ಜೀವನದಲ್ಲಿ ಅದೆಷ್ಟೋ ಜನ ಹೇಳುತ್ತಿರುತ್ತಾರೆ ನಾವು ಅದೆಷ್ಟು ಬೇಡಿಕೊಂಡರು ಭಗವಂತ ನಮಗೆ ಅನುಗ್ರಹಿಸುವುದೇ ಇಲ್ಲ. ಅವನು ಧರ್ಮದ ಪರವಾಗಿ ಇರುವುದೇ ಇಲ್ಲ. ನಮ್ಮಂತಹವರಿಗೆ ಭಗವಂತನೂ ಪಕ್ಷಪಾತ ಮಾಡುತ್ತಾನೆ ಎಂದು. ಅಂತಹ ವೇದನೆ ಅಥವಾ ಮನಸ್ಥಿಯುಳ್ಳವರು ಒಂದು ಸಲ ಇದನ್ನು ಓದಿರಿ. ಮಹಾಭಾರತದ ಒಂದು ಸನ್ನಿವೇಶ, ಪಾಂಡವರು ದ್ಯೂತದಲ್ಲಿ ಮೋಸದಿಂದ ಸೋಲಿಸಲ್ಪಟ್ಟು ವನವಾಸ ಮುಗಿಸಿ ಅಜ್ಞಾತವಾಸವನ್ನೂ ಮುಗಿಸಿ ಮರಳಿ ಬಂದಿರುತ್ತಾರೆ. ಪಾಂಡವರ ವನವಾಸದ ಸಮಯದಲ್ಲಿ ಅಭಿಮನ್ಯು ತನ್ನ ತಾಯಿಯಾದ ಸುಭದ್ರೆಯೊಂದಿಗೆ ಬಲರಾಮ ಕೃಷ್ಣರೊಂದಿಗೆ ಮಥುರೆಯಲ್ಲಿ ವಾಸವಾಗಿದ್ದರು. ಅಭಿಮನ್ಯು ತನ್ನ ಮಾವಂದಿರ ಮಾರ್ಗದರ್ಶನದಲ್ಲಿ ಉತ್ತಮ ಯೋಧನಾಗಿ ತಯಾರಾಗುತ್ತಿದ್ದ. ಹೇಳಬೇಕೆಂದರೆ ಅರ್ಜುನನ್ನು ಮೀರಿಸಿಸುವ ಕೌಶಲ ಅವನಲ್ಲಿತ್ತು. ಬಲರಾಮನಿಂದ ಗದಾಯುದ್ಧವನ್ನು ಕೃಷ್ಣನಿಂದ ರಣತಂತ್ರವನ್ನು ಚೆನ್ನಾಗಿ ಕಲಿಯುತ್ತಿದ್ದ.
ಅದೇ ಸಮಯದಲ್ಲಿ ಕೌರವ ಪಾಂಡವರಿಗೆ ಮುಂದೆ ಯುದ್ಧ ಸಂಭವಿಸುವ ಲಕ್ಷಣ ಸ್ಪಷ್ಟವಾಗಿ ಕಾಣುತ್ತಿರುವ ಸಂದರ್ಭದಲ್ಲಿ ಶಕುನಿಯು ದುರ್ಯೋಧನನ್ನು ಕರೆದುಕೊಂಡು ಅವನ ಗದಾವಿದ್ಯೆಯ ಗುರುವಾದ ಬಲರಾಮರನ್ನು ಬೇಟಿ ಮಾಡಲು ಬರುತ್ತಾನೆ. ಕಾರಣವೇನೆಂದರೆ ಮುಂದೆ ಯುದ್ಧವಾದಲ್ಲಿ ತಮ್ಮ ಕಡೆ ಸಹಕರಿಸಬೇಕು ಎಂದು ನಿವೇದಿಸಿಕೊಳ್ಳಲು. ಬಲರಾಮರು ಅವನಿಗೆ ಮಾತನ್ನೂ ನೀಡುತ್ತಾರೆ. ತಾನು ಕೌರವರ ಪರವಾಗಿ ನಿಲ್ಲುತ್ತೇನೆ ಎಂದು.
