮತ್ತು ಲಕ್ಷ್ಮಣನಿಗೆ ಜನ್ಮ ನೀಡಿದಳು, ಕೈಕೇಯಿ ಭರತನಿಗೆ ಜನ್ಮ ನೀಡಿದಳು. ಅಂದಿನಿಂದ ಭಗವಾನ್ ಶ್ರೀ ರಾಮನ ಜನ್ಮ ದಿನವನ್ನು ವಿಶ್ವದಾದ್ಯಂತ ಹಿಂದೂ ಭಕ್ತರು ಬಹಳ ವೈಭವದಿಂದ ಆಚರಿಸುತ್ತಾರೆ