Rama Navami 2025: ರಾಮ ನವಮಿ ಹಬ್ಬಕ್ಕೆ ಈ ರೀತಿ ಮನೆಯಲ್ಲೇ ಸಿಂಪಲ್ಲಾಗಿ ಕೋಸಂಬರಿ-ಪಾನಕ ತಯಾರಿಸಿ
ನಂಬಿಕೆಗಳ ಪ್ರಕಾರ ಶ್ರೀರಾಮನು ಚೈತ್ರ ಮಾಸದ ನವಮಿಯಂದು ಜನಿಸಿದನು ಎಂದು ಹೇಳಲಾಗುತ್ತದೆ. ಅದಕ್ಕಾಗಿ ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ದೇಶಾದ್ಯಂತ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 06 ಭಾನುವಾರದಂದು ಆಚರಿಸಲಾಗುತ್ತಿದ್ದು, ಈ ವಿಶೇಷ ದಿನ ದೇವರ ನೈವೇದ್ಯಕ್ಕೆ ಮನೆಯಲ್ಲಿಯೇ ಸಿಂಪಲ್ಲಾಗಿ ಕೋಸಂಬರಿ, ಪಾನಕ ತಯಾರಿಸಿ. ಈ ರೆಸಿಪಿ ಮಾಡೋದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ (Navami) ದಿನದಂದು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದ (Sri Ramachandra) ಜನ್ಮ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ಈ ವಿಶೇಷ ಶ್ರೀ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಜೊತೆಗೆ ಕರ್ನಾಟಕ (Karnataka) ಸೇರಿದಂತೆ ದಕ್ಷಿಣ ಭಾರತದ (South India) ಇನ್ನಿತರ ರಾಜ್ಯಗಳಲ್ಲಿ ರಾಮ ನವಮಿ (Ram Navami) ದಿನದಂದು ಬೆಲ್ಲದ ಪಾನಕ(Panaka), ನೀರು ಮಜ್ಜಿಗೆ ಮತ್ತು ಕೋಸಂಬರಿ (Kosambari) ತಯಾರಿಸುವುದು ವಾಡಿಕೆ. ಮತ್ತು ದೇವಾಲಯಗಳಿಗೆ (temple) ಭೇಟಿ ನೀಡುವ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿಯನ್ನು ವಿತರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 6 ಭಾನುವಾರದಂದು ರಾಮ ನವಮಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ದಿನ ಮನೆಯಲ್ಲೇ ಸಿಂಪಲ್ಲಾಗಿ ಕೋಸಂಬರಿ, ಪಾನಕ ತಯಾರಿಸಿ. ಇಲ್ಲಿದೆ ರೆಸಿಪಿ (recipe) ಮಾಹಿತಿ.
ರಾಮ ನವಮಿ ಪಾನಕ:
ರಾಮ ನವಮಿ ಹಬ್ಬದಂದು ನೈವೇದ್ಯವಾಗಿ ಹಾಗೂ ಭಕ್ತರಿಗೆ ಪ್ರಸಾದವಾಗಿ ಪಾನಕವನ್ನು ವಿತರಿಸಲಾಗುತ್ತದೆ. ಸಾಮಾನ್ಯವಾಗಿ ಚೈತ್ರ ಮಾಸದ ಸಮಯದಲ್ಲಿ ವಿಪರೀತ ಬಿಸಿಲಿರುವ ಕಾರಣ ದೇಹಕ್ಕೆ ತಂಪು ಎಂಬ ಕಾರಣಕ್ಕೆ ಪಾನಕವನ್ನು ಹಂಚಲಾಗುತ್ತದೆ. ಜೊತೆಗೆ ಇದು ವಿಷ್ಣುವಿಗೆ ಪ್ರಿಯವಾದ ಪಾನೀಯವಾಗಿರುವುದರಿಂದ ರಾಮ ನವಮಿ ದಿನ ದೇವರಿಗೆ ಪಾನಕವನ್ನೇ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ಬೆಲ್ಲದ ಪಾನಕ ಬೇಕಾಗುವ ಸಾಮಾಗ್ರಿಗಳು:
ನೀರು, ಬೆಲ್ಲ, ಕಾಳು ಮೆಣಸಿನ ಪುಡಿ, ಶುಂಠಿ ಪುಡಿ, ನಿಂಬೆ ರಸ, ಏಲಕ್ಕಿ ಪುಡಿ
ತಯಾರಿಸುವ ವಿಧಾನ:
ರಾಮ ನವಮಿಯ ವಿಶೇಷ ಬೆಲ್ಲದ ಪಾನಕವನ್ನು ತಯಾರಿಸಲು ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ನಿಮ್ಮ ಅಳತೆಗೆ ತಕ್ಕಷ್ಟು ಅದಕ್ಕೆ ನೀರನ್ನು ಹಾಕಿ, ನಂತರ ಆ ನೀರಿಗೆ ತುರಿದ ಅಥವಾ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ, ಅದು ಕರಗುವರೆಗೂ ಬೆರೆಸಿ. ನಂತರದಲ್ಲಿ ಅದಕ್ಕೆ ನಿಂಬೆ ರಸ, ಕಾಳು ಮೆಣಸಿನ ಪುಡಿ, ಶುಂಠಿ ಪುಡಿ, ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿದರೆ ಪಾನಕ ರೆಡಿ. ನೀವು ನಿಂಬೆ ರಸದ ಬದಲಿಗೆ ಇದಕ್ಕೆ ಹುಣಸೆ ರಸವನ್ನು ಕೂಡಾ ಸೇರಿಸಬಹುದು. ಜೊತೆಗೆ ನೀವು ಬೇಲದ ಹಣ್ಣು, ಕರ್ಬೂಜ ಹಣ್ಣಿನ ಪಾನಕವನ್ನು ಸಹ ತಯಾರಿಸಬಹುದು.
