ಮಾನವ ತಾಯಿಯ ಗರ್ಭದಿಂದ ಹೊರಬರುವಾಗ ಮುಷ್ಟಿ ಹಿಡಿದು ಜನಿಸಲು ಕಾರಣವೇನು?

|

Updated on: Feb 01, 2023 | 8:38 AM

ಜಗತ್ತಿನ ಪ್ರತೀ ಜೀವಿಯಲ್ಲೂ ವೈವಿದ್ಯತೆ ಇದ್ದೇ ಇದೆ. ಪ್ರತೀ ಜೀವಿಯ ಜನನದಿಂದ ಆರಂಭಿಸಿ ಮರಣದ ತನಕ ಪ್ರತೀ ಹೆಜ್ಜೆಗೂ ಹಲವಾರು ಸಂದೇಶಗಳು ಮತ್ತು ಸಂದೇಹಗಳು ಮೂಡುತ್ತಲೇ ಇರುತ್ತವೆ. ಕೆಲವೊಂದು ವ್ಯವಸ್ಥೆ ವಿಜ್ಞಾನಕ್ಕೂ ಮಿಗಿಲಾಗಿ ಕಂಡುಬರುತ್ತದೆ.

ಮಾನವ ತಾಯಿಯ ಗರ್ಭದಿಂದ ಹೊರಬರುವಾಗ ಮುಷ್ಟಿ ಹಿಡಿದು ಜನಿಸಲು ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ಜಗತ್ತಿನ ಪ್ರತೀ ಜೀವಿಯಲ್ಲೂ ವೈವಿದ್ಯತೆ ಇದ್ದೇ ಇದೆ. ಪ್ರತೀ ಜೀವಿಯ ಜನನದಿಂದ ಆರಂಭಿಸಿ ಮರಣದ ತನಕ ಪ್ರತೀ ಹೆಜ್ಜೆಗೂ ಹಲವಾರು ಸಂದೇಶಗಳು ಮತ್ತು ಸಂದೇಹಗಳು ಮೂಡುತ್ತಲೇ ಇರುತ್ತವೆ. ಕೆಲವೊಂದು ವ್ಯವಸ್ಥೆ ವಿಜ್ಞಾನಕ್ಕೂ ಮಿಗಿಲಾಗಿ ಕಂಡುಬರುತ್ತದೆ. ಅಲೌಕಿಕವಾದ ಯಾವುದೋ ಶಕ್ತಿ ನಮ್ಮ ಒಳಗೆ ಕೆಲಸ ಮಾಡುತ್ತಿರುವುದಂತೂ ನಿಜ. ಅದು ಕೆಲವೊಮ್ಮೆ ಗೋಚರಕ್ಕೆ ಬರುತ್ತದೆ ಕೆಲವೊಮ್ಮೆ ಇಲ್ಲ. ಈ ಕಾರಣಕ್ಕಾಗಿ ನಮ್ಮಲ್ಲಿ ಕೆಲವೊಂದು ಸಂದರ್ಭದಲ್ಲಿ ಸಂದೇಹಗಳು ಮೂಡುತ್ತವೆ. ಯಾಕೆ ಹೀಗೆ ಎಂದು? ಅದಕ್ಕುತ್ತರ ಶಾಸ್ತ್ರಗಳು ತನ್ನದೇ ಆದ ರೀತಿಯಲ್ಲಿ ನೀಡಿವೆ. ಅಂತಹ ಒಂದು ಸಂದೇಹಕ್ಕುತ್ತರ ಇಂದು ನಾವು ನೋಡುವ…

ಮನುಷ್ಯ ಜನ್ಮ ಎನ್ನುವುದು ಅತ್ಯಂತ ದುರ್ಲಭವಾದ ಜನ್ಮ. ಹಲವಾರು ಜನ್ಮಗಳ ನಂತರ ನಮ್ಮ ಕರ್ಮಕ್ಕನುಗುಣವಾಗಿ ಮಾನವ ಜನ್ಮ ಲಭಿಸುವುದು. ಅದಕ್ಕೆ ವಿವೇಕಚೂಡಾಮಣಿಯಲ್ಲಿ “ಜಂತೂನಾಂ ನರ ಜನ್ಮ ದುರ್ಲಭಮ್” ಎಂದು ಹೇಳಿದ್ದಾರೆ. ಮನುಷ್ಯ ಜನ್ಮ ದುರ್ಲಭ ಯಾಕೆ ? ಎಂದರೆ – ಈ ವ್ಯವಸ್ಥೆಯಲ್ಲಿ ಮನುಷ್ಯನು ತನ್ನ ಸ್ವತಂತ್ರ ಬುದ್ಧಿಯಿಂದ ಸಾಧಿಸಿ ಸತ್ಯವನ್ನು ಶೋಧಿಸಿ ವಾಸ್ತವವನ್ನು ತಿಳಿಯಲು ಸಾಧ್ಯ ಮತ್ತು ಈ ಸಂಸಾರ ಚಕ್ರದ ಅಂಟಿಗೆ ಅಂಟದೇ ಇದ್ದು ಆನಂದವನ್ನು ಸಾಧಿಸಬಹುದು ಎಂಬ ಕಾರಣಕ್ಕಾಗಿ.

