Kartik Masa Snana: ಕಾರ್ತಿಕ ಮಾಸದ ಸ್ನಾನಕ್ಕೆ ಮಹತ್ವ ಹೆಚ್ಚು! ಈ ಬಗ್ಗೆ ನಾರದ ಮಹರ್ಷಿ ಕೇಳಿದ ಪ್ರಶ್ನೆಗೆ ಬ್ರಹ್ಮ ನೀಡಿದ ಉತ್ತರ ಹೀಗಿತ್ತು

| Updated By: ಸಾಧು ಶ್ರೀನಾಥ್​

Updated on: Oct 27, 2022 | 6:06 AM

ಕಾರ್ತಿಕ ಮಾಸದಲ್ಲಿ ಸಮಯದ ಅಭಾವ, ಕೆಲಸದ ಒತ್ತಡ ಇರುವವರು ಮನೆಯಲ್ಲಿ ಸ್ನಾನ ಮಾಡುವಾಗ ಕಾವೇರಿ ಸೇರಿದಂತೆ ನದಿಗಳ ಸ್ಮರಣೆ ಮಾಡಿ ಮನಸ್ಸಿನಲ್ಲಿ ನದಿಗಳನ್ನು ನೆನಪಿಸಿಕೊಂಡು ಸ್ನಾನ ಮಾಡಿದರೆ ಆ ನದಿಗಳಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ. ದೇವರಿಗೆ ದೀಪ ಹಚ್ಚಿ, ಒಂದು ಶ್ಲೋಕವನ್ನು ಹೇಳಿ ಭಕ್ತಿಯಿಂದ ಕೈಮುಗಿದರೆ ಇದು ಪವಿತ್ರವಾದ ಮಾನಸ ಸ್ನಾನಕ್ಕೆ ಸಮನಾಗುತ್ತದೆ.

Kartik Masa Snana: ಕಾರ್ತಿಕ ಮಾಸದ ಸ್ನಾನಕ್ಕೆ ಮಹತ್ವ ಹೆಚ್ಚು! ಈ ಬಗ್ಗೆ ನಾರದ  ಮಹರ್ಷಿ ಕೇಳಿದ ಪ್ರಶ್ನೆಗೆ ಬ್ರಹ್ಮ ನೀಡಿದ ಉತ್ತರ ಹೀಗಿತ್ತು
ಕಾರ್ತಿಕ ಮಾಸ ಸ್ನಾನದ ಬಗ್ಗೆ ನಾರದ ಮಹರ್ಷಿ ಕೇಳಿದ ಪ್ರಶ್ನೆಗೆ ಬ್ರಹ್ಮ ನೀಡಿದ ಉತ್ತರ ಹೀಗಿತ್ತು
Follow us on

