
ಭಾರತೀಯ ಕ್ರಿಕೆಟ್‌ನ ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದಾ ಸುದ್ದಿಯಲ್ಲಿರುವ ಜೋಡಿ. ಮೈದಾನದಲ್ಲಿ ವಿರಾಟ್ ಅಬ್ಬರಿಸಿದರೆ, ಬೆಳ್ಳಿ ಪರದೆಯ ಮೇಲೆ ಸಾಕಷ್ಟು ಖ್ಯಾತಿಗಳಿಸಿದವರು ಅನುಷ್ಕಾ. ಆದರೆ, ಇವರಿಬ್ಬರ ಗ್ಲಾಮರಸ್ ಬದುಕಿನ ಆಚೆಗೊಂದು ಶಾಂತ, ಆಧ್ಯಾತ್ಮಿಕ ಪ್ರಪಂಚವಿದೆ. ಈ ಜೋಡಿ ಆಗಾಗ ತಮ್ಮ ಬಿಡುವಿನ ವೇಳೆಯಲ್ಲಿ ಮಥುರಾ ಮತ್ತು ಬೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಇದೀಗಾ ಐಪಿಎಲ್ನಲ್ಲಿ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಗೆಲುವಿನ ಸಂಭ್ರಮದಲ್ಲಿರುವಾಗಲೇ ಮತ್ತೊಮ್ಮೆ ಈ ಜೋಡಿ ಪ್ರೇಮಾನಂದ್ ಗುರೂಜಿಯ ದರ್ಶನ ಪಡೆದಿದ್ದಾರೆ. ಅಷ್ಟಕ್ಕೂ ಈ ಹೈ-ಪ್ರೊಫೈಲ್ ಜೋಡಿ ಪ್ರೇಮಾನಂದ್ ಗುರೂಜಿಯವರ ಸನ್ನಿಧಿಗೆ ಅಷ್ಟೊಂದು ಆಕರ್ಷಿತರಾಗಲು ಕಾರಣವೇನು ಎಂಬುದಕ್ಕೆ ಆಸಕ್ತಿದಾಯಕ ಸಂಗತಿ ಇಲ್ಲಿದೆ.
ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ತಮ್ಮ ಕೆರಿಯರ್‌ನ ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದ್ದರು. ಸತತವಾಗಿ ಶತಕಗಳು ಬಾರದೆ, ಫಾರ್ಮ್ ಕಳೆದುಕೊಂಡು ವಿಮರ್ಶೆಗಳಿಗೆ ಗುರಿಯಾಗಿದ್ದಾಗ ಕೊಹ್ಲಿ ಮಾನಸಿಕವಾಗಿ ಕುಗ್ಗಿದ್ದರು. ಆ ಸಮಯದಲ್ಲಿ ಅನುಷ್ಕಾ ಅವರೊಂದಿಗೆ ಬೃಂದಾವನಕ್ಕೆ ಭೇಟಿ ನೀಡಿ ಪ್ರೇಮಾನಂದ್ ಗುರೂಜಿಯವರ ಆಶೀರ್ವಾದ ಪಡೆದಿದ್ದರು. ಅದಾದ ಕೆಲವೇ ದಿನಗಳಲ್ಲಿ ವಿರಾಟ್ ಭರ್ಜರಿಯಾಗಿ ಫಾರ್ಮ್‌ಗೆ ಮರಳಿ ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ಸಿಡಿಸಿದ್ದರು. ಅಂದಿನಿಂದ ಗುರೂಜಿಯವರ ಮೇಲಿನ ಇವರ ನಂಬಿಕೆ ಮತ್ತು ಭಕ್ತಿ ಮತ್ತಷ್ಟು ಗಾಢವಾಗಿದೆ.
ಪ್ರೇಮಾನಂದ್ ಗುರೂಜಿಯವರು ಎರಡು ಕಿಡ್ನಿಗಳು ವೈಫಲ್ಯಗೊಂಡಿದ್ದರೂ ದಿನದ 24 ಗಂಟೆಯೂ ರಾಧಾ-ಕೃಷ್ಣರ ಭಕ್ತಿಯಲ್ಲಿ ಲೀನವಾಗಿರುತ್ತಾರೆ. ಅವರು ತಮ್ಮ ಬಳಿ ಬರುವ ಭಕ್ತರಿಗೆ ಅಹಂಕಾರವನ್ನು ಬಿಡುವುದು, ತಪ್ಪು ದಾರಿಗೆ ಹೋಗದಿರುವುದು ಮತ್ತು ಪ್ರಾಮಾಣಿಕವಾಗಿ ತಮ್ಮ ಕರ್ಮವನ್ನು (ಕೆಲಸವನ್ನು) ಮಾಡುವುದರ ಬಗ್ಗೆ ಅತ್ಯಂತ ಸರಳ ಹಿಂದಿ ಭಾಷೆಯಲ್ಲಿ ಬೋಧಿಸುತ್ತಾರೆ. ವಿರಾಟ್ ಕೊಹ್ಲಿ ತಮ್ಮ ಸಂದರ್ಶನಗಳಲ್ಲಿ ಹೇಳಿರುವಂತೆ, ಅನುಷ್ಕಾ ಅವರ ಜೀವನಕ್ಕೆ ಬಂದ ನಂತರ ಅವರಲ್ಲಿ ಅಹಂಕಾರ ಕಡಿಮೆಯಾಗಿ, ಆಧ್ಯಾತ್ಮಿಕ ಚಿಂತನೆ ಹೆಚ್ಚಾಯಿತು. ಗುರೂಜಿಯವರ ಈ ಸರಳ ಜೀವನಶೈಲಿ ಕೊಹ್ಲಿ ದಂಪತಿಯನ್ನು ಅಪಾರವಾಗಿ ಸೆಳೆದಿದೆ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?
ಕೋಟಿ ಕೋಟಿ ಆಸ್ತಿ, ಐಷಾರಾಮಿ ಜೀವನವಿದ್ದರೂ ವಿರಾಟ್ ಮತ್ತು ಅನುಷ್ಕಾ ತಮ್ಮ ಮಕ್ಕಳಿಗೆ (ಮಗಳು ವಾಮಿಕಾ ಮತ್ತು ಮಗ ಅಕಾಯ್) ಬಾಲ್ಯದಿಂದಲೇ ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮದ ಸಂಸ್ಕಾರವನ್ನು ನೀಡಲು ಬಯಸುತ್ತಾರೆ. ಇದೇ ಕಾರಣಕ್ಕೆ ಅವರು ತಮ್ಮ ಮಕ್ಕಳನ್ನೂ ಗುರೂಜಿಯವರ ಸನ್ನಿಧಿಗೆ ಕರೆತಂದು, ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಕೊಡಿಸುತ್ತಾರೆ. ಆಶ್ರಮದಲ್ಲಿ ಇವರು ಸ್ಟಾರ್‌ಗಿರಿ ಮರೆತು ಸಾಮಾನ್ಯ ಭಕ್ತರಂತೆ ನಡೆದುಕೊಳ್ಳುವ ರೀತಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಕ್ತಿ, ಮಾನಸಿಕ ಸ್ಥಿರತೆ ಮತ್ತು ಪ್ರೇಮಾನಂದ್ ಗುರೂಜಿಯವರ ಸರಳ ಮಾತುಗಳೇ ಈ ಮಾದರಿ ಜೋಡಿಯನ್ನು ಪದೇ ಪದೇ ಬೃಂದಾವನದ ಆಶ್ರಮದತ್ತ ಸೆಳೆಯುತ್ತಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Tue, 2 June 26