
ಧೂಪದ ಮಹತ್ವ ಹಾಗೂ ಭಗವಂತನ ಆರಾಧನೆಯಲ್ಲಿ ಇದರ ಪಾತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಭಗವಂತನ ಆರಾಧನೆಯಲ್ಲಿ ದೇವರನ್ನು ಬೇಗ ಒಲಿಸಿಕೊಳ್ಳಲು ಒಂದು ಸರಳ ಮತ್ತು ಬಹುಬೇಗ ಫಲ ನೀಡುವ ವಿಧಾನವೆಂದರೆ ಧೂಪ ಸಮರ್ಪಣೆ. ಶೋಡಶೋಪಚಾರ ಪೂಜೆಗಳಲ್ಲಿ ಧೂಪಂ ಸಮರ್ಪಯಾಮಿ ಎಂದು ಹೇಳುವ ಮೂಲಕ ಧೂಪಕ್ಕೆ ಇರುವ ಮಹತ್ವವನ್ನು ಸಾರಲಾಗಿದೆ. ದೇವಾಲಯಗಳಲ್ಲಿ, ಮನೆಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಅಥವಾ ಸಂಧ್ಯಾಕಾಲದಲ್ಲಿ ಧೂಪವನ್ನು ಹಾಕುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಧೂಪಗಳು ಲಭ್ಯವಿದ್ದರೂ, ಶುದ್ಧವಾದ ಸಾಂಬ್ರಾಣಿ ಧೂಪವನ್ನು ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಹಾಕುವುದರಿಂದ ಅಸಂಖ್ಯಾತ ಪ್ರಯೋಜನಗಳಿವೆ. ಎಲ್ಲಿ ಶುದ್ಧತೆ ಇರುತ್ತದೆಯೋ ಅಲ್ಲಿ ನಕಾರಾತ್ಮಕ ಶಕ್ತಿಗಳು ಆಚೆ ಹೋಗುತ್ತವೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಧೂಪ ಹಾಕುವುದರಿಂದ ಋಣಾತ್ಮಕ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳು ಹೊರಟುಹೋಗುತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸಾಂಬ್ರಾಣಿ ಧೂಪವನ್ನು ಹಾಕುವುದು ಅತ್ಯಂತ ಮಂಗಳಕರ. ಭಗವಂತನ ಇರುವಿಕೆಯಲ್ಲಿ ಕೆಟ್ಟ ಶಕ್ತಿಗಳು ನಿಲ್ಲುವುದಿಲ್ಲ.
ಪೂಜಾ ಸಮಯದಲ್ಲಿ, ನೈವೇದ್ಯ ಅರ್ಪಿಸುವಾಗ, ಮಂಗಳಾರತಿ ಮತ್ತು ಪೂರ್ಣಾಹುತಿ ಸಮಯದಲ್ಲಿ ಧೂಪವನ್ನು ಹಾಕುವುದು ಪೂಜೆಯ ಪಾವಿತ್ರ‍್ಯವನ್ನು ಹೆಚ್ಚಿಸುತ್ತದೆ. ದೇವಾಲಯಗಳಲ್ಲಿ ಮಹಾಮಂಗಳಾರತಿ ಸಮಯದಲ್ಲಿ ಧೂಪ ಹಾಕಿದಾಗ ಭಗವಂತನ ಅವಿರ್ಭಾವವನ್ನು ಅನುಭವಿಸಬಹುದು ಮತ್ತು ಅಸುರ ಶಕ್ತಿಗಳು ದೂರವಾಗುತ್ತವೆ. ವೈಜ್ಞಾನಿಕವಾಗಿ ಹೇಳುವುದಾದರೆ, ಧೂಪ ಹಾಕಿದಾಗ ನಾವು ಹೆಚ್ಚು ಜಾಗೃತರಾಗುತ್ತೇವೆ. ಅಲ್ಲದೆ, ಧೂಪದ ಹೊಗೆಯು ಚಿಕ್ಕ ಚಿಕ್ಕ ಕೀಟಗಳನ್ನು, ಪ್ರಾಣಿಗಳನ್ನು ಮನೆಯಿಂದ ಹೊರಹಾಕುತ್ತದೆ. ಇದು ಮನೆಗೆ ಒಂದು ಸಕಾರಾತ್ಮಕ ಪ್ರಭಾವಳಿಯನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯಿಸದಿರಿ
ಖುಷಿ, ಸಮಾಧಾನಕ್ಕಾಗಿ ಅಥವಾ ಸೊಳ್ಳೆಗಳನ್ನು ಓಡಿಸಲು ಮಾತ್ರ ಧೂಪ ಹಾಕುವುದಲ್ಲ. ದೇವರ ವಿಚಾರದಲ್ಲಿ, ಒಂದು ಫೋಟೋ, ವಿಗ್ರಹದ ಮುಂದೆ ಅತಿಯಾದ ಹೊಗೆಯಿಲ್ಲದೆ, ಸ್ವಲ್ಪ ಪ್ರಮಾಣದ ಒಳ್ಳೆಯ ಸುವಾಸನೆಭರಿತವಾದ ಲೋಭೋನ ಅಥವಾ ಸಾಂಬ್ರಾಣಿ ಧೂಪವನ್ನು ಅರ್ಪಿಸಬೇಕು. ಇದು ಮನೆಯ ಮೇಲೆ ಮಾಡಿರಬಹುದಾದ ತಂತ್ರಗಳು, ಮಂತ್ರಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಗುಗ್ಗುಳದ ಧೂಪವು ವಾಸ್ತು ದೋಷಗಳನ್ನು ನಿವಾರಿಸಿ, ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ನಮ್ಮಲ್ಲಿ ಆತ್ಮಶಕ್ತಿಯನ್ನು ವೃದ್ಧಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