Personality Test: ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
ಈ ಸೃಷ್ಟಿಯಲ್ಲಿರುವ ಪ್ರತಿಯೊಬ್ಬರು ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವನಶೈಲಿ, ಸ್ವಭಾವ ಮತ್ತು ನಡವಳಿಕೆಯು ಭಿನ್ನವಾಗಿರುತ್ತದೆ. ಹೀಗಾಗಿ ವ್ಯಕ್ತಿಯ ಪರಿಚಯವಾದಾಗ ಆತ ಹೇಗೆ ಎಂದು ತಿಳಿದುಕೊಳ್ಳಲು ವ್ಯಕ್ತಿಯೊಂದಿಗೆ ಬೆರೆಯುತ್ತೇವೆ. ಸನ್ನಿವೇಶ ಹಾಗೂ ಸಂದರ್ಭಕ್ಕೆ ವರ್ತಿಸುವುದನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಹೀಗೆಯೇ ಎನ್ನುವ ನಿರ್ಧಾರಕ್ಕೆ ಬರುತ್ತೇವೆ. ಆದರೆ ದೇಹದ ಅಂಗಗಳು ಎಷ್ಟೋ ಬಾರಿ ನಮಗೆ ಗೊತ್ತಿಲ್ಲದ ಗುಣಸ್ವಭಾವವನ್ನು ಬಹಿರಂಗ ಪಡಿಸುತ್ತದೆ. ದೇಹದ ಆಕಾರ ನೋಡಿಯೂ ವ್ಯಕ್ತಿತ್ವ ನಿರ್ಧರಿಸಬಹುದಂತೆ. ನೀವು ದಪ್ಪಗೆ ಇದ್ದೀರಾ, ತೆಳ್ಳಗೆ ಇದ್ದೀರಾ ಹಾಗೂ ನಿಮ್ಮ ದೇಹದ ಆಕಾರ ಹೇಗಿದೆ ಎನ್ನುವುದರಿಂದ ವ್ಯಕ್ತಿತ್ವ ಹಾಗೂ ಗುಣಸ್ವಭಾವ ಅರಿತುಕೊಳ್ಳಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಹದ ಅಂಗಗಳು ಹೇಗಿವೆ ಎಂಬುದರ ಮೇಲೆ ವ್ಯಕ್ತಿತ್ವ (Personality) ನಿರ್ಧಾರವಾಗುತ್ತದೆ. ಹೌದು, ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿ, ತುಟಿ, ಮೂಗು, ಕಣ್ಣು, ಹಣೆ, ಕಿವಿ, ಗಲ್ಲ ಹಾಗೂ ಹುಬ್ಬುವಿನ ಆಕಾರದಿಂದಲೂ ನಿಗೂಢ ವ್ಯಕ್ತಿತ್ವ ತಿಳಿದುಕೊಳ್ಳಬಹುದು. ಇನ್ನು, ಎಲ್ಲರ ದೇಹ ಆಕಾರ (body shape) ವು ಒಂದೇ ರೀತಿ ಇರುವುದಿಲ್ಲ. ಕೆಲವರು ತೆಳ್ಳಗೆ ಇದ್ದರೆ, ಇನ್ನು ಕೆಲವರು ದಪ್ಪಗೆ ಇರುತ್ತದೆ. ಸಾಮಾನ್ಯವಾಗಿ ಎಕ್ಟೋಮಾರ್ಫಿಕ್ (ectomorphic), ಮೆಸೊಮಾರ್ಫ್ (mesomorphic) ಹಾಗೂ ಎಂಡೋಮಾರ್ಫಿಕ್ (endomorphic) ಮೂರು ದೇಹ ಪ್ರಕಾರಗಳಿವೆ. ಈ ದೇಹದ ಆಕಾರವೇ ರಹಸ್ಯಮಯ ಗುಣ ಸ್ವಭಾವ ಬಿಚ್ಚಿಡುತ್ತಯಂತೆ.
- ಎಕ್ಟೋಮಾರ್ಫಿಕ್ ಬಾಡಿ ಶೇಪ್ : ಎಕ್ಟೋಮಾರ್ಫಿಕ್ ಬಾಡಿ ಶೇಪ್ ಹೊಂದಿರುವ ವ್ಯಕ್ತಿಗಳು ತೆಳ್ಳಗಿದ್ದು, ಎತ್ತರವಾಗಿರುತ್ತಾರೆ. ಕಿರಿದಾದ ಭುಜಗಳು, ಕಿರಿದಾದ ಮುಖ, ಕಿರಿದಾದ ಎದೆ ಹಾಗು ಕಾಲುಗಳು ಕೂಡ ತೆಳ್ಳಗೆ ಇರುತ್ತದೆ. ಇವರು ಆರೋಗ್ಯಕರ ದೇಹ ಪ್ರಕೃತಿಯನ್ನು ಹೊಂದಿದ್ದು, ಎಷ್ಟೇ ತಿಂದಲೂ ತೂಕ ಹೆಚ್ಚಾಗುವುದಿಲ್ಲ. ಈ ದೇಹ ಪ್ರಕಾರದ ಜನರು ಅಂತರ್ಮುಖಿಗಳಾಗಿದ್ದು ಸೌಮ್ಯ ಹಾಗೂ ಶಾಂತ ಸ್ವಭಾವ ಹೊಂದಿರುತ್ತಾರೆ. ಆದರೆ ಈ ವ್ಯಕ್ತಿಗಳು ತುಂಬಾನೇ ಸ್ವಾರ್ಥಿಗಳೆನ್ನಬಹುದು. ಬೇರೆಯವರಿಗಿಂತ ತಮ್ಮ ಸ್ವಾರ್ಥದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ತಮ್ಮ ಖಾಸಗಿ ವಿಷಯಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಹೊಸಬರ ಪರಿಚಯವಾದಾಗ ತ್ವರಿತವಾಗಿ ಸಂವಹನ ನಡೆಸಲು ಕಷ್ಟ ಪಡುತ್ತಾರೆ. ಚಿಂತನಾಶೀಲರಾಗಿದ್ದು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಗುಣ ಇವರಲ್ಲಿ ಹೆಚ್ಚಿರುತ್ತದೆ.