ಇದನ್ನೂ ಓದಿ: ವಿವಾಹದಲ್ಲಿ ಅಡೆತಡೆ ಅಥವಾ ವಿಳಂಬವಾಗುತ್ತಿದೆಯೇ? ರಾಮನವಮಿಯಂದು ಈ ಪರಿಹಾರ ಮಾಡಿ
ಕೋಸಂಬರಿ:
ಕೋಸಂಬರಿ ಕೂಡಾ ರಾಮ ನವಮಿ ಹಬ್ಬದ ಒಂದು ಪ್ರಮುಖ ನೈವೇದ್ಯವಾಗಿದೆ. ಹೆಚ್ಚಿನ ಕಡೆಗಳಲ್ಲಿ ಈ ದಿನ ಪಾನಕದ ಜೊತೆ ಭಕ್ತಾಧಿಗಳಿಗೆ ಕೋಸಂಬರಿಯನ್ನು ಕೂಡಾ ವಿತರಿಸಲಾಗುತ್ತದೆ. ಪ್ರಮುಖವಾಗಿ ಕೋಸಂಬರಿಯನ್ನು ಹೆಸರು ಬೇಳೆಯಿಂದ ತಯಾರು ಮಾಡಲಾಗುತ್ತದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದರಿಂದ ಈ ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಉಂಟಾಗದಂತೆ ಕಾಪಾಡಲು ಕೋಸಂಬರಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಕೋಸಂಬರಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಹೆಸರುಬೇಳೆ, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಹಸಿ ಮೆಣಸಿನ ಕಾಯಿ, ದಾಳಿಂಬೆ ಬೀಜ, ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಚೆನ್ನಾಗಿ ತೊಳೆದು ಮೂರು ಅಥವಾ ಅದಕ್ಕಿಂತ ಹೆಚ್ಚು ಕಾಲ ಹೆಸರುಬೇಳೆಯನ್ನು ನೆನೆಸಿಡಿ. ನಂತರ ಅದರ ನೀರನ್ನು ಸೋಸಿ, ಅ ಹೆಸರುಬೇಳೆಯನ್ನು ಇನ್ನೊಂದು ಪಾತ್ರೆಗೆ ವರ್ಗಾಯಿಸಿ ಅದಕ್ಕೆ ತುರಿದ ಕ್ಯಾರೆಟ್, ಸಣ್ಣಗೆ ಹೆಚ್ಚಿದ ಹಸಿ ಮೆಣಸು, ತೆಂಗಿನಕಾಯಿ ತುರಿ, ದಾಳಿಂಬೆ ಬೀಜ ಉಪ್ಪು ಈ ಎಲ್ಲವನ್ನೂ ಸೇರಿಸಿ ಮಿಶ್ರಣ ಮಾಡಿ. ಕೊನೆಯನ್ನು ನಿಂಬೆ ರಸವನ್ನು ಕೂಡಾ ಇದಕ್ಕೆ ಸೇರಿಸಬಹುದು. ಇದಲ್ಲದೆ ಹಣ್ಣುಗಳ ಹಾಗೂ ಸೌತೆಕಾಯಿಯಂತಹ ತರಕಾರಿಯಿಂದಲೂ ಕೋಸಂಬರಿ ತಯಾರಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