ಫಿಫಾ ವಿಶ್ವಕಪ್‌ನಲ್ಲಿ (FIFA World Cup 2022) ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ನೇತೃತ್ವದ ಅರ್ಜೆಂಟೀನಾ (Argentina) ತಂಡವು ಸೌದಿ ಅರೇಬಿಯಾ ವಿರುದ್ಧದ ಗ್ರೂಪ್-ಸಿ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ಮೆಸ್ಸಿ ಅವರ ಖಾತೆಯಲ್ಲಿ ಇನ್ನೂ ಒಂದೇ ಒಂದು ವಿಶ್ವಕಪ್ ಇಲ್ಲ. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಈ ಬರವನ್ನು ಕೊನೆಗೊಳಿಸುವ ಸಲುವಾಗಿ ಅರ್ಜೆಂಟೀನಾ ತಂಡ ಮೈದಾನಕ್ಕಿಳಿದಿದೆ. ಆದರೆ ವಿಶ್ವಕಪ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡಕ್ಕೆ ಸೋಲಿನ ಶಾಕ್ ಎದುರಾಗಿದೆ. ಅಲ್ಲದೆ ಅರ್ಜೆಂಟೀನಾ ತಂಡದ ಈ ಸೋಲು ಈ ಬಾರಿಯ ವಿಶ್ವಕಪ್‌ನ ಮೊದಲ ರಿವರ್ಸಲ್ ಆಗಿದೆ.
ಪಂದ್ಯ ಆರಂಭವಾದ 10ನೇ ನಿಮಿಷದಲ್ಲಿಯೇ ಗೋಲು ಬಾರಿಸುವ ಮೂಲಕ ಮೆಸ್ಸಿ ಅರ್ಜೆಂಟೀನಾ ತಂಡಕ್ಕೆ ಮೊದಲು ಯಶಸ್ಸು ತಂದುಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಸೌದಿ ಅರೇಬಿಯಾ, ಅರ್ಜೆಂಟೀನಾ ತಂಡದ ರಕ್ಷಣಾ ವಿಭಾಗವನ್ನು ಭೇದಿಸುವಲ್ಲಿ ಯಶಸ್ವಿಯಾಗಿ ಎರಡು ಗೋಲು ಗಳಿಸಿ ಅದ್ಭುತ ಗೆಲುವು ದಾಖಲಿಸಿತು. ಈ ಪಂದ್ಯಕ್ಕೆ ಮರಳಿ ಬರಲು ಅರ್ಜೆಂಟೀನಾ ಸಾಕಷ್ಟು ಪ್ರಯತ್ನಪಟ್ಟರೂ ಸಮಬಲದ ಗೋಲು ಗಳಿಸಲು ಸಾಧ್ಯವಾಗದೆ ಸೋಲನುಭವಿಸಿತು. ಇದರೊಂದಿಗೆ ಸೌದಿ ಅರೇಬಿಯಾ ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಸರಣಿಯನ್ನು ಮುರಿದು ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದೆ.
ಮೊದಲಾರ್ಧದಲ್ಲಿ ಅರ್ಜೆಂಟೀನಾಗೆ ಮುನ್ನಡೆ
ಪಂದ್ಯದ ಆರಂಭದಲ್ಲಿಯೇ ತನ್ನ ಆಟದ ಮೂಲಕ ಪ್ರಾಬಲ್ಯ ಮೆರೆದ ಮೆಸ್ಸಿ, ಸೌದಿ ಅರೇಬಿಯಾ ವಿರುದ್ಧ ಎರಡನೇ ನಿಮಿಷದಲ್ಲಿಯೇ ಗೋಲು ಗಳಿಸುವ ಉತ್ತಮ ಪ್ರಯತ್ನ ಮಾಡಿದರು. ಆದರೆ ಓವೈಸ್ ಗೋಲನ್ನು ವಿಫಲಗೊಳಿಸಿದರು. ಹಾಗೆಯೇ ಆರನೇ ನಿಮಿಷದಲ್ಲಿ ಮೆಸ್ಸಿ ಮತ್ತೊಂದು ಪ್ರಯತ್ನ ಮಾಡಿದರು. ಆದರೆ ಈ ಬಾರಿಯೂ ಓವೈಸ್ ಗೋಲನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. 10ನೇ ನಿಮಿಷದಲ್ಲಿ ಸೌದಿ ಅರೇಬಿಯಾದ ಅಲ್ ಬೌಲಾಹಿ ಅರ್ಜೆಂಟೀನಾ ಬಾಕ್ಸ್ ಅನ್ನು ಫೌಲ್ ಮಾಡಿದ್ದರಿಂದ ರೆಫರಿ ಅರ್ಜೆಂಟೀನಾಕ್ಕೆ ಪೆನಾಲ್ಟಿ ನೀಡಿದರು. ಈ ಫೆನಾಲ್ಟಿಯ ಲಾಭ ಪಡೆದ ಮೆಸ್ಸಿ ಅದನ್ನು ಗೋಲಾಗಿ ಪರಿವರ್ತಿಸಿ 1-0 ಮುನ್ನಡೆ ಸಾಧಿಸಿದರು. ಆದರೆ, ಇದರ ನಂತರ ಮೊದಲಾರ್ಧದಲ್ಲಿ ಬೇರೆ ಯಾವುದೇ ಗೋಲು ದಾಖಲಾಗಲಿಲ್ಲ. ಹೀಗಾಗಿ ಅರ್ಜೆಂಟೀನಾ ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿತ್ತು.
ದ್ವಿತೀಯಾರ್ಧದಲ್ಲಿ ಸೌದಿ ಶೈನಿಂಗ್
ದ್ವಿತೀಯಾರ್ಧದಲ್ಲಿ ಸೌದಿ ಅರೇಬಿಯಾ ಸಮಬಲ ಸಾಧಿಸಲು ಯತ್ನಿಸಿದ್ದು, 48ನೇ ನಿಮಿಷದಲ್ಲಿ ಯಶಸ್ವಿಯಾಯಿತು. ಅಲ್ ಸೆಹ್ರಿ ತಂಡದ ಪರವಾಗಿ ಮೊದಲ ಗೋಲು ಹೊಡೆದರು. ನಂತರ ಆಟದ 55ನೇ ನಿಮಿಷದಲ್ಲಿ ಸೌದಿ ಅರೇಬಿಯಾ ಎರಡನೇ ಗೋಲು ಬಾರಿಸಿ ಮುನ್ನಡೆ ಸಾಧಿಸಿತು. ಈ ಬಾರಿ ಸೇಲಂ ಅಲ್ ದವ್ಸಾರಿ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಈ ಗೋಲಿನ ನಂತರ ಸೌದಿ ಅರೇಬಿಯಾ ತಂಡವು 2-1 ಗೋಲುಗಳಿಂದ ಮುನ್ನಡೆ ಸಾಧಿಸಿತು. ಆ ಬಳಿಕ ಆಟ ಮುಗಿಯುವ ವೇಳೆಗೆ ಅರ್ಜೆಂಟೀನಾ ತಂಡಕ್ಕೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
Published On - 6:01 pm, Tue, 22 November 22