Spiritual: ಪಿತೃಪಕ್ಷದಲ್ಲಿ ಸಂತಾನವಾದರೇ ದೋಷವಿದೆಯೇ ? ಪಿತೃಪಕ್ಷದಲ್ಲಿ ಸ್ವಪ್ನದಲ್ಲಿ ಪಿತೃ ದರ್ಶನವಾದರೆ ಏನು ಫಲ ?

ಸಂತಾನವೆಂಬುದು ಜನ್ಮಾಂತರ ಪುಣ್ಯಫಲದಿಂದ ಲಭ್ಯವಾಗುವಂತಹದು. ಅದಕ್ಕೆ ಹಿರಿಯರ ಆಶೀರ್ವಾದವೂ ಬಹಳ ಮುಖ್ಯ. ಮನೆಯಲ್ಲಿ ಪಿತೃಕಾರ್ಯಗಳು ಅಂದರೆ ತಿಥಿ/ಶ್ರಾದ್ಧ ಹಾಗೆಯೇ ವೈಕುಂಠ ಸಮಾರಾಧನೆಗಳು ಸರಿಯಾಗಿ ಆಗಿಲ್ಲವೆಂದರೆ ಸಂತಾನದಲ್ಲಿ ಸಮಸ್ಯೆ ಬರುವುದು ನಿಶ್ಚಿತ.

Spiritual: ಪಿತೃಪಕ್ಷದಲ್ಲಿ ಸಂತಾನವಾದರೇ ದೋಷವಿದೆಯೇ ? ಪಿತೃಪಕ್ಷದಲ್ಲಿ ಸ್ವಪ್ನದಲ್ಲಿ ಪಿತೃ ದರ್ಶನವಾದರೆ ಏನು ಫಲ ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 16, 2022 | 2:43 PM

ಮಾನವನಿಗೆ ಸಂತಾನವೆಂಬುದು ಜನ್ಮಾಂತರ ಪುಣ್ಯಫಲದಿಂದ ಲಭ್ಯವಾಗುವಂತಹದು. ಅದಕ್ಕೆ ಹಿರಿಯರ ಆಶೀರ್ವಾದವೂ ಬಹಳ ಮುಖ್ಯ. ಮನೆಯಲ್ಲಿ ಪಿತೃಕಾರ್ಯಗಳು ಅಂದರೆ ತಿಥಿ/ಶ್ರಾದ್ಧ ಹಾಗೆಯೇ ವೈಕುಂಠ ಸಮಾರಾಧನೆಗಳು ಸರಿಯಾಗಿ ಆಗಿಲ್ಲವೆಂದರೆ ಸಂತಾನದಲ್ಲಿ ಸಮಸ್ಯೆ ಬರುವುದು ನಿಶ್ಚಿತ. ಅದಕ್ಕಾಗಿ ನಾವು ದೇವತಾ ಕಾರ್ಯಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಿತೃಕಾರ್ಯಕ್ಕೆ ನೀಡಬೇಕು ಎಂಬುದು ಧರ್ಮಜ್ಞರ ಅಭಿಪ್ರಾಯ.

ಪತಂತಿ ಪಿತರೋಹ್ಯೇಷ ಲುಪ್ತಪಿಂಡೋದಕಕ್ರಿಯಾಃ ಎಂಬ ಮಾತಿದೆ ಗೀತೆಯಲ್ಲಿ . ಅಂದರೆ ಯಾವಾತನು ತನ್ನ ಹಿರಿಯರಿಗೆ ಪಿಂಡಪ್ರದಾನವನ್ನು ಹಾಗೆಯೇ ತಿಲೋದಕಾದಿಗಳನ್ನು ಮಾಡುವುದಿಲ್ಲವೋ ಅಂತಹವನ ಪಿತೃಗಳು ಪಾಪಲೋಕಕ್ಕೆ ಪತಿತರಾಗುತ್ತಾರೆ. ಅದರಿಂದಾಗಿ ಸಂತಾನ ಹೀನತೆ ಇತ್ಯಾದಿ ಸಮಸ್ಯೆಗಳು ಉದಯಿಸುತ್ತದೆ. ಆದ ಕಾರಣದಿಂದ ಈ ಪಕ್ಷದಲ್ಲಿ ಮಗುವಿನ ಜನನವಾದರೆ ಒಂದರ್ಥದಲ್ಲಿ ದೋಷವಿಲ್ಲ. ಅಲ್ಲದೇ ಜನನವೆನ್ನುವುದು ದೇವದತ್ತ ಅದು ಉತ್ತಮವೇ ಆಗಿದೆ. ಆದರೂ ಈ ಪಕ್ಷವೆನ್ನುವುದು ಏನೋ ಎಂಬ ಭಯ ಜನರಲ್ಲಿದೆ. ನಿಶ್ಚಯವಾಗಿ ಪಿತೃಪಕ್ಷದಿಂದ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ನಾವು ಪಿತೃಕಾರ್ಯವನ್ನು ಶ್ರದ್ಧೆಯಿಂದ ಮಾಡದಿರುವುದರಿಂದ. ಯಾರಲ್ಲೋ ಹಣವನ್ನು ನೀಡಿ ನಮ್ಮ ಹಿರಿಯರ ತಿಥಿ/ಶ್ರಾದ್ಧ ಮಾಡಿ ಎನ್ನುವ ಭಾವ ಇದ್ದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೇಗೆ ನಮ್ಮ ಮಕ್ಕಳ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತೇವೋ ಅದೇ ರೀತಿ ಪಿತೃ ಕಾರ್ಯವನ್ನು ಮಾಡಬೇಕು. ಆಗ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ.

