Vaikuntha Ekadashi 2022: ವೈಕುಂಠ ಏಕಾದಶಿ ಜ.13, ಮುಕ್ಕೋಟಿ ದ್ವಾದಶಿ ಜ. 14 ರಂದು, ಏನಿದರ ಆಚಾರ-ವಿಚಾರ ತಿಳಿಯೋಣ

| Updated By: ಸಾಧು ಶ್ರೀನಾಥ್​

Updated on: Jan 06, 2022 | 7:37 AM

ಏಕಾದಶಿ ಆಚರಣೆಯ ನೆವದಲ್ಲಿ ಜಿಹ್ವಾ ಚಾಪಲ್ಯಕ್ಕೆ ಕಡಿವಾಣ ಹಾಕಲು, ಉತ್ತರದ್ವಾರದಲ್ಲಿ ತಲೆ ತಗ್ಗಿಸುವ ನೆಪದಲ್ಲಿ ನಮ್ಮ ಅಹಂಕಾರಕ್ಕೆ ತಡೆ ಹಾಕುತ್ತೇವೆ. ಜಗತ್ತಿನ ರಕ್ಷಕ, ಜಗದೊಡೆಯ ನೀನೇ ಎಂಬ ಶರಣಾಗತಿಯ ಭಾವನೆಯಲ್ಲಿ ನಡೆದಾಗ ಶ್ರೀ ಹರಿಯ ಕೃಪಾಕಟಾಕ್ಷ ಪಡೆದು ವೈಕುಂಠ ಏಕಾದಶಿ ಆಚರಣೆಯಲ್ಲಿ ಒಂದಷ್ಟು ಸಾರ್ಥಕತೆ ಕಂಡು ಕೊಳ್ಳಲು ಸಾಧ್ಯ. ಇದುವೇ ವೈಕುಂಠ ಏಕಾದಶಿ ಮಹಾತ್ಮೆ.

Vaikuntha Ekadashi 2022: ವೈಕುಂಠ ಏಕಾದಶಿ ಜ.13, ಮುಕ್ಕೋಟಿ ದ್ವಾದಶಿ ಜ. 14 ರಂದು, ಏನಿದರ ಆಚಾರ-ವಿಚಾರ ತಿಳಿಯೋಣ
ವೈಕುಂಠ ಏಕಾದಶಿ ಜನವರಿ 13ಕ್ಕೆ, ಮುಕ್ಕೋಟಿ ದ್ವಾದಶಿ ಜನವರಿ 14 ರಂದು, ಏನಿದರ ಆಚಾರ-ವಿಚಾರ ತಿಳಿಯೋಣ
Follow us on

ಶ್ರೀಮನ್ನಾರಾಯಣ ಸಾಕ್ಷಾತ್ ವೈಕುಂಠದಿಂದ ಬಂದು ಭಕ್ತರಿಗೆ ದರ್ಶನ ಭಾಗ್ಯ ಕೊಡುವ ಪರಮ ಪುಣ್ಯ ದಿನ. ಶ್ರೀಹರಿಯನ್ನು ಪೂಜಿಸುವುದರಿಂದ ಮನುಜರ ಪಾಪಗಳು ಕಳೆಯುವ ದಿನ. ಮನುಷ್ಯ ಜೀವನದ ಪಯಣದ ಹಾದಿಯಲಿ ಸಾಧನೆಗೆ ರಹದಾರಿ ಮಾಡಿಕೊಡುವ ದಿನ. ಈ ದಿನ ಮನದಲಿ ಒಳ್ಳೆಯ ಯಾವುದೇ ಕಾರ್ಯ ಸಂಕಲ್ಪಿಸಿ ಅದೇ ದಾರಿಯಲಿ ಮುಂದುವರಿದರೆ ನಾವು ಯಶಸ್ಸು ಪಡೆಯುತ್ತೇವೆ. ಉತ್ತರ ದ್ವಾರದಿಂದ ಸ್ವಾಮಿಯ ದರುಶನ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಹೇಳುತ್ತಾರೆ … ಅದುವೇ ವೈಕುಂಠ ಏಕಾದಶಿ (Vaikuntha Ekadashi 2022). ಈ ಬಾರಿ ಜನವರಿ 13 ಗುರುವಾರದಂದು (13th January 2022) ಬಂದಿದೆ. ಜನವರಿ 12 ಬುಧವಾರ 16.50ಕ್ಕೆ ಏಕಾದಶಿ ತಿಥಿ ಆರಂಭವಾಗುತ್ತದೆ. ಜನವರಿ 13 ಗುರುವಾರ 19:30 ಕ್ಕೆ ಮುಗಿಯುತ್ತದೆ.

