ಆಸ್ಟ್ರೇಲಿಯಾ – ಭಾರತ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಾಂಗರೂ ಪಡೆ ನೀಡಿದ್ದ 390 ರನ್ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಮೊದಲ ಓವರ್ನಲ್ಲಿ ಎಂಟು ರನ್ ಸಿಕ್ಕಿತು. ಆಸಿಸ್ ಬೌಲರ್ ಸ್ಟಾರ್ಕ್ ಎಸೆದ ಮೊದಲನೇ ಹಾಗೂ ಮೂರನೇ ಎಸೆತಕ್ಕೆ ಮಯಾಂಕ್ ಅಗರ್ವಾಲ್ ಫೋರ್ ಸಿಡಿಸುವ ಮೂಲಕ ಪಂದ್ಯವನ್ನು ಆರಂಭಿಸಿದರು. ಎರಡನೇ ಓವರ್ನಲ್ಲಿ ಧವನ್ ಮತ್ತೆ ಮೊದಲ ಎಸೆತದಲ್ಲೇ ಫೋರ್ ಹೊಡೆದರಾದರೂ ನಂತರದ ಎಸೆತಗಳಲ್ಲಿ ಒಂದು ರನ್ ಸಹ ಸಿಗಲಿಲ್ಲ. ನಾಲ್ಕನೇ ಓವರ್ ತನಕ ನಿಧಾನಗತಿಯಲ್ಲೇ ಸಾಗಿದ ಭಾರತ ಐದನೇ ಓವರ್ನಲ್ಲಿ 16 ರನ್ ಪಡೆಯುವ ಮೂಲಕ ಕೊಂಚ ಚೇತರಿಕೆ ಕಂಡಿತು.
ಏಳನೇ ಓವರ್ ವೇಳೆಗೆ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ 56ರನ್ಗಳ ಜೊತೆಯಾಟವಾಡಿದ್ದರಾದರೂ ಏಳನೇ ಓವರ್ನ ನಾಲ್ಕನೇ ಎಸೆತದಲ್ಲಿ ಸ್ಟಾರ್ಕ್ಗೆ ಕ್ಯಾಚ್ ನೀಡುವ ಮೂಲಕ ಧವನ್ ಹೊನಡೆದರು. ಅವರ ಬೆನ್ನಲ್ಲೇ ಮಯಾಂಕ್ ಸಹ ಎಂಟನೇ ಓವರ್ನ ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ನಂತರದ ಓವರ್ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಭಾರತಕ್ಕೆ ಭರವಸೆ ನೀಡುವಂತೆ ಕಂಡುಬಂದರು. 22ನೇ ಓವರ್ ಅಂತ್ಯದ ವೇಳೆಗೆ ಕೊಹ್ಲಿ 53 (54ಎಸೆತ), ಶ್ರೇಯಸ್ 38 (35 ಎಸೆತ) ರನ್ ಗಳಿಸುವ ಮೂಲಕ ಭಾರತದ ಮೊತ್ತವನ್ನು 153 ರನ್ಗಳಿಗೆ ಏರಿಸಿದ್ದರು.
ಆದರೆ, 23ನೇ ಓವರ್ನ ಮೊದಲ ಓವರ್ನಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸಿದ ಹೆನ್ರಿ ಕ್ವೆಸ್, ಬ್ಲ್ಯೂ ಬಾಯ್ಸ್ ವೇಗಕ್ಕೆ ತಡೆ ಒಡ್ಡಿದರು. ನಂತರ ಮೈದಾನಕ್ಕಿಳಿದ ಕರ್ನಾಟಕದ ಹುಡುಗ ಕೆ.ಎಲ್.ರಾಹುಲ್ ಕೊಹ್ಲಿಯೊಂದಿಗೆ ಜೊತೆಯಾಗಿ ಗೆಲುವಿನ ಗುರಿಯತ್ತ ಓಟ ಆರಂಭಿಸಿದರು.
