6,6,6,6,6: ರಶೀದ್ ಖಾನ್ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆಗೈದ ಪೊಲಾರ್ಡ್

|

Updated on: Aug 11, 2024 | 9:19 AM

The Hundred: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಇದೀಗ ಕೀರನ್ ಪೊಲಾರ್ಡ್​ ಹೆಸರಿಗೆ ಸೇರ್ಪಡೆಯಾಗಿದೆ. ಈ ಲೀಗ್​ನ 24ನೇ ಪಂದ್ಯದಲ್ಲಿ ಒಟ್ಟು 30 ರನ್ ಸಿಡಿಸುವ ಮೂಲಕ ಪೊಲಾರ್ಡ್ ಈ ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ರಶೀದ್ ಖಾನ್ ಓವರ್​ನಲ್ಲಿ ಎಂಬುದು ಇಲ್ಲಿ ವಿಶೇಷ.

ಸೌತಂಪ್ಟನ್​ನ ದಿ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ದಿ ಹಂಡ್ರೆಡ್ ಲೀಗ್​ನ 24ನೇ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಅಬ್ಬರಿಸಿದ್ದಾರೆ. ಅದು ಕೂಡ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರ ಒಂದೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ. ಸದರ್ನ್ ಬ್ರೇವ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟ್ರೆಂಟ್ ರಾಕೆಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. 100 ಎಸೆತಗಳನ್ನು ಎದುರಿಸಿದ ಟ್ರೆಂಟ್ ರಾಕೆಟ್ಸ್ ತಂಡವು 8 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿತು. 127 ರನ್​ಗಳ ಸುಲಭ ಗುರಿ ಬೆನ್ನತ್ತಿದ ಸದರ್ನ್ ಬ್ರೇವ್ ತಂಡವು 78 ರನ್​ಗಳಿಸುವಷ್ಟರಲ್ಲಿ 6 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕಣಕ್ಕಿಳಿದ ಕೀರನ್ ಪೊಲಾರ್ಡ್ ಅಕ್ಷರಶಃ ಅಬ್ಬರಿಸಿದರು.

81ನೇ ಎಸೆತದಲ್ಲಿ ರಶೀದ್ ಖಾನ್​ಗೆ ಮೊದಲ ಸಿಕ್ಸ್ ಸಿಡಿಸಿದ ಕೀರನ್ ಪೊಲಾರ್ಡ್ ಬ್ಯಾಕ್ ಟು ಬ್ಯಾಕ್ 5 ಸಿಕ್ಸರ್​ಗಳ ಸಾಧನೆ ಮಾಡಿದರು. ಈ ಮೂಲಕ ಒಂದೇ ಓವರ್​ನಲ್ಲಿ (ದಿ ಹಂಡ್ರೆಡ್ ಲೀಗ್​ನಲ್ಲಿ ಒಂದು ಓವರ್-5 ಎಸೆತಗಳು) 30 ರನ್ ಚಚ್ಚುವ ಮೂಲಕ ಪೊಲಾರ್ಡ್ ಪರಾಕ್ರಮ ಮೆರೆದರು. ಅಲ್ಲದೆ 23 ಎಸೆತಗಳಲ್ಲಿ 2 ಫೋರ್ ಹಾಗೂ 5 ಸಿಕ್ಸ್​ನೊಂದಿಗೆ 45 ರನ್ ಬಾರಿಸಿ ರನ್​ಔಟ್ ಆದರು. ಅಂತಿಮವಾಗಿ 99 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 127 ರನ್ ಬಾರಿಸುವ ಮೂಲಕ ಸದರ್ನ್ ಬ್ರೇವ್ ತಂಡವು ರೋಚಕ ಜಯ ಸಾಧಿಸಿತು. ಇದೀಗ ಗೆಲುವಿನ ರುವಾರಿ ಕೀರನ್ ಪೊಲಾರ್ಡ್ ಅವರ ಬ್ಯಾಕ್ ಟು ಬ್ಯಾಕ್ ಸಿಕ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.