ಧಾರ್ಮಿಕ ಮಹತ್ವ ತಿಳಿಯೋಣ:
ಅಂಬರೀಷ ಮಹರಾಜರು ಏಕಾದಶಿ ವ್ರತ ಮಾಡಿ ಪಾರಣೆಯಂದು ತೀರ್ಥ ಸೇವಿಸಲು, ತಮಗೆ ಅವಮಾನಿಸಿದನೆಂದು ದೂರ್ವಾಸರು ಹತ್ತು ಜನ್ಮ ಪಡೆಯುವಂತವನಾಗು ಎಂದು ಶಾಪ ಕೊಡುತ್ತಾರೆ. ಆದರೆ ಆ ಸಮಯದಲ್ಲಿ ಶ್ರೀಹರಿಯ ಸ್ಮರಿಸುತ್ತಾ ಏಕಾದಶಿ ಉಪವಾಸ ವ್ರತ ಮಾಡುತ್ತಿದ್ದ ತನ್ನ ಪರಮ ಭಕ್ತ ಅಂಬರೀಷನ ಭಕ್ತಿಗೆ ಮೆಚ್ಚಿದ ಶ್ರೀಮನ್ ನಾರಾಯಣರು ತಾವೇ ಆ ಶಾಪವನ್ನು ತೆಗೆದುಕೊoಡು 10 ಅವತಾರವೆತ್ತುತ್ತಾರೆ. ಹಾಗೂ ತನ್ನ ಭಕ್ತನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನೇ ದೂರ್ವಾಸರ ಕಡೆಗೆ ಪ್ರಯೋಗಿಸುತ್ತಾರೆ. ಆದರೆ, ಧರ್ಮನಿಷ್ಠನಾದ ಸ್ವತಃ ಅಂಬರೀಷ ಮಹಾರಾಜನೆ ಬೇಡಿಕೊoಡು ಅದು ತಿರುಗಿ ವಿಷ್ಣುವಿನ ಕಡೆಗೆ ಹೋಗುವಂತೆ ಮಾಡಬೇಕಾಯಿತು.

ವಿಷ್ಣು ಮೂರೂ ಅಸುರರನ್ನೂ ಏಕಾದಶಿ ಎಂಬ ಆಯುಧದಿಂದ ಕೊoದ ದಿನ. ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮ ಹೇಳಿದ ದಿನ, ಮುಕ್ಕೋಟಿ ದೇವತೆಗಳಿಗೆ ವಿಷ್ಣು ದರ್ಶನ ಕೊಡುವ ದಿನ. ಆದ್ದರಿಂದ ಈ ಏಕದಾಶಿಗೆ ಬಹಳ ಮಹತ್ವವಿದೆ.

ಏಕಾದಶಿ ಎಂದರೆ ಹನ್ನೊಂದು. ಹಿಂದೂ ಪಂಚಾಂಗದಲ್ಲಿ ಪ್ರತಿ (ಕೃಷ್ಣ ಪಕ್ಷ, ಶುಕ್ಲ ಪಕ್ಷ) ಪಕ್ಷದ ಹನ್ನೊಂದನೆಯ ದಿನಕ್ಕೆ ಏಕಾದಶಿ. ಈ ದಿನ ಶ್ರೀಹರಿ ದಿನ ಆಗಿರುವುದರಿಂದ ಅಂದು ಉಪವಾಸ. ಆಷಾಢ ಏಕಾದಶಿ, ವೈಕುಂಠ ಏಕಾದಶಿ… ಹೀಗೆ ವರ್ಷ ಪೂರ್ತಿ ಬರುವ ಏಕಾದಶಿಗಳಿಗೆ ಅದರದ್ದೇ ಆದ ಮಹತ್ವ ಇರುತ್ತದೆ. ಚೈತ್ರದ ಕಾಮದಾ ಏಕಾದಶಿಯಿಂದ ಫಾಲ್ಗುಣದ ಪಾಪ ವಿಮೋಚನೀಯವರೆಗೂ ಏಕಾದಶಿಗೆ ಮಹತ್ವದ ಹೆಸರುಗಳಿವೆ.