- ಮೆಸೊಮಾರ್ಫ್ ಬಾಡಿ ಶೇಪ್ : ಮೆಸೊಮಾರ್ಫಿಕ್ ದೇಹ ಆಕಾರದಲ್ಲಿ ದೊಡ್ಡ ತಲೆ, ಅಗಲವಾದ ಭುಜಗಳು, ಕಿರಿದಾದ ಸೊಂಟ, ಆಕರ್ಷಕ ತೋಳುಗಳು ಮತ್ತು ಕಾಲುಗಳನ್ನು ಹೊಂದಿರುತ್ತಾರೆ. ಈ ರೀತಿ ದೇಹ ಆಕಾರ ಹೊಂದಿರುವ ವ್ಯಕ್ತಿಗಳು ಸಹಜವಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಕಡಿಮೆ ಕೊಬ್ಬು ಹೊಂದಿದ್ದು, ದೇಹದ ಆಕಾರವನ್ನು ಕಾಪಾಡಿಕೊಳ್ಳಲು ಫಿಟ್ ನೆಸ್ ಹಾಗೂ ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ. ಈ ಜನರಲ್ಲಿ ಸಾಹಸಮಯ ಹಾಗೂ ಧೈರ್ಯಶಾಲಿ ಗುಣವು ಹೆಚ್ಚಿಸುತ್ತದೆ. ದೃಢ ನಿಶ್ಚಯ ಹೊಂದಿದ್ದು, ಹೊಸ ಸವಾಲುಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದಿಲ್ಲ. ಸ್ಪರ್ಧಾತ್ಮಕ ಪ್ರವೃತ್ತಿ ಹೊಂದಿದ್ದು ಇತರರ ಮೇಲೆ ಸಾಕಷ್ಟು ಪ್ರಾಬಲ್ಯ ಸಾಧಿಸುತ್ತಾರೆ. ಬೇರೆಯವರ ಅವಕಾಶಗಳನ್ನು ಕಸಿದು ಕೊಳ್ಳುವ ಸಂಭವವೇ ಹೆಚ್ಚು.
- ಎಂಡೋಮಾರ್ಫಿಕ್ ಬಾಡಿ ಶೇಪ್ : ಎಂಡೋಮಾರ್ಫಿಕ್ ದೇಹ ಆಕಾರ ಹೊಂದಿರುವ ಜನರು ದೈಹಿಕವಾಗಿ ದುಂಡಗಿದ್ದು, ಅಗಲವಾದ ಸೊಂಟ ಮತ್ತು ಕಿರಿದಾದ ಭುಜಗಳನ್ನು ಹೊಂದಿರುತ್ತಾರೆ. ಈ ದೇಹ ಆಕಾರವನ್ನು ಪೇರಳೆ ಆಕಾರದ ದೇಹ ಎನ್ನಬಹುದು. ಈ ವ್ಯಕ್ತಿಗಳು ಎಲ್ಲರೊಂದಿಗೆ ಆರಾಮದಾಯಕವಾಗಿ ಬೆರೆಯುತ್ತಾರೆ. ಹಾಸ್ಯ ಪ್ರವೃತ್ತಿ ಹೊಂದಿದ್ದು ಶಾಂತ ಸ್ವಭಾವದವರಾಗಿರುತ್ತಾರೆ. ಮಾತು ಮೃದುವಾಗಿ ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳುವುದಿಲ್ಲ. ತಮ್ಮ ಈ ಸೌಮ್ಯ ಗುಣ ಹಾಗೂ ಹಾಸ್ಯ ಪ್ರಜ್ಞೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇವರಿಗೆ ತಿನ್ನುವುದೆಂದರೆ ತುಂಬಾನೇ ಇಷ್ಟ. ಹೀಗಾಗಿ ಹೊಸ ಹೊಸ ಆಹಾರವನ್ನು ಸವಿಯುತ್ತಾರೆ. ತನ್ನ ಆತ್ಮೀಯ ವ್ಯಕ್ತಿಗಳ ಮೇಲೆ ವಿಶೇಷವಾದ ಪ್ರೀತಿ ಕಾಳಜಿ ತೋರುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