Bisu Parba special: ತುಳುನಾಡಿನ ಬಿಸು ಪರ್ಬದ ದಿನ “ಕಣಿ” ಕಾಣುವುದೇ ವಿಶೇಷ!

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 13, 2024 | 5:50 PM

ಸೌರಮಾನ ಪಂಚಾಂಗದ ಪ್ರಕಾರ ಸೌರಯುಗಾದಿ ಅಥವಾ ಮೇಷ ಸಂಕ್ರಾಂತಿಯನ್ನು ಚೈತ್ರ ಶುಕ್ಲ ಪಂಚಮಿ ತಿಥಿಯಂದು ಆಚರಣೆ ಮಾಡಲಾಗುತ್ತದೆ. ಈ ಬಾರಿಯ ಹಬ್ಬವನ್ನು ಎ. 14 ರಂದು ಆಚರಿಸಲಾಗುತ್ತದೆ. ಜೊತೆಗೆ ಈ ದಿನ ಮೀನ ಮಾಸವು ಮುಗಿದು ಮೇಷ ಮಾಸ ಆರಂಭವಾಗುತ್ತದೆ. ಇದರ ಬಳಿಕ ಕೃಷಿಕರು ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

Bisu Parba special: ತುಳುನಾಡಿನ ಬಿಸು ಪರ್ಬದ ದಿನ ಕಣಿ ಕಾಣುವುದೇ ವಿಶೇಷ!
Follow us on

ತುಳುನಾಡಿನಲ್ಲಿ ‘ಬಿಸು’ವಾಗಿಯೂ ಕೇರಳದಲ್ಲಿ ‘ವಿಷು’ವಾಗಿಯೂ ಅಚರಿಸಲ್ಪಡುವ ಸೌರಯುಗಾದಿ ಹಬ್ಬವೂ ಸುಗ್ಗಿ ಮತ್ತು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಸೌರಮಾನ ಪಂಚಾಂಗದ ಪ್ರಕಾರ ಸೌರಯುಗಾದಿಯನ್ನು ಚೈತ್ರ ಶುಕ್ಲ ಷಷ್ಠಿ ತಿಥಿಯಂದು ಆಚರಣೆ ಮಾಡಲಾಗುತ್ತದೆ. ಈ ಬಾರಿಯ ಹಬ್ಬವನ್ನು ಎ. 14 ರಂದು ಆಚರಿಸಲಾಗುತ್ತದೆ. ಜೊತೆಗೆ ಈ ದಿನ ಮೀನ ಮಾಸವು ಮುಗಿದು ಮೇಷ ಮಾಸ ಆರಂಭವಾಗುತ್ತದೆ. ಇದರ ಬಳಿಕ ಕೃಷಿಕರು ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಸೌರಮಾನ ಪಂಚಾಂಗದ ಅನುಯಾಯಿಗಳು, ಈ ದಿನ ತಮ್ಮ ಮನೆಗಳಲ್ಲಿ ಹೊಸ ವರ್ಷದ ಆಚರಣೆ ಮಾಡುತ್ತಾರೆ. ಪೂಜಾ ಪದ್ದತಿಗಳನ್ನು ಅನುಸರಿಸುವ ಮೂಲಕ ಪುಣ್ಯ ಕ್ಷೇತ್ರಗಳ ಭೇಟಿ ನೀಡಿ, ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದರ ಜೊತೆಗೆ ದೇವಸ್ಥಾನಗಳಲ್ಲಿ ದಾನ -ಧರ್ಮಗಳನ್ನು ಮಾಡುವುದು, ತರ್ಪಣ ಬಿಡುವುದಕ್ಕೆ ಇದು ಪ್ರಶಸ್ತಕಾಲವಾಗಿರುತ್ತದೆ.

ತುಳುನಾಡಿನ “ಕಣಿ ಕಾಣುವ ಹಬ್ಬ”

ಈ ದಿನ ಮುಂಜಾನೆ ಎದ್ದು ಮನೆಗಳಲ್ಲಿ ಸಿದ್ಧಪಡಿಸಿದ ಕಣಿ ಕಂಡು ಆ ಬಳಿಕ ಹತ್ತಿರದ ದೇವಸ್ಥಾನ, ದೈವಸ್ಥಾನ, ಮಠ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ದೇವಸ್ಥಾನಗಳಲ್ಲೂ ಕಣಿ ಸಿದ್ಧಪಡಿಸಲಾಗುತ್ತದೆ. ಹಾಗಾಗಿಯೇ ಸೌರಯುಗಾದಿಯು ತುಳುನಾಡಿನಲ್ಲಿ “ಕಣಿ ಕಾಣುವ ಹಬ್ಬ” ಎಂದೇ ಪ್ರಸಿದ್ದಿಯಾಗಿದೆ. ವರುಷದ ಆರಂಭದಲ್ಲಿ ಮೊದಲಿಗೆ ಆರಾಧ್ಯ ದೇವರು ಅಥವಾ ಮನೆ ದೇವರನ್ನು ಕಾಣುವ ಅಥವಾ ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗುತ್ತದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ.

ಇದನ್ನೂ ಓದಿ: ಮನೆಯ ದೇವರ ಕೋಣೆಯಲ್ಲಿ ಈ ಮೂರು ವಿಗ್ರಹಗಳು ಇರಲೇಬೇಕು!

ಕಣಿಯ ತಯಾರಿ ಹೇಗಿರುತ್ತೆ?

ಹಬ್ಬದ ಹಿಂದಿನ ದಿನ ರಾತ್ರಿಯೇ ಮನೆಯನ್ನು ಸಿಂಗರಿಸಿ ದೇವರ ವಿಗ್ರಹದ ಜೊತೆಗೆ ಕಣಿಯ ಸಾಮಗ್ರಿಗಳನ್ನು ಇರಿಸಿ ನವ ಧಾನ್ಯಗಳು, ಬಟ್ಟೆ, ಬಂಗಾರದ ಆಭರಣ, ಫಲವಸ್ತು ಇತ್ಯಾದಿ ಸಾಮಗ್ರಿಗಳೊಂದಿಗೆ, ಒಂದು ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ ಇರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಣಿಯನ್ನು ಸಿದ್ಧಪಡಿಸಲಾಗುತ್ತದೆ. ಹಬ್ಬದ ದಿನ ಬೆಳಗಿನ ಜಾವವೇ ಎಲ್ಲರೂ ಎದ್ದು, ನಿತ್ಯ ಕ್ರಮಗಳನ್ನು ಮುಗಿಸಿ ಹೊಸಬಟ್ಟೆ ಧರಿಸಿ ಗುರು ಹಿರಿಯರಿಗೆ ವಂದಿಸಿ ಅನಂತರ ಕಣಿ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