AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Magha Masa: ಮಾಘ ಮಾಸದಲ್ಲಿ ನದಿ ಸ್ನಾನದ ಮಹತ್ವ; ಆಧ್ಯಾತ್ಮಿಕ ಲಾಭ ಮತ್ತು ಆಚರಣೆಯ ವಿಧಾನ

ಮಾಘ ಮಾಸವು ಅತೀ ಪವಿತ್ರವಾಗಿದ್ದು, ಈ ಮಾಸದಲ್ಲಿ ನದಿ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಮಾಘ ಸ್ನಾನವು ಮನಸ್ಸು, ದೇಹವನ್ನು ಶುದ್ಧೀಕರಿಸುವುದಲ್ಲದೆ, ಕರ್ಮಗಳನ್ನು ತೊಳೆದು ದುಷ್ಟ ಶಕ್ತಿಗಳ ಕಾಟವನ್ನು ಕಡಿಮೆ ಮಾಡುತ್ತದೆ. ಸೂರ್ಯಾರಾಧನೆ, ಶಿವ-ಕೇಶವರ ಪೂಜೆ, ತ್ರಿಶಕ್ತಿಗಳ ಅನುಗ್ರಹ ಹಾಗೂ ದಾನ-ಧರ್ಮಗಳಿಗೆ ಈ ಮಾಸ ಅತ್ಯಂತ ಶುಭ. ರಥಸಪ್ತಮಿ, ವಸಂತ ಪಂಚಮಿಗಳಂತಹ ವಿಶೇಷ ದಿನಗಳ ಆಚರಣೆ ಪ್ರಾಮುಖ್ಯತೆ ಪಡೆದಿವೆ.

Magha Masa: ಮಾಘ ಮಾಸದಲ್ಲಿ ನದಿ ಸ್ನಾನದ ಮಹತ್ವ; ಆಧ್ಯಾತ್ಮಿಕ ಲಾಭ ಮತ್ತು ಆಚರಣೆಯ ವಿಧಾನ
ಮಾಘ ಸ್ನಾನ
ಅಕ್ಷತಾ ವರ್ಕಾಡಿ
|

Updated on: Jan 20, 2026 | 9:51 AM

Share

2026ರ ಮಾಘ ಮಾಸವು ಜನವರಿ 19ರ ಸೋಮವಾರದಿಂದ ಪ್ರಾರಂಭವಾಗಿದೆ. ಈ ಮಾಸದಲ್ಲಿ ಮಾಡುವ ಸ್ನಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಏಕೆಂದರೆ ಮಾಘ ಸ್ನಾನವು ಕೇವಲ ದೇಹವನ್ನು ಶುದ್ಧಗೊಳಿಸುವುದಲ್ಲದೆ, ಮನಸ್ಸನ್ನು ಶುದ್ಧಿಪಡಿಸಿ, ಕರ್ಮಗಳನ್ನು ತೊಳೆಯುತ್ತದೆ ಎಂದು ನಂಬಲಾಗಿದೆ. ಮಾಘ ಸ್ನಾನಕ್ಕಾಗಿ ಪವಿತ್ರ ನದಿ ಅಥವಾ ಸಮುದ್ರಗಳಿಗೆ ಹೋಗಬೇಕೇ ಎಂಬ ಪ್ರಶ್ನೆ ಅನೇಕರಿಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಗಂಗಾ ನದಿ, ಪ್ರಯಾಗ, ಹರಿದ್ವಾರ, ವಾರಣಾಸಿ, ನಾಸಿಕ್, ಉಜ್ಜೈನಿ ಮತ್ತು ಕಾವೇರಿ ಮುಂತಾದ ಪವಿತ್ರ ನದಿಗಳಲ್ಲಿ ಮಾಘ ಮಾಸದಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ಮಾಸವು ಸೂರ್ಯಾರಾಧನೆಗೆ ವಿಶೇಷವಾಗಿದ್ದು, ಸೂರ್ಯನಮಸ್ಕಾರಕ್ಕೆ ಹೆಚ್ಚಿನ ಮಹತ್ವವಿದೆ. “ನಮಸ್ಕಾರ ಪ್ರಿಯೋ ಭಾನು” ಎಂಬ ನುಡಿಯಂತೆ ಸೂರ್ಯಾರಾಧನೆಯು ಆರೋಗ್ಯವನ್ನು ಕರುಣಿಸುತ್ತದೆ. ಪ್ರತಿಯೊಬ್ಬರ ಆಸೆಗಳಾದ ಮನೆ ಕಟ್ಟುವಿಕೆ, ಸುಖಮಯ ವೈವಾಹಿಕ ಜೀವನ, ಉತ್ತಮ ಆರೋಗ್ಯ, ವೃತ್ತಿ ಬೆಳವಣಿಗೆ ಮತ್ತು ಮಾನಸಿಕ ಶಾಂತಿಯ ಈಡೇರಿಕೆಗೆ ಮನಸ್ಸು ಶುದ್ಧವಾಗಿರಬೇಕು, ಭಗವಂತನ ಕೃಪೆ ಇರಬೇಕು ಮತ್ತು ಸಮಾಜದ ಸ್ವಾಸ್ಥ್ಯ ಚೆನ್ನಾಗಿರಬೇಕು. ಮಾಘ ಮಾಸವು ಇಂತಹ ಆಸೆಗಳ ಈಡೇರಿಕೆಗೆ ಸೂಕ್ತವಾದ ಕಾಲ.