ಇದರಿಂದ ಸಂತೋಷಗೊಂಡ ಶಕುನಿ ದುರ್ಯೋಧನರು ಬಿಲ್ವಿದ್ಯೆ ಅಭ್ಯಾಸ ಮಾಡುತ್ತಿರು ಅಭಿಮನ್ಯುವನ್ನು ಕೆಣಕಲು ಬರುತ್ತಾರೆ. ಅಭಿಮನ್ಯುವಿನ ಅಭ್ಯಾಸದ ಕ್ರಮ ಹೇಗಿತ್ತೆಂದರೆ ಒಂದೊಂದು ಮಡಕೆಯಲ್ಲಿ ಪ್ರತೀ ಕೌರವರ ಚಿತ್ರಬಿಡಿಸಿ ಅದಕ್ಕೆ ಗುರಿಯಿಟ್ಟು ಹೊಡೆಯುತ್ತಿದ್ದ. ಆಗ ದುರ್ಯೋಧನ ಒಂದು ಮಡಕೆಗೆ ನವಿಲು ಗರಿಯ ಚಿತ್ರಬಿಡಿಸಿ ಕೃಷ್ಣ ಎಂದು ಬರೆದು ತೂಗು ಹಾಕುತ್ತಾನೆ. ಈಗ ಏನು ಮಾಡುವೆ ಎಂದು ಕೇಳುತ್ತಾನೆ ಅಭಿಮನ್ಯುವಿಗೆ. ಅಭಿಮನ್ಯು ಆಗಲೂ ಬಾಣ ಪ್ರಯೋಗ ಮಾಡುತ್ತಾನೆ. ಆದರೆ ಬಾಣ ತುಂಡಾಗುತ್ತದೆ ಮಡಕೆ ಒಡೆಯುವುದಿಲ್ಲ. ದುರ್ಯೋಧನ ಗಹಗಹಿಸುತ್ತಾ ಮಾವನ ಮುಂದೆ ನೀನು ಯುದ್ಧ ಗೆಲ್ಲುವೆಯಾ ಎನ್ನುವನು.
ಅದಕ್ಕೆ ಅಭಿಮನ್ಯು ಉತ್ತರಿಸುತ್ತಾನೆ ನಾನು ಎಂದೂ ಧರ್ಮದ ವಿರುದ್ಧ ಹೋರಾಡುವವನಲ್ಲ. ನನ್ನ ಶಸ್ತ್ರವೇನಿದ್ದರೂ ಅಧರ್ಮದ ವಿರುದ್ಧವಷ್ಟೇ ಆಗಿದೆ ಎಂದು. ಆಗ ಶಕುನಿ ಹೇಳುವನು ನಿನ್ನ ಮಾವನು ನಮಗೆ ಮಾತು ಕೊಟ್ಟಿರುವನು ಎಂದು. ಅಭಿಮನ್ಯು ಧೈರ್ಯವಾಗಿ ಹೇಳುತ್ತಾನೆ ನನ್ನ ಮಾವಂದಿರು ಎಂದಿಗೂ ಅಧರ್ಮದ ಪರವಾಗಿ ನಿಲ್ಲಲಾರರು ಮತ್ತು ನನಗೆ ನನ್ನ ಗುರುಗಳಾದ ಕೃಷ್ಣ ಬಲರಾಮರು ಅಧರ್ಮವನ್ನು ಕಲಿಸಿಲ್ಲ. ಮತ್ತು ನನಗೆ ಸ್ಪಷ್ಟವಾಗಿ ನಂಬಿಕೆ ಇದೆ ಭಗವಂತ ಧರ್ಮವನ್ನು ಎಂದೂ ಅಪವಿತ್ರ ಮಾಡಲಾರ ಮತ್ತು ಮಾಡುವ ಯಾವ ಅವಕಾಶವನ್ನೂ ಬೆಳಯಲು ಬಿಡಲಾರ ಎಂಬುದಾಗಿ.
