Spiritual Tips: ಪಿತೃಗಳ ಹೆಸರಿನಲ್ಲಿ ಗಿಡ ನೆಡುವುದರ ಮಹತ್ವ ಮತ್ತು ಆಧ್ಯಾತ್ಮಿಕ ಪ್ರಯೋಜನಗಳು
ಪಿತೃ ಕಾರ್ಯಗಳನ್ನು ನಿರ್ವಹಿಸುವ ವಿಧಾನಗಳಲ್ಲಿ ಪಿತೃಗಳ ಹೆಸರಿನಲ್ಲಿ ಗಿಡಗಳನ್ನು ನೆಡುವುದು ಒಂದು ವಿಶೇಷ ಮಾರ್ಗವಾಗಿದೆ. ಪದ್ಮ ಪುರಾಣದ ಪ್ರಕಾರ, ಈ ಗಿಡಗಳಿಗೆ ನೀರು ಬಿದ್ದಾಗ ಪ್ರತಿ ಎಲೆಯಿಂದ ಬೀಳುವ ಹನಿಗಳು ಪಿತೃಗಳಿಗೆ ತರ್ಪಣವಾಗಿ ಸಲ್ಲುತ್ತವೆ, ಇದು ಅವರಿಗೆ ಶುಭವನ್ನು ತರುತ್ತದೆ ಮತ್ತು ಪುಣ್ಯವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಸನಾತನ ಸಂಸ್ಕೃತಿಯಲ್ಲಿ ಪಿತೃ ಕಾರ್ಯಗಳಿಗೆ ಅಗ್ರಸ್ಥಾನವಿದೆ. ಪೂರ್ವಜರಿಗೆ ಶ್ರದ್ಧೆ, ಗೌರವ ಸಲ್ಲಿಸುವುದು ನಮ್ಮ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆಗಳಂತಹ ವಿಶೇಷ ದಿನಗಳಲ್ಲಿ ಪಿತೃ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಆದರೆ, ಪಿತೃಗಳಿಗೆ ಗೌರವ ಸಲ್ಲಿಸಲು ಒಂದು ವಿಶಿಷ್ಟ ಮತ್ತು ಫಲಪ್ರದ ಮಾರ್ಗವೆಂದರೆ ಅವರ ಹೆಸರಿನಲ್ಲಿ ಗಿಡಗಳನ್ನು ನೆಡುವುದು ಅಥವಾ ವೃಕ್ಷಗಳನ್ನು ದಾನ ಮಾಡುವುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿ ಹೇಳುವಂತೆ, ಪಿತೃಗಳ ಹೆಸರಿನಲ್ಲಿ ಗಿಡಗಳನ್ನು ನೆಡುವುದು ಕೇವಲ ಪರಿಸರ ರಕ್ಷಣೆಗೆ ಮಾತ್ರ ಸೀಮಿತವಲ್ಲ, ಇದು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಕಾರ್ಯವನ್ನು ಯಾವುದೇ ನಿರ್ದಿಷ್ಟ ವ್ಯಕ್ತಿಗಾಗಿ ನಿರ್ವಹಿಸಬಹುದು, ಅದು ನಮ್ಮ ಪೂರ್ವಜರಾಗಬಹುದು, ನಮಗೆ ವಿದ್ಯೆ ನೀಡಿದ ಗುರುಗಳಾಗಬಹುದು, ಆರ್ಥಿಕ ಸಹಾಯ ಮಾಡಿದ ಅನ್ನದಾತರಾಗಬಹುದು, ಅಥವಾ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿ ದೈವಾಧೀನರಾದ ಯಾವುದೇ ವ್ಯಕ್ತಿಯ ಹೆಸರಿನಲ್ಲೂ ಗಿಡಗಳನ್ನು ನೆಡಬಹುದು. ಈ ಸತ್ಕಾರ್ಯದಿಂದ ದೊರೆಯುವ ಫಲವು ಸಕಲರಿಗೂ ತಲುಪುತ್ತದೆ ಎಂಬುದು ನಂಬಿಕೆ.
ಪದ್ಮ ಪುರಾಣದಲ್ಲಿ ಮಹರ್ಷಿ ವೇದ ವ್ಯಾಸರು ಈ ವಿಧಾನದ ಮಹತ್ವವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಯಾರಾದರೂ ಪಿತೃಗಳ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ದಾನ ಮಾಡಿದಾಗ, ಆ ಗಿಡದ ಮೇಲೆ ನೀರು ಬಿದ್ದಾಗ – ಅದು ಮಳೆಯಾಗಿರಲಿ ಅಥವಾ ನಾವು ಹಾಕಿದ ನೀರಾಗಿರಲಿ – ಪ್ರತಿ ಎಲೆಯಿಂದ ಕೆಳಗೆ ಬೀಳುವ ನೀರಿನ ಹನಿಗಳು ಆಯಾ ಪಿತೃಗಳಿಗೆ ತರ್ಪಣವಾಗಿ ಸಲ್ಲುತ್ತವೆ. ಎಷ್ಟು ಎಲೆಗಳಿಂದ ನೀರು ಕೆಳಗೆ ಬೀಳುತ್ತದೆಯೋ, ಅಷ್ಟು ತರ್ಪಣಗಳು ಅವರ ಹೆಸರಿನಲ್ಲಿ ಸಮರ್ಪಿತವಾಗುತ್ತವೆ. ಈ ತರ್ಪಣಗಳು ಅವರ ಆತ್ಮಗಳು ಎಲ್ಲಿಯೇ ಇದ್ದರೂ (ಅದು ಇನ್ನೊಂದು ಜನ್ಮವಿರಬಹುದು, ಪ್ರಾಣಿ-ಪಕ್ಷಿಗಳ ರೂಪವಾಗಿರಬಹುದು) ಅವರಿಗೆ ತಲುಪಿ ಶುಭವನ್ನು ತರುತ್ತವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ಗಿಡಗಳನ್ನು ನೆಡುವ ಸ್ಥಳವು ಮನೆಯ ಸುತ್ತಮುತ್ತ, ದೇವಸ್ಥಾನದ ಆವರಣ, ಅನಾಥಾಲಯಗಳು ಅಥವಾ ಸಾರ್ವಜನಿಕ ಒಳಿತಿಗಾಗಿ ಮೀಸಲಾದ ಯಾವುದೇ ಸ್ಥಳವಾಗಿರಬಹುದು. ಇಂತಹ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟಾಗ, ಅವುಗಳ ಆರೈಕೆಯ ಮೂಲಕ ನಡೆಯುವ ಪ್ರತಿಯೊಂದು ಕ್ರಿಯೆಯೂ ಪಿತೃಗಳಿಗೆ ಪುಣ್ಯವಾಗಿ ಪರಿಣಮಿಸುತ್ತದೆ. ಒಂದು ಎಲೆಯಿಂದ ಬೀಳುವ ಒಂದು ಹನಿ ನೀರೂ ಕೂಡ ಒಂದು ತರ್ಪಣಕ್ಕೆ ಸಮಾನವಾಗಿರುತ್ತದೆ.
ಸನಾತನ ಧರ್ಮದ ಪ್ರಕಾರ, ನಮ್ಮ ಸುಖ-ದುಃಖಗಳು ನಮ್ಮ ಪುಣ್ಯ-ಪಾಪಗಳ ಫಲವಾಗಿರುತ್ತದೆ. ಪುಣ್ಯದ ಕೆಲಸಗಳನ್ನು ಮಾಡುವ ಮೂಲಕ ದುಃಖಗಳನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಸುಖವನ್ನು ಕಾಪಾಡಿಕೊಳ್ಳಬಹುದು. ಪಿತೃಗಳ ಹೆಸರಿನಲ್ಲಿ ಗಿಡ ನೆಡುವುದು ಒಂದು ಶ್ರೇಷ್ಠ ಪುಣ್ಯದ ಕೆಲಸವಾಗಿದ್ದು, ಇದು ಜನ್ಮ-ಜನ್ಮಗಳಿಗೂ ಒಳಿತನ್ನುಂಟುಮಾಡುತ್ತದೆ ಎಂಬುದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
