ಬುಮ್ರಾ ಶೈಲಿಯಲ್ಲಿ ಸಖತ್ ಬೌಲಿಂಗ್: ಬಾಲಕಿಯ ವಿಡಿಯೋ ವೈರಲ್
Jasprit Bumrah: ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ಮಾರಕ ದಾಳಿಯೊಂದಿಗೆ ಟೀಮ್ ಇಂಡಿಯಾಗೆ ವಿಶ್ವಕಪ್ ಕಿರೀಟ ತಂದುಕೊಡುವಲ್ಲಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರವಹಿಸಿದ್ದರು. ಈ ಭರ್ಜರಿ ಬೌಲಿಂಗ್ ಮೂಲಕ ಬುಮ್ರಾ ಹೊಸ ಸೆನ್ಸೇಷನ್ ಸೃಷ್ಟಿಸಿದ್ದರು. ಈ ಸೆನ್ಸೇಷನ್ ಇದೀಗ ಯುವ ಪೀಳಿಗೆಯಲ್ಲಿ ಹೊಸ ಕ್ರೇಝ್ ಸೃಷ್ಡಿಸಿದೆ.
ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಇತ್ತೀಚೆಗಷ್ಟೇ ಪಾಕಿಸ್ತಾನದ ಬಾಲಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದರು. ಈ ಸೆನ್ಸೇಷನ್ ಸೈಡ್ಗೆ ಸರಿಯುವ ಮುನ್ನವೇ ಇದೀಗ ಬಾಲಕಿಯೊಬ್ಬಳು ಸಂಚಲನ ಸೃಷ್ಟಿಸಿದ್ದಾರೆ. ಅದು ಸಹ ಥೇಟ್ ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಎಂಬುದು ವಿಶೇಷ.
ಬಾಲಕಿಯೊಬ್ಬಳು ಶಾಲಾ ಸಮವಸ್ತ್ರದಲ್ಲಿ ಬುಮ್ರಾ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಾಲಕಿಯು ಬುಮ್ರಾ ಅವರಂತೆ ರನ್ ಅಪ್ ತೆಗೆದುಕೊಂಡು ನೆಟ್ಸ್ನಲ್ಲಿ ಯಾರ್ಕರ್ ಎಸೆತಗಳನ್ನು ಎಸೆಯುತ್ತಿರುವುದು ಕಾಣಬಹುದು.
ಇದೀಗ ಲೇಡಿ ಬುಮ್ರಾ ಹೆಸರಿನೊಂದಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಎಲ್ಲರಿಂದಲೂ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಕೆಲವರು ಈ ಹುಡುಗಿಗೆ ಉತ್ತಮ ಟ್ರೈನಿಂಗ್ ನೀಡಿದರೆ ಭಾರತ ಮಹಿಳಾ ತಂಡಕ್ಕೆ ಉತ್ತಮ ಬೌಲರ್ ಆಗಿ ಬಳಸಿಕೊಳ್ಳಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ಜಸ್ಪ್ರೀತ್ ಬುಮ್ರಾ ಇದೀಗ ಯುವ ಪೀಳಿಗೆಯ ಪಾಲಿಗೆ ಸೆನ್ಸೇಷನ್ ಆಗಿ ಬದಲಾಗಿದ್ದಾರೆ. ಅದರಂತೆ ಇದೀಗ ಸಣ್ಣ ಮಕ್ಕಳೂ ಸಹ ಬೂಮ್ ಬೂಮ್ ಶೈಲಿಯಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಕಾಣಬಹುದು. ಅದಕ್ಕೆ ತಾಜಾ ಉದಾಹರಣೆ ಈ ಬಾಲಕಿಯ ಬೌಲಿಂಗ್.