34ನೇ ಓವರ್ ಅಂತ್ಯಕ್ಕೆ 221 ರನ್ಗಳನ್ನು ಕಲೆ ಹಾಕಿದ ಭಾರತಕ್ಕೆ ನಾಯಕ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಉತ್ತಮ ರೀತಿಯಲ್ಲಿ ಆಸರೆಯಾದರು. ಆದರೆ, 87 ಎಸೆತಗಳಲ್ಲಿ 7 ಫೋರ್ 2 ಸಿಕ್ಸರ್ಗಳನ್ನು ಸಿಡಿಸಿ 89 ರನ್ ಕಲೆ ಹಾಕಿದ್ದ ಕೊಹ್ಲಿ ಶತಕದ ಹೊಸ್ತಿಲಿನಲ್ಲಿ ಇರುವಾಗಲೇ ಹೇಜಲ್ ವುಡ್ ಎಸೆತದಲ್ಲಿ ಬಂದ ಚೆಂಡನ್ನು ನೇರವಾಗಿ ಹೆನ್ರಿ ಕ್ವೆಸ್ ಕೈಗೆ ಕಳಿಸಿ ಔಟ್ ಆದರು. ಆ ಮೂಲಕ ಭಾರತದ ನಾಲ್ಕನೇ ಮತ್ತು ಬಹುಮುಖ್ಯ ವಿಕೆಟ್ ಉರುಳಿ ಆಸಿಸ್ ತಂಡಕ್ಕೆ ಗೆಲುವಿನ ಹಾದಿ ಮತ್ತಷ್ಟು ಸಲೀಸಾಯಿತು.
ಐದನೇ ವಿಕೆಟ್ಗೆ ಜೊತೆಯಾದ ಹಾರ್ದಿಕ್ ಪಾಂಡ್ಯ ಕೆ.ಎಲ್.ರಾಹುಲ್ಗೆ ಸಾಥ್ ನೀಡಿದರಾದರೂ ಆರ್ಭಟದ ಆಟವನ್ನೇನೂ ಆಡಲಿಲ್ಲ. 66 ರನ್ಗಳಲ್ಲಿ 76 ರನ್ ಪಡೆದು ಉತ್ತಮ ಪ್ರದರ್ಶನ ನೀಡುತ್ತಿದ್ದ ಕೆ.ಎಲ್.ರಾಹುಲ್ ಔಟ್ ಆಗುವ ಹೊತ್ತಿಗೆ ಭಾರತ 43.3 ಓವರ್ಗೆ 288 ರನ್ ಗಳಿಸಿತ್ತು.
ಕಠಿಣ ಸಂದರ್ಭದಲ್ಲಿ ಉತ್ತಮ ಆಟವಾಡುತ್ತಿದ್ದ ರಾಹುಲ್ ನಿರ್ಗಮನ ಭಾರತಕ್ಕೆ ಮತ್ತಷ್ಟು ಹೊಡೆತ ನೀಡಿತು. ಅವರ ಬೆನ್ನಿಗೆ ಬಂದ ರವೀಂದ್ರ ಜಡೇಜಾ 11 ಎಸೆತಗಳಲ್ಲಿ 24 ರನ್ ಸಿಡಿಸಿ ತಂಡದ ಲಯವನ್ನು ಕಾಪಾಡಲು ಹೋರಾಡುತ್ತಿರುವಾಗಲೇ ಮ್ಯಾಕ್ಸ್ವೆಲ್ ಜಡೇಜಾ ಬ್ಯಾಟ್ನಿಂದ ಚಿಮ್ಮಿದ ಚೆಂಡನ್ನು ಕ್ಯಾಚ್ ಪಡೆಯುವ ಮೂಲಕ ಭಾರತದ ಆರನೇ ವಿಕೆಟ್ ಉರುಳಲು ಕಾರಣರಾದರು. ಜಡೇಜಾರ ಹಿಂದೆಯೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ ಪಾಂಡ್ಯ 31 ಎಸೆತಕ್ಕೆ 28 ರನ್ಗಳಿಸಲಷ್ಟೇ ಶಕ್ಯರಾದರು.
