Rama Navami 2025: ರಾಮನವಮಿ ಹಬ್ಬಕ್ಕೆ ಸುಲಭವಾಗಿ ಮಾಡಿ ಕ್ಯಾರೆಟ್ ಪಾಯಸ
ಚೈತ್ರ ನವರಾತ್ರಿಯ ಕೊನೆಯ ದಿನವಾದ ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಾಗಾಗಿ ಈ ದಿನ ಕೋಸಂಬರಿ, ಪಾನಕ ಜೊತೆಗೆ ವಿವಿಧ ರೀತಿಯ ತಿಂಡಿ, ತಿನಿಸುಗಳನ್ನು ಮಾಡುವ ಮೂಲಕ ದೇವರಿಗಿಟ್ಟು ಊಟ ಮಾಡುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಆದರೆ ಒಂದೇ ಬಗೆಯ ಖಾದ್ಯಗಳನ್ನು ಮಾಡುವ ಬದಲು ಸರಳವಾಗಿ ಮತ್ತು ರುಚಿಯಾಗಿ ಮಾಡುವ ಸಿಹಿ ತಿನಿಸುಗಳನ್ನು ಟ್ರೈ ಮಾಡಿ, ಪಾಕವಿಧಾನ ಇಲ್ಲಿದೆ.

ಹಿಂದೂಗಳಿಗೆ ಯುಗಾದಿ (Ugadi festival) ವರುಷದ ಮೊದಲ ಹಬ್ಬ ಅದರ ನಂತರ ಬರುವ ಹಬ್ಬವೇ ರಾಮನವಮಿ (Rama Navami). ಹಾಗಾಗಿ ಸಂಭ್ರಮ ಬಹಳ ಹೆಚ್ಚಾಗಿಯೇ ಇರುತ್ತದೆ. ಕೋಟ್ಯಾಂತರ ಭಕ್ತರು ರಾಮನನ್ನು ಪೂಜಿಸಿ, ಆರಾಧಿಸುತ್ತಾರೆ. ಈ ಬಾರಿ ಏ. 06 ಭಾನುವಾರದಂದು ಈ ದಿನವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಹಾಗಾಗಿ ರಾಮನ ನೈವೇದ್ಯಕ್ಕೆ ಕೋಸಂಬರಿ, ಪಾನಕ ಜೊತೆಗೆ ವಿಶೇಷ ತಿಂಡಿ, ತಿನಿಸುಗಳನ್ನು ಮಾಡಲು ಬಯಸುವವರು ಈ ಪಾಯಸದ ರೆಸಿಪಿಯನ್ನು ಟ್ರೈ ಮಾಡಬಹುದು. ಅದರಲ್ಲಿಯೂ ಮದುವೆಯಾಗಿ ದೂರದ ಊರುಗಳಲ್ಲಿ ಇರುವವರಿಗೆ, ಸರಳವಾಗಿ ತಯಾರಾಗುವ, ಹೆಚ್ಚು ರುಚಿ ನೀಡುವ ಸಿಹಿ ತಿಂಡಿಗಳನ್ನು ಮಾಡುವುದು ಬಹಳ ಅನುಕೂಲಕರವಾಗಿರುತ್ತದೆ. ಅಂತವರಿಗಾಗಿ ಸರಳವಾಗಿ ಮಾಡಬಹುದಾದ ಕ್ಯಾರೆಟ್ ಪಾಯಸದ (Carrot Payasam) ವಿಧಾನವನ್ನು Xtra Flavours ಎಂಬ ಅಡುಗೆ ವ್ಲಾಗ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಅದರ ಪಾಕವಿಧಾನ ಇಲ್ಲಿದೆ.
ಈ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು:
1/4 ಬಾಸುಮತಿ ಅಕ್ಕಿ
ಕ್ಯಾರೆಟ್ – 1
ತುಪ್ಪ – 2 ಚಮಚ
ದ್ರಾಕ್ಷಿ, ಗೋಡಂಬಿ- 10 ರಿಂದ 12
ಹಾಲು – 1/2 ಲೀ.
ಏಲಕ್ಕಿ – 2
ಸಕ್ಕರೆ – 1 ಕಪ್
ಇದನ್ನೂ ಓದಿ: ರಾಷ್ಟ್ರೀಯ ಕಡಲ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಮಹತ್ವವನ್ನು ತಿಳಿಯಿರಿ
ಪಾಯಸ ಮಾಡುವ ವಿಧಾನ:
ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಗಂಟೆ ನೀರಿನಲ್ಲಿ ಚೆನ್ನಾಗಿ ನೆನಸಿಡಿ. ಬಳಿಕ ನೀರನ್ನು ಬಸಿದು ಅದನ್ನು ತರಿತರಿಯಾಗಿ ಮಿಕ್ಸಿಯಲ್ಲಿ ಪೌಡರ್ ಮಾಡಿಕೊಳ್ಳಿ. ಬಳಿಕ ಒಂದು ಕ್ಯಾರೆಟ್ ತೆಗೆದುಕೊಂಡು ಅದನ್ನು ಸಣ್ಣಗೆ ಹೆಚ್ಚಿಕೊಂಡು ನಾಲ್ಕರಿಂದ, ಐದು ನಿಮಿಷ ಬೇಯಿಸಿಕೊಳ್ಳಿ. ಬಳಿಕ ಈ ಕ್ಯಾರೆಟ್ ಸ್ವಲ್ಪ ತಣಿಯುವ ವರೆಗೆ ಬಿಟ್ಟು ಬಳಿಕ ಅದನ್ನು ಕೂಡ ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ಬಾಣಲೆಗೆ ಎರಡು ಚಮಚ ತುಪ್ಪ ಹಾಕಿಕೊಂಡು ಬಿಸಿಯಾದ ಮೇಲೆ ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಕೆಂಪಗಾಗುವ ವರೆಗೆ ಸರಿಯಾಗಿ ಹುರಿದುಕೊಳ್ಳಿ. ಬಳಿಕ ಅದನ್ನು ಬದಿಗೆ ತೆಗೆದಿರಿಸಿಕೊಳ್ಳಿ. ನಂತರ ಅದೇ ಪಾತ್ರೆಗೆ ಅರ್ಧ ಲೀ. ಹಾಲನ್ನು ಹಾಕಿ ಸಣ್ಣಗೆ ಕುದಿ ಬರುವಾಗ ಅದಕ್ಕೆ ಪುಡಿಮಾಡಿಟ್ಟುಕೊಂಡ ಏಲಕ್ಕಿಯನ್ನು ಹಾಕಿಕೊಳ್ಳಿ. ಬಳಿಕ ಮೊದಲೇ ಪುಡಿ ಮಾಡಿಟ್ಟಿರುವ ಅಕ್ಕಿ ಮಿಶ್ರಣವನ್ನು ಹಾಲಿಗೆ ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಚೆನ್ನಾಗಿ ಕಲಿಸಿ ಅದು ಬೇಯುವವರೆಗೆ ಬಿಡಿ. ಅಕ್ಕಿ ಬೆಂದ ಮೇಲೆ ಅದಕ್ಕೆ ಸಕ್ಕರೆಯನ್ನು ಸೇರಿಸಿ ಬಳಿಕ ಅದಕ್ಕೆ ರುಬ್ಬಿಟ್ಟುಕೊಂಡ ಕ್ಯಾರೆಟ್ ಸೇರಿಸಿ ಕುದಿಸಿರಿ. ಬಳಿಕ ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿಯನ್ನು ಕೂಡ ಸೇರಿಸಿಕೊಳ್ಳಿ. ಬೇಕಾದಲ್ಲಿ ಮಿಲ್ಕ್ ಪೌಡರ್ ಅನ್ನು ಕೂಡ ಸೇರಿಸಬಹುದು. ಈ ರೀತಿ ಮಾಡಿದಲ್ಲಿ ಬಿಸಿಬಿಸಿಯಾದ ಪಾಯಸ ಸವಿಯಲು ಸಿದ್ದವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Sat, 5 April 25