Kartik Masa Snana -ಕಾರ್ತೀಕಮಾಸ ಸ್ನಾನ ವಿಧಿ: ಪ್ರಸಕ್ತ ಸಾಲಿನಲ್ಲಿ ಕಾರ್ತಿಕ ಮಾಸ ಇಂದು ಅಕ್ಟೋಬರ್ 26 ರಿಂದ ಆರಂಭವಾಗಿ ನವೆಂಬರ್ 23 ವರೆಗೆ ಇರುತ್ತದೆ. ಸ್ನಾನಗಳಿಗೆ ಪ್ರಶಸ್ತವಾದ ಮಾಸಗಳೆಂದರೆ ಕಾರ್ತಿಕ ಮಾಸ, ಮಾಘ ಮಾಸ ಮತ್ತು ವೈಶಾಖ ಮಾಸಗಳು. ಸಮುದ್ರ, ನದಿ, ಸರೋವರ ಹೀಗೆ ನೀರಿನ ತಾಣವಿರುವ ಜಾಗಗಳಲ್ಲಿ ಸ್ನಾನ ಮಾಡಿದರೆ ಅದು ಪುಣ್ಯ ಸ್ನಾನವಾದೀತು ಎಂಬ ನಂಬಿಕೆಯಿದೆ. ಇನ್ನು ಕಾರ್ತಿಕ ಮಾಸ ಶ್ರೇಷ್ಠವಾದುದು. ಈ ಮಾಸದಲ್ಲಿ ಮಾಡುವ ಸ್ನಾನ ಬಹಳ ಮಹತ್ವ ಪಡೆದಿದೆ. ಅದು ಹಾಗೇಕೆ? ಎಂದು ನಾರದ ಮಹರ್ಷಿ ಒಮ್ಮೆ ಬ್ರಹ್ಮನನ್ನು ಕೇಳಿದರು. ಅದಕ್ಕೆ ಬ್ರಹ್ಮ ಹೇಳಿದ, ನೀನು ಕೇಳಿದ್ದು ಬಹಳ ಒಳ್ಳೆಯ ಪ್ರಶ್ನೆ. ಮಾಸಗಳಲ್ಲಿ ಕಾರ್ತಿಕ ಮಾಸ, ಯುಗಗಳಲ್ಲಿ ಕೃತಯುಗ, ನದಿಗಳಲ್ಲಿ ಗಂಗಾ ನದಿ, ಹಾಗೂ ವೇದಗಳಿಗೆ ಸಮವಾದ ಶಾಸ್ತ್ರ ಯಾವುದೂ ಇಲ್ಲ. ಯಾವುದೇ ಕೆಟ್ಟ ಕೆಲಸ ಮಾಡಿದವನಾದರೂ ಕಾರ್ತಿಕ ಮಾಸದಲ್ಲಿ ಸ್ನಾನ ಹಾಗೂ ಆಚರಣೆಗಳನ್ನು ನಡೆಸಿದರೆ ಪಾಪಗಳಿಂದ ದೋಷ ಮುಕ್ತನಾಗುತ್ತಾನೆ. ಪ್ರಸಕ್ತ ವರ್ಷದ ಕಾರ್ತಿಕ ಮಾಸದಲ್ಲಿ ತುಲಾ ಮಾಸವೂ ಬರುವುದು ವಿಶೇಷವಾಗಿದೆ. ಹಾಗಾಗಿ ಈ ಮಾಸದಲ್ಲಿ ಕಾವೇರಿ ನದಿ ಸ್ನಾನ ಮಹತ್ವ ಪಡೆದಿದೆ (Spiritual).

ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ಏಕೆ ಪವಿತ್ರ ಎಂಬುದಕ್ಕೆ ಒಂದು ಕಥೆ ಇದೆ. ಸಕಲ ಪಾಪಗಳನ್ನು ತೊಳೆಯುವ ಗಂಗಾ ನದಿಯಷ್ಟು ಪವಿತ್ರವಾದ ನದಿ ಇಲ್ಲ. ಭಗೀರಥ ತಪಸ್ಸು ಮಾಡಿ, ದೇವಲೋಕದ ಗಂಗೆಯನ್ನು ಭೂಮಿಗೆ ತಂದು ಭೂಲೋಕ, ಪಾತಾಳ ಲೋಕದಲ್ಲೂ, ಪವಿತ್ರ ನದಿಯಾಗಿ ಹರಿಯುವಂತೆ ಮಾಡಿದನು. ದೇವ ನದಿ ಗಂಗಾ ನದಿಗಿಂತ ಬೇರೇ ಯಾವುದೂ ಇಲ್ಲ ಎಂದು ಋಷಿಮುನಿಗಳು ಸಹ ಗುರುತಿಸಿದ್ದಾರೆ. ‘ಗಂಗಾ ಸ್ನಾನಂ, ತುಂಗಾ ಪಾನಂ’ ಎಂಬ ನಾಣ್ನುಡಿ ಇದೆ.

