ಭಾರತೀಯರಿಗೆ ವ್ಯಕ್ತಿ, ವಸ್ತು, ನದಿ, ಪರ್ವತ, ಮರ ಇವುಗಳು ಮಾತ್ರ ವಿಶೇಷವಲ್ಲ. ಅಕ್ಷರಗಳೂ ವಿಶೇಷ, ಸಂಖ್ಯೆಗಳೂ ವಿಶೇಷವೇ. ಎಲ್ಲದರಲ್ಲಿಯೂ ಮಹತ್ತ್ವವನ್ನು ಕಾಣುವುದು, ಅದಕ್ಕೆ ಯೋಗ್ಯವಾದ ಚೌಕಟ್ಟನ್ನು ರೂಪಿಸಿಕೊಳ್ಳುವುದು ಅತಿ ಮಹತ್ತ್ವದ್ದು. ಶೂನ್ಯದಿಂದ ಆರಂಭಿಸಿ ಅನಂತದವರೆಗೂ ಪ್ರತಿಯೊಂದು ಸಂಖ್ಯೆಗೂ ತತ್ತ್ವವನ್ನು ಹೇಳುವುದು, ಇಟ್ಟಿರುವುದು ಮತ್ತೆಲ್ಲೂ ಸಿಗದು. ಸಂಖ್ಯೆ ಮೂಲಕ ಜೀವನಕ್ಕೆ ಅರ್ಥವನ್ನು ಕೊಡುವುದೂ ಇಲ್ಲಿನ ಕ್ರಮ. ಶೂನ್ಯ ಪರಮಾತ್ಮ, ಎರಡು ಪ್ರಕೃತಿ ಪುರುಷ, ಮೂರು ತ್ರಿಮೂರ್ತಿ, ನಾಲ್ಕು ವೇದ, ಐದು ಪಂಚಭೂತ, ಆರು ವರ್ಗ, ಏಳು ಲೋಕ, ಎಂಟು ವಸುಗಣ, ಐಶ್ವರ್ಯ, ಒಂಭತ್ತು ದುರ್ಗೆಯರು, ನಾಗರು, ಹೀಗೆ ಸಂಖ್ಯೆಗೆಲ್ಲ ಜೀವನಕ್ಕೆ ಬೇಕಾದ ಸಂಗತಿಗಳೇ ಇವೆ. ಕೆಲವು ಸಂಖ್ಯಾವಿಶೇಷವನ್ನು ನೋಡೋಣ…
ನೂರಾ ಎಂಟು ಸಂಖ್ಯೆ ಎಲ್ಲರಿಗೂ ಚಿರಪರಿಚಿತ. ದೇವಾಲಯದಲ್ಲಿ ಇದಕ್ಕೆ ದೊಡ್ಡ ಫಲಕವನ್ನು ಕೂಡ ಕಾಣಬಹುದು. ದೇವರಿಗೆ ಅಷ್ಟೋತ್ತರ ಶತನಾಮಾವಳಿಗಳಿಂದ ಅರ್ಚನೆ ಎಂಬುದು ಇರುತ್ತದೆ. ಏಕೆ ಒಂದುನೂರಾ ಎಂಟು? ಯಾಕೆ ಬೇರೆ ಸಂಖ್ಯೆ ಇಲ್ಲವೇ? ಎನ್ನುವುದು ಎಷ್ಟೋ ಜನರಿಗೆ ತಿಳಿಯದೇ ಇರುವುದು.
ಧಾರ್ಮಿಕ ನಂಬಿಕೆಯಲ್ಲಿ ಇದು ಬಹಳ ಮುಖ್ಯವಾದ ಸಂಖ್ಯೆ. ಇದು ಹೇಗೆ ಆಗುತ್ತದೆ ಎಂದರೆ ಒಂದು ಕ್ರಮ ಹೀಗಿದೆ. ಅಶ್ವಿನೀ ಮೊದಲಾದ ನಕ್ಷತ್ರಗಳು ಇಪ್ಪತ್ತೇಳು. ಒಂದು ನಕ್ಷತ್ರಕ್ಕೆ ೪ ಪಾದಗಳು ಎಂಬುದು ಪ್ರಸಿದ್ಧ. ಇಪ್ಪತ್ತೇಳು ಮತ್ತು ನಾಲ್ಕನ್ನು ಗುಣಿಸಿದಾಗ ಬರುವ ಸಂಖ್ಯೆ ನೂರಾ ಎಂಟು.
ನಕ್ಷತ್ರಗಳು ಮನುಷ್ಯನಿಗೆ ಅತಿ ಮುಖ್ಯವಾದುದು. ಎಲ್ಲ ಆಚರಣೆಗಳನ್ನೂ ನಕ್ಷತ್ರದ ಪ್ರಕಾರವಾಗಿಯೇ ನೋಡುವುದು ಪದ್ಧತಿ. ಅನುಕೂಲ ಪ್ರತಿಕೂಲದ ದಿನಗಳನ್ನು ನೋಡುವುದು ನಕ್ಷತ್ರಗಳ ಆಧಾರದ ಮೇಲೆಯೇ. ಹಾಗಾಗಿ ಎಲ್ಲವನ್ನೂ ನೂರಾ ಎಂಟಕ್ಕೆ ಮಾಡಿಕೊಳ್ಳುವುದು.
ಇನ್ನೊಂದು ಕ್ರಮ ಯಾವುದೆಂದರೆ ಅರವತ್ತು ಸಂವತ್ಸರ, ಹನ್ನೆರಡು ರಾಶಿ, ಇಪ್ಪತ್ತೇಳು ನಕ್ಷತ್ರ ಮತ್ತು ಒಂಭತ್ತು ಗ್ರಹಗಳನ್ನು ಕೂಡಿಸಿದಾಗ ಬರುವ ಮೊತ್ತ. ಮನುಷ್ಯನ ಜೀವನವು ಸಂವತ್ಸರಚಕ್ರದಲ್ಲಿ ಸಿಲುಕಿರುತ್ತದೆ, ಗ್ರಹಗಳು ಜನ್ಮಾಂತರದ ಶುಭಾಶುಭಗಳನ್ನು ತಿಳಿಸುತ್ತವೆ, ರಾಶಿಗಳು ವರ್ತಮಾನದಲ್ಲಿ ಇರುವ ಸ್ಥಿತಿಯನ್ನು ಹೇಳುತ್ತವೆ, ನಕ್ಷತ್ರಗಳು ಸ್ವಭಾವವನ್ನೂ ಮಾಡು ಕರ್ಮಕ್ಕೆ ಶುದ್ಧಕಾಲವನ್ನೂ ತಿಳಿತ್ತವೆ. ಈ ನಾಲ್ಕರ ಸಮಾಗಮವೇ ಒಂದುನೂರಾ ಎಂಟು.
ಆದ್ದರಿಂದ ೧೦೮ ನಿತ್ಯ ಜೀವನಕ್ಕೆ ಸಮೀಪವಾದ ಸಂಖ್ಯೆಯಾಗಿದೆ. ಹಾಗಾಗಿ ಧಾರ್ಮಿಕವಾದ ಏನೇ ಕಾರ್ಯವನ್ನು ಮಾಡಿದರೂ ೧೦೮ ಅಥವಾ ಆ ಸಂಖ್ಯೆಯ ಅರ್ಧ, ಕಾಲು ಭಾಗವನ್ನೂ ಸ್ವೀಕರಿಸುವುದು ಕ್ರಮವಾಗಿದೆ.
– ಲೋಹಿತ ಹೆಬ್ಬಾರ್ – 8762924271