ಸ್ವಪ್ನಫಲ

ಸ್ವಪ್ನವೆಂದರೆ ಕನಸು. ಈ ಕನಸು ಎರಡು ರೀತಿ. ಶುಭ ಮತ್ತು ಅಶುಭವೆಂದು. ಅದರೊಂದಿಗೆ ಶುಭಾಶುಭ (ಮಧ್ಯಫಲಿತ) ಎಂಬ ಒಂದು ವ್ಯವಸ್ಥೆಯೂ ಇದೆ. ರಾತ್ರೆಯ ಮೊದಲ ಭಾಗದಲ್ಲಿ ಬೀಳುವ ಕನಸು ಆಹಾರಾದಿಗಳ ವ್ಯತ್ಯಾಸದಿಂದ ಬೀಳುತ್ತದೆ. ಮಧ್ಯಭಾಗದ ಕನಸು ಅತಿಯಾದ ಯೋಚನೆಯ ಕಾರಣದಿಂದ ಬೀಳುತ್ತದೆ. ಮೂರನೇ ಭಾಗದ ಕನಸು ಸಾತ್ವಿಕ ಕನಸು. ಇದು ನಿಶ್ಚಿತವಾದ ಫಲವನ್ನು ನೀಡಿಯೇ ನೀಡುತ್ತದೆ. ಮೊದಲ ಮತ್ತು ಮಧ್ಯಭಾಗದ ಕನಸುಗಳು ಕೇವಲ ಸಂತೋಷ/ಭಯವನ್ನುಂಟು ಮಾಡಬಹುದು ಬಿಟ್ಟರೆ ಫಲವನ್ನು ನೀಡಲು ಸಾಧ್ಯವಿಲ್ಲ.

ಪಿತೃಪಕ್ಷದಲ್ಲಿ ಬಿದ್ದ ಹಿರಿಯರ ಕುರಿತಾದ ಕನಸು ಅಥವಾ ಅವರ ದರುಶನವೆಂಬುದು ಯಾವ ಕಾಲದಲ್ಲಿ ಮತ್ತು ಯಾವ ರೂಪದಲ್ಲಿ ಬಿದ್ದಿದೆ ಎನ್ನುವುದರ ಮೇಲೆ ಶುಭ/ಅಶುಭ/ಶುಭಾಶುಭ ಫಲವನ್ನು ಹೇಳಬಹುದು. ಆದರೂ ಮೇಲ್ನೋಟಕ್ಕೆ ಹೇಳುವುದಾದರೆ ಪಿತೃಕಾರ್ಯಗಳನ್ನು ಸರಿಯಾದ ಕ್ರಮದಲ್ಲಿ ಮಾಡದೇ ಇದ್ದಲ್ಲಿ ಗತಿಸಿದ ಹಿರಿಯರ ಕುರಿತಾದ ಸ್ವಪ್ನವುಂಟಾಗುತ್ತದೆ. ಏನೇ ಇರಲಿ ಜೀವದಲ್ಲಿರುವಾಗ ಮತ್ತು ಜೀವನೋತ್ತರದಲ್ಲು ಪಿತೃ/ಹಿರಿಯರನ್ನು ಚೆನ್ನಾಗಿ ಆನಂದದಿಂದ ನೋಡಿರಿ, ಪ್ರೀತಿಸಿರಿ ಮತ್ತು ಉತ್ತಮ ರೀತಿಯಲ್ಲಿ ಅವರೊಡನೆ ವ್ಯವಹರಿಸಿ ಅದು ಸದಾ ನಮ್ಮನ್ನು ಕಾಯುತ್ತದೆ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ,  kkmanasvi@gamail.com

Published On - 2:43 pm, Fri, 16 September 22