ಈ ಮಾಸದಲ್ಲಿ ಶಿವ ಮತ್ತು ಕೇಶವರ (ವಿಷ್ಣು) ಅವಿರ್ಭಾವವಿರುತ್ತದೆ. “ಶಿವರೂಪಾಯ ವಿಷ್ಣುವೇ, ವಿಷ್ಣುರೂಪಾಯ ಶಿವ” ಎಂಬ ನಂಬಿಕೆಯಂತೆ ಇಬ್ಬರೂ ಒಂದೇ ಎಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವ ಅಥವಾ ವಿಷ್ಣುವನ್ನು ಪೂಜಿಸುವುದರಿಂದ ಇಬ್ಬರ ಅನುಗ್ರಹವೂ ಲಭಿಸುತ್ತದೆ. ಇದರ ಜೊತೆಗೆ, ತ್ರಿಶಕ್ತಿಗಳಾದ ದುರ್ಗಾದೇವಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯರ ಕೃಪೆಗೂ ಪಾತ್ರರಾಗಲು ಮಾಘ ಮಾಸ ಅತ್ಯಂತ ಶ್ರೇಷ್ಠ. ದೀಪಾರಾಧನೆ ಮತ್ತು ದಾನಗಳಿಗೆ ಈ ಮಾಸದಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಅನ್ನದಾನ, ಉಪ್ಪಿನ ದಾನ, ಬೆಲ್ಲದ ದಾನ ಮತ್ತು ಸಿಹಿ ಪದಾರ್ಥಗಳ ದಾನ ಮಾಡುವುದು ಪುಣ್ಯಕರ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಮಾಘ ಮಾಸದಲ್ಲಿ ಹಲವು ಪವಿತ್ರ ದಿನಗಳು ಬರುತ್ತವೆ. ಚೌತಿಯಂದು ಉಮಾ ಮತ್ತು ಗಣೇಶ ಪೂಜೆ, ಪಂಚಮಿಯಂದು ವಸಂತ ಪಂಚಮಿ ಅಥವಾ ಶ್ರೀ ಪಂಚಮಿ ಆಚರಣೆ (ಸರಸ್ವತಿ ಪೂಜೆ, ವಿದ್ಯಾರ್ಜನೆ, ಲಕ್ಷ್ಮಿ ಅನುಗ್ರಹಕ್ಕೆ) ಪ್ರಮುಖ. ಶುದ್ಧ ಸಪ್ತಮಿಯನ್ನು ಸೂರ್ಯ ಭಗವಾನ್‌ನ ಜನ್ಮದಿನ, ಅಂದರೆ ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಅಷ್ಟಮಿಯನ್ನು ಭೀಷ್ಮಾಷ್ಟಮಿ ಎಂದು, ನವಮಿಯನ್ನು ನಂದಿನಿ ಪೂಜೆಗೆ, ದಶಮಿ ಮತ್ತು ಏಕಾದಶಿಗಳಿಗೂ ಈ ಮಾಸದಲ್ಲಿ ಹೆಚ್ಚಿನ ಮಹತ್ವವಿದೆ.

ಪವಿತ್ರ ಸ್ನಾನ ಮಾಡುವಾಗ “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಎಂಬ ಮಂತ್ರವನ್ನು ಸ್ಮರಿಸುತ್ತಾ ಸಪ್ತ ನದಿಗಳ ಸ್ಮರಣೆ ಮಾಡಬೇಕು. ಬ್ರಾಹ್ಮೀಕ ಮುಹೂರ್ತದಲ್ಲಿ ಸೂರ್ಯಾಭಿಮುಖವಾಗಿ, ಪೂರ್ವ ದಿಕ್ಕಿಗೆ ಕುಳಿತು ಓಂ ನಮೋ ನಾರಾಯಣಾಯ ಎಂಬ ವಿಷ್ಣು ಮಂತ್ರವನ್ನು ಜಪಿಸುವುದರಿಂದ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