ಒಂದೆಡೆ ಪ್ರಧಾನಿ ನರೇಂದ್ರ ಮೋದಿಯ ಸ್ವಚ್ಚ ಭಾರತ್ ಅಭಿಯಾನ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡುತ್ತಿದೆ. ಈ ಅರಿವಿನ ಪರಿಣಾಮ ಗೋವಾದ ಒಂದು ಗ್ರಾಮದಲ್ಲಿ ಕಂಡುಬಂದಿದೆ. ಅಲ್ಲಿ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಮಾಡಿದ ಒಂದು ಯಡವಟ್ಟು ಅವರನ್ನು ಕ್ಷಮೆಯಾಚಿಸುವಂತೆ ಮಾಡಿದೆ. ವಾಸ್ತವವಾಗಿ, ಅಜಯ್ ಜಡೇಜಾ ಉತ್ತರ ಗೋವಾದ ಅಲ್ಡೋನಾ ಗ್ರಾಮದಲ್ಲಿ ಬಂಗಲೆ ಖರೀದಿಸಿದ್ದಾರೆ. ಪಕ್ಕದ ಹಳ್ಳಿಯಾದ ನಾಚಿನೋಲಾದಲ್ಲಿ ಜಡೇಜಾ ಕಸವನ್ನು ಎಸೆದಿರುವ ಬಗ್ಗೆ ಆರೋಪ ಹೊರಿಸಲಾಗಿತ್ತು. ಇದನ್ನು ಆ ಗ್ರಾಮದ ಮುಖ್ಯಸ್ಥ ತುರುಪ್ತಿ ಬಂದೋಡ್ಕರ್ ಖಚಿತಪಡಿಸಿದ್ದಾರೆ. ಕಸವನ್ನು ಎಸೆದಿದ್ದಕ್ಕಾಗಿ ಜಡೇಜಾಗೆ 5000 ರೂ.ಗಳ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಜಡೇಜಾ ಕೂಡ ಮರು ಮಾತನಾಡದೆ ದಂಡ ಪಾವತಿಸಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆ ಗ್ರಾಮದ ಮುಖ್ಯಸ್ಥ, ನಮ್ಮ ಹಳ್ಳಿಯಲ್ಲಿ ಕಸದ ಸಮಸ್ಯೆಯಿಂದ ನಾವು ತೊಂದರೆಗೀಡಾಗಿದ್ದೇವೆ. ಈ ಕಸವು ಹಳ್ಳಿಯ ಹೊರಗಿನಿಂದ ಬರುತ್ತಿತ್ತು. ಕೆಲವು ಯುವಕರಿಗೆ ಅದರ ಮೇಲೆ ನಿಗಾ ಇಡುವ ಮತ್ತು ಕಸದ ರಾಶಿಯನ್ನು ನೋಡಿದ ನಂತರ ಅದು ಯಾರದೆಂದು ಕಂಡುಹಿಡಿಯುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆ ಸೂಚನೆ ಈಗ ನಮಗೆ ಪ್ರಯೋಜನವನ್ನು ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ದಂಡ ಕಟ್ಟಿದ ಜಡೇಜಾ
ಕಸದ ಚೀಲಗಳನ್ನು ಪರಿಶೀಲಿಸಲಾಗಿ ಅದರಲ್ಲಿ ಅಜಯ್ ಜಡೇಜಾ ಹೆಸರಿನಲ್ಲಿ ಕೆಲವು ಬಿಲ್‌ಗಳನ್ನು ನಾವು ಕಂಡುಕೊಂಡೆವು. ಅವರನ್ನು ಕರೆದು ವಿಚಾರಿಸಿದಾಗ ಸತ್ಯ ಒಪ್ಪಿಕೊಂಡ ಜಡೇಜಾ ಅವರು ಮಾಡಿದ ತಪ್ಪಿಗೆ ದಂಡವನ್ನು ಪಾವತಿಸುವ ಇಚ್ಚೆಯನ್ನು ವ್ಯಕ್ತಪಡಿಸಿದರು. ಅಂತಹ ಕ್ರಿಕೆಟಿಗರು, ಅಂತಹ ಸೆಲೆಬ್ರಿಟಿಗಳು ನಮ್ಮ ಹಳ್ಳಿಯಲ್ಲಿ ವಾಸಿಸುತ್ತಿರುವುದನ್ನು ನೋಡಿ ನಮಗೆ ಸಂತೋಷವಾಗುತ್ತದೆ. ಆದರೆ, ಈ ಜನರು ಕಸಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಅಜಯ್ ಜಡೇಜಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನ
ಅಜಯ್ ಜಡೇಜಾ ಟೀಮ್ ಇಂಡಿಯಾ ಪರ 211 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 196 ಏಕದಿನ ಪಂದ್ಯಗಳು ಮತ್ತು 15 ಟೆಸ್ಟ್ ಪಂದ್ಯಗಳು ಸೇರಿವೆ. ಏಕದಿನ ಪಂದ್ಯಗಳಲ್ಲಿ ಅಜಯ್ ಜಡೇಜಾ 6 ಶತಕ ಮತ್ತು 30 ಅರ್ಧಶತಕಗಳನ್ನು ಒಳಗೊಂಡಂತೆ 37.47 ಸರಾಸರಿಯಲ್ಲಿ 5359 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅವರು 4 ಅರ್ಧಶತಕಗಳೊಂದಿಗೆ 26.18 ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ.