
ತುಳಸಿ ಪೂಜೆ ಮಾಡುವುದು ಮೂಡನಂಬಿಕೆ” ಎಂಬ ಅಭಿಪ್ರಾಯ ಕೆಲವರಲ್ಲಿ ಕಾಣಬಹುದು. ಆದರೆ ಈ ಪುರಾತನ ಪದ್ಧತಿಯ ಹಿಂದೆ ಅಡಗಿರುವ ಆಳವಾದ ವೈಜ್ಞಾನಿಕ ಸತ್ಯ ಮತ್ತು ಆಧ್ಯಾತ್ಮಿಕ ಅರ್ಥವನ್ನು ತಿಳಿದರೆ, ನಮ್ಮ ಪೂರ್ವಜರ ಚಿಂತನೆ ಎಷ್ಟು ಪ್ರಗತಿಪರವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಹಿಂದೂ ಪುರಾಣಗಳ ಪ್ರಕಾರ ತುಳಸಿ ದೇವಿ ಮಹಾಲಕ್ಷ್ಮಿಯ ಅವತಾರ. ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದೇವಿಯಾದ್ದರಿಂದ, ತುಳಸಿ ಇಲ್ಲದೆ ವಿಷ್ಣು ಪೂಜೆಯೇ ಅಪೂರ್ಣ. ಮನೆಯ ಮಡಿಲಿನ ತುಳಸಿ ಕೇವಲ ಒಂದು ಗಿಡವಲ್ಲ – ಅದು ಶುದ್ಧತೆ, ಧನಾತ್ಮಕ ಶಕ್ತಿ ಮತ್ತು ದೈವಾನುಗ್ರಹದ ಪ್ರತೀಕವಾಗಿದೆ. ತುಳಸಿ ಸಮೀಪದಲ್ಲಿ ಮಾಡಿದ ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಧ್ಯಾನದಂತೆ ಆಂತರಿಕ ಶುದ್ಧತೆಯನ್ನು ಉಂಟುಮಾಡುತ್ತದೆ.
ತುಳಸಿ ಕೇವಲ ಧಾರ್ಮಿಕ ಸಂಕೇತವಲ್ಲ; ಅದು ಪ್ರಕೃತಿಯ ಅತ್ಯುತ್ತಮ ಜೀವಸಹಾಯಕ ಸಸ್ಯಗಳಲ್ಲಿ ಒಂದಾಗಿದೆ.
ಆಮ್ಲಜನಕದ ನಿತ್ಯ ಸ್ರೋತ. ತುಳಸಿಯ ಪ್ರಮುಖ ವಿಶೇಷತೆ ಎಂದರೆ — ಅದು ದಿನದ ಬಹುಭಾಗದಲ್ಲಿ ಆಮ್ಲಜನಕವನ್ನು ಹೊರಸೂಸುತ್ತದೆ. ಇತರ ಸಸ್ಯಗಳು ಹಗಲಿನಲ್ಲಿ ಮಾತ್ರ ಆಮ್ಲಜನಕ ನೀಡುತ್ತಿದ್ದರೆ, ತುಳಸಿ ರಾತ್ರಿ ವೇಳೆಯಲ್ಲಿಯೂ ವಾತಾವರಣವನ್ನು ಶುದ್ಧಗೊಳಿಸುವ ಸಾಮರ್ಥ್ಯ ಹೊಂದಿದೆ.
ತುಳಸಿ ಕಾರ್ಬನ್ ಮಾನಾಕ್ಸೈಡ್ ಹಾಗೂ ಸಲ್ಫರ್ ಡೈಆಕ್ಸೈಡ್‌ನಂತಹ ಹಾನಿಕರ ಅನಿಲಗಳನ್ನು ಹೀರಿಕೊಂಡು ವಾತಾವರಣವನ್ನು ಶುದ್ಧಗೊಳಿಸುತ್ತದೆ. ತುಳಸಿಯ ಸುತ್ತಮುತ್ತಲಿನ ಗಾಳಿ ತಾಜಾ ಮತ್ತು ಜೀವಂತವಾಗಿರುತ್ತದೆ.
ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ತುಳಸಿಯ ವೈಜ್ಞಾನಿಕ ಗುಣಗಳನ್ನು ತಿಳಿದಿದ್ದರು. ಆದರೆ ಅವರು ಅದನ್ನು ಕೇವಲ ಔಷಧಿ ಅಥವಾ ಸಸ್ಯಶಾಸ್ತ್ರದ ವಿಷಯವನ್ನಾಗಿ ಇರಿಸದೆ, ಜನಜೀವನದ ಸಂಸ್ಕಾರದಲ್ಲೇ ಅಳವಡಿಸಿದರು.
