Daily Devotional: ಮರಣ ಹೊಂದುವ ಮುನ್ನ ಅಂತಿಮ ಐದು ನಿಮಿಷ ಹೇಗಿರುತ್ತೆ? ಆಧ್ಯಾತ್ಮಿಕ ವಿಶ್ಲೇಷಣೆ ಇಲ್ಲಿದೆ

ಜೀವನದ ಕೊನೆಯ ಐದು ನಿಮಿಷಗಳು ಮಹತ್ವದ್ದಾಗಿವೆ. ಮರಣವು ನಿಶ್ಚಿತವಾಗಿದ್ದು, ಈ ಅಂತಿಮ ಕ್ಷಣಗಳಲ್ಲಿ ದೇಹ ಮತ್ತು ಆತ್ಮವು ಹಲವು ಬದಲಾವಣೆಗಳನ್ನು ಅನುಭವಿಸುತ್ತವೆ. ಗರುಡ ಪುರಾಣದ ಪ್ರಕಾರ, ಇಂದ್ರಿಯಗಳು ಸ್ಥಗಿತಗೊಂಡು ಪೂರ್ವಜರ ನೆನಪು ಮೂಡುತ್ತದೆ. ಪುಣ್ಯವಂತರಿಗೆ ಶಾಂತಿಯುತವಾದ ನಿರ್ಗಮನವಾದರೆ, ಅಧರ್ಮದಿಂದ ಬದುಕಿದವರಿಗೆ ಭಯ ಆವರಿಸುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Daily Devotional: ಮರಣ ಹೊಂದುವ ಮುನ್ನ ಅಂತಿಮ ಐದು ನಿಮಿಷ ಹೇಗಿರುತ್ತೆ? ಆಧ್ಯಾತ್ಮಿಕ ವಿಶ್ಲೇಷಣೆ ಇಲ್ಲಿದೆ
ಮರಣ
Image Credit source: Pinterest

Updated on: Jun 03, 2026 | 8:30 AM

“ಜಾತಸ್ಯ ಮರಣಂ ಧ್ರುವಂ” ಎಂಬ ವೇದವಾಕ್ಯದಂತೆ, ಹುಟ್ಟಿದ ಪ್ರತಿಯೊಬ್ಬರಿಗೂ ಮರಣ ನಿಶ್ಚಿತ. ರೋಗರುಜಿನೆಗಳು, ಅಪಘಾತಗಳು ಅಥವಾ ಹೃದಯಾಘಾತದಂತಹ ಕಾರಣಗಳಿಂದ ಮರಣ ಸಂಭವಿಸಬಹುದಾದರೂ, ಈ ಅಂತಿಮ ಕ್ಷಣಗಳಲ್ಲಿ, ವಿಶೇಷವಾಗಿ ಆತ್ಮ ದೇಹವನ್ನು ತ್ಯಜಿಸುವ ಕೊನೆಯ ಐದು ನಿಮಿಷಗಳಲ್ಲಿ ಏನಾಗುತ್ತದೆ ಎಂಬುದು ಆಧ್ಯಾತ್ಮಿಕವಾಗಿ ಮಹತ್ವಪೂರ್ಣವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸಾವಿನ ಕೊನೆಯ ಐದು ನಿಮಿಷಗಳಲ್ಲಿ, ದೇಹವು ಹಲವಾರು ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಮೊದಲನೆಯದಾಗಿ, ವ್ಯಕ್ತಿಗೆ ತನ್ನ ಪೂರ್ವಜರು ನೆನಪಾಗುತ್ತಾರೆ. ಈ ದೇಹ ಎಲ್ಲಿಂದ ಬಂತು, ಹಿಂದಿನವರು ಯಾರು ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಇದರ ಜೊತೆಗೆ, ನಮ್ಮ ಪಂಚೇಂದ್ರಿಯಗಳು – ಕಣ್ಣು, ಮೂಗು, ಕಿವಿ, ಬಾಯಿ – ಒಂದೊಂದಾಗಿ ಸ್ಥಗಿತಗೊಳ್ಳಲು ಪ್ರಾರಂಭಿಸುತ್ತವೆ. ಕಣ್ಣುಗಳು ಮಂಪರಾಗುತ್ತವೆ, ಯಾರು ಕಾಣಿಸುವುದಿಲ್ಲ. ಕಿವಿಗಳು ಧ್ವನಿಗಳನ್ನು ಗ್ರಹಿಸುವುದಿಲ್ಲ, ಮತ್ತು ವ್ಯಕ್ತಿಯು ಮಾತನಾಡಲು ಅಥವಾ ಉಸಿರಾಡಲು ಕಷ್ಟಪಡುತ್ತಾನೆ. ಇದು ಮೃತ್ಯು ಸಮೀಪಿಸುತ್ತಿದೆ ಎಂಬುದರ ಸೂಚನೆಯಾಗಿದೆ.

