ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ಗೆ(Ramadan 2023) ಕೇವಲ ಒಂದು ವಾರವಷ್ಟೇ ಬಾಕಿ ಇದೆ. ಯುಗಾದಿ(Ugadi) ಕಳೆದ ಮರು ದಿನವೇ ಒಂದು ತಿಂಗಳ ರಂಜಾನ್ ಉಪವಾಸ(Ramadan Fasting) ಆರಂಭವಾಗುತ್ತೆ. ರಂಜಾನ್ ತಿಂಗಳು ಮುಸ್ಲಿಮರ ಪವಿತ್ರ, ಆಧ್ಯಾತ್ಮಿಕ ತಿಂಗಳು. ಮುಸ್ಲಿಮರು ಈ ತಿಂಗಳು ಪೂರ್ತಿ ಒಂದು ಹೊತ್ತಿನ ಊಟ ಮಾಡಿ ದೇಹ, ಮನಸ್ಸು, ಮಾತಿನ ಮೇಲೆ ಹಿಡಿತ ಸಾಧಿಸಿ ದೇವರ ಜಪದಲ್ಲಿ ಮುಳುಗುತ್ತಾರೆ. ಮುಂಜಾನೆ ಸೂರ್ಯ ಹುಟ್ಟುವ ಮೊದಲು ಎದ್ದು ಸ್ನಾನ ಮಾಡಿ ಬೆಳಗ್ಗೆ 5 ಗಂಟೆಯ ಒಳಗೆ ತಿಂಡಿ ಮುಗಿಸುತ್ತಾರೆ (ಸಹಾರ್). ಬಳಿಕ ಸಂಜೆ ಸೂರ್ಯ ಮುಳುಗಿದ ಮೇಲೆ 6 ಗಂಟೆಗೆ ಉಪವಾಸವನ್ನು ಮುರಿಯುತ್ತಾರೆ(ಇಫ್ತಿಯಾರ್). ಉಪವಾಸದ ಸಮಯದಲ್ಲಿ ಆಹಾರ, ನೀರು ಮತ್ತು ಇತರ ದೈಹಿಕ ಅಗತ್ಯಗಳಿಂದ ದೂರವಿರುಬೇಕು. ಬನ್ನಿ ರಂಜಾನ್ ಉಪವಾಸದ ಮತ್ತಷ್ಟು ಪ್ರಮುಖ್ಯತೆ ಮತ್ತು ಉಪಯೋಗಗಳನ್ನು ತಿಳಿಯಿರಿ.
ಇಸ್ಲಾಮಿಕ್ ಕ್ಯಾಲೆಂಡರ್ನ 9ನೇ ತಿಂಗಳನ್ನು ರಂಜಾನ್ ತಿಂಗಳು ಎನ್ನಲಾಗುತ್ತೆ. ಈ ತಿಂಗಳ 30 ದಿನ ಮುಸ್ಲಿಮರು ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸವಿದ್ದು, ತಮ್ಮ ಹಿಂದಿನ ಪಾಪವನ್ನು ದೂರ ಮಾಡಿಕೊಳ್ಳಲು ಅಲ್ಲಹನನ್ನು ಕ್ಷಮೆ ಕೋರುತ್ತಾರೆ. ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭದ ಮೊದಲ ದಿನವೇ ಚಂದ್ರನನ್ನು ನೋಡಿ ಈದ್-ಉಲ್-ಫಿತರ್(ರಂಜಾನ್) ಅನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ.
ರಂಜಾನ್‌ನಲ್ಲಿ ಉಪವಾಸ ಮಾಡುವುದು ಆಧ್ಯಾತ್ಮಿಕ ಅಭ್ಯಾಸವಾಗಿದ್ದು ಇದು ದೇವರಲ್ಲಿನ ನಂಬಿಕೆಯನ್ನು ಬಲಪಡಿಸುತ್ತದೆ. ಮತ್ತು ಅಲ್ಲಹನ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಮಾಡಿ ಅಲ್ಲಾಹನ ಮುಂದೆ ತಲೆ ಬಾಗಿ ತಮ್ಮ ನೋವುಗಳನ್ನು ಹೇಳಿಕೊಳ್ಳುತ್ತಾರೆ. ಪರಿಹಾರಕ್ಕಾಗಿ ಬೇಡುತ್ತಾರೆ. ನಾವು ಮಾಡಿದ ತಪ್ಪುಗಳನ್ನು, ಪಾಪಗಳನ್ನು ದೂರ ಮಾಡುವಂತೆ ಕಣ್ಣೀರಿಡುತ್ತಾರೆ. ಇನ್ನು ರಂಜಾನ್ ಉಪವಾಸವು ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನರ ಸಂಕಟವನ್ನು ಸೂಚಿಸುತ್ತದೆ. ಊಟ ಇಲ್ಲದೆ ನಿರ್ಗತಿಕರು ಪಡುತ್ತಿರುವ ಕಷ್ಟದ ಅನುಭೂತಿ ಮಾಡುತ್ತದೆ. ಹೀಗಾಗಿ ಈ ತಿಂಗಳು ದೇವರ ಹೆಸರಲ್ಲಿ ದಾನ-ಧರ್ಮಗಳನ್ನು ಮಾಡಲಾಗುತ್ತೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಾಗುತ್ತೆ. ರಂಜಾನ್ ಉಪವಾಸ ಮುಸ್ಲಿಮರಿಗೆ ಸ್ವಯಂ ನಿಯಂತ್ರಣ, ಶಿಸ್ತು ಮತ್ತು ತಾಳ್ಮೆಯನ್ನು ಕಲಿಸಿಕೊಡುತ್ತೆ.
ಇದನ್ನೂ ಓದಿ: Ugadi Horoscope: ಯುಗಾದಿ 2023ರ ದ್ವಾದಶಿ ರಾಶಿಗಳ ಆರೋಗ್ಯ ಭವಿಷ್ಯ ಹೇಗಿದೆ ತಿಳಿಯಿರಿ
ಆಧ್ಯಾತ್ಮಿಕ ಪ್ರಯೋಜನಗಳ ಹೊರತಾಗಿ, ರಂಜಾನ್ ಸಮಯದಲ್ಲಿ ಉಪವಾಸ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಉಪವಾಸವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಉಪವಾಸವು ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ರಂಜಾನ್ ಉಪವಾಸವು ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಮತ್ತು ಪುನಶ್ಚೇತನಕ್ಕೆ ಅವಕಾಶವನ್ನು ಒದಗಿಸುತ್ತದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆಸಿಡ್ ರಿಫ್ಲಕ್ಸ್ ಮತ್ತು ಕೆರಳಿಸುವ ಕರುಳಿನ ಸಹಲಕ್ಷಣಗಳಂತಹ ಜಠರಗರುಳಿನ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆ ಹಾನಿಕಾರಕ ಜೀವಾಣುಗಳಿಂದ ದೇಹವನ್ನು ಶುದ್ಧೀಕರಿಸುತ್ತದೆ
ರಂಜಾನ್ ತಿಂಗಳ ಆರಂಭಕ್ಕೂ ಮುನ್ನ ಇದ್ದಂತಹ ಆಹಾರ ಪದ್ಧತಿ ರಂಜಾನ್ ತಿಂಗಳಲ್ಲಿ ಬದಲಾಗುತ್ತೆ. ಊಟದ ಸಮಯ ಬದಲಾವಣೆಯಿಂದ ಆರೋಗ್ಯದಲ್ಲೂ ಕೆಲ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಉಪವಾಸದ ವೇಳೆ ಕೆಲ ತಯಾರಿಗಳು ಮುಖ್ಯ. ಉಪವಾಸ ಆರಂಭಿಸುವ ಮೊದಲು ದೇಹ ಮತ್ತು ಮನಸ್ಸನ್ನು ಸಿದ್ಧಪಡಿಸಬೇಕು. ಮುಂಜಾನೆ ಏಳುವುದು, ಆಹಾರ-ನೀರು ತ್ಯಜಿಸುವುದು ಇತ್ಯಾದಿ.
ಉಪವಾಸ ಆಚರಿಸುವವರು ನೀರು ಸಹ ಕುಡಿಯಲ್ಲ. ಹೀಗಾಗಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಸಲುವಾಗಿ ಮುಂಜಾನೆಯ ಸಹಾರ್ ಮತ್ತು ಸಂಜೆ ಇಫ್ತಾರ್ ಕೂಟದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಮುಸ್ಲಿಮರು ತಮ್ಮ ಉಪವಾಸವನ್ನು ಖರ್ಜೂರದೊಂದಿಗೆ ಮುರಿಯುತ್ತಾರೆ. ಹಾಗೂ ಹಣ್ಣು, ತರಕಾರಿ ಸೇವನೆಗೆ ಹೆಚ್ಚು ಒತ್ತು ನೀಡುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