
ಬಡ್ಡಿ ವಹಿವಾಟು ಮತ್ತು ಅದರ ಆಧ್ಯಾತ್ಮಿಕ ಪರಿಣಾಮಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, “ಬಡ್ಡಿ ವ್ಯಾಪಾರ” ಎಂಬುದು ಅತಿ ಸಾಮಾನ್ಯವಾಗಿದೆ. ಬ್ಯಾಂಕ್‌ಗಳಿಂದ ಹಿಡಿದು ಸರ್ಕಾರಿ ಸಂಸ್ಥೆಗಳವರೆಗೆ, ಬಡ್ಡಿ ಮತ್ತು ಚಕ್ರಬಡ್ಡಿ ಪದ್ಧತಿಯು ಆರ್ಥಿಕ ವ್ಯವಹಾರಗಳ ಅವಿಭಾಜ್ಯ ಅಂಗವಾಗಿದೆ. ಆದರೆ, ಆಧ್ಯಾತ್ಮಿಕ ಮತ್ತು ಧರ್ಮಶಾಸ್ತ್ರಗಳ ದೃಷ್ಟಿಕೋನದಿಂದ ಈ ಬಡ್ಡಿ ವಹಿವಾಟು ಶುಭಕರವೇ ಅಥವಾ ಅಶುಭಕರವೇ? ಇದರ ಫಲಿತಾಂಶಗಳು ಏನಿರಬಹುದು? ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ಪ್ರಾಚೀನ ಯುಗಗಳಲ್ಲಿ ಬಡ್ಡಿ ವಹಿವಾಟು ಇಂದಿನಂತೆ ಹಣದ ರೂಪದಲ್ಲಿ ಇರಲಿಲ್ಲ. ತ್ರೇತಾಯುಗ ಮತ್ತು ದ್ವಾಪರಯುಗಗಳಂತಹ ಯುಗಗಳಲ್ಲಿ, ಧಾನ್ಯ ಅಥವಾ ಇತರ ವಸ್ತುಗಳ ರೂಪದಲ್ಲಿ ಬಡ್ಡಿ ನೀಡಲಾಗುತ್ತಿತ್ತು. ಉದಾಹರಣೆಗೆ, ಹತ್ತು ಸೇರು ಧಾನ್ಯವನ್ನು ನೀಡಿ ಮೂರು ತಿಂಗಳ ನಂತರ ಹದಿನೈದು ಸೇರು ಹಿಂಪಡೆಯುವುದು ಸಾಮಾನ್ಯ ಸಂಗತಿಯಾಗಿತ್ತು. ಕಾಲಕ್ರಮೇಣ “ಕಾಲಾಯ ತಸ್ಮೈ ನಮಃ” ಎಂಬಂತೆ, ಈ ವ್ಯವಹಾರವು ಧಾನ್ಯದಿಂದ ಹಣದ ರೂಪಕ್ಕೆ ಬದಲಾಯಿತು. ಇಂದು, ಬಡ್ಡಿ ವಹಿವಾಟು ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಚೆನ್ನಾಗಿ ಹಣವಂತರಾಗಿರುವವರು, ಸರ್ಕಾರಿ ಉದ್ಯೋಗದಲ್ಲಿರುವವರು, ಅಥವಾ ಇತರೆ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಒಂದು “ಸೈಡ್ ಬಿಸಿನೆಸ್” ಆಗಿ ರೂಪುಗೊಂಡಿದೆ.
ಆದರೆ, ಧರ್ಮಶಾಸ್ತ್ರಗಳು ಮತ್ತು ಧರ್ಮ ಗ್ರಂಥಗಳು ಈ ಬಡ್ಡಿ ವ್ಯಾಪಾರದ ಕುರಿತು ಕೆಲವು ನೀತಿ ನಿಬಂಧನೆಗಳನ್ನು ಹೊಂದಿವೆ. ಅತಿ ಶ್ರೀಮಂತ ವರ್ಗದವರು, ಸಾಕಷ್ಟು ಹಣಕಾಸು ಹೊಂದಿರುವವರು, ತಮ್ಮ ಕೈಲಾದರೆ ನಿಶಕ್ತರಿಗೆ ಮತ್ತು ಅಸಹಾಯಕರಿಗೆ ಒಂದು ಸಲ ಸಹಾಯ ಮಾಡಿ, ಅದನ್ನು ಮರೆತುಬಿಡುವುದು ಉತ್ತಮ ಎಂದು ಶಾಸ್ತ್ರಗಳು ಹೇಳುತ್ತವೆ. ಆದರೆ, ಶ್ರಮಿಕರು, ದಿನಗೂಲಿಗಳು, ಕಷ್ಟಪಟ್ಟು ಕೆಲಸ ಮಾಡುವ ವರ್ಗದವರು, ದೀನರು, ಅಥವಾ ಶೋಷಿತ ವರ್ಗದವರಿಂದ ಬಡ್ಡಿ ಹಣವನ್ನು ಪಡೆಯುವುದು ಶುಭಕರವಲ್ಲ. ಅವರ ಶ್ರಮದ ಫಲವನ್ನು ಹೀರಿಕೊಂಡಂತೆ ಇದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಉತ್ತಮ ಫಲಿತಾಂಶಗಳು ದೊರೆಯುವುದಿಲ್ಲ, ಬದಲಿಗೆ ಕಷ್ಟಗಳು ಮತ್ತು ಹಣ ಉಳಿಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ಧರ್ಮಶಾಸ್ತ್ರಗಳು ಸ್ಪಷ್ಟಪಡಿಸುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!
ಆದಾಗ್ಯೂ, ಬಡ್ಡಿ ವ್ಯಾಪಾರಕ್ಕೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಕೈ ಕಾಲು ಇಲ್ಲದವರು, ನಿಶಕ್ತರು, ಶರೀರದ ಶಕ್ತಿ ಇಲ್ಲದವರು, ಅಥವಾ ಅಂಗವಿಕಲರು ಏನಾದರೂ ಸ್ವಲ್ಪ ಹಣವನ್ನು ಇಟ್ಟುಕೊಂಡು, ಅದರಿಂದ ಬಡ್ಡಿ ಗಳಿಸಿ ತಮ್ಮ ಜೀವನೋಪಾಯ ನಡೆಸಲು ಧರ್ಮಶಾಸ್ತ್ರಗಳು ಅವಕಾಶ ಕಲ್ಪಿಸುತ್ತವೆ. ಅದೇ ರೀತಿ, ತಂದೆ, ಗಂಡ ಅಥವಾ ಮಕ್ಕಳ ಆಶ್ರಯವಿಲ್ಲದ ಮಹಿಳೆಯರು, ಶಾರೀರಿಕವಾಗಿ ಹೊರಗೆ ಹೋಗಿ ದುಡಿಯಲು ಸಾಧ್ಯವಾಗದೆ ಇದ್ದಾಗ, ಅವರು ತಮ್ಮ ಬಳಿ ಇರುವ ಹಣದಿಂದ ಸಣ್ಣ ಪುಟ್ಟ ಬಡ್ಡಿ ವ್ಯಾಪಾರವನ್ನು ಮಾಡಿಕೊಳ್ಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾನ್ಯ ಸಂದರ್ಭಗಳಲ್ಲಿ ಬಡ್ಡಿ ವ್ಯಾಪಾರವು ಅಷ್ಟು ಶುಭಕರವಾಗಿರುವುದಿಲ್ಲ ಮತ್ತು ಅಷ್ಟು ಶುಭ ಫಲಗಳನ್ನು ನೀಡುವುದಿಲ್ಲ. ಅತಿಯಾದ ಅಥವಾ ಅನ್ಯಾಯದ ಬಡ್ಡಿ ವಹಿವಾಟು ಕುಟುಂಬದಲ್ಲಿ ಅಸ್ತವ್ಯಸ್ತತೆಗೆ, ಗಂಡ ಹೆಂಡತಿಯರ ನಡುವೆ ಕಲಹಗಳಿಗೆ, ಮತ್ತು ಆಕಸ್ಮಿಕ ರೋಗ ರುಜಿನಗಳಿಗೆ ಕಾರಣವಾಗಬಹುದು. ಹಳ್ಳಿಗಳಲ್ಲಿ ನಾವು ನೋಡಿದಂತೆ, “ಸಿಕ್ಕಾಪಟ್ಟೆ ಬಡ್ಡಿ ತಿಂದ್ರು, ಚಕ್ರಬಡ್ಡಿ ತಿಂದ್ರು” ಎಂದು ಹೇಳುವಾಗ, ನಾಲ್ಕರಷ್ಟು ಹಣವನ್ನು ಪಡೆದರೂ, ಅದರಲ್ಲಿ ಒಂದು ಭಾಗ ಮಾತ್ರ ನಮ್ಮದಾಗಿದ್ದು, ಉಳಿದ ಹಣ ನಕಾರಾತ್ಮಕ ಶಕ್ತಿಯಾಗಿ ಮರಳಿ ಬರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