ಆಷಾಢ ಏಕಾದಶಿಯು ದಕ್ಷಿಣಾಯನದಲ್ಲಿ ಪ್ರಾರಂಭವಾಗುವ ಮಹತ್ವದ ವ್ರತ. ದಕ್ಷಿಣಾಯನವು ದೇವತೆಗಳಿಗೆ ರಾತ್ರಿ. ಆಷಾಢ ಏಕಾದಶಿಯಂದು ಯೋಗ ನಿದ್ರೆಗೆ ಜಾರುವ ಶ್ರೀಹರಿ ಉತ್ಥಾನ ದ್ವಾದಶಿಯಂದು ಏಳುತ್ತಾರೆ. ಧಾರ್ಮಿಕ ಸಾಧನೆಗೆ ಪ್ರಶ್ತವಾದ ದಿನಗಳು ಇವಾಗಿವೆ.

ವೈಕುಂಠ ಏಕಾದಶಿಯಂದು ಉತ್ತರ ದ್ವಾರದ ಮೂಲಕವೇ ಭಗವಂತನನ್ನು ಏಕೆ ದರ್ಶಿಸಬೇಕು? ಅದರ ಹಿನ್ನೆಲೆಯಲ್ಲಿ ಇರುವ ಸಂದೇಶವಾದರೂ ಏನು? ಎಂಬುದನ್ನು ನೋಡಿದಾಗ… ಉತ್ತರಾಯಣದ ಮುಂಚಿನ ಕಾಲವೇ ಸಂಕ್ರಮಣ. ದಕ್ಷಿಣ ದಿಕ್ಕಿಗೆ ಕರ್ಮಸ್ಥಾನ ಎನ್ನುವ ಮಾತಿದೆ. ‘ತಮಸೋಮಾ ಜ್ಯೋತಿರ್ಗಮಯ’ ಎನ್ನುವ ಉಪನಿಷತ್ ವಾಕ್ಯದಂತೆ ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸಮಯವೇ ಉತ್ತರಾಯಣ.

ಮನೆಗೊಂದು ಬಾಗಿಲು ಇರುವಂತೆ ಉತ್ತರಾಯಣದ ದ್ವಾರವೇ ವೈಕುಂಠ ಏಕಾದಶಿ! ಏಕಾದಶಿ ಆಚರಣೆಯ ನೆವದಲ್ಲಿ ಜಿಹ್ವಾ ಚಾಪಲ್ಯಕ್ಕೆ ಕಡಿವಾಣ ಹಾಕಲು, ಉತ್ತರದ್ವಾರದಲ್ಲಿ ತಲೆ ತಗ್ಗಿಸುವ ನೆಪದಲ್ಲಿ ಮನಸ್ಸಿನ ಅಹಂಕಾರಕ್ಕೆ ಒಂದಿಷ್ಟು ತಡೆ ಹಾಕುತ್ತೇವೆ. ಸಕಲ ಜಗತ್ತಿನ ರಕ್ಷಕ, ಜಗದೊಡೆಯ ನೀನೇ ಎಂಬ ಶರಣಾಗತಿಯ ಭಾವನೆಯಲ್ಲಿ ನಡೆದಾಗ ಶ್ರೀ ಹರಿಯ ಕೃಪಾಕಟಾಕ್ಷ ಪಡೆದು ವೈಕುಂಠ ಏಕಾದಶಿ ಆಚರಣೆಯಲ್ಲಿ ಒಂದಷ್ಟು ಸಾರ್ಥಕತೆ ಕಂಡು ಕೊಳ್ಳಲು ಸಾಧ್ಯ. ಇದುವೇ ವೈಕುಂಠ ಏಕಾದಶಿ ಮಹಾತ್ಮೆ.

Also Read:

ವೈಕುಂಠ ಏಕಾದಶಿ 2021: ಈ ದಿನ ಉಪವಾಸ ಮಾಡುವುದೇಕೆ? ಇಲ್ಲಿದೆ ವೈಕುಂಠ ಏಕಾದಶಿಯ ತಿಥಿ ಸಮಯ, ಪೂಜಾ ವಿಧಾನ

Restrictions imposed on Temples | ದೇಗುಲಗಳಲ್ಲಿ ಏಕಕಾಲಕ್ಕೆ 50 ಭಕ್ತರಿಗೆ ಮಾತ್ರ ಎಂಟ್ರಿ

Published On - 6:28 am, Thu, 6 January 22