ಇದನ್ನೂ ಓದಿ:Spiritual: ಗ್ರಹಣದಿಂದ ಈ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ
ಈಗ ಯೋಚಿಸಿ ಇಲ್ಲಿ ಬಲರಾಮ ಕೌರವನಿಗೆ ಆಶ್ವಾನೆ ಕೊಟ್ಟಿರಬಹುದು ಆದರೆ ಅಭಿಮನ್ಯುವಿನ ಬಲವಾದ ನಂಬಿಕೆಯೇ ಸತ್ಯವಾಯಿತು ಅಲ್ಲವೇ? ತನ್ನ ಮಾವಂದಿರ ಮತ್ತು ಭಗವಂತನ ಮೇಲಿನ ಶ್ರದ್ಧೆಯು ಅತ್ಯಂತ ಪವಿತ್ರವಾಗಿದ್ದುದಾದ್ದರಿಂದ ಅದಕ್ಕೆ ಚ್ಯುತಿ ಬರಲಿಲ್ಲ. ಸಂದರ್ಭವೇ ಹಾಗೆಯೇ ಮೂಡಿತು. ಬಲರಾಮ ತೀರ್ಥಯಾತ್ರೆಗೆ ತೆರಳಿದ ಕೃಷ್ಣ ಧರ್ಮದ ಕಡೆಯಿದ್ದ. ಗೆಲುವು ನಿಧಾನವಾಗಿ ಧರ್ಮಕ್ಕೇ ಆಯಿತು. ಅಲ್ಲವೇ?
ಇಲ್ಲಿ ಅಭಿಮನ್ಯು ತನ್ನ ಮಾವಂದಿರು ತನಗೆ ಮೋಸ ಮಾಡಿದರು, ಅವರು ಕೌರವನಿಗೆ ಮಣೆ ಹಾಕಿದರು, ಅವರು ಪಾಂಡವರಿಗೆ ವಂಚಿಸಿದರು ಇತ್ಯಾದಿ ವಿಚಾರಗಳ ಕುರಿತಾಗಿ ಒಂದಿನಿತೂ ವಿಚಲಿತನಾಗದೇ ಅವರ ಪ್ರಾಮಾಣಿಕ ಧರ್ಮನಿಷ್ಠೆಯನ್ನೆ ನಂಬಿದ ಮತ್ತು ಫಲವನ್ನು ಭಗವಂತನಿಗೆ ಬಿಟ್ಟ.
ಮತ್ತೊಮ್ಮೆ ಯೋಚಿಸಿ ನಮ್ಮ ಜೀವನದಲ್ಲೂ ಇಂತಹ ಸಂದಿಗ್ಧ ಸಂದರ್ಭ ಬಂದಿರುತ್ತದೆ. ನಾವು ನಂಬಿದ ದೇವರು ನಮ್ಮ ಪರವಾಗಿಲ್ಲ ನಮ್ಮವರು ಯಾರೂ ಇಲ್ಲ ಎಂದು ಕೊರಗುತ್ತಿರುತ್ತೇವೆ. ಅದರ ಬದಲು ನಾವು ಪ್ರಾಮಾಣಿಕವಾಗಿ ಧರ್ಮಪರರೇ ಆಗಿದ್ದಲ್ಲಿ ಯಾರನ್ನೂ ಸಂಶಯಿಸದೇ ಯಾರಿಗೂ ಹೆದರದೆ ಪೂರ್ಣ ನಂಬಿಕೆಯನ್ನು ಧರ್ಮ ಮತ್ತು ಭಗವಂತನಲ್ಲಿಟ್ಟರೆ. ಜಯವೆನ್ನುವುದು ನಿಧಾನವಾಗಿ ಬಂದರೂ ಶಾಶ್ವವಾಗಿ ನಮ್ಮ ಬಳಿ ಇರುವುದು. ಯೋಚಿಸಿ ನಡೆಯಿರಿ ನಡೆದ ಮೇಲೆ ಯೋಚಿಸಿ ಫಲವಿಲ್ಲ.
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು