ಹೃದಯಾಘಾತದಿಂದ ಬುಧವಾರ (ನ.25) ನಿಧನರಾದ ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಅಂತ್ಯಕ್ರಿಯೆಯನ್ನು ಸರ್ಕಾರವೇ ನಡೆಸಲಿದೆ ಎಂದು ಅರ್ಜೆಂಟೀನಾ ಅಧ್ಯಕ್ಷ ಅಲ್ಬೆರ್ಟೋ ಫರ್ನಂಡೀಸ್ ತಿಳಿಸಿದ್ದಾರೆ. ಹಾಗೇ, ರಾಷ್ಟ್ರದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ಡಿಯಾಗೋ ಅವರು ವಿಶ್ವ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರರಾಗಿದ್ದು, 1986ರ ವಿಶ್ವಕಪ್ ವಿಜೇತ ತಂಡದ ನಾಯಕನಾಗಿದ್ದರು. ಇತ್ತೀಚೆಗಷ್ಟೇ ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಮನೆಗೆ ಬಂದಿದ್ದರು. ಆದರೆ ನಿನ್ನೆ ಹೃದಯಾಘಾತದಿಂದ ಮರಣಹೊಂದಿದ್ದಾರೆ.
ಅರ್ಜಿಂಟೀನಾ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿರುವ ಸರ್ಕಾರಿ ಭವನದಲ್ಲಿ ಮರಡೋನಾಗೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವುದಾಗಿ ಅವರ ಕುಟುಂಬಕ್ಕೆ ಅಧ್ಯಕ್ಷರು ತಿಳಿಸಿದ್ದಾರೆ. ಈ ಮೂಲಕ ದೇಶದ ಐಕಾನ್ ಆಗಿದ್ದ ಫುಟ್ಬಾಲ್ ದಿಗ್ಗಜನಿಗೆ ವಿದಾಯ ಹೇಳಲು ಸರ್ಕಾರ ನಿರ್ಧರಿಸಿದೆ. ಆದರೆ ಅಂತ್ಯಕ್ರಿಯೆ ಯಾವಾಗ ಎಂಬುದು ಇನ್ನೂ ಖಚಿತವಾಗಿಲ್ಲ. ಈಗಾಗಲೇ ಶವಪರೀಕ್ಷೆ ಮುಗಿದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
‘ಐ ಫೀಲ್ ಸಿಕ್…’
ಇತ್ತೀಚೆಗಷ್ಟೇ ಮಿದುಳು ಸರ್ಜರಿ ಮಾಡಿಸಿಕೊಂಡು ಮನೆಗೆ ಬಂದಿದ್ದ ಮರಡೋನಾಗೆ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ತಿಂಡಿಗೆಂದು ಎದ್ದುಬಂದರೂ ತುಂಬ ಸುಸ್ತಾದವರಂತೆ ಕಾಣುತ್ತಿದ್ದರು. ಅಲ್ಲದೆ ನನಗೆ ಶೀತವಾಗಿದೆ, ಐ ಫೀಲ್ ಸಿಕ್..(ಆರೋಗ್ಯ ಸರಿಯಿಲ್ಲದಂತೆ ಅನ್ನಿಸುತ್ತಿದೆ) ಎಂದು ಮನೆಯಲ್ಲಿದ್ದ ಸಂಬಂಧಿಯ ಬಳಿ ಹೇಳಿಕೊಂಡಿದ್ದರಂತೆ. ಅದೇ ಅವರ ಕೊನೇ ಮಾತು..ಮತ್ತೆ ತುಂಬ ಹೊತ್ತು ಬದುಕಲಿಲ್ಲ ಎಂದು ಕುಟುಂಬ ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿವೆ.
ಇದನ್ನೂ ಓದಿ: ಸಾಕರ್ ಫೀಲ್ಡಿಗೆ ಗುಡ್ಬೈ ಹೇಳಿದ ಫುಟ್ಬಾಲ್ ಮಾಂತ್ರಿಕ ಮರಡೊನ!