ಮನೆಯ ಹೃದಯ ಮತ್ತು ಆರೋಗ್ಯದ ಕೇಂದ್ರ. ಮನೆಯ ಮಧ್ಯಭಾಗದಲ್ಲಿ ಇರುವ ತುಳಸಿ ಕಟ್ಟೆ ಕೇವಲ ಅಲಂಕಾರವಲ್ಲ:ಅದು ಮನೆಯ ಎಲ್ಲಾ ಕೋಣೆಗಳಿಗೆ ಶುದ್ಧ ಗಾಳಿಯನ್ನು ಹರಡುತ್ತದೆ. ಕುಟುಂಬದ ಎಲ್ಲರೂ ನಿತ್ಯ ಶುದ್ಧ ವಾತಾವರಣದಲ್ಲಿ ಜೀವಿಸುತ್ತಾರೆ. ಧನಾತ್ಮಕ ಶಕ್ತಿಯ ಕೇಂದ್ರವಾಗಿ ಮನೆಯಲ್ಲಿ ಶಾಂತಿ ಮತ್ತು ಮಂಗಳವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ತುಳಸಿ ಹಬ್ಬ ಯಾವಾಗ? ಪೂಜೆಗೆ ಶುಭ ಮುಹೂರ್ತ ಮತ್ತು ಮಹತ್ವವನ್ನು ತಿಳಿಯಿರಿ
ಇಂದು ನಾವೆಲ್ಲಾ ಪರಿಸರ ಮಾಲಿನ್ಯ, ಕೃತಕ ಜೀವನಶೈಲಿ ಮತ್ತು ಒತ್ತಡದಿಂದ ಬಳಲುತ್ತಿದ್ದೇವೆ. ಇಂತಹ ಕಾಲದಲ್ಲಿ ತುಳಸಿಯಂತಹ ಪ್ರಾಚೀನ ಸಂಸ್ಕೃತಿಯ ಅಂಶಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ, ಅವು ಮಾನವ ಆರೋಗ್ಯ ಮತ್ತು ಪರಿಸರದ ಸಮತೋಲನದ ಜೀವಂತ ಚಿಹ್ನೆಗಳಾಗಿವೆ. ಆದ್ದರಿಂದ ತುಳಸಿ ಪೂಜೆಯನ್ನು ಮುಂದುವರಿಸುವುದು – ಪರಂಪರೆಗಾಗಿ ಮಾತ್ರವಲ್ಲ, ನಮ್ಮ ಪ್ರಾಣವಾಯುವಿಗಾಗಿ ಕೂಡ ಅಗತ್ಯ. ಪರಂಪರೆಯನ್ನು ಹೆಮ್ಮೆಯಿಂದ ಮುಂದುವರಿಸೋಣ. “ತುಳಸಿ ಪೂಜೆ ಮೂಡನಂಬಿಕೆ” ಎಂಬ ತಪ್ಪು ಕಲ್ಪನೆಯನ್ನು ಮುರಿಯೋಣ!
ಇದು ನಮ್ಮ ಪೂರ್ವಜರು ರೂಪಿಸಿದ ವಿಜ್ಞಾನಸಮ್ಮತ ಜೀವನಶೈಲಿ. ಅವರು ಪರಿಸರ ಸಂರಕ್ಷಣೆ, ಆರೋಗ್ಯ ರಕ್ಷಣೆ ಮತ್ತು ಆಧ್ಯಾತ್ಮಿಕ ಉನ್ನತಿ – ಈ ಮೂರನ್ನೂ ಒಂದೇ ಸರಳ ಪದ್ಧತಿಯಲ್ಲಿ ಬೆರೆಸಿದರು. ಮನೆಯಲ್ಲೊಂದು ತುಳಸಿ ಇದ್ದರೆ ಶುದ್ಧ ಗಾಳಿ, ಆರೋಗ್ಯಕರ ವಾತಾವರಣ, ಮಾನಸಿಕ ಶಾಂತಿ, ದೈವಾನುಗ್ರಹ ಎಲ್ಲವೂ ಸಿಗುತ್ತದೆ.
“ಯತ್ರ ತುಳಸೀ ತತ್ರ ನಾಸ್ತಿ ದಾರಿದ್ರ್ಯ ಮಂಗಳಮ್”
ಎಲ್ಲಿ ತುಳಸಿ ಇದೆಯೋ, ಅಲ್ಲಿ ದಾರಿದ್ರ್ಯವಿಲ್ಲ, ಮಂಗಳವಿದೆ ಎನ್ನುವ ಮಾತಿದೆ.
ಬರಹ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ, ಶಿರಸಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