ನಾನಾ ಸ್ವರೂಪದಲ್ಲಿ ನಾನಾ ಅವತಾರದ, ನಾನಾ ನಾಮಾವಳಿಯ ಗಣಪ, ವಿನಾಯಕನ ಪರಿಚಯಗಳು ಬಹುತೇಕ ಎಲ್ಲರಿಗೂ ಇದ್ದೆ ಇರುತ್ತದೆ. ಆದರೆ ಪ್ರಯಾಣ ಗಣಪತಿ! ಎಷ್ಟು ಜನಕ್ಕೆ ಪರಿಚಯವಿದೆ ಈ ಗಣಪತಿ? ಇಲ್ಲೀಗ ಈ ಪ್ರಯಾಣ ಗಣಪತಿಯ ರಹಸ್ಯ ತಿಳಿಯೋಣ ಬನ್ನಿ.
ಪ್ರಯಾಣ ಕಾಲದಲ್ಲಿ ನಾವು ಯಾವ ಉದ್ದೇಶದೊಂದಿಗೆ ಪ್ರಯಾಣ ಮಾಡುತ್ತಿದ್ದೇವೋ ಆ ಉದ್ದೇಶ ಸಫಲವಾಗಲು ಪ್ರಯಾಣ ಗಣಪತಿಯ ಪೂಜೆ ಮಾಡಿ ಅವನನ್ನು ನಮ್ಮ ಜೊತೆಗೆ ಕರೆದೊಯ್ಯುವುದು ಈ ಪೂಜೆಯ ಉದ್ದೇಶ.
ಮನೆಯಲ್ಲಿ ಜರುಗುವ ಕೆಲವು ಪೂಜೆಗಳಲ್ಲಿ ಬೆಟ್ಟಡಿಕೆಯನ್ನು ಗಣಪತಿಯ ರೂಪದಲ್ಲಿ ಪೂಜಿಸಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಅದೇ ರೀತಿಯಲ್ಲಿ ಒಂದು ಹೊಸ ಕರವಸ್ತ್ರದಲ್ಲಿ ಸ್ವಲ್ಪ ಅಕ್ಕಿ ಕಾಳು ಹಾಕಬೇಕು. ಅದರ ಮೇಲೆ ಒಂದು ಬೆಟ್ಟಡಿಕೆಯನ್ನು ಇರಿಸಿ ಅದರಲ್ಲಿ ಗಣಪತಿಯನ್ನು ಆವಾಹಿಸಿ, ಹರಿದ್ರಾ ಕುಂಕುಮ ಚೂರ್ಣದಿಂದ ಪೂಜಿಸಿ, ಒಂದು ನಾಣ್ಯವನ್ನು ಗಣಪತಿಗೆ ದಕ್ಷಿಣೆಯಾಗಿ ಇರಿಸಿ ಸಾಧ್ಯವಿದ್ದರೆ ಗರಿಕೆಯಿಂದ ಪೂಜಿಸಿ, ಧೂಪ, ನೈವೇದ್ಯ ಸಮರ್ಪಿಸಬೇಕು. ನಮ್ಮ ಪ್ರಯಾಣದಲ್ಲಿ ವಿಘ್ನಗಳಾಗದಿರುವಂತೆ ಪ್ರಾರ್ಥಿಸಬೇಕು. ಪೂಜೆಯ ನಂತರ ಪ್ರಯಾಣ ಗಣಪತಿಯನ್ನು ಇರಿಸಿದ ಕರವಸ್ತ್ರವನ್ನು ಗಂಟು ಹಾಕಿ ಕಟ್ಟಿ, ನಮ್ಮ ಬ್ಯಾಗ್‌ನಲ್ಲಿ ಇರಿಸಿಕೊಂಡು ಪ್ರಯಾಣಕ್ಕೆ ಹೊರಡಬೇಕು.
ಪ್ರಯಾಣ ಗಣಪತಿಯ ವಿಸರ್ಜನೆ ನಿಯಮ:
ನಮ್ಮ ಪ್ರಯಾಣ/ಯಾತ್ರೆ ಪೂರ್ಣಗೊಂಡ ನಂತರ ಅಕ್ಕಿ ಮತ್ತು ಬೆಟ್ಟಡಿಕೆಗಳನ್ನು ಯಾರೂ ತುಳಿಯದ ಕಡೆ ವಿಸರ್ಜಿಸಬೇಕು. ನಾಣ್ಯವನ್ನು ದೇವಸ್ಥಾನದ ಹುಂಡಿಗೆ ಸಮರ್ಪಿಸಬೇಕು. ಕರವಸ್ತ್ರವನ್ನು ಸ್ವಂತಕ್ಕೆ ಬಳಸಬಹುದು.
ಇದರ ಜೊತೆಗೆ ವಿಷ್ಣು ಸಹಸ್ರನಾಮದಲ್ಲಿ ಬರುವ “ವನಮಾಲಿ ಘದಿ ಶಂಗ್ರಿ” ಮೂರೂ ಬಾರಿ ಹೇಳಿಕೊಂಡು ಪ್ರಯಾಣ ಮಾಡಿ, ಸುಖಕರ ಪ್ರಯಾಣಕ್ಕೆ ಅನುಕೂಲವಾದೀತು.
ವನಮಾಲೀ ಗದೀ ಶಾರ್ಙಗೆ ಶಂಖ ಚಕ್ರ ನಂದಕಿ!
ಶ್ರೀಮಾನ್ನಾರಾಯಣೋ ವಿಷ್ಣುರ್ವಾಸುದೇವೋಽಭಿರಕ್ಷತು!
ಶ್ರೀ ವಾಸುದೇವೋಽಭಿರಕ್ಷತು ಓಂ ನಮ ಇತಿ ।
(ಕೃಪೆ: ಮುರಳಿ ಕೃಷ್ಣ ಮದ್ದಿಕೇರಿ)