ಭಾರತ ಭೂಮಿ ಅನಾದಿಕಾಲದಿಂದಲೂ ಅನೇಕ ಬಲಿಷ್ಠ, ಧೈರ್ಯವಂತ, ವೀರ ಯೋಧರು, ಸಾಹಸಿ ವನಿತೆಯರು, ಆಡಳಿತಗಾರರನ್ನು ಹೊಂದಿದೆ. ತಮ್ಮ ತಾಯಿನಾಡು, ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು(Chhatrapati Shivaji Maharaj) ಕೂಡ ಒಬ್ಬರು. ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಮಹಾನ್ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜನ ಜನ್ಮದಿನವನ್ನು ಪ್ರತಿ ವರ್ಷ ಫೆಬ್ರವರಿ 19 ರಂದು ಶಿವಾಜಿ ಜಯಂತಿ(Shivaji Jayanti) ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಾಗಿ ಆಚರಿಸಲಾಗುತ್ತದೆ.
ಶಹಾಜಿರಾಜೆ ಭೋಸ್ಲೆ ಮತ್ತು ಜಿಜಾಬಾಯಿ ಪುತ್ರ ಛತ್ರಪತಿ ಶಿವಾಜಿ ಮಹಾರಾಜರು. ಇವರ ಪೂರ್ಣ ಹೆಸರು ಶಿವಾಜಿರಾಜೆ ಶಹಜಿರಾಜೆ ಬೋಂಸ್ಲೆ. ಇವರು ಫೆಬ್ರವರಿ 19, 1630 ರಲ್ಲಿ ಮಹಾರಾಷ್ಟ್ರದ ಪುಣೆಯ ಶಿವನೇರಿ ಕೋಟೆಯಲ್ಲಿ ಜನಿಸಿದರು. ಶಿವಾಜಿ ಮಹಾರಾಜ ಮರಾಠ ಸಾಮ್ರಾಜ್ಯದ ಸ್ಥಾಪಕ ಮತ್ತು ಭಾರತದ ಪ್ರಗತಿಪರ, ಧೈರ್ಯಶಾಲಿ ಮತ್ತು ಬುದ್ಧಿವಂತ ರಾಜರಲ್ಲಿ ಒಬ್ಬರಾಗಿದ್ದರು. ಈ ವರ್ಷ ಮಹಾನ್ ಮರಾಠ ಯೋಧನ 392 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಶಿವಾಜಿಯ ಜನ್ಮದಿನವನ್ನು ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಜನರು ಈ ದಿನವನ್ನು ಬಹಳ ಹೆಮ್ಮೆಯಿಂದ ಆಚರಿಸುತ್ತಾರೆ ಮತ್ತು ಈ ದಿನದಂದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳನ್ನು ಆಯೋಜಿಸುತ್ತಾರೆ.
ಶಿವಾಜಿ ಜಯಂತಿ 2022: ಇತಿಹಾಸ ಮತ್ತು ಮಹತ್ವ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಮಾಜ ಸುಧಾರಕ ಮಹಾತ್ಮ ಜ್ಯೋತಿರಾವ್ ಫುಲೆ ಅವರು 1870 ರಲ್ಲಿ ಪ್ರಾರಂಭಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮೊದಲು ಪುಣೆಯಲ್ಲಿ ಆಚರಿಸಲಾಯಿತು. ಮರಾಠ ರಾಜನ ಜಯಂತಿಯನ್ನು ಆಚರಿಸುವ ಸಂಪ್ರದಾಯವನ್ನು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮುಂದುವರಿಸಿದರು. ಶಿವಾಜಿಯ ಕೊಡುಗೆಗಳನ್ನು ಜನರಲ್ಲಿ ಎತ್ತಿ ಹಿಡಿದರು.
ಜ್ಯೇಷ್ಠ ಶುದ್ಧ ತ್ರಯೋದಶಿಯಂದು 6 ಜೂನ್ 1674ರಂದು ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವು ರಾಯಗಡ ದುರ್ಗದಲ್ಲಿ ಜರುಗಿತು. ಮಹಾರಾಜ ಪೃಥ್ವೀರಾಜಸಿಂಗ್ ಚೌಹಾಣ್ ಬಳಿಕ ಭಾರತದಿಂದ ಹಿಂದೂ ಆಡಳಿತವು ಬಹುಮಟ್ಟಿಗೆ ಕೊನೆಗೊಂಡಿತ್ತು. ದಿಲ್ಲಿಯಲ್ಲಿ ಮೊಗಲರ ರಾಜ್ಯಭಾರವಿತ್ತು, ಮತ್ತು ದಕ್ಷಿಣದಲ್ಲಿ ಆದಿಲಶಾಹಿ, ಕುತುಬಶಾಹಿ ಮುಂತಾದ ಮುಸ್ಲಿಂ ರಾಜರು ರಾಜ್ಯವಾಳುತ್ತಿದ್ದರು. ಈ ವೇಳೆ ಶಿವಾಜಿ ಮಹಾರಾಜರು ಜೂನ್ 6, 1674ರಿಂದ ಏಪ್ರಿಲ್ 3, 1680ರ ವರೆಗೆ ಆಳ್ವಿಕೆಯನ್ನು ಮಾಡಿದರು. ಇವರು ತಮ್ಮ ಆಡಳಿತಾವಧಿಯಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಂಕಣ, ಸಹ್ಯಾದ್ರಿ ಬೆಟ್ಟಗಳಿಂದ ಪಶ್ಚಿಮ ಮಹಾರಾಷ್ಟ್ರದ ದಕ್ಷಿಣ ಭಾರತದ ಪಂಜಾವರ್ ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ರಾಯಗಢ ಕೋಟೆಯನ್ನು ಇಡೀ ಮಹಾರಾಷ್ಟ್ರದ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಶಿವಾಜಿ ರವರಿಗೆ ಸಂಭಾಜಿ ಮತ್ತು ರಾಜರಾಮ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಶಿವಾಜಿ ಮಹಾರಾಜರು ಏಪ್ರಿಲ್ 3, 1680ರಲ್ಲಿ ರಾಯಗಢ ಕೋಟೆಯಲ್ಲಿ ನಿಧನರಾದರು.
ಛತ್ರಪತಿ ಶಿವಾಜಿ ಕೇವಲ ಹಿಂದೂ ಧರ್ಮಕ್ಕೆ ಮೀಸಲಾಗಿರಲಿಲ್ಲ. ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ತಮ್ಮ ಆಡಳಿತ ಅವಧಿಯಲ್ಲಿ ಹಿಂದೂಗಳು, ಮುಸ್ಲಿಂರನ್ನು ಸಮಾನವಾಗಿ ಕಾಣುತ್ತಿದ್ದರು. ಎಲ್ಲಾ ಧರ್ಮದವರಿಗೂ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದರು. ಹಿಂದೂಗಳಿಗೆ ದೇಗುಲ ನಿರ್ಮಿಸಲು ನೀಡುತ್ತಿದ್ದ ಸಹಕಾರದಂತೆ ಮುಸ್ಲಿಂರಿಗೂ ಮಸೀದಿ ಕಟ್ಟಲು ಸಹಕಾರ ನೀಡುತ್ತಿದ್ದರು. ಸೈನ್ಯದಲ್ಲಿ ಮುಸ್ಲಿಂ ಸೈನಿಕರಿಗೂ ಸ್ಥಾನವಿತ್ತು. ಫಕೀರರನ್ನು ಗೌರವಿಸುತ್ತಿದ್ದರು.
ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪೂರ್ವಿಕರು ಕರ್ನಾಟಕದ ಗದಗ ಜಿಲ್ಲೆಯವರು: ಉದ್ಧವ್ ಠಾಕ್ರೆಗೆ ತಕ್ಕ ಉತ್ತರ