ಒಮ್ಮೆ ಗಂಗೆಗೆ ಯೋಚನೆ ಬಂದಿತು. ಲೋಕದ ಎಲ್ಲಾ ಜನರು ತಾವು ಮಾಡಿದ ಪಾಪ ತೊಳೆದುಕೊಳ್ಳಲು ನನ್ನ ಒಡಲಲ್ಲಿ ಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಾರೆ. ಆ ಪಾಪಗಳೆಲ್ಲ ನನ್ನೊಳಗೆ ಸೇರಿದೆ. ಅಷ್ಟೊಂದು ಪಾಪಗಳನ್ನೆಲ್ಲ ನಾನು ಹೇಗೆ ಪರಿಹಾರ ಮಾಡಿಕೊಳ್ಳಲಿ? ಎಂಬ ಪ್ರಶ್ನೆ ಮೂಡಿತು. ತಕ್ಷಣ ಅವಳು ಶಿವನಲ್ಲಿ ಹೋಗಿ ಈ ಪ್ರಶ್ನೆಯನ್ನು ಕೇಳಿದಳು? ಪರಮೇಶ್ವರನು, ನಿನಗೆ ಯಾಕೆ ಇಂಥ ಅನುಮಾನ? ಬ್ರಹ್ಮನು ನಿನ್ನನ್ನು ಸೃಷ್ಟಿ ಮಾಡಿದ್ದೆ ಇದಕ್ಕಾಗಿ. ನೀನು ಯಾವ ಯೋಚನೆಯನ್ನೂ ಮಾಡ ಬೇಕಾಗಿಲ್ಲ. ನಿನಗೆ ಯಾವುದೇ ಪಾಪ ಅಂಟುವ ಸಂಭವವೇ ಇಲ್ಲ. ಆದರೂ ನಿನಗೆ ಬಂದಿರುವ ಸಂದೇಹಕ್ಕಾಗಿ ಹೇಳುತ್ತೇನೆ ಕೇಳು… ನದಿಗಳಲ್ಲಿ ಪವಿತ್ರ ನದಿ ಎಂದರೆ ಕಾವೇರಿ ನದಿ. ನೀನು ಈ ಕಾರ್ತಿಕ ಮಾಸದಲ್ಲಿ ಕಾವೇರಿ ನದಿಯಲ್ಲಿ ಸೇರಿ ಸ್ನಾನ ಮಾಡಿದರೆ ನೀನು ಶುದ್ಧಳಾಗುವೆ ಎಂದು ಹೇಳಿದನು. ಶಿವನ ಮಾತಿನಂತೆ, ಪ್ರತಿವರ್ಷವೂ ಕಾರ್ತಿಕ ಮಾಸದಲ್ಲಿ ಗಂಗೆ ಕಾವೇರಿಯಲ್ಲಿ ಬಂದು ಸೇರುತ್ತಾಳೆ. ಕಾವೇರಿಯಲ್ಲಿ ಗಂಗಾ ನದಿ ಬಂದು ಸನ್ನಿಹಿತಳಾಗಿ ಇರುವುದರಿಂದ ಕಾರ್ತಿಕ ಮಾಸದಲ್ಲಿ ಕಾವೇರಿ ಸ್ನಾನ ಮಾಡುವುದು ಬಹಳ ಪುಣ್ಯ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

12 ವಿಶೇಷ ಸ್ನಾನ ವಿಧಗಳು ಹೀಗಿವೆ:

1. ನಿತ್ಯ ಸ್ನಾನ: ಪ್ರತಿನಿತ್ಯವು ಮಾಡುವಂತಹದು.

2. ನೈಮಿತ್ಯಕ ಸ್ನಾನ: ದು ಹೊರಗಿನಿಂದ ಮೈಲಿಗೆಯಾದರೆ, ಅಶುಭ ವಾರ್ತೆ ಕೇಳಿದಾಗ ಮಾಡುವ ಸ್ನಾನ.

3. ಕಾಮ್ಯ ಸ್ನಾನ: ಇದು ವಿಶೇಷವಾಗಿ ಅಪೇಕ್ಷೆಗಳು ಈಡೇರಲೆಂದು ಇಷ್ಟಾರ್ಥ ದೇವರುಗಳ ಉಪಾಸನೆಗಾಗಿ ಮಾಡುವ ಸ್ನಾನ.

4. ಮುಂಜಾನೆ ಸ್ನಾನ: ಈ ಸ್ನಾನವನ್ನು ತಿಳಿದೋ, ತಿಳಿಯದೆಯೋ ಮಾಡಿದ ಪಾಪಗಳನ್ನು ಕಳೆದುಕೊಳ್ಳಲು ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಸ್ನಾನ. ಇದರಿಂದ ಪಾಪಗಳು ಪರಿಹಾರವಾಗುತ್ತದೆ.

5. ಸಪ್ತ ಸ್ನಾನ: ಇದನ್ನ ‘ಗೌಣ’ ಸ್ನಾನ ಅಂತ ಕರೆಯುತ್ತಾರೆ. ಸಂಬಂಧ ಪಟ್ಟ ಮಂತ್ರಗಳನ್ನು ಹೇಳಿಕೊಳ್ಳುತ್ತಾ ಮಾಡುವ ಸ್ನಾನ. ವಿಶೇಷ ದಿನಗಳಲ್ಲಿ ಸ್ನಾನ ಮಾಡಿ ಬಂದು ದೇವರ ಪೂಜೆಯಲ್ಲಿ ಭಾಗವಹಿಸಿದಾಗ ಸಂಕಲ್ಪ ಮಾಡಿದ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ. ಅದು ಮಂತ್ರ ಶುದ್ದ ಸ್ನಾನದ ಶಾಸ್ತ್ರ.

6. ಭೌಮ ಸ್ನಾನ: ಇದು ತುಳಸಿ ಮೃತ್ತಿಕೆಯನ್ನು ಮೈ ಕೈಗೆಲ್ಲ ಸವರಿಕೊಂಡು ಮಾಡುವ ಸ್ನಾನ. (ಗಂಡಸರು ತಲೆಗೂದಲು ಕಟ್​ ಮಾಡಿಸಿಕೊಂಡು ಬಂದಮೇಲೆ ಸ್ನಾನ ಮಾಡುವಾಗ ತುಳಸಿ ಗಿಡದ (ಮಣ್ಣು) ಮೃತ್ತಿಕೆಯನ್ನು ಶಾಸ್ತ್ರಕ್ಕೆ ಹಚ್ಚಿಕೊಂಡು ಶುದ್ದ ಮಾಡಿಕೊಳ್ಳುತ್ತಾರೆ.

7. ಅಗ್ನಿ ಸ್ನಾನ: ಹೋಮ ಹವನಗಳನ್ನು ಮಾಡಿದಾಗ ಭಸ್ಮ ಹಚ್ಚಿಕೊಳ್ಳುವುದು ದಿನನಿತ್ಯ (ಗಂಡಸರು) ವಿಭೂತಿ ಧಾರಣೆ ಮಾಡುವುದು.

8. ವಾಯು ಸ್ನಾನ: ಇದು ಗೋವುಗಳು ಓಡಾಡಿದ ಪಾದದ ಮಣ್ಣಿನ ಧೂಳು ತೆಗೆದು ಮೈ ಮೇಲೆ ಹಣೆಗೆ ಹಚ್ಚಿ ತಲೆಗೆ ಅಕ್ಷತೆಯಂತೆ ಚೂರು ಹಾಕಿಕೊಂಡರೆ ಅದು ವಾಯು ಸ್ನಾನವಾದೀತು.

9. ಸೂರ್ಯ ಸ್ನಾನ: ಬಿಸಿಲಿಗೆ ಮೈಯ್ಯೂಡ್ಡಿ ನಿಲ್ಲುವುದು.

10. ವಾರುಣ ಸ್ನಾನ: ಇದು ಸಮುದ್ರ, ಸರೋವರ, ನದಿ, ಪುಷ್ಕರಣಿಗಳಲ್ಲಿ ಮೂರು ಮುಳುಗು ಹಾಕುವುದು. ( ಮುಳುಗಲು ಹೆದರಿಕೆ ಇದ್ದರೆ ತಂಬಿಗೆಯಿಂದ ನೀರು ತುಂಬಿ ತಲೆಯ ಮೇಲೆ ಹಾಕಿ ಕೊಳ್ಳುವುದು)

11. ಮಾನಸಿಕ ಸ್ನಾನ: ನಿರ್ದಿಷ್ಟ ಸ್ಥಳದಲ್ಲಿ ಕುಳಿತು, ಉಚ್ವಾಸ-ನಿಚ್ವಾಸ ಕ್ರಮವಾಗಿ ಮಾಡುತ್ತಾ ಬಾಹ್ಯ ವಿಷಯಗಳನ್ನು ತಲೆಯಿಂದ ಕೊಡವಿ, ಅಂತರಂಗದಿಂದ, ಖಾಲಿಯಾಗಿ ಧ್ಯಾನ ಮಾಡುವುದು ಮಾನಸಿಕ ಸ್ನಾನ.

12. ತೀರ್ಥ ಸ್ನಾನ: ಭಗವಂತನ ಸ್ಮರಣೆ ಮಾಡುತ್ತಾ ಹರಿ, ನಾರಾಯಣ, ಕೃಷ್ಣ, (ಸ್ತೋತ್ರ) ಗಂಗೇ ಚ ಯಮುನೇ ಚೈವ, ಗೋದಾವರಿ, ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು! ಹಾಗೆಯೇ ‘ಅಪವಿತ್ರ: ಪವಿತ್ರೋ ವಾ ಸರ್ವಾ ವಸ್ಥಾಂ ಗತೋಪಿ ವಾ! ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಭ್ಯಂತರ ಶ್ಯುಚಿ ಎಂದು ಹೇಳಿಕೊಳ್ಳುತ್ತಾ ಸ್ನಾನ ಮಾಡುವುದು. ಅಥವಾ ದೇವರ ಅಭಿಷೇಕದ ತೀರ್ಥ ತೆಗೆದುಕೊಂಡು ಕಣ್ಣಿಗೆ, ತಲೆಗೆ ಒತ್ತಿಕೊಳ್ಳುವುದು.

ಕಾರ್ತಿಕ ಮಾಸದಲ್ಲಿ ಸಮಯದ ಅಭಾವ, ಕೆಲಸದ ಒತ್ತಡ ಇರುವವರು ಮನೆಯಲ್ಲಿ ಸ್ನಾನ ಮಾಡುವಾಗ ಕಾವೇರಿ ಸೇರಿದಂತೆ ನದಿಗಳ ಸ್ಮರಣೆ ಮಾಡಿ ಮನಸ್ಸಿನಲ್ಲಿ ನದಿಗಳನ್ನು ನೆನಪಿಸಿಕೊಂಡು ಸ್ನಾನ ಮಾಡಿದರೆ ಆ ನದಿಗಳಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ. ದೇವರಿಗೆ ದೀಪ ಹಚ್ಚಿ, ಒಂದು ಶ್ಲೋಕವನ್ನು ಹೇಳಿ ಭಕ್ತಿಯಿಂದ ಕೈಮುಗಿದರೆ ಇದು ಪವಿತ್ರವಾದ ಮಾನಸ ಸ್ನಾನಕ್ಕೆ ಸಮನಾಗುತ್ತದೆ. (ಬರಹ: ಆಶಾ ನಾಗಭೂಷಣ)

ಇನ್ನು ಕಾರ್ತಿಕ ಮಾಸದಲ್ಲಿ ಪವಿತ್ರವಾದ ಶಿವಾಲಯಕ್ಕೆ ಹೋಗುವಾಗ ಅನುಸರಿಸಬೇಕಾದ ವಿಧಾನಗಳು

ದೇವಾಲಯವನ್ನು ಪ್ರವೇಶಿಸುವುದಕ್ಕೆ ಮೊದಲು ಶುದ್ಧಮನಸ್ಕರಾಗಿ ಕೈಕಾಲು ತೊಳೆದುಕೊಂಡು, ಶುದ್ಧಾಚಮನ ಮಾಡಿ ಮನಸ್ಸಿನಲ್ಲಿಯೇ ಶಿವನನ್ನು ಸ್ಮರಿಸಿ, ದೂರದಿಂದ ಗೋಪುರ ಮತ್ತು ಅಕ್ಕಪಕ್ಕದಲ್ಲಿರುವ ನಂದಿ ಹಾಗೂ ಶಿವಗಣವನ್ನು ವೀಕ್ಷಿಸಿ ದೇವಾಲಯ ಪ್ರವೇಶಿಸಬೇಕು. ದೇವಾಲಯ ಪ್ರವೇಶಿಸಿದ ಮೇಲೆ ಮೊದಲು ಗಣಪತಿ, ನಂದಿ-ಬೃಂಗಿಯರನ್ನು ದರ್ಶಿಸಿ, ಜಗನ್ಮಾತೆಯಾದ ಪಾರ್ವತಿಯ ದರ್ಶನದ ನಂತರ ಶಿವನನ್ನು ನಂದಿಯ ಶೃಂಗದ (ಕೊಂಬು) ಮಧ್ಯದಿಂದ ವೀಕ್ಷಿಸಬೇಕು. ಕಲಿಯುಗದಲ್ಲಿ ಶಿವನಿಗೆ ಪ್ರತಿಮಾ ಪೂಜೆ ಇಲ್ಲವಾದ ಕಾರಣ ಲಿಂಗಪೂಜೆಗೆ ಪ್ರಾಶಸ್ತ್ಯ. ಶಿವ ದೇವಾಲಯದಲ್ಲಿ ನಂದಿ ಮತ್ತು ಲಿಂಗದ ನಡುವೆ ಓಡಾಡಬಾರದು. ಶಿವ ದೇವಾಲಯಕ್ಕೆ ಹೋಗುವಾಗ ಪವಿತ್ರವಾದ ಭಸ್ಮ, ಬಿಲ್ವಪತ್ರೆ, ಪಂಚಾಮೃತದ ಸಾಮಾನುಗಳು, ವಸ್ತ್ರ ಇತ್ಯಾದಿ ಪೂಜಾ ದ್ರವ್ಯಗಳನ್ನು ತೆಗೆದುಕೊಂಡು ಹೋಗಬೇಕು.