ಅಷ್ಟರಲ್ಲಾಗಲೇ ಭಾರತ ಸೋಲಿನ ದವಡೆಗೆ ಸಿಕ್ಕಿಹಾಕಿಕೊಂಡಿತ್ತು. ನಂತರ ಬಂದ ನವದೀಪ್ ಸೈನಿ ಔಟಾಗದೇ 10 ಎಸೆತಕ್ಕೆ 10 ರನ್ ಗಳಿಸಿದರೆ ಅವರ ನಂತರದಲ್ಲಿ ಬಂದು ಔಟ್ ಆದ ಮಹಮ್ಮದ್ ಶಮಿ 4 ಎಸೆತಕ್ಕೆ 1 ರನ್, ಜಸ್ಪ್ರೀತ್ ಬೂಮ್ರಾ 2 ಬಾಲ್ಗೆ ಒಂದು ರನ್ ಸಹ ಪಡೆಯದೆ ಹೊರ ನಡೆದರು. ಕೊನೆಯ ಒಂಬತ್ತು ಎಸೆತಗಳು ಬಾಕಿ ಇರುವಾಗ ಬಂದ ಯಜುವೇಂದ್ರ ಚಹಲ್ ಆರು ಎಸೆತಕ್ಕೆ ನಾಲ್ಕು ರನ್ ಪಡೆದು ತಂಡದ ಮೊತ್ತವನ್ನು 338 ರನ್ಗಳಿಗೆ ತಲುಪಿಸಿ, ಆಲ್ ಔಟ್ ಆಗುವುದರಿಂದ ತಂಡವನ್ನು ಪಾರುಮಾಡಿದರು.
ಆಸ್ಟ್ರೇಲಿಯಾ ಪರ ಬೌಲಿಂಗ್ನಲ್ಲಿ ಸ್ಟಾರ್ಕ್ 9 ಓವರ್ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ ಉದಾರವಾಗಿ 82 ರನ್ ನೀಡಿದರೆ ಉಳಿದವರು ಭಾರತ ತಂಡಕ್ಕೆ ಕಬ್ಬಿಣದ ಕಡಲೆಯಂತಾದರು. ಹೇಜಲ್ ವುಡ್ 9 ಓವರ್ಗೆ 59 ರನ್ ನೀಡಿ 2 ವಿಕೆಟ್, ಕಮ್ಮಿನ್ಸ್ 10 ಓವರ್ಗೆ 67 ರನ್ ನೀಡಿ 3 ವಿಕೆಟ್, ಆ್ಯಡಮ್ ಜಂಪಾ 10 ಓವರ್ಗೆ 62 ರನ್ ನೀಡಿ 2 ವಿಕೆಟ್, ಹೆನ್ರಿ ಕ್ವೆಸ್ 7 ಓವರ್ಗಳಲ್ಲಿ 34 ರನ್ ನೀಡಿ 1 ವಿಕೆಟ್ ಹಾಗೂ ಮ್ಯಾಕ್ಸ್ವೆಲ್ 5 ಓವರ್ಗಳಲ್ಲಿ 34 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಪ್ರವಾಸಿ ತಂಡ ಭಾರತವನ್ನು ಅತ್ಯಂತ ಸುಲಭವಾಗಿ ಮಣಿಸಿದರು.
ಇದನ್ನೂ ಓದಿ: India vs Australia, 2nd ODI: ಭಾರತಕ್ಕೆ ಎರಡು ಸೋಲು.. ಏಕದಿನ ಸರಣಿ ಆಸಿಸ್ ಪಾಲು!
ಕೊಹ್ಲಿ ನಾಯಕತ್ವದ ಕುರಿತು ಅಸಮಾಧಾನ ಹೊರಹಾಕಿದ ಕ್ರಿಕೆಟ್ ಪ್ರೇಮಿಗಳು!
ಟಿ20 ಕ್ರಿಕೆಟ್ ನನ್ನ ಬ್ಯಾಟಿಂಗ್ ಮೇಲೆ ದೊಡ್ಡ ಪ್ರಭಾವ ಬೀರಿದೆ: ಸ್ಟೀವ್ ಸ್ಮಿತ್
Published On - 7:06 pm, Sun, 29 November 20