ಅದೇನೇ ಇರಲಿ ಈಗ ಜನ್ಮಕಾಲಕ್ಕೆ ಬರೋಣ. ಮಗುವು ಜನ್ಮಕಾಲದಲ್ಲಿ ಕೈಯನ್ನು ಮುಷ್ಟಿ ಹಿಡಿದು ಜನಿಸುತ್ತದೆ. ಜನನದ ನಂತರವೂ ಕೆಲವು ಕಾಲ ಹಾಗೇ ಬಿಗಿಯಾಗಿ ಮುಷ್ಟಿಹಿಡಿದೇ ಇರುತ್ತದೆ. ಇದನ್ನು ಗಮನಿಸಿದ್ದೀರಾ? ಮಾನವನನ್ನು ಹೊರತು ಪಡಿಸಿ ಬೇರೆ ಯಾರೂ ಕೂಡ ಈ ರೀತಿಯಾಗಿರುವುದಿಲ್ಲ. ಇದನ್ನು ಗಮನಿಸಿದ್ದರೆ ಅಥವಾ ಯೋಚಿಸಿದರೆ ನಿಮಗೆ ಸಂದೇಹ ಬಂದಿದ್ದಿರಬಹುದು ಅಥವಾ ಈಗ ಬಂದಿರಬಹುದು. ಯಾಕೆ ಹೀಗೆ? ಏನಿದೆ ಇದರಲ್ಲಿ ವಿಶೇಷವೆಂದು? ಹೌದು ಹಿಂದೆ ಹೇಳಿದಂತೆ ಮಗುವಿನ ಜನನ ಕಾಲದಲ್ಲಿ ಮುಷ್ಟಿ ಹಿಡಿದೇ ಜನಿಸುತ್ತದೆ. ಧರ್ಮಶಾಸ್ತ್ರ ಹೇಳುತ್ತದೆ ಇದರಲ್ಲಿ ಕರ್ಮವಿಶೇಷವಿದೆ ಎಂದು.

ಏನೀ ಕರ್ಮವಿಶೇಷ ? ಅದಕ್ಕುತ್ತರ ಹೀಗಿದೆ ಹಲವಾರು ಜನ್ಮಗಳ ನಂತರ ಅಥವಾ ಜನ್ಮಾಂತರದ ಕಾರಣದಿಂದ ಮನುಷ್ಯ ಜನ್ಮ ಪ್ರಾಪ್ತವಾಗುತ್ತದೆ. ಈ ಮಾನವ ಕುಲದಲ್ಲಿ ಜನನವಾಗುವಾಗುವ ಪೂರ್ವದಲ್ಲಿ ಅರ್ಥಾತ್ ಗರ್ಭಾವಸ್ಥೆಯಲ್ಲಿ ನಮ್ಮ ಜನ್ಮಾಂತರದ ಶುಭ ಮತ್ತು ಅಶುಭ ಕರ್ಮಗಳ ಲೆಕ್ಕಾಚಾರವಾಗಿ ನಮ್ಮ ಬಲಗೈಯಲ್ಲಿ ಶುಭಕರ್ಮ (ಪುಣ್ಯ) ಫಲವನ್ನುಮತ್ತು ಎಡಗೈಯಲ್ಲಿ ಅಶುಭಕರ್ಮ (ಪಾಪ) ಫಲವನ್ನು ತುಂಬಿ ಬ್ರಹ್ಮನು ಕಳುಹಿಸುತ್ತಾನೆ. ತಾಯಿಯ ಗರ್ಭದಿಂದ ಹೊರಬರುವ ಸಮಯದಲ್ಲಿ ಕಾಲಪುರುಷನು ತನ್ನ ವಿಕಾರ ರೂಪದಲ್ಲಿ ದರುಶನ ನೀಡುತ್ತಾನೆ. ಅವನ ಈ ಚಕ್ರದಲ್ಲಿ ತಾನು ಯಾವ ರೀತಿ ಈ ಕರ್ಮವನ್ನು ಅನುಭವಿಸಲಿ / ಸವೆಸಲಿ ಎಂದು ಮಗುವು ಅಳುತ್ತದೆ.

ಇದನ್ನೂ ಓದಿ:Spiritual: ಪಿತೃಪಕ್ಷದಲ್ಲಿ ಸಂತಾನವಾದರೇ ದೋಷವಿದೆಯೇ ? ಪಿತೃಪಕ್ಷದಲ್ಲಿ ಸ್ವಪ್ನದಲ್ಲಿ ಪಿತೃ ದರ್ಶನವಾದರೆ ಏನು ಫಲ ?

ಈ ಮುಷ್ಟಿ ಹಿಡಿಯುವಿಕೆ ನಮ್ಮ ಕರ್ಮಫಲದ ಸಂಕೇತವಾಗಿರುತ್ತದೆ. ಜನನವಾದ ನಲುವತ್ತೆಂಟು ದಿನಗಳ ಕಾಲ ಆ ಮುಷ್ಟಿ ಅತ್ಯಂತ ಬಿಗುವಾಗಿರುತ್ತದೆ. ನಂತರ ಕ್ರಮೇಣ ಸಡಿಲವಾಗುತ್ತಾ ಹೋಗುತ್ತದೆ. ಇದೆ ಕರ್ಮ ಬಂಧ ಎನ್ನುವರು. ಈ ಸಮಯದಲ್ಲಿ ಜಾತಕವನ್ನು / ಕುಂಡಲಿಯನ್ನು ಬರೆಯಬಾರದು. ಜನನವಾದ ನಲುವತ್ತೆಂಟು ದಿನಗಳ ನಂತರವೇ ಜಾತಕ ಬರೆಯುವುದು ಉತ್ತಮ. ಈ ರೀತಿಯ ಸೂಕ್ಷ್ಮ ಕಾರಣದಿಂದ ಮನುಷ್ಯನ ವ್ಯವಸ್ಥೆ ಒಂದೇ ರೀತಿ ಇದ್ದರೂ ವ್ಯವಹಾರ ವ್ಯಕ್ತಿತ್ವ ಬೇರೆ ಬೇರೆ ಇರುತ್ತದೆ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು.

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:36 am, Wed, 1 February 23