ಶಿವಭಕ್ತರು ಸಂಪ್ರದಾಯದ ಪ್ರಕಾರ ವಿಭೂತಿ, ಗಂಧ ಇತ್ಯಾದಿಗಳನ್ನು ಯಾವಾಗಲೂ ಧರಿಸಬೇಕು. ರಾತ್ರಿಯ ಕಾಲದಲ್ಲಿ ಇದರ ಅವಶ್ಯ ಬಹಳ. ಪ್ರತಿನಿತ್ಯವೂ ಶುದ್ಧ ಮನಸ್ಕರಾಗಿ ಪರಮೇಶ್ವರನನ್ನು ಕೆಲವು ನಿಮಿಷವಾದರೂ ಜಪಿಸಬೇಕು. ದೇವಸ್ಥಾನದ ಕಾರ್ಯದಲ್ಲಿ ನಿರತರಾಗಿರುವಾಗ ನಿಷ್ಠೆಯಿಂದ ಕಾರ್ಯವನ್ನು ನಿರ್ವಹಿಸಬೇಕು. ದೇವಸ್ಥಾನಕ್ಕೆ ಹೋಗುವಾಗ ಶುಭ್ರವಸ್ತ್ರ ಧರಿಸಬೇಕು. ಗೃಹಸ್ಥರು ಕಚ್ಚೆ ಪಂಚೆಯನ್ನು, ಸ್ತ್ರೀಯರು ಸೀರೆಗಳನ್ನು ಧರಿಸಿ ದೈವಿಕ ಕಾರ್ಯವನ್ನು ಮಾಡಬೇಕು.

ಆಡಂಬರದ ಮತ್ತು ಅನವಶ್ಯಕ ಖರ್ಚುಗಳನ್ನು ಮಾಡಬಾರದು. ಮಿತವ್ಯಯಿಸಿದ ಹಣವನ್ನು ಪರಮೇಶ್ವರನ ಕೈಂಕರ್ಯಕ್ಕೆ ವಿನಿಯೋಗಿಸಬೇಕು. ಊಟ ಅಥವಾ ತಿಂಡಿಯನ್ನು ತಿನ್ನುವು ಮುಂಚೆ ದೇವರ ಧ್ಯಾನ ಮಾಡಿ ಭೋಜನ ಮಾಡಬೇಕು. ನಿದ್ರಿಸುವುದಕ್ಕೆ ಮೊದಲು ಮತ್ತು ಎಚ್ಚರಗೊಂಡ ನಂತರ ಶಿವನಾಮ ಸ್ಮರಣೆಯನ್ನು ಮಾಡಬೇಕು. ಜನ್ಮವಿತ್ತ ತಾಯಿ ತಂದೆಯನ್ನು, ವಿದ್ಯೆ ನೀಡಿದ ಗುರುಗಳನ್ನು, ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು, ನಮ್ಮನ್ನು ಕಾಪಾಡುತ್ತಿರುವ ಪರಮೇಶ್ವರನನ್ನು ಸದಾ ಭಕ್ತಿಯಿಂದ ಪೂಜಿಸಬೇಕು. ಶ್ರೀಶಿವಾರ್ಪಣಮಸ್ತು.