ರಥ ಸಪ್ತಮಿಯ ದಿನದಂದು ಸೂರ್ಯದೇವನನ್ನು ಪೂಜಿಸುವ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಸೂರ್ಯೋದಯದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ರೋಗಗಳಿಂದ ಪರಿಹಾರ ಸಿಗುತ್ತದೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ. ಹಾಗಾಗಿ ಈ ದಿನವನ್ನು ಆರೋಗ್ಯ ಸಪ್ತಮಿ ಎಂದೂ ಕರೆಯಲಾಗುತ್ತದೆ. ಪಂಚಾಗದ ಮಾಹಿತಿಯ ಆಧಾರದ ಮೇಲೆ ಈ ಬಾರಿ ರಥ ಸಪ್ತಮಿಯನ್ನು ಫೆ.16 ರಂದು (ಶುಕ್ರವಾರ) ಆಚರಣೆ ಮಾಡಲಾಗುತ್ತದೆ. ಅದಲ್ಲದೆ ರಥ ಸಪ್ತಮಿಯ ಮತ್ತೊಂದು ವಿಶೇಷವೆಂದರೆ ಕರ್ನಾಟಕದ 7 ದೇವಸ್ಥಾನಗಳಲ್ಲಿ ಈ ದಿನವೇ ಜಾತ್ರೆಯೂ ನಡೆಯುತ್ತದೆ.
ಪೌರಾಣಿಕ ಕಥೆಯ ಪ್ರಕಾರ, ಮಾಘ ಮಾಸದ ಶುಕ್ಲಪಕ್ಷದ ಏಳನೇ ದಿನದಂದು, ಸೂರ್ಯ ದೇವರು ತನ್ನ ರಥದ ಮೇಲೆ ಸವಾರಿ ಮಾಡುವ ಮೂಲಕ ಇಡೀ ಜಗತ್ತನ್ನು ಬೆಳಗಿಸಲು ಪ್ರಾರಂಭಿಸಿದನು. ಆದ್ದರಿಂದ ಇದನ್ನು ರಥ ಸಪ್ತಮಿ ಅಥವಾ ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ. ಇದಲ್ಲದೆ, ಕೆಲವು ಭಾಗದಲ್ಲಿ ಈ ದಿನದಂದು ಸೂರ್ಯ ದೇವರ ಜನ್ಮದಿನವನ್ನು ಸಹ ಆಚರಿಸಲಾಗುತ್ತದೆ.
ರಥಸಪ್ತಮಿಯ ದಿನದಂದು, ಭಕ್ತರು ಸೂರ್ಯೋದಯದ ನಂತರ ಸ್ನಾನ ಮಾಡಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ ನಮಸ್ಕರಿಸುತ್ತಾರೆ. ಇದರ ನಂತರ, ತುಪ್ಪದ ದೀಪ ಹಚ್ಚಿ ಕೆಂಪು ಹೂವುಗಳು ಮತ್ತು ಧೂಪದ್ರವ್ಯದಿಂದ ಸೂರ್ಯ ದೇವರನ್ನು ಪೂಜಿಸುತ್ತಾರೆ. ಈ ಎಲ್ಲಾ ವಿಧಾನಗಳ ಪ್ರಕಾರ ಸೂರ್ಯ ದೇವರನ್ನು ಪೂಜಿಸುವ ಮೂಲಕ, ಸೂರ್ಯನು ಭಕ್ತರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡುತ್ತಾನೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ
ಈ ದಿನ ಸೂರ್ಯದೇವನನ್ನು ಪೂಜಿಸಬೇಕು. ಬೆಳಿಗ್ಗೆ ಅಥವಾ ಸಂಜೆ, ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಇದು ನಿಮಗೆ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ. ಇನ್ನು ಸೂರ್ಯ ದೇವನಿಗೆ ಪೂಜೆ ಮಾಡುವಾಗ “ಓಂ ಆದಿತ್ಯಾಯ ವಿದ್ಮಹೇ ಪ್ರಭಾಕರಾಯ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್” ಹಾಗೂ “ಹ್ರೀಂ ಹ್ರೀಂ ಸೂರ್ಯಾಯ, ಸಹಸ್ರಕಿರಣಾಯ ಸ್ವಾಹಾ” ಎಂಬ ಶ್ಲೋಕಗಳನ್ನು ತಪ್ಪದೆ ಪಠಿಸಿ.
ವಿಶೇಷವಾಗಿ ರಥಸಪ್ತಮಿಯ ದಿನದಂದು ಮಾಡಬಾರದ ಕೆಲವು ವಿಷಯಗಳಿವೆ, ಉದಾಹರಣೆಗೆ ಯಾರ ಮೇಲೂ ಕೋಪ ಮಾಡಿಕೊಂಡು ಕ್ರೌರ್ಯ ಸ್ವಭಾವವನ್ನು ತೋರಿಸಬೇಡಿ, ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ, ಮದ್ಯಪಾನ ಅಥವಾ ಯಾವುದೇ ರೀತಿಯ ಅನ್ಯ ಆಹಾರ ಸೇವನೆ ಮಾಡಬೇಡಿ. ಇದಲ್ಲದೆ, ಈ ದಿನದಂದು ಉಪ್ಪಿನ ಸೇವನೆಯನ್ನು ಸಹ ನಿಷೇಧಿಸಲಾಗಿದೆ. ಆದರೆ ಉಪವಾಸ ಮಾಡದವರು ಉಪ್ಪಿನ ಸೇವನೆ ಮಾಡಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