ಗರುಡ ಪುರಾಣವು ಸಾವಿನ ಪಯಣವನ್ನು  ಆತ್ಮದ ವರ್ಗಾವಣೆ ಎಂದು ವಿವರಿಸುತ್ತದೆ. ಅಂದರೆ, ಒಂದು ದೇಹದಿಂದ ಆತ್ಮ ಇನ್ನೊಂದು ದೇಹಕ್ಕೆ ಸಾಗಲು ಸಿದ್ಧವಾಗುತ್ತದೆ. ಈ ಪ್ರಕ್ರಿಯೆಯು ಕೊನೆಯ ಐದು ನಿಮಿಷಗಳಲ್ಲಿ ತೀವ್ರಗೊಳ್ಳುತ್ತದೆ. ದೇಹವು ಆ ಕ್ಷಣದಲ್ಲಿ ಒದ್ದಾಡಬಹುದು, ಆದರೆ ಪುಣ್ಯವಂತರಿಗೆ ಮತ್ತು ಸದಾ ಒಳ್ಳೆಯ ಕಾರ್ಯಗಳನ್ನು ಮಾಡಿದವರಿಗೆ ಈ ತೊಂದರೆಗಳು ಇರುವುದಿಲ್ಲ. ಅಂತಹವರು ನಗುನಗುತ್ತಲೇ, ಶಾಂತಿಯುತವಾಗಿ ಜೀವವನ್ನು ತ್ಯಜಿಸುತ್ತಾರೆ. ಅವರ ಮುಖದಲ್ಲಿ ಒಂದು ವಿಶೇಷವಾದ ಕಾಂತಿ ಮೂಡುತ್ತದೆ, ಇದು ಅವರ ಆತ್ಮದ ಶಾಂತಿಯುತ ನಿರ್ಗಮನದ ಸಂಕೇತವಾಗಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಈ ಅಂತಿಮ ಕ್ಷಣಗಳಲ್ಲಿ ವ್ಯಕ್ತಿ ಅನುಭವಿಸುವ ಭಾವನೆಗಳು ಅವರ ಜೀವನದಲ್ಲಿ ಮಾಡಿದ ಕರ್ಮಗಳನ್ನು ಅವಲಂಬಿಸಿವೆ. ದುಷ್ಟ ವ್ಯಕ್ತಿಗಳಿಗೆ, ತಪ್ಪು ಕಾರ್ಯಗಳನ್ನು ಮಾಡಿದವರಿಗೆ ಭಯ ಮತ್ತು ಆತಂಕ ಆವರಿಸಿಕೊಳ್ಳುತ್ತದೆ. ಆದರೆ, ಸದ್ಗುಣ ಸಂಪನ್ನರಿಗೆ, ಒಳ್ಳೆಯ ಕೆಲಸ ಮಾಡಿದವರಿಗೆ ಸಂತೋಷ, ತೃಪ್ತಿ ಮತ್ತು ಶಾಂತಿ ಇರುತ್ತದೆ. ಲೌಕಿಕ ಆಸ್ತಿ, ಹಣಕಾಸು ಅಥವಾ ಸಂಬಂಧಗಳ ಮೇಲಿನ ಹಿಡಿತ ಈ ಸಮಯದಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಆತ್ಮವು ಕೇವಲ ಮೂಗು ಅಥವಾ ಬಾಯಿಯಿಂದ ಹೊರಹೋಗದೆ, ದೇಹದಲ್ಲಿರುವ ನವದ್ವಾರಗಳ ಮೂಲಕ ಹೊರಡುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.

ಇಂತಹ ಕಠಿಣ ಕ್ಷಣಗಳಲ್ಲಿ ಉತ್ತಮ ಅನುಭವವನ್ನು ಪಡೆಯಲು, ಜೀವನದಲ್ಲಿ ಧರ್ಮದ ಹಾದಿಯಲ್ಲಿ ನಡೆಯುವುದು ಅತಿ ಮುಖ್ಯ. ದಾನ-ಧರ್ಮ ಮಾಡುವುದು, ವೃದ್ಧರಿಗೆ, ಮಕ್ಕಳನ್ನು ಹಾಗೂ ಅಶಕ್ತರಿಗೆ ಸಹಾಯ ಮಾಡುವುದು, ಮತ್ತು ಸದಾ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುವುದು ಭಗವಂತನ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ. ಅಧರ್ಮದ ಜೀವನ ನಡೆಸಿದಾಗ, ಕೊನೆಯ ಐದು ನಿಮಿಷಗಳು ತುಂಬಾ ಕಷ್ಟಕರವಾಗುತ್ತವೆ. ನಮ್ಮ ಇಷ್ಟದೇವತೆ ಅಥವಾ ಕುಲದೇವತೆಯನ್ನು ಆ ಕ್ಷಣದಲ್ಲಿ ಸ್ಮರಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ದಾಸರು ಹೇಳಿದಂತೆ, “ಇನ್ನೂ ಕಾಲ ಕೂಡಿ ಬಂದಿಲ್ಲ, ಈಗಲಾದರೂ ಎಚ್ಚರಿಕೆಯಿಂದಿರು” ಎಂಬುದು ಮರಣದ ಅಂತಿಮ ಕ್ಷಣಗಳಿಗಾಗಿ ಸಿದ್ಧತೆ ಮಾಡಿಕೊಳ್ಳಲು ನಮಗೆ ನೀಡುವ ಸಂದೇಶ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us