
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನಮಸ್ಕಾರ ಮಾಡುವ ಸರಿಯಾದ ವಿಧಾನದ ಬಗ್ಗೆ ವಿವರಿಸಿದ್ದಾರೆ. ನಮಸ್ಕಾರಗಳನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರ ಅವುಗಳ ಸಂಪೂರ್ಣ ಫಲ ನಮಗೆ ಲಭಿಸುತ್ತದೆ. ದೇವರುಗಳಿಗೆ, ಮನುಷ್ಯರಿಗೆ, ಹಿರಿಯರಿಗೆ ಹಾಗೂ ಗುರುಗಳಿಗೆ ನಾವು ಸಲ್ಲಿಸುವ ನಮಸ್ಕಾರವು ಯಾಂತ್ರಿಕವಾಗಿರದೆ, ಶ್ರದ್ಧೆ, ಭಕ್ತಿ ಮತ್ತು ಮನಸ್ಸಿನಿಂದ ಬಂದಂತಹ ವಿನಯದಿಂದ ಕೂಡಿರಬೇಕು. ಅಂತಹ ನಮಸ್ಕಾರಗಳು ನಿಜವಾದ ಫಲಗಳನ್ನು ನೀಡುತ್ತವೆ ಎಂದು ಅವರು ಹೇಳಿದ್ದಾರೆ.
ನಿರ್ದಿಷ್ಟವಾಗಿ, ವಿಷ್ಣು ದೇವರಾಗಬಹುದು, ಸಮಸ್ತ ವಿಷ್ಣು ಅಂಶವಿರುವ ಎಲ್ಲಾ ದೇವರುಗಳಾಗಬಹುದು ಅಥವಾ ಶಿವನ ದೇವಸ್ಥಾನದಲ್ಲಿ ನಮಸ್ಕರಿಸುವಾಗ ವಿಶೇಷ ಕ್ರಮವನ್ನು ಪಾಲಿಸಬೇಕು. ಎರಡೂ ಕೈಗಳನ್ನು ಜೋಡಿಸಿ, ತಲೆಯ ಮೇಲೆ ಸುಮಾರು ಹನ್ನೆರಡು ಇಂಚು ಎತ್ತರದಲ್ಲಿ ಹಿಡಿದು, ತಲೆಬಾಗಿ, ಶ್ರದ್ಧಾಭಕ್ತಿಯಿಂದ ಮತ್ತು ವಿನಯದಿಂದ ನಮಸ್ಕರಿಸಬೇಕು. ಹೀಗೆ ಮಾಡಿದಾಗ ಆ ನಮಸ್ಕಾರದ ಫಲ ನಮಗೆ ಹೆಚ್ಚಾಗಿ ಸಿಗುತ್ತದೆ.
ಇನ್ನು, ಬೇರೆ ಎಲ್ಲಾ ದೇವರುಗಳಿಗೆ ನಮಸ್ಕರಿಸುವ ಸಂದರ್ಭದಲ್ಲಿ, ಎರಡೂ ಕೈಗಳನ್ನು ತಲೆಯ ಮೇಲೆ ಜೋಡಿಸಿ ನಮಸ್ಕರಿಸುವುದು ವಾಡಿಕೆ. ಈ ವಿಧಾನವು ಕೂಡ ಶುಭ ಫಲಗಳನ್ನು ತರುತ್ತದೆ. ಗುರುಗಳಿಗೆ ನಮಸ್ಕರಿಸುವಾಗ ನಾವು ಬಾಯಿಂದ ನಮಸ್ಕಾರ ಸರ್ ಎಂದು ಹೇಳುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗುರುವಿಗೆ ಶಿರಬಾಗಿ, ತಲೆಯನ್ನು ಪೂರ್ತಿಯಾಗಿ ಬಾಗಿಸಿ, ಎರಡೂ ಕೈಗಳನ್ನು ಜೋಡಿಸಿ ವಿನಯದಿಂದ ನಮಸ್ಕರಿಸಬೇಕು. ಮೂಗು ಕೈ ಬೆರಳುಗಳ ಮೇಲೆ ಬರುವಂತೆ ನಮಸ್ಕರಿಸುವುದು ಉತ್ತಮ ವಿಧಾನ. ಈ ರೀತಿಯ ನಮಸ್ಕಾರದಿಂದ ಗುರುವಿನ ಋಣವನ್ನು ತೀರಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಗುರುವಿಗೆ ಬಾಯಲ್ಲಿ ನಮಸ್ಕಾರ ಹೇಳಬಾರದು.
ಮಹನೀಯರು, ಯೋಗಿಗಳು, ಸಾಧುಸಂತರು ಅಥವಾ ದೊಡ್ಡ ಯೋಗಿಗಳಿಗೆ ನಮಸ್ಕರಿಸುವಾಗ ಎರಡೂ ಕೈಗಳನ್ನು ವಕ್ಷಸ್ಥಳದಲ್ಲಿ (ಎದೆಯ ಭಾಗದಲ್ಲಿ) ಜೋಡಿಸಿ ಶಿರಬಾಗಿ ನಮಸ್ಕರಿಸಬೇಕು. ಇದರಿಂದ ನಮಗೂ ಶುಭ ಫಲಗಳು ದೊರೆಯುತ್ತವೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ತಂದೆ ಅಥವಾ ಪೋಷಕರಿಗೆ ನಮಸ್ಕರಿಸುವಾಗ, ಎರಡೂ ಕೈಗಳನ್ನು ಬಾಯಿಯ ಹತ್ತಿರ ಜೋಡಿಸಿ ನಮಸ್ಕರಿಸಬೇಕು. ತಾಯಿಗೆ ಮಾತ್ರ ವಿಶೇಷವಾಗಿ, ಹೊಟ್ಟೆಯ ಭಾಗದಲ್ಲಿ ಅಥವಾ ಹೃದಯದ ಭಾಗದಲ್ಲಿ ಕೈಗಳನ್ನು ಜೋಡಿಸಿ ನಮಸ್ಕರಿಸಬಹುದು. ತಾಯಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದೂ ಕೂಡಾ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ನಮಸ್ಕಾರವು ಕೇವಲ ಸಾಮಾನ್ಯ ಭಕ್ತಿಯ ಅಭಿವ್ಯಕ್ತಿಯಲ್ಲ. ಯೋಗಾಭ್ಯಾಸದಲ್ಲಿ, ವಾಸ್ತು ರೀತ್ಯಾ, ಮತ್ತು ಶಾಸ್ತ್ರ ರೀತ್ಯಾ ಕೂಡ ನಮಸ್ಕಾರದ ವಿವಿಧ ವಿಧಾನಗಳಿಗೆ ಮಹತ್ವವಿದೆ. ಈ ಕ್ರಮಬದ್ಧವಾದ ನಮಸ್ಕಾರಗಳಿಂದ ಅಪಾರ ಫಲ ದೊರೆಯುತ್ತದೆ. ವಿಷ್ಣು ದೇವಸ್ಥಾನಕ್ಕೆ ಹೋದಾಗ, ತಲೆಯ ಮೇಲ್ಭಾಗದಲ್ಲಿ ಹನ್ನೆರಡು ಇಂಚು ಎತ್ತರದಲ್ಲಿ ಕೈ ಜೋಡಿಸಿ ತಲೆಬಾಗಿಸಿದಾಗ, ದೇವರ ದೃಷ್ಟಿ ನಮ್ಮ ಮೇಲೆ ಬೀಳುತ್ತದೆ ಎಂಬ ನಂಬಿಕೆಯಿದೆ. ನಾವು ಆಗಾಗ ದೇವಸ್ಥಾನಗಳಿಗೆ ಹೋಗುತ್ತಿದ್ದರೂ, ಶಾಸ್ತ್ರೋಕ್ತವಾಗಿ ನಮಸ್ಕಾರ ಮಾಡಿದಾಗ ಮಾತ್ರ ಅದರ ಸಂಪೂರ್ಣ ಫಲ ಸಿಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 am, Sat, 31 